More

    ಸೌಲಭ್ಯ ಬಳಸಿಕೊಂಡು ಸಾಧನೆಯ ಮೆಟ್ಟಿಲು ಹತ್ತಿರಿ

    ದಾವಣಗೆರೆ: ಇಂದಿನ ಮಕ್ಕಳಿಗೆ ಸಾಧನೆ ಮಾಡಲು ಸಾಕಷ್ಟು ಸೌಲಭ್ಯ, ಪೂರಕ ವಾತಾವರಣವಿದ್ದು ಅದರ ಸದ್ಬಳಕೆ ಮಾಡಿಕೊಂಡು ಜೀವನದಲ್ಲಿ ಮುಂದೆ ಬರಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಸಲಹೆ ನೀಡಿದರು.
    ಮಹಾಂತ ಶಿವಾಚಾರ್ಯ ಶ್ರೀಗಳ ಭಕ್ತವೃಂದ, ಸುವರ್ಣ ಕರ್ನಾಟಕ ವೇದಿಕೆ, ಜಿಲ್ಲಾ 3 ಮತ್ತು 4 ಚಕ್ರ ಗೂಡ್ಸ್ ವಾಹನದ ಚಾಲಕರ ಮತ್ತು ಮಾಲೀಕರ ಸಂಘದಿಂದ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ, ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಹಿರಿಯ ಜಗದ್ಗುರು ಲಿಂ. ಡಾ. ಮಹಾಂತ ಶಿವಾಚಾರ್ಯ ಸ್ವಾಮೀಜಿ ಅವರ ಏಳನೇ ಪುಣ್ಯಸ್ಮರಣೋತ್ಸವ, ಬಡ ಮಕ್ಕಳಿಗೆ ನೋಟ್ಬುಕ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
    ನಾನು ಕಾಲಿಗೆ ಚಪ್ಪಲಿ ಕಂಡಿದ್ದೇ ಪಿ.ಯು.ಸಿ. ಹಂತಕ್ಕೆ ಬಂದಾಗ. ಆದರೆ ಈಗಿನ ಮಕ್ಕಳಿಗೆ ಎಲ್ಲ ಸೌಲಭ್ಯಗಳು ಸಿಗುತ್ತಿವೆ. ಬಿಸಿಯೂಟ, ಪುಸ್ತಕ ಸೇರಿದಂತೆ ಹಲವಾರು ಸೌಲಭ್ಯಗಳಿವೆ. ಆದರೂ ಮಕ್ಕಳಿಂದ ನಿರೀಕ್ಷಿತ ಮಟ್ಟದ ಸಾಧನೆ ಆಗುತ್ತಿಲ್ಲ ಎಂದರು.
    ನಾನು ಜಿಲ್ಲಾಧಿಕಾರಿಯಾಗಿ ಜನರ ಹತ್ತಿರ ತಲುಪಲು ಇನ್ನಷ್ಟು ಪ್ರಯತ್ನ ನಡೆಸುತ್ತೇನೆ. ಉದ್ದೇಶ ಹಾಗೂ ವಿಚಾರಗಳು ಪವಿತ್ರವಾಗಿದ್ದರೆ, ಕಾರ್ಯಗಳು ಸ್ವಚ್ಛವಾಗಿದ್ದರೆ ಏನೇ ಅಪಸ್ವರಗಳು ಬಂದರೂ ಜಗ್ಗಬಾರದು. ಹೀಗಾಗಿ ನಾನು ಯಾವುದಕ್ಕೂ ಅಂಜುವುದಿಲ್ಲ. ನಾನು ಹೊಂದಿರುವ ಕನಸುಗಳನ್ನು ಇಲ್ಲಿ ಸಾಕಾರ ಮಾಡಿಯೇ ಹೋಗುತ್ತೇನೆ ಎಂದರು.
    ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ. ಪಾಲಾಕ್ಷಿ ಮಾತನಾಡಿ, ಮಹಾಂತ ಶ್ರೀಗಳು ಧಾರ್ಮಿಕ ಚಟುವಟಿಕೆ ಹಾಗೂ ಪೂಜಾ ವಿಧಿ ವಿಧಾನಗಳಿಗೆ ಬದ್ಧತೆ ಹೊಂದಿದ್ದರು. ಅವರ ಆದರ್ಶ ಮೈಗೂಸಿಡಿಸಿಕೊಂಡರೆ ಸಮಾಜ ಸತ್ಪಥದ ಕಡೆಗೆ ಬರುತ್ತದೆ ಎಂದು ಹೇಳಿದರು.
    ಸನ್ಮಾನ ಸ್ವೀಕರಿಸಿದ ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಜಿ.ಎಂ.ಆರ್. ಆರಾಧ್ಯ ಮಾತನಾಡಿ, ಎಲ್ಲಾ ಸ್ವಾಮೀಜಿಗಳೂ ಒಂದೇ ರೀತಿ ಎಂದು ಭಾವಿಸಿ ಎಲ್ಲರನ್ನೂ ಒಂದೇ ತಟ್ಟೆಯಲ್ಲಿಟ್ಟು ತೂಗಬಾರದು. ಸ್ವಾಮೀಜಿ ಸ್ಥಾನಕ್ಕೆ ಘನತೆ ಇರುತ್ತದೆ ಎಂದರು.
    ಇತ್ತೀಚೆಗೆ ಯುವಕರು ಸ್ವಾಮೀಜಿಗಳಾಗಿ ಪಟ್ಟಕ್ಕೆ ಬಂದಿರುವುದನ್ನು ಹಲವು ಕಡೆ ನೋಡುತ್ತಿದ್ದೇವೆ. ಆದರೆ, ಅನುಭವ ಹಾಗೂ ಪರಿಪಕ್ವತೆ ಇಲ್ಲದೆ ಎಂತೆಂಥ ಗಲಾಟೆ ಆಯಿತು ಎಂಬುದನ್ನು ನಾವು ನೋಡಿದ್ದೇವೆ. ವಿಷಯಗಳನ್ನು ಪ್ರಸ್ತುತ ಪಡಿಸುವುದಕ್ಕೆ, ಬೇಡಿಕೆಗಳನ್ನು ಇಡುವುದಕ್ಕೆ ಕ್ರಮ ಇರುತ್ತದೆ. ಅದನ್ನು ಮೀರಿದರೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇದೆಲ್ಲವನ್ನೂ ಮೀರಿದ ಪರಿಪೂರ್ಣತೆಯನ್ನು ಮಹಾಂತ ಶಿವಾಚಾರ್ಯ ಸ್ವಾಮೀಜಿ ಹೊಂದಿದ್ದರು ಎಂದು ಹೇಳಿದರು.
    ನಿವೃತ್ತ ಶಿಕ್ಷಕ ಕೂಲಂಬಿ ಮುರುಗೇಂದ್ರಪ್ಪ, ಪಾಲಿಕೆ ಸದಸ್ಯ ಸ್ವಾಗಿ ಶಾಂತಕುಮಾರ್, ಶಿಕ್ಷಣ ಇಲಾಖೆ ಅಧಿಕಾರಿ ನಿರಂಜನಮೂರ್ತಿ, ಮಹಾಂತೇಶ್ ವಿ. ಒಣರೊಟ್ಟಿ, ಪಳನಿಸ್ವಾಮಿ, ಸಂತೋಷ್ ಕುಮಾರ್ ಉಪಸ್ಥಿತರಿದ್ದರು.
    ನಿವೃತ್ತ ಶಿಕ್ಷಕಿ ಜಿ.ಇ. ನಾಗರತ್ನಮ್ಮ, ದಾವಣಗೆರೆ ವಿ.ವಿ.ಯಲ್ಲಿ ಪತ್ರಿಕೋದ್ಯಮದಲ್ಲಿ ಪ್ರಥಮ ರ‌್ಯಾಂಕ್ ಪಡೆದಿರುವ ಕೆ.ಎಂ. ನಂದಿನಿ, ಗಾನಶ್ರೀ ಸ್ವರಾಲಯದ ಸಂಗೀತಾ ರಾಘವೇಂದ್ರ, ಪೊಲೀಸ್ ಇಲಾಖೆಯ ಕೆ.ಪಿ. ದುಗ್ಗೇಶ್ ಅವರನ್ನು ಸನ್ಮಾನಿಸಲಾಯಿತು. ಎಂ.ಆರ್. ಹೆಗಡೆ ಸ್ವಾಗತಿಸಿದರು. ಬೆಳ್ಳೂಡಿ ಶಿವಕುಮಾರ್ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts