More

    ಆರ್​ಟಿಪಿಸಿಆರ್​ಗೆ ಕಾದರೆ ಪ್ರಾಣಕ್ಕೆ ಸಂಚಕಾರ! ಕರೊನಾ ಚಿಕಿತ್ಸೆ ವಿಳಂಬವಾದರೆ ಶ್ವಾಸಕೋಶ ಮೇಲೆ ಪರಿಣಾಮ; ಡಾ.ಎನ್.ಜಿ. ಚೇತನ್ ಮಾಹಿತಿ

    ಬೆಂಗಳೂರು: ಆರ್​ಟಿಪಿಸಿಆರ್ ಸ್ವ್ಯಾಬ್​ ವರದಿ ಶೇ. 30 ರಿಂದ 40ರಷ್ಟು ತಪ್ಪಾಗಿರುತ್ತದೆ. ಅನೇಕರು ಪರೀಕ್ಷೆ ವರದಿ ಬಂದ ಮೇಲೆ ನೋಡೋಣ ಎಂಬ ಉಪೇಕ್ಷೆಯಲ್ಲಿ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ತೆಗೆದುಕೊಳ್ಳುವುದಿಲ್ಲ. ಹೀಗೆ ವರದಿಗಾಗಿ ಕಾಯುತ್ತಾ ಚಿಕಿತ್ಸೆ ವಿಳಂಬ ಮಾಡುತ್ತಿರುವುದರಿಂದ ಸೋಂಕಿತರ ಶ್ವಾಸಕೋಶದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಆಮ್ಲಜನಕದ ಅಗತ್ಯತೆ ಹಾಗೂ ದೀರ್ಘಕಾಲ ಆಸ್ಪತ್ರೆಗಳ ಅವಲಂಬನೆಗೆ ಕಾರಣವಾಗುತ್ತಿದೆ ಎಂದು ಶ್ವಾಸಕೋಶ ತಜ್ಞ ಡಾ.ಎನ್.ಜಿ. ಚೇತನ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಕಳೆದ ವರ್ಷವೂ ಆಸ್ಪತ್ರೆಗಳಿಗೆ ಬಂದ ಅನಾರೋಗ್ಯ ಪೀಡಿತರಲ್ಲಿ ಹೆಚ್ಚಿನವರು ಆಮ್ಲಜನಕದ ಸಮಸ್ಯೆ ಹೊಂದಿದ್ದವರಾಗಿದ್ದರು. ಭಯ, ಆತಂಕ ಮತ್ತು ರೋಗದ ಬಗ್ಗೆ ತಿಳಿವಳಿಕೆಯ ಕೊರತೆಯಿಂದ ಜನರು ಆಸ್ಪತ್ರೆಗಳತ್ತ ಧಾವಿಸಿದರು. ಇದು ದೇಶಾದ್ಯಂತ ಸಂಭವಿಸಿದ್ದರಿಂದ ಹಾಸಿಗೆಗಳ ಕೊರತೆ ಉಂಟಾಯಿತು. ಶೇ. 90-95 ಕೋವಿಡ್ ಪ್ರಕರಣಗಳು ಸೌಮ್ಯ ಮತ್ತು ಲಕ್ಷಣರಹಿತವಾಗಿರುವುದರಿಂದ ಅವರಿಗೆ ಅನಗತ್ಯ ಪರೀಕ್ಷೆ ಹಾಗೂ ಆಸ್ಪತ್ರೆ ದಾಖಲಾತಿ ಅಗತ್ಯವಿಲ್ಲ.

    ಇದು 7-10 ದಿನಗಳವರೆಗೆ ಸ್ವಯಂ ನಿರ್ವಹಣೆ (ಮಾನಿಟರಿಂಗ್) ಮಾಡಿಕೊಳ್ಳಬಹುದಾದ ವೈರಾಣು ರೋಗ. ಹಾಗಾಗಿ ಇಂತಹವರು ಗುಣ ಹೊಂದಿದ ನಂತರ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವ ಅಗತ್ಯವಿಲ್ಲ ಎನ್ನುತ್ತಾರೆ.

    ಸರಿಯಾದ ರೀತಿಯಲ್ಲಿ ಮಾಸ್ಕ್ ಧರಿಸುವುದು, ಗುಂಪು ಸೇರದೆ ವ್ಯಕ್ತಿಗತ ಅಂತರ ಕಾಯ್ದುಕೊಳ್ಳುವುದು, ಕೈಗಳ ನೈರ್ಮಲ್ಯ ಮತ್ತು ಸೀನುವಾಗ ಮತ್ತು ಕೆಮ್ಮುವಾಗ ಶಿಷ್ಟಾಚಾರಗಳನ್ನು ಪಾಲಿಸುವ ಅಗತ್ಯವಿದೆ. ವೈರಾಣುವಿಗೆ ತುತ್ತಾದವರೆಲ್ಲರೂ ಸೋಂಕಿಗೆ ಒಳಗಾಗುವುದಿಲ್ಲ ಮತ್ತು ಸೋಂಕಿಗೆ ಒಳಗಾದವರೆಲ್ಲ ಆಸ್ಪತ್ರೆಗೆ ದಾಖಲಾಗುವ ಅಗತ್ಯವಿರುವುದಿಲ್ಲ ಎಂದು ಮಾಹಿತಿ ನೀಡುವ ಚೇತನ್ ಕುಮಾರ್, ಕೋವಿಡ್ ಕುರಿತು ಸರಳ ಮಾಹಿತಿ ಒದಗಿಸುವ ಚಾರ್ಟ್ ಸಿದ್ಧಪಡಿಸಿದ್ದಾರೆ.

    ಸೋಂಕಿತರು ಏನು ಮಾಡಬೇಕು?

    1 . ಐದು ನಿಮಿಷಗಳ ಕಾಲ ವೇಗವಾಗಿ ನಡೆದಾಡಿ ಪಲ್ಸ್ ಆಕ್ಸಿಮೀಟರ್​ನಿಂದ ರಕ್ತದಲ್ಲಿನ ಆಮ್ಲಜನಕ ಪ್ರಮಾಣ ಪತ್ತೆ ಮಾಡಬೇಕು. 94 ಇದ್ದರೆ ಮಧ್ಯಮ ಹಾಗೂ ಗಂಭೀರ ಹಾಗೂ 94 -100 ಇದ್ದರೆ ಸಾಮಾನ್ಯ ಎಂದರ್ಥ.

    2 . ಆಮ್ಲಜನಕ ಪ್ರಮಾಣ 94 ಹಾಗೂ ಅದಕ್ಕಿಂತ ಕಡಿಮೆ ಇದ್ದರೆ ಕೂಡಲೇ ಆಸ್ಪತ್ರೆಗೆ ತೆರಳಿ ಶ್ವಾಸಕೋಶ ತಜ್ಞರು, ಫಿಜಿಷಿಯನ್ ಸಂರ್ಪಸಬೇಕು. (ಈ ಸಂದರ್ಭದಲ್ಲಿ ಸ್ವಾ್ಯಬ್ ವರದಿಗಾಗಿ ಕಾಯುತ್ತ ಸಮಯ ವ್ಯರ್ತಮಾಡಬಾರದು).

    3 . ಆಮ್ಲಜನಕ ಪ್ರಮಾಣ 94-100 ಇದ್ದರೆ ಆತಂಕ ಪಡುವ ಅಗತ್ಯವಿಲ್ಲ. ಬದಲಿಗೆ ಸೋಂಕು ಲಕ್ಷಣ ಆಧರಿಸಿ ಹತ್ತಿರದ ಕ್ಲಿನಿಕ್ ಇಲ್ಲವೇ ಆಸ್ಪತ್ರೆ ಸಂರ್ಪಸಿ ಚಿಕಿತ್ಸೆ ಪಡೆಯಬಹುದು. ಇಲ್ಲವೇ ಮನೆಯಲ್ಲೇ ಉಳಿದು ವಿಡಿಯೋ ಕಾಲ್ ಮೂಲಕ ವೈದರಿಂದ ಸಲಹೆ ಪಡೆಯಬಹುದು. ಈ ವೇಳೆ ಪ್ರತಿ ದಿನ ರಕ್ತದಲ್ಲಿನ ಆಮ್ಲಜನಕ ಪ್ರಮಾಣವನ್ನು ಪಲ್ಸ್ ಆಕ್ಸಿಮೀಟರ್ ನಿಂದ ಪರೀಕ್ಷಿಸಿಕೊಳ್ಳುತ್ತಿರಬೇಕು ಹಾಗೂ ವೈದ್ಯರ ಸಲಹೆಯನ್ನು ತಪ್ಪದೆ ಪಾಲಿಸಬೇಕು.

    ಕೋವಿಡ್​ನ ಸರಳ, ಪ್ರಾಯೋಗಿಕ ವಿಧಾನ

    – ಸೋಂಕಿಗೆ ಒಳಗಾದವರೆಲ್ಲ ಅನಾರೋಗ್ಯಕ್ಕೀಡಾಗಲ್ಲ ಮತ್ತು ಆಸ್ಪತ್ರೆಗೆ ದಾಖಲಾಗುವ ಅಗತ್ಯವಿಲ್ಲ

    – ನೀವು ರೋಗಲಕ್ಷಣಗಳನ್ನು ಹೊಂದಿದ್ದೀರಾ? (ಜ್ವರ, ಕೆಮ್ಮು, ಆಯಾಸ, ರುಚಿ ಮತ್ತು ವಾಸನೆ ಇಲ್ಲದಿರುವುದು, ಮೈಯಾಲ್ಜಿಯಾ, ತಲೆನೋವು)

    – ಹೌದು ಎಂದಾದರೆ: ಸಿಮ್ಟಮ್ಯಾಟಿಕ್ (ಸೋಂಕಿತರು)ಎಂದರ್ಥ

    – ಇಲ್ಲ ಎಂದಾದರೆ ಎಸಿಮ್ಟಮ್ಯಾಟಿಕ್ (ಲಕ್ಷಣ ರಹಿತರು) ಎಂದರ್ಥ

    ಸಾರ್ವಜನಿಕರು ಏನು ಮಾಡಬೇಕು?

    – ಮಾಸ್ಕ್ ಧರಿಸಿ

    – ಗುಂಪು ಸೇರಬೇಡಿ

    – ಕೈಗಳ ನೈರ್ಮಲ್ಯ ಕಾಪಾಡಿ

    – ವ್ಯಕ್ತಿಗತ ಅಂತರ ಕಾಯ್ದುಕೊಳ್ಳಿ

    – ಕೆಮ್ಮುವಾಗ/ಸೀನುವಾಗ ಮುನ್ನೆಚ್ಚರಿಕೆ ಕ್ರಮ ಪಾಲಿಸಿ

    ಲಕ್ಷಣ ರಹಿತರಿಗೆ ಸುರಕ್ಷತಾ ಕ್ರಮಗಳು

    – ಪಲ್ಸ್ ಆಕ್ಸಿಮೀಟರ್ ಮೂಲಕ ರಕ್ತದಲ್ಲಿನ ಆಮ್ಲಜನಕ ಪ್ರಮಾಣ ಪರೀಕ್ಷಿಸಿಕೊಳ್ಳಬೇಕು.

    – ಸ್ವ್ಯಾಬ್​ ಪರೀಕ್ಷೆ ಪಾಸಿಟಿವ್ ಅಥವಾ ನೆಗೆಟಿವ್ ಎಂಬ ಬಗ್ಗೆ ಆತಂಕ ಪಡಬೇಡಿ.

    – ಭಯಪಡಬೇಡಿ ಮತ್ತು ಸ್ವ್ಯಾಬ್ ಪರೀಕ್ಷೆಯನ್ನು ಮುಂದುವರಿಸಿ.

    – ಕುಟುಂಬ ಸದಸ್ಯರ ಸ್ನೇಹಿತರು, ಸಹೋದ್ಯೋಗಿಗಳು ರೋಗಲಕ್ಷಣಗಳನ್ನು ಹೊಂದಿದ್ದರೆ ಆ ಬಗ್ಗೆ ಚಿಂತಿಸಬೇಡಿ.

    – ರೋಗಲಕ್ಷಣದ ವಿಧಾನವನ್ನು ಅನುಸರಿಸಿ ಅವರನ್ನು ಪ್ರತ್ಯೇಕವಾಗಿರಿಸಿ ಆರೈಕೆ ಮಾಡಿ.

    -ಆರ್​ಟಿಪಿಸಿಆರ್ ಸ್ವ್ಯಾಬ್​ ಸಂವೇದನೆ 60-70 ಮಾತ್ರ ಮತ್ತು ಇದು ವೈರಾಣು ರೂಪಾಂತರ ಹೊಂದುವುದರಿಂದ ಮತ್ತಷ್ಟು ಕುಸಿಯುತ್ತದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts