More

    ಹಣ, ಅಧಿಕಾರದ ವ್ಯಾಮೋಹ ಸರಿಯಲ್ಲ: ಚುಂಚಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅಭಿಮತ

    ಮಂಡ್ಯ: ಮನುಷ್ಯನಲ್ಲಿ ಹಣ ಮತ್ತು ಅಧಿಕಾರದ ವ್ಯಾಮೋಹ ಮೇಳೈಸುತ್ತಿದ್ದು, ಭಗವಂತನ ಸ್ಮರಣೆ ಕ್ಷೀಣಿಸುತ್ತಿರುವುದು ಸರಿಯಲ್ಲ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
    ತಾಲೂಕಿನ ಚಂದಗಾಲು ಗ್ರಾಮದಲ್ಲಿ ಆಯೋಜಿಸಿದ್ದ ಮಾಸ್ತಮ್ಮ ದೇವಾಲಯ ಉದ್ಘಾಟನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಶ್ರೀಮಠಕ್ಕೂ-ಚಂದಗಾಲು ಗ್ರಾಮಕ್ಕೂ ಅವಿನಾಭಾವ ಸಂಬಂಧವಿದೆ. ಗ್ರಾಮದ ನೂರಾರು ಜನ ಜೋಗಪ್ಪನವರು ಜಾತ್ರಾ ಸಮಯದಲ್ಲಿ ನಡೆಯುವ ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಳ್ಳುವುದು ಈ ಗ್ರಾಮದ ವೈಶಿಷ್ಟ್ಯ ಎಂದು ಬಣ್ಣಿಸಿದರು.
    ಪ್ರತಿಯೊಬ್ಬರಿಗೂ ತಾಯಿಯನ್ನು ಕಂಡರೆ ಅಪಾರ ವಾತ್ಸಲ್ಯವಿರುತ್ತದೆ. ಆದರೆ ತಾಯಿ ಸ್ವರೂಪದ ಭಗವಂತನನ್ನು ಮರೆಯುವ ಸಂಸ್ಕೃತಿ ನಮ್ಮಲ್ಲಿ ಹೆಚ್ಚುತ್ತಿದೆ. ಪ್ರತಿಯೊಬ್ಬರ ಆಸೆಗಳಿಗೂ ಕಡಿವಾಣ ಹಾಕುವ ಅಗತ್ಯತೆ ಇದ್ದು, ಅದು ವಯಸ್ಸಾದ ನಂತರ ವ್ಯಕ್ತವಾಗುತ್ತದೆ. ಪ್ರತಿ ಮನುಷ್ಯನಲ್ಲಿರುವ ಅಜ್ಞಾನ ಮತ್ತು ಮೋಹವನ್ನು ತ್ಯಜಿಸಬೇಕಾದರೆ ಎಲ್ಲರೂ ಭಗವಂತನಲ್ಲಿ ಶರಣಾಗಬೇಕು. ಆ ಮೂಲಕ ಮಾನವ ಜನ್ಮವನ್ನು ಸಾರ್ಥಕ ಮಾಡಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
    ನಾವು ಬದುಕುವ ರೀತಿಯಲ್ಲಿ ನಮಗೆ ತಕ್ಕ ಫಲಗಳು ಪ್ರಾಪ್ತಿಯಾಗುತ್ತವೆ. ನಮ್ಮ ಜೀವನ ಕ್ರಮದಲ್ಲಿ ಒಳ್ಳೆಯ ನಿಯಮಗಳನ್ನು ರೂಢಿಸಿಕೊಂಡು ಸಂಯಮದಿಂದ ಬಾಳ್ವೆ ನಡೆಸಬೇಕು. ದೇವರ ಸ್ಮರಣೆ ನಿರಂತರವಾಗಿರಬೇಕು. ನಮ್ಮಲ್ಲಿರುವ ಅಜ್ಞಾನವನ್ನು ಹೋಗಲಾಡಿಸಲು ಧಾರ್ಮಿಕ ಕೇಂದ್ರಗಳ ಅಗತ್ಯ ಇದೆ. ಜೋಗಿಗಳ ರೂಪದ ಯೋಗಿಗಳಿಂದ ಶ್ರೀಮಠ ಅಭಿವೃದ್ಧಿ ಕಂಡಿದ್ದು, ಪ್ರತಿಯೊಬ್ಬರೂ ಮದ್ಯಪಾನ ಹಾಗೂ ಧೂಮಪಾನ ಚಟದಿಂದ ಮುಕ್ತರಾಗಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅವರನ್ನು ಸತ್ಪ್ರಜೆಗಳನ್ನಾಗಿ ರೂಪಿಸಬೇಕೆಂದು ಕರೆ ನೀಡಿದರು.
    ಮೇಲುಕೋಟೆ ಶಾಸಕ ಸಿ.ಎಸ್.ಪುಟ್ಟರಾಜು ಮಾತನಾಡಿ, ಆದಿಚುಂಚನಗಿರಿ ಮಠ ರಾಜ್ಯ, ರಾಷ್ಟ್ರವಲ್ಲದೆ ವಿಶ್ವದ ದೊಡ್ಡಣ್ಣ ಎನಿಸಿಕೊಂಡಿರುವ ಅಮೆರಿಕದಲ್ಲೂ ಶಾಖೆ ಹೊಂದಿದೆ. ಇಂತಹ ಪ್ರಸಿದ್ಧ ಮಠದ ಸೇವೆ ಮಾಡಲು ನಾವೆಲ್ಲರೂ ಸಿಪಾಯಿಯಂತೆ ಕಾರ್ಯ ನಿರ್ವಹಿಸೋಣ. ಭೈರವೈಕ್ಯ ಡಾ.ಬಾಲಗಂಗಾಧರನಾಥ ಶ್ರೀಗಳ ಮನದಿಚ್ಛೆಯಂತೆ ನಾನು ರಾಜಕಾರಣದಲ್ಲಿ ಉನ್ನತ ಹುದ್ದೆ ಅಲಂಕರಿಸಿದ್ದೇನೆ. ಶಾಸಕ, ಸಂಸದ, ಜಿಲ್ಲಾ ಉಸ್ತುವಾರಿ ಸಚಿವನಾಗಿ ಕಾರ್ಯನಿರ್ವಹಿಸುವ ಹೆಗ್ಗಳಿಕೆಗೆ ಆಶೀರ್ವದಿಸಿದವರು ಭೈರವೈಕ್ಯ ಶ್ರೀಗಳು ಎಂದು ಸ್ಮರಿಸಿದರು.
    ಡಾ.ನಿರ್ಮಲಾನಂದನಾಥ ಶ್ರೀಗಳು ಚಂದಗಾಲು ಗ್ರಾಮದ ಬಗ್ಗೆ ವಿಶೇಷ ಪ್ರೀತಿ ಹಾಗೂ ಅಭಿಮಾನ ಹೊಂದಿದ್ದಾರೆ. ಯಾವುದೇ ಒತ್ತಡವಿದ್ದರೂ ಬಿಡುವು ಮಾಡಿಕೊಂಡು ಗ್ರಾಮಕ್ಕೆ ಆಗಮಿಸಿರುವುದು ಪ್ರೀತಿಯ ಸಂಕೇತವೆಂದು ಬಣ್ಣಿಸಿದರು.
    ಉದ್ಯಮಿ ಭರತ್, ಪ್ರಗತಿಪರ ರೇಷ್ಮೆ ಬೆಳೆಗಾರ ಕೀರಣಗೆರೆ ಜಗದೀಶ್, ಜಯದೇವ ಹೃದ್ರೋಗ ಸಂಸ್ಥೆಯ ಡಾ.ಸಿ.ಜೆ.ದೇವರಾಜ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts