More

    ಡಾ. ಪುನೀತ್ ವಸತಿ ಸಮುಚ್ಚಯದ ವಿಲ್ಲಾ ಹಂಚಿಕೆಗೆ ಸಿದ್ಧ

    ಬೆಂಗಳೂರು: ಬಹು ನಿರೀಕ್ಷಿತ ಹುಣ್ಣಿಗೆರೆ ವಿಲ್ಲಾಗಳನ್ನು ಸಾರ್ವಜನಿಕರಿಗೆ ಹಂಚಿಕೆ ಮಾಡಲು ಕೊನೆಗೂ ಬಿಡಿಎ ಮುಂದಾಗಿದ್ದು, ಮುಂಬರುವ ಸಂಕ್ರಾಂತಿ ಹಬ್ಬದ ಬಳಿಕ ಅರ್ಜಿ ಆಹ್ವಾನಿಸುವ ಪ್ರಕ್ರಿಯೆಯನ್ನು ಆರಂಭಿಸಲು ನಿರ್ಧರಿಸಿದೆ.

    ದಾಸನಪುರ ಹೋಬಳಿಯ ಹುಣ್ಣಿಗೆರೆಯ 31 ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಿರುವ ದೇಸಿ ಶೈಲಿಯ ವಿಲ್ಲಾಗಳಿಗೆ (ಡಾ. ಪುನೀತ್ ರಾಜ್‌ಕುಮಾರ್ ವಸತಿ ಸಮುಚ್ಚಯ) ಈಗಾಗಲೇ ನಾಗರಿಕರಿಂದ ಭಾರಿ ಬೇಡಿಕೆ ಬಂದಿದೆ. ಕಳೆದ ವಿಜಯದಶಮಿ ಸಂದರ್ಭದಲ್ಲೇ ಹಂಚಿಕೆ ಪ್ರಕ್ರಿಯೆ ಆರಂಭಿಸಬೇಕಿತ್ತಾದರೂ, ಕೆಲ ಕಾಮಗಾರಿಗಳು ಬಾಕಿ ಇದ್ದ ಕಾರಣ ಅರ್ಜಿ ಆಹ್ವಾನವನ್ನು ಮುಂದೂಡಲಾಗಿತ್ತು. ಈಗ ಮುಂಬರುವ ಫೆಬ್ರವರಿ ತಿಂಗಳಲ್ಲಿ ಸಾರ್ವಜನಿಕರಿಗೆ ಹಂಚಿಕೆ ಮಾಡಲಾಗುತ್ತದೆ. ಪ್ರಸ್ತುತ ವಿವಿಧ ಮೂಲಸೌಕರ್ಯ ಕಲ್ಪಿಸುವ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ವಿದ್ಯುತ್ ಸಂಪರ್ಕ ಕೆಲಸ ಮಾತ್ರ ಪ್ರಗತಿಯಲ್ಲಿದ್ದು, ಕೆಪಿಟಿಸಿಎಲ್‌ನಿಂದ ಪ್ರತ್ಯೇಕ ಮಾರ್ಗ ಅಳವಡಿಸುವ ಕೆಲಸ ಮುಂಬರುವ ಜನವರಿ ತಿಂಗಳಾಂತ್ಯದೊಳಗೆ ಪೂರ್ಣಗೊಳಿಸುವ ವಿಶ್ವಾಸವನ್ನು ಪ್ರಾಧಿಕಾರ ಹೊಂದಿದೆ.

    ಪರಿಸರಸ್ನೇಹಿ ಕಚ್ಚಾವಸ್ತುಗಳ ಬಳಕೆ:

    ಬಿಡಿಎ ಇದೇ ಮೊದಲ ಬಾರಿಗೆ ಸಂಪೂರ್ಣವಾಗಿ ಪರಿಸರಸ್ನೇಹಿ ರೀತಿ 352 ಘಟಕಗಳ ವಿಲ್ಲಾಗಳನ್ನು (3 ಮಾದರಿಗಳಲ್ಲಿ) ನಿರ್ಮಿಸಿದೆ. ನಗರ ಹಾಗೂ ಗ್ರಾಮೀಣ ಸ್ಪರ್ಶವುಳ್ಳ ಈ ವಿಲ್ಲಾಗಳ ನಿರ್ಮಾಣಕ್ಕೆ ಬಳಸಿರುವ ಕಚ್ಚಾವಸ್ತುಗಳನ್ನು ಇಕೊ ್ರೆಂಡ್ಲಿ ರೀತಿ ಅಳವಡಿಸಿಕೊಳ್ಳಲಾಗಿದೆ. ಪ್ರತೀ ವಿಲ್ಲಾದಲ್ಲಿರುವ ಕಿಟಕಿ, ಬಾಗಿಲು, ಒಳಭಾಗದಲ್ಲಿರುವ ಮೆಟ್ಟಿಲು, ನೆಲಹಾಸಿಗೆ ಬಳಸಿರುವ ಕಾರ್ಪೆಟ್ ಕೂಡ ಪರಿಸರಸ್ನೇಹಿ ವಸ್ತುಗಳೇ ಆಗಿವೆ. ಪ್ರತೀ ವಿಲ್ಲಾದ ಮುಂಭಾಗ ಔಷಧೀಯ ಸಸ್ಯಗಳು ಒಳಗೊಂಡ ಕಿರು ಉದ್ಯಾನ, ಕಾರು ನಿಲುಗಡೆ ಪಾರ್ಕಿಂಗ್ (ಇ-ವಾಹನ ಚಾರ್ಜಿಂಗ್ ಸಂಪರ್ಕ ಕಲ್ಪಿಸಲಾಗಿದೆ), ಸೌರ ವಿದ್ಯುತ್, ಪ್ರತ್ಯೇಕ ನೀರಿನ ಸಂಪ್ ಹಾಗೂ ಓವರ್‌ಹೆಡ್ ಟ್ಯಾಂಕ್ ಸೌಲಭ್ಯವನ್ನು ಒದಗಿಸಲಾಗಿದೆ.

    ಇದರ ಜತೆಗೆ ಸಮುಚ್ಚಯದ ಆವರಣದಲ್ಲಿ ವಾಸ್ತವ್ಯ ಹೂಡುವವರಿಗೆ ಬಹುವಿಧ ಮನರಂಜನಾ ಸೌಲಭ್ಯವುಳ್ಳ ಕ್ಲಬ್‌ಹೌಸ್ ನಿರ್ಮಿಸಲಾಗಿದೆ. ಮಕ್ಕಳ ಆಟದ ಮೈದಾನ, ಪಾರ್ಕ್, ಮಳೆನೀರು ಸಂಗ್ರಹಕ್ಕಾಗಿ ಇಂಗು ಗುಂಡಿ, ತ್ಯಾಜ್ಯನೀರು ಶುದ್ಧೀಕರಿಸುವ ಘಟಕವನ್ನು ಸ್ಥಾಪಿಸಲಾಗಿದೆ. ಇಡೀ ವಸತಿ ಸಮುಚ್ಚಯದ ಆವರಣದ ಭದ್ರತೆಗೆ ಸಿಸಿಟಿವಿ ಕ್ಯಾಮರಾ ಅಳವಡಿಸಲಿದ್ದು, ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗುತ್ತದೆ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ.

    ನಾಗರಿಕರಿಗೆ ಹಂಚಿಕೆಯಾಗಲಿರುವ ವಿಲ್ಲಾ ವಿವರ:
    ಫ್ಲ್ಯಾಟ್ ವಿಧ ಘಟಕಗಳು ಮೌಲ್ಯ *
    35/50 ಅಡಿ (4ಬಿಎಚ್‌ಕೆ) 170 1.09 ಕೋಟಿ ರೂ.
    35/50 ಅಡಿ (3ಬಿಎಚ್‌ಕೆ) 31 1 ಕೋಟಿ ರೂ.
    30/40 ಅಡಿ (3ಬಿಎಚ್‌ಕೆ) 121 73.75 ಲಕ್ಷ ರೂ.
    * ಮಾರಾಟದ ವೇಳೆ ತುಸು ಹೆಚ್ಚಳವಾಗಲಿದೆ

    ಹುಣ್ಣಿಗೆರೆಯಲ್ಲಿ ನಿರ್ಮಿಸುತ್ತಿರುವ ವಿಲ್ಲಾ ಪ್ರಾಜೆಕ್ಟ್‌ನ ಬಹುತೇಕ ಕಾರ್ಯ ಮುಗಿದಿದೆ. ವಿದ್ಯುತ್ ಸಂಪರ್ಕ ಕಲ್ಪಿಸುವ ಕೆಲಸ ಮಾತ್ರ ಬಾಕಿ ಉಳಿದಿದೆ. ಕೆಪಿಟಿಸಿಎಲ್‌ನಿಂದ ಹೊಸ ಮಾರ್ಗದ ಮೂಲಕ ವಿದ್ಯುತ್ ಪಡೆಯಲಿದ್ದು, ಈ ಕೆಲಸ ಶೀಘ್ರವೇ ಪೂರ್ಣಗೊಳ್ಳಲಿದೆ. ಇದರಿಂದಾಗಿ ಫೆಬ್ರವರಿ ವೇಳೆಗೆ ನಾಗರಿಕರಿಗೆ ವಿಲ್ಲಾ ಹಂಚಿಕೆ ಮಾಡಲು ಪ್ರಾಧಿಕಾರ ಗುರಿ ಹೊಂದಿದೆ.
    – ಡಾ. ಎಚ್.ಆರ್.ಶಾಂತಾರಾಜಣ್ಣ, ಬಿಡಿಎ ಅಭಿಯಂತರ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts