More

    ಬಾಗಿಲು ತೆರೆಯದ ಇಂದಿರಾ ಕ್ಯಾಂಟೀನ್

    ಬೆಳಗಾವಿ: ಕಾರ್ಮಿಕರು, ಬಡವರಿಗೆ ಊಟ, ಉಪಾಹಾರ ಒದಗಿಸಲು ಕೋಟ್ಯಂತರ ರೂ.ವೆಚ್ಚದಲ್ಲಿ ಆರಂಭಗೊಂಡಿದ್ದ ಇಂದಿರಾ ಕ್ಯಾಂಟೀನ್‌ಗಳು ಇದೀಗ ಅನುದಾನ ಮತ್ತು ಗ್ರಾಹಕರು ಇಲ್ಲದೆ ಭಣಗುಡುತ್ತಿವೆ. ಜನರಿಂದ ಗಿಜಿಗುಡುತ್ತಿದ್ದ ಈ ಅನ್ನದ ತಾಣಗಳು ಈಗ ಜನರೂ ಇಲ್ಲದೆ, ಬಾಗಿಲು ಕೂಡ ತೆರೆಯದ ಸ್ಥಿತಿಗೆ ತಲುಪಿವೆ.

    ನಗರ ಪ್ರದೇಶದ ಬಡವರು, ಕಾರ್ಮಿಕರಿಗೆ ಕಡಿಮೆ ದರದಲ್ಲಿ ಗುಣಮಟ್ಟದ ಉಪಾಹಾರ, ಮಧ್ಯಾಹ್ನ, ರಾತ್ರಿ ಊಟ ಸಿಗಲಿ ಎಂಬ ಉದ್ದೇಶದಿಂದ ರಾಜ್ಯ ಸರ್ಕಾರವು ಮಹಾನಗರ ಪಾಲಿಕೆ ಸೇರಿ ಸ್ಥಳೀಯ ಸಂಸ್ಥೆಗಳ ಸಂಯೋಜನೆಯಡಿ ಜಿಲ್ಲೆಯಲ್ಲಿ ಕೋಟ್ಯಂತರ ರೂ. ವೆಚ್ಚ ಮಾಡಿ 15 ಇಂದಿರಾ ಕ್ಯಾಂಟೀನ್ ಆರಂಭಿಸಿತ್ತು. ಆದರೆ, ನಿಗದಿತ ಸಮಯದಲ್ಲಿ ಅನುದಾನ ಬಾರದಿರುವ ಹಿನ್ನೆಲೆಯಲ್ಲಿ
    ಕ್ಯಾಂಟೀನ್‌ಗಳು ಬಂದ್ ಆಗುವ ಸ್ಥಿತಿಗೆ ತಲುಪಿವೆ.

    ಐದು ಕ್ಯಾಂಟೀನ್ ಬಂದ್: ಕೋವಿಡ್-19 ಲಾಕ್‌ಡೌನ್ ಸಂದರ್ಭದಲ್ಲಿ ವಿವಿಧ ರಾಜ್ಯಗಳಿಂದ ನಗರಕ್ಕೆ ಬಂದಿದ್ದ ಕಾರ್ಮಿಕರಿಗೆ ಇಂದಿರಾ ಕ್ಯಾಂಟೀನ್‌ಗಳ ಮೂಲಕ ಆಹಾರ ಸರಬರಾಜು ಮಾಡಲಾಗಿತ್ತು. ಬಳಿಕ ಗ್ರಾಹಕರ ಕೊರತೆ, ಮಹಾನಗರ ಪಾಲಿಕೆಯು ಬಾಕಿ ಉಳಿಸಿಕೊಂಡಿರುವ 10 ಲಕ್ಷ ರೂ. ಅನುದಾನ ಬಿಡುಗಡೆ ಮಾಡದಿರುವ ಹಿನ್ನೆಲೆಯಲ್ಲಿ ನಗರದಲ್ಲಿರುವ 6 ಕ್ಯಾಂಟೀನ್‌ಗಳ ಪೈಕಿ 5 ಕ್ಯಾಂಟೀನ್ ಬಂದ್ ಆಗಿವೆ.

    ಇಂದಿರಾ ಕ್ಯಾಂಟೀನ್‌ಗಳಲ್ಲಿ ಪ್ರತಿದಿನ ಒಬ್ಬ ವ್ಯಕ್ತಿಯ ಉಪಾಹಾರ, ಮಧ್ಯಾಹ್ನದ ಊಟ ಹಾಗೂ ರಾತ್ರಿಯ ಭೋಜನ ಸೇರಿ ಇಂದಿರಾ ಕ್ಯಾಂಟೀನ್ 57 ರೂ.ದರ ನಿಗದಿಪಡಿಸಿದೆ. ನಗರದಲ್ಲಿರುವ 6 ಇಂದಿರಾ ಕ್ಯಾಂಟೀನ್‌ಗಳಿಗೆ ಆರಂಭದಲ್ಲಿ ಪಾಲಿಕೆ ಪ್ರತಿನಿತ್ಯ 96 ಸಾವಿರ ರೂ.ದಿಂದ 1 ಲಕ್ಷ ರೂ.ವರೆಗೆ ಖರ್ಚು ಮಾಡುತ್ತಿತ್ತು.

    ಪ್ರತಿದಿನ ಒಂದು ಕ್ಯಾಂಟೀನ್‌ನಲ್ಲಿ 500 ಕೂಪನ್‌ಗಳಂತೆ 6 ಕ್ಯಾಂಟೀನ್‌ಗಳಲ್ಲಿ 3000 ಕೂಪನ್‌ಗಳನ್ನು ವಿತರಣೆ ಮಾಡಲಾಗುತ್ತಿತ್ತು. ತಲಾ ಕೂಪನ್‌ಗೆ ಪಾಲಿಕೆ 32 ರೂ.ಯಂತೆ 96 ಸಾವಿರ ರೂ. ಪಾವತಿಸುತ್ತಿತ್ತು. ಇದರಿಂದ ಮಾಸಿಕ 28.80 ಲಕ್ಷ ರೂ.ಗಳನ್ನು ಇಂದಿರಾ ಕ್ಯಾಂಟೀನ್‌ಗಳಿಗಾಗಿ ಪಾಲಿಕೆ ಖರ್ಚು ಮಾಡುತ್ತಿತ್ತು. ಆದರೆ, ಸದ್ಯದ ಆರ್ಥಿಕ ಪರಿಸ್ಥಿತಿಯಲ್ಲಿ ಅಷ್ಟೊಂದು ಹಣವನ್ನು ಮಹಾನಗರ ಪಾಲಿಕೆಯಿಂದ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ನೆಹರು ನಗರದ ಕ್ಯಾಂಟೀನ್‌ನಲ್ಲಿ ಆಹಾರ ಲಭ್ಯ

    ಬೆಳಗಾವಿ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ಜಿಲ್ಲಾಸ್ಪತ್ರೆ), ಕೆಎಸ್‌ಎಸ್‌ಆರ್‌ಟಿಸಿ ಬಸ್ ನಿಲ್ದಾಣ ಆವರಣ, ಕೆಎಂಎಫ್ ಆವರಣ, ಗೋವಾವೇಸ್ ಪಾಲಿಕೆಯ ಕಾಂಪ್ಲೆಕ್ಸ್, ನಾಥ ಪೈ ವೃತ್ತದಲ್ಲಿನ ಕ್ಯಾಂಟೀನ್ ಬಂದ್ ಆಗಿವೆ. ನೆಹರು ನಗರದ ಎಪಿಎಂಸಿ ರಸ್ತೆಯಲ್ಲಿ ಒಂದು ಕ್ಯಾಂಟೀನ್ ಆರಂಭಿಸಲಾಗಿದೆ ಎಂದು ಕ್ಯಾಂಟೀನ್ ಸಿಬ್ಬಂದಿ ತಿಳಿಸಿದ್ದಾರೆ.

    ಸರ್ಕಾರದಿಂದ ಅನುದಾನ ಬಾರದಿರುವುದು ಸೇರಿ ಇತರ ಕಾರಣಗಳಿಂದ ಇಂದಿರಾ ಕ್ಯಾಂಟೀನ್‌ಗಳಿಗೆ ಬಾಕಿ ಅನುದಾನ ಪಾವತಿಸಿಲ್ಲ. ಶೀಘ್ರದಲ್ಲಿ ಅನುದಾನ ಪಾವತಿಸಲು ಕ್ರಮ ವಹಿಸಲಾಗುವುದು.
    | ಡಾ.ಸಂಜಯ ಡುಮ್ಮಗೋಳ, ಪಾಲಿಕೆ ಆರೋಗ್ಯ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts