More

    ಮನೆ ಮನೆಗೆ ಆಮಂತ್ರಣಾಕ್ಷತೆ ಅಭಿಯಾನ

    ಗೋಕರ್ಣ: ಅಯೋಧ್ಯೆಯಲ್ಲಿ ಜ.22ರಂದು ನಡೆಯಲಿರುವ ಶ್ರೀರಾಮ ಪ್ರಾಣಪ್ರತಿಷ್ಠೆ ಸಮಾರಂಭ ನಿಮಿತ್ತ ಗೋಕರ್ಣದಲ್ಲಿ ಒಂದು ವಾರ ಪರ್ಯಂತ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಶ್ರೀರಾಮ-ಲಕ್ಷ್ಮಣ ದೇವ ಟ್ರಸ್ಟ್ ಮತ್ತು ವಿವಿಧ ಸಂಘಟನೆಗಳ ಸಹಯೋಗದಲ್ಲಿ ಶ್ರೀರಾಮ ಆಮಂತ್ರಣಾಕ್ಷತಾ ಅಭಿಯಾನ ಆಯೋಜಿಸಲಾಗಿದೆ.

    ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಅಭಿಯಾನದ ಪ್ರಮುಖರು ಬುಧವಾರ ಶ್ರೀರಾಮ ಮಂದಿರದಲ್ಲಿ ಬಿಡುಗಡೆಗೊಳಿಸಿ ಪೂರ್ವ ಸಿದ್ಧತಾ ಸಭೆ ನಡೆಸಿದರು.

    ಜ.12ರಂದು ಕಾರ್ಯಕ್ರಮದ ಆಮಂತ್ರಣ ಮತ್ತು ಅಯೋಧ್ಯೆಯಿಂದ ಆಗಮಿಸಿದ ಪವಿತ್ರ ಮಂತ್ರಾಕ್ಷತೆಯನ್ನು ಮನೆ ಮನೆಗೆ ವಿತರಿಸುವ ಅಭಿಯಾನ ಆಯೋಜಿಸಲಾಗಿದೆ. 4 ಗಂಟೆಗೆ ಮಾರುತಿ ಗುಡಿಯಿಂದ ಶ್ರೀರಾಮ ದೇವರ ಪಲ್ಲಕ್ಕಿ ಉತ್ಸವ ಸಹಿತವಾಗಿ ಆಮಂತ್ರಣಾಕ್ಷತೆಯನ್ನು ಪ್ರತಿ ಮನೆಗೆ ತಲುಪಿಸಲಾಗುವುದು. ಉತ್ಸವವು ಅಲ್ಲಿಂದ ಮುಖ್ಯ ರಸ್ತೆಯಲ್ಲಿ ಸಾಗಿ ರಥಬೀದಿ ವೆಂಕಟ್ರಮಣ ಮಂದಿರದಿಂದ ಕೋಟಿತೀರ್ಥ ಸುತ್ತಲಿದೆ. ಅಲ್ಲಿಂದ ರಥಬೀದಿಯ ಮೂಲಕ ಶ್ರೀಮಹಾಬಲೇಶ್ವರ ಮಂದಿರಕ್ಕೆ ಆಗಮಿಸಿ ಸಮುದ್ರ ತೀರದ ಶ್ರೀರಾಮ ಮಂದಿರದಲ್ಲಿ ಸಂಪನ್ನವಾಗುವುದು.

    ಜ.17ರಿಂದ 23ರವರೆಗೆ ’ಶಾಕಲ ಋಕ್ ಸಂಹಿತಾ ಮಹಾಯಾಗ’ ಆಯೋಜಿಸಲಾಗಿದೆ. ದಿನ ಬೆಳಗ್ಗೆ 7-30ರಿಂದ ವೇದವಿದ್ವಾಂಸರ ನೇತೃತ್ವದಲ್ಲಿ ಮಹಾಯಾಗ ನಡೆಯುವುದು.

    22ರಂದು ಶ್ರೀರಾಮ ಪ್ರಾಣ ಪ್ರತಿಷ್ಠೆ ನಿಮಿತ್ತ ಶ್ರೀರಾಮ ಮಂದಿರದಲ್ಲಿ ಬೆಳಗ್ಗೆ 8 ಗಂಟೆಯಿಂದ ಶ್ರೀರಾಮತಾರಕ ಜಪ, ಹವನ ಮತ್ತಿತರ ಧಾರ್ಮಿಕ ಕಾರ್ಯಗಳು ಜರುಗಲಿವೆ. ಸಂಜೆ 4 ಗಂಟೆಯಿಂದ ಶ್ರೀರಾಮ ದೇವರ ವಿಶೇಷ ಪಲ್ಲಕ್ಕಿ ಉತ್ಸವ, ಹೂವಿನಪೂಜೆ, ಮಹಾಮಂಗಳಾರತಿ ಮತ್ತು ಪ್ರಸಾದ ವಿತರಣೆ ನಡೆಯುವುದು. ರಾತ್ರಿ 10 ಗಂಟೆಗೆ ಯಂಗ್‌ಸ್ಟಾರ್ ಕ್ಲಬ್ ವತಿಯಿಂದ ಶ್ರೀರಾಮಾಂಜನೇಯ ಮತ್ತು ವೀರಮಣಿ ಕಾಳಗ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

    ಪೂರ್ವ ಸಿದ್ಧತಾ ಸಭೆಯಲ್ಲಿ ಶ್ರೀರಾಮ ಮಂದಿರ ಅರ್ಚಕರಾದ ವೇ. ಪ್ರಕಾಶ ಗಜಾನನ ಅಂಬೇಕರ, ವೇ.ಶ್ರೀಧರ ಅಂಬೇಕರ, ಶ್ರೀಹರಿಹರೇಶ್ವರ ವೇದ ವಿದ್ಯಾಪೀಠದ ಪ್ರಮುಖ ವಿದ್ವಾನ್ ಉದಯ ಮಯ್ಯರ್, ವಿದ್ವಾನ್ ಗಂಗಾರಾಮ ಜೋಗಳೇಕರ, ಬ್ರಾಹ್ಮಣ ಪರಿಷತ್ ಅಧ್ಯಕ್ಷ ವೇ. ಚಂದ್ರಶೇಖರ ಅಡಿ, ಕಾರ್ಯದರ್ಶಿ ವೇ. ಸುಬ್ರಹ್ಮಣ್ಯ ಪಂಡಿತ, ಉಪಾಧಿವಂತ ಮಂಡಳ ಪ್ರಮುಖ ವೇ. ದತ್ತಾತ್ರೇಯ ಹಿರೇಗಂಗೆ, ಯಂಗ್‌ಸ್ಟಾರ್ ಕ್ಲಬ್ ಅಧ್ಯಕ್ಷ ನಾಗಕುಮಾರ ಗೋಪಿ, ಲಯನ್ಸ್ ಕ್ಲಬ್ ವತಿಯಿಂದ ಅನಿಲ್ ಶೇಟ್, ಅಮಿತ್ ಗೋಕರ್ಣ, ವೇ.ಪರಮೇಶ್ವರ ಪ್ರಸಾದ, ತಾಪಂ ಮಾಜಿ ಸದಸ್ಯ ಮಹೇಶ ಶೆಟ್ಟಿ, ಗ್ರಾಪಂ ಅಧ್ಯಕ್ಷೆ ಸುಮನಾ ಗೌಡ, ಸದಸ್ಯರಾದ ರಮೇಶ ಪ್ರಸಾದ, ಪ್ರಭಾಕರ ಪ್ರಸಾದ, ಸತೀಶ ದೇಶಭಂಡಾರಿ, ವಿಜಯ ವಿನಾಯಕ ಸಂಘದ ಅರುಣ ಮಂಗರ್ಸಿ ಮುಂತಾದವರಿದ್ದರು. ಅಭಿಯಾನ ಸಮಿತಿಯ ಸಂಚಾಲಕರಾದ ಗಣಪತಿ ಮಾಣೇಶ್ವರ ಅಡಿ ಮತ್ತು ರವಿ ಗುನಗ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts