More

    ಮನೆ ಮನೆಗೆ ರಾಡಿ ನೀರು ಪೂರೈಕೆ!

    ಉಪ್ಪಿನಬೆಟಗೇರಿ: ಉಪ್ಪಿನಬೆಟಗೇರಿ ಗ್ರಾಮದ ಮನೆ ಮನೆಗೆ ರಾಡಿ ನೀರು ಪೂರೈಕೆಯಾಗುತ್ತಿದ್ದು, ಈ ನೀರು ಕುಡಿದ ಅದೆಷ್ಟೋ ಜನರು ಆರೋಗ್ಯ ಸಮಸ್ಯೆ ಎದುರಿಸುವಂತಾಗಿದೆ.

    ಮಾಜಿ ಶಾಸಕಿ ಸೀಮಾ ಮಸೂತಿ ತಮ್ಮ ಅಧಿಕಾರದ ಅವಧಿಯಲ್ಲಿ ಮರೇವಾಡ, ತಿಮ್ಮಾಪೂರ, ಕರಡಿಗುಡ್ಡ, ಪುಡಕಲಕಟ್ಟಿ, ಉಪ್ಪಿನಬೆಟಗೇರಿ ಸೇರಿ ಒಟ್ಟು 14 ಹಳ್ಳಿಗಳಿಗೆ ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆಯನ್ನು ಅನುಷ್ಠಾನ ಮಾಡಿದ್ದರು. ಈ ಗ್ರಾಮಗಳಿಗೆ ಮಲಪ್ರಭಾ ನದಿ ನೀರನ್ನು ಅಮ್ಮಿನಬಾವಿ ಮೇಲ್ಮಟ್ಟದ ಜಲ ಸಂಗ್ರಹಗಾರದಿಂದ ಪೂರೈಕೆ ಮಾಡಲಾಗುತ್ತಿದೆ.

    ವರ್ಷದ ಹಿಂದೆ ಕೇಂದ್ರ ಸರ್ಕಾರ ಮನೆ ಮನೆಗೆ ಗಂಗೆ ಎಂಬ ಯೋಜನೆ ಜಾರಿಗೆ ತಂದಿತ್ತು. ಅದರಡಿ ಕೋಟಿ ಲೆಕ್ಕದಲ್ಲಿ ಕಾಮಗಾರಿ ಮಾಡಿದರೂ ಪ್ರಯೋಜನ ಇಲ್ಲದಂತಾಗಿದೆ. ಮನೆಗಳಿಗೆ ಸಂಪರ್ಕ ಕಲ್ಪಿಸಿದ್ದ ನಲ್ಲಿಗಳು ಮುರಿದು ಹೋಗಿವೆ. ನಲ್ಲಿ ತಿರುವಿದಾಗ ಮೊದಲು ಮಣ್ಣು ಮಿಶ್ರಿತ ರಾಡಿ ನೀರು ಬರುತ್ತಿದೆ. ಶೇಖರಿಸಿಟ್ಟ ನೀರಿನ ಪಾತ್ರೆಗಳ ತಳಭಾಗದಲ್ಲಿ ಕೆಂಪು ಮಣ್ಣು ಸಂಗ್ರಹವಾಗಿರುತ್ತದೆ. ಮೂರ್ನಾಲ್ಕು ದಿನಗಳಲ್ಲಿ ಹುಳುಗಳು ಕಾಣಿಸಿಕೊಳ್ಳುತ್ತಿವೆ ಎಂದು ಉಪ್ಪಿನಬೆಟಗೇರಿ ಗ್ರಾಮಸ್ಥರು ದೂರಿದ್ದಾರೆ.

    ಆರೋಗ್ಯದ ಮೇಲೆ ದುಷ್ಪರಿಣಾಮ

    ರಾಜ್ಯದ ಕೆಲ ಜಿಲ್ಲೆಗಳಲ್ಲಿ ಡೆಂಘೆ ಮತ್ತು ಮಲೇರಿಯಾ ರೋಗಗಳು ಉಲ್ಬಣಿಸಿವೆ. ಹೀಗಿರುವಾಗ ಸ್ಥಳೀಯ ಗ್ರಾಪಂ, ಆರೋಗ್ಯ ಇಲಾಖೆ ಎಚ್ಚರಿಕೆ ವಹಿಸಬೇಕಿದೆ. ಪೂರೈಕೆಯಾಗುವ ಕುಡಿಯುವ ನೀರಿನ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿ ನೀರಿನ ಗುಣಮಟ್ಟವನ್ನು ಪರಿಶೀಲಿಸಬೇಕಿದೆ. ತಪ್ಪಿದಲ್ಲಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದು ನಿಶ್ಚಿತ.

    ಮನೆ ಮನೆಗೆ ಸಂಪರ್ಕ ಕಲ್ಪಿಸಿರುವ ನಲ್ಲಿ ಮೂಲಕ ಕೆಂಪು ನೀರು ಬರುತ್ತಿರುವ ಬಗ್ಗೆ ಗ್ರಾಮಸ್ಥರು ದೂರಿದ್ದಾರೆ. ಈ ಕುರಿತು ಅಮ್ಮಿನಬಾವಿ ಮೇಲ್ಮಟ್ಟದ ಸಂಗ್ರಹಗಾರದ ನೀರಿನ ಗುಣಮಟ್ಟ ಪರಿಶೀಲಿಸಲು ಸೂಚಿಸಲಾಗುವುದು.

    | ಮಂಜುನಾಥ ಮಸೂತಿ ಗ್ರಾಪಂ ಅಧ್ಯಕ್ಷ ಉಪ್ಪಿನಬೆಟಗೇರಿ

    ಹುಬ್ಬಳ್ಳಿ- ಧಾರವಾಡ ಸೇರಿ ಗ್ರಾಮೀಣ ಭಾಗದ ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆಯಾಗುವ 38 ಲಕ್ಷ ಲೀಟರ್ ಸಾಮರ್ಥ್ಯದ ಅಮ್ಮಿನಬಾವಿ ಮೇಲ್ಮಟ್ಟದ ಜಲಸಂಗ್ರಹಗಾರದ ಒಳಗಿನ ಮೇಲ್ಭಾಗದ ಸಿಮೆಂಟ್ ಪದರು ಕಳಚಿ ಬಿದ್ದಿದ್ದರಿಂದ ರಾಡಿ ನೀರು ಬರುತ್ತಿದೆ. ಈ ಕುರಿತು ಮೇಲಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ.

    | ಆರ್.ಎಂ. ಸೊಪ್ಪಿಮಠ, ಇಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ, ಧಾರವಾಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts