More

    ಪಾಕಿಸ್ತಾನದಲ್ಲಿ ಕರೊನಾ ವಿರುದ್ಧ ಹೋರಾಡುವುದೇ ದೊಡ್ಡ ಸವಾಲು; ರಕ್ಷಣಾ ಸಾಧನಗಳನ್ನು ಕೊಡಿ ಎಂದ 50 ವೈದ್ಯರು ಅರೆಸ್ಟ್​

    ಕ್ವೆಟ್ಟಾ: ಪಾಕಿಸ್ತಾನದಲ್ಲಿ ಕರೊನಾ ನಿಯಂತ್ರಣಕ್ಕೆ ಯಾವುದೇ ಕ್ರಮಗಳನ್ನೂ ಕೈಗೊಳ್ಳುತ್ತಿಲ್ಲ. ಲಾಕ್​ಡೌನ್​ ಮಾಡಿದಾಕ್ಷಣ ವೈರಸ್​ ಪ್ರಸರಣ ನಿಲ್ಲುವ ಬಗ್ಗೆ ನನಗೆ ನಂಬಿಕೆ ಇಲ್ಲ ಎಂದು ಪ್ರಧಾನಮಂತ್ರಿ ಇಮ್ರಾನ್​ ಖಾನ್​ ಈಗಾಗಲೇ ಹೇಳಿದ್ದಾರೆ.

    ಅಲ್ಲಿ ಕರೊನಾ ವೈರಸ್​ ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯರ ಸುರಕ್ಷತೆಗೂ ಯಾವುದೇ ಸಾಧನಗಳು ಸರಿಯಾಗಿ ಸಿಗುತ್ತಿಲ್ಲ. ಈ ಮಧ್ಯೆ ಕರೊನಾ ಸುರಕ್ಷಿತ ಉಪಕರಣಗಳನ್ನು ಒದಗಿಸುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡಿದ 50 ಮಂದಿ ವೈದ್ಯರನ್ನು ಬಂಧಿಸಲಾಗಿದೆ. ನೈಋತ್ಯ ಪಾಕಿಸ್ತಾನದಲ್ಲಿರುವ ಕ್ವೆಟ್ಟಾ ಎಂಬಲ್ಲಿ ಘಟನೆ ನಡೆದಿದೆ.

    ಕರೊನಾ ವೈರಸ್​ಗೆ ಚಿಕಿತ್ಸೆ ನೀಡುವ ವೈದ್ಯರು, ಆರೋಗ್ಯ ಸಿಬ್ಬಂದಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ, ಅವರಿಗೆ ರಕ್ಷಣಾ ಸಾಧನೆಗಳನ್ನು ಒದಗಿಸುವಂತೆ ವಿಶ್ವ ಆರೋಗ್ಯ ಸಂಸ್ಥೆ ನಿರ್ದೇಶನ ನೀಡಿದೆ. ಆದರೆ ಇಲ್ಲಿ ಸರ್ಕಾರ ಅದನ್ನು ಪಾಲಿಸುತ್ತಿಲ್ಲ. ಏನನ್ನೂ ಕೊಡುತ್ತಿಲ್ಲ. ಹಾಗಾಗಿ ಪ್ರತಿಭಟನೆ ನಡೆಸಿದ್ದಾರೆ ಎಂದು ಕ್ವೆಟ್ಟಾದ ವೈದ್ಯರ ಸಂಘದ ಅಧ್ಯಕ್ಷ ಯಾಸಿರ್ ಅಚಕ್ಜೈ ತಿಳಿಸಿದ್ದಾರೆ.

    ಸೋಮವಾರ ವೈದ್ಯರು ಸೇರಿ ಸುಮಾರು 100 ಮಂದಿ ವೈದ್ಯಕೀಯ ಸಿಬ್ಬಂದಿ ಪ್ರತಿಭಟನೆ ನಡೆಸಿದ್ದಾರೆ. ಮೆರವಣಿಗೆ ಸಾಗಿ ಮುಖ್ಯಮಂತ್ರಿ ಮನೆಯ ಎದುರು ಜಮಾಯಿಸಿದ್ದರು. ಮನೆಯೊಳಗೆ ನುಗ್ಗಲು ಯತ್ನಿಸಿದ ವೈದ್ಯರ ಮೇಲೆ ಪೊಲೀಸರು ಲಾಠಿ ಚಾರ್ಜ್​ ಕೂಡ ಮಾಡಿದ್ದಾರೆ. ಇದರಿಂದ ವೈದ್ಯರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ. ಪರಸ್ಪರ ಕೈಕೈ ಮಿಲಾಯಿಸಿಕೊಂಡಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

    ಸುಮಾರು 53 ವೈದ್ಯರನ್ನು ವಶಪಡಿಸಿಕೊಂಡಿದ್ದೇವೆ. ಇವರೆಲ್ಲ ಪ್ರತಿಭಟನೆಯ ನೆಪದಲ್ಲಿ ಕಾನೂನು ಉಲ್ಲಂಘನೆ ಮಾಡಿದ್ದಾರೆ ಎಂದು ಹಿರಿಯ ಪೊಲೀಸ್​ ಅಧಿಕಾರಿ ಅಬ್ದುಲ್​ ರಜ್ಜಾ ಮಾಹಿತಿ ನೀಡಿದ್ದಾರೆ. ಈ ವೈದ್ಯರನ್ನೆಲ್ಲ ಸ್ಥಳೀಯ ಬಲೂಚಿಸ್ತಾನ ಸರ್ಕಾರದ ಆದೇಶದ ಮೇರೆಗೆ ಸುಮಾರು ಒಂದು ತಾಸಿನ ನಂತರ ಬಿಡುಗಡೆ ಮಾಡಲಾಗಿದೆ.

    ನಾವು ವೈದ್ಯರಿಗೆ ಅಗತ್ಯ ರಕ್ಷಣಾ ಕಿಟ್​ಗಳನ್ನು, ಸುರಕ್ಷತಾ ಸಾಧನಗಳನ್ನು ನೀಡುವುದಾಗಿ ತಿಳಿಸಿದ್ದೇವೆ. ಆದರೂ ಅವರು ಪ್ರತಿಭಟನೆ ಮಾಡಿದ್ದಾರೆ ಎಂದು ಸರ್ಕಾರದ ವಕ್ತಾರ ತಿಳಿಸಿದ್ದಾರೆ.

    ಪಾಕಿಸ್ತಾನದಲ್ಲಿ ಕರೊನಾ ವೈರಸ್ ಸೋಂಕಿತರ ಸಂಖ್ಯೆ 3 ಸಾವಿರದ ಗಡಿ ದಾಟಿದ್ದು, 50 ಮಂದಿ ಮೃತಪಟ್ಟಿದ್ದಾರೆ. ದೇಶಾದ್ಯಂತ ಎಲ್ಲ ವೈದ್ಯರೂ ತಮಗೆ ಸರ್ಕಾರದಿಂದ ಯಾವುದೇ ಸೂಕ್ತ ಸಲಕರಣೆಗಳು ಸಿಗುತ್ತಿಲ್ಲ. ನಮ್ಮನ್ನು ನಾವು ಕಾಪಾಡಿಕೊಳ್ಳಲು ಆಗುತ್ತಿಲ್ಲ. ಹಾಗೇ ರೋಗಿಗಳಿಗೆ ಚಿಕಿತ್ಸೆ ನೀಡಲೂ ತೊಡಕಾಗುತ್ತಿದೆ ಎಂದು ಆರೋಪ ಮಾಡಿದ್ದಾರೆ. (ಏಜೆನ್ಸೀಸ್​)

    ಬಜೆಟ್​ನಲ್ಲಿ ಬದಲಾವಣೆ ಅನಿವಾರ್ಯ:ವಿಜಯವಾಣಿ ಸಂದರ್ಶನದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾಹಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts