More

    ರೋಗ ಉಲ್ಬಣಿಸಿದಾಗ ವ್ಯವಸ್ಥೆ ಬಗ್ಗೆ ದೂರಬೇಡಿ

    ಹಿರೇಕೆರೂರ: ಕೋವಿಡ್ ಲಕ್ಷಣಗಳು ಕಂಡು ಬಂದ ಕೂಡಲೆ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬೇಕು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.

    ಕರೊನಾ ಮುಂಜಾಗ್ರತೆ ಕ್ರಮಗಳ ಕುರಿತು ತಹಸೀಲ್ದಾರ್ ಕಾರ್ಯಾಲಯದಲ್ಲಿ ಸೋಮವಾರ ಏರ್ಪಡಿಸಿದ್ದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಜತೆಗೆ ವಿಡಿಯೋ ಸಂವಾದ ನಂತರ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

    ಹಳ್ಳಿ ಜನರು ಸಣ್ಣಪುಟ್ಟ ಕೆಮ್ಮು, ಶೀತ, ಜ್ವರ ಎಂದು ತಿಳಿದುಕೊಂಡು ಸ್ಥಳೀಯವಾಗಿ ಚಿಕಿತ್ಸೆ ಪಡೆಯುತ್ತಾರೆ. ಆನಂತರ ಕೋವಿಡ್ ತುಂಬಾ ಪರಿಣಾಮ ಬೀರಿದಾಗ ಸರ್ಕಾರಿ ಆಸ್ಪತ್ರೆಗೆ ಬಂದು ಅಲ್ಲಿನ ವ್ಯವಸ್ಥೆಯನ್ನು ದೂರುತ್ತಾರೆ. ಅದರ ಬದಲು ಸೋಂಕಿನ ಲಕ್ಷಣಗಳು ಕಂಡುಬಂದ ಪ್ರಾರಂಭದಲ್ಲೇ ಸರ್ಕಾರಿ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಪಡೆಯಬೇಕು. ಖಾಸಗಿ ವೈದ್ಯರೂ ಇಂಥ ವಿಚಾರಗಳ ಬಗ್ಗೆ ಗಮನ ಹರಿಸುವುದು ಸೂಕ್ತ ಎಂದರು.

    ತಾಲೂಕಾಸ್ಪತ್ರೆ, ಕೋವಿಡ್ ಕೇರ್ ಸೆಂಟರ್​ನಲ್ಲಿ ವೈದ್ಯರು ಉತ್ತಮ ಸೇವೆ ಸಲ್ಲಿಸುವ ಜತೆಗೆ ರೋಗಿಗಳಲ್ಲಿ ಆತ್ಮಸ್ಥೈರ್ಯ ತುಂಬಬೇಕು. ತಾಲೂಕಿನಲ್ಲಿ ಹೋಂ ಐಸೋಲೇಷನ್ ನಿರ್ಬಂಧಿಸಿ ಕೋವಿಡ್ ಕೇರ್ ಸೆಂಟರ್​ಗೆ ದಾಖಲಿಸಬೇಕು. ವೈದ್ಯರು ರೋಗಿಗಳನ್ನು ಜಿಲ್ಲಾಸ್ಪತ್ರೆಗೆ ವರ್ಗಾವಣೆ ಮಾಡದೆ ತಾಲೂಕಾಸ್ಪತ್ರೆಯಲ್ಲೇ ಸೂಕ್ತ ಚಿಕಿತ್ಸೆ ನೀಡಬೇಕು. ಯಾವುದೇ ರೋಗಿಗೆ ಆಕ್ಸಿಜನ್ ತೊಂದರೆಯಾಗದಂತೆ ನಿಗಾ ವಹಿಸಬೇಕು ಎಂದು ಸಚಿವರು ಸೂಚಿಸಿದರು.

    ಉಗ್ರಾಣ ನಿಗಮ ಅಧ್ಯಕ್ಷ ಯು.ಬಿ. ಬಣಕಾರ, ತಹಸೀಲ್ದಾರರಾದ ಕೆ.ಎ. ಉಮಾ, ಕೆ. ಗುರುಬಸವರಾಜ, ತಾಲೂಕು ಆರೋಗ್ಯಾಧಿಕಾರಿ ಡಾ. ಎಲ್.ಎಚ್. ಚಿದಾನಂದ, ವೈದ್ಯಾಧಿಕಾರಿ ಡಾ. ಹೊನ್ನಪ್ಪ ಜೆ.ಎಂ., ತಾಪಂ ಇಒ ಶ್ರೀನಿವಾಸ, ಸುನೀಲಕುಮಾರ, ಪಪಂ ಮುಖ್ಯಾಧಿಕಾರಿ ಸಂತೋಷ ಚಂದ್ರಿಕೇರ, ಸಿಪಿಐ ಆರ್.ಆರ್. ಪಾಟೀಲ, ಪಿಎಸ್​ಐ ಎಂ.ಟಿ. ದೀಪು, ಆರೋಗ್ಯ ನಿರೀಕ್ಷಕ ಶಿವಪ್ರಸಾದ ಬಿ.ಎಚ್., ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts