More

    ಡಾ. ಶಿವಕುಮಾರ ಸ್ವಾಮೀಜಿ ಗದ್ದುಗೆ ದರ್ಶನ ಪಡೆದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

    ತುಮಕೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗುರುವಾರ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಡಾ.ಶಿವಕುಮಾರ ಸ್ವಾಮೀಜಿ ಗದ್ದುಗೆ ದರ್ಶನ ಪಡೆದು ಶ್ರೀ ಸಿದ್ದಲಿಂಗ ಸ್ವಾಮೀಜಿ ಆಶೀರ್ವಾದ ಪಡೆದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರೊನಾ ತುರ್ತು ಪರಿಸ್ಥಿತಿಯ ಕಾರಣಕ್ಕೆ ದೇಶದ ಜನ ಸಂಕಷ್ಟದಲ್ಲಿದ್ದಾರೆ, ರಜೆ ಮುಂದುವರಿಯುತ್ತಲೇ ಇರುವ ಕಾರಣಕ್ಕೆ ಬ್ಯಾಂಕ್‌ನಲ್ಲಿ ಸಾಲ ಪಡೆದಿರುವ ಬಡವರು, ಮಧ್ಯಮ ವರ್ಗದ ಕುಟುಂಬಗಳಿಗೆ ಸಾಲದ ಕಂತು ಕಟ್ಟಲು ಕಷ್ಟವಾಗಲಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಬ್ಯಾಂಕ್‌ಗಳಿಗೆ ಬಡ್ಡಿ ಮನ್ನಾ ಮಾಡುವಂತೆ ನಿರ್ದೇಶನ ನೀಡಬೇಕು ಎಂದರು.
    ಆರೋಗ್ಯ ವಿಚಾರದಲ್ಲಿ ನಾನು ರಾಜಕೀಯ ಮಾಡಲ್ಲ. ಈಗ ನಮ್ಮ ಜನಗಳನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಕರೊನಾ ವಿಚಾರದಲ್ಲಿ ಸರ್ಕಾರ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದೆ, ನಾವೆಲ್ಲರೂ ಸಹಕಾರ ನೀಡೋಣ. ಉನ್ನತಮಟ್ಟದ ವೈದ್ಯರ ಸಭೆ ಕರೆದು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು, ಸೇವಾ ಮನೋಭಾವದಿಂದ ಕೆಲಸ ಮಾಡಲು ಖಾಸಗಿ ಆಸ್ಪತ್ರೆ ಹಾಗೂ ಸಂಸ್ಥೆಗಳಿಗೂ ಮನವಿ ಮಾಡಬೇಕು ಎಂದರು.

    ಶಾಸಕ ಡಾ. ರಂಗನಾಥ್, ಮಾಜಿ ಸಚಿವ ಜಯಚಂದ್ರ, ಮೇಯರ್ ರೀದಾ ಬೇಗಂ, ಮಾಜಿ ಶಾಸಕರಾದ ಡಾ. ರಫೀಕ್ ಅಹ್ಮದ್, ಡಾ. ಷಫಿ ಅಹ್ಮದ್, ಕೆ.ಷಡಕ್ಷರಿ, ಜಿಲ್ಲಾಧ್ಯಕ್ಷ ಆರ್.ರಾಮಕೃಷ್ಣ ಮುಖಂಡರಾದ ರಾಯಸಂದ್ರ ರವಿಕುಮಾರ್, ಚೌದ್ರಿ ರಂಗಪ್ಪ, ಮುರಳೀಧರ ಹಾಲಪ್ಪ ಇದ್ದರು.

    ಅಭಿಮಾನಿಗಳ ಜೈಕಾರ!: ಮಠದಲ್ಲಿ ನೂರಾರು ಕಾರ್ಯಕರ್ತರು ಜಮಾಯಿಸಿದ್ದರು. ಕರೊನಾ ಭಯದ ಹಿನ್ನೆಲೆಯಲ್ಲಿ ಜಾಸ್ತಿ ಜನರು ಮಠಕ್ಕೆ ಬರಬಾರದು ಎಂದು ಮನವಿ ಮಾಡಿದ್ದರೂ ಲೆಕ್ಕಿಸದೆ ಮುಖಂಡರು ಆಗಮಿಸಿ ನೂಕುನುಗ್ಗಲು ಉಂಟು ಮಾಡಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶಿ, ನಾನು ಯಾರನ್ನೂ ಕರೆದಿರಲಿಲ್ಲ, ಕೆಪಿಸಿಸಿ ಅಧ್ಯಕ್ಷನಾಗಿ ಮೊದಲ ಸಲ ಜಿಲ್ಲೆಗೆ ಭೇಟಿ ನೀಡಿದ್ದ ಹಿನ್ನೆಲೆಯಲ್ಲಿ ಅಭಿಮಾನದಿಂದ ಮುಖಂಡರು ಬಂದಿದ್ದಾರೆ ಎಂದು ಸಮರ್ಥಿಸಿಕೊಂಡರು.

    ಪಟಾಕಿ ಸಿಡಿಸಿ ಸ್ವಾಗತಿಸಿದ ಕಾರ್ಯಕರ್ತರು!: ತುಮಕೂರು ವಿವಿ ಹೆಲಿಪ್ಯಾಡ್‌ಗೆ ಹೆಲಿಕಾಪ್ಟರ್‌ನಲ್ಲಿ ಬಂದಿಳಿದ ಡಿ.ಕೆ.ಶಿವಕುಮಾರ್ ಅವರನ್ನು ಪಟಾಕಿ ಸಿಡಿಸಿ, ಹೂ ಗುಚ್ಚ ನೀಡಿ ಕಾರ್ಯಕರ್ತರು ಬರಮಾಡಿಕೊಂಡರು. ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರ ಮನೆಯಲ್ಲಿ ಭೋಜನ ಕಾರ್ಯಕ್ರಮ ಕೊನೆಯ ಕ್ಷಣದಲ್ಲಿ ರದ್ದಾದ ಹಿನ್ನೆಲೆ ರಾಜಣ್ಣ ಪುತ್ರ ಆರ್.ರಾಜೇಂದ್ರ ಅವರು ಡಿ.ಕೆ.ಶಿವಕುಮಾರ್
    ಜತೆ ಕಾಣಿಸಿಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts