More

    ಎಚ್ಚರಿಕೆ; ಸಿಕ್ಕಿದ್ದೆಲ್ಲಾ ಶೇರ್ ಮಾಡ್ಬೇಡಿ!

    ಸಾಮಾಜಿಕ ಜಾಲತಾಣದಲ್ಲಿ ದಿನನಿತ್ಯ ಲೆಕ್ಕವಿಲ್ಲದಷ್ಟು ಸಂದೇಶಗಳು ಹರಿದಾಡುತ್ತಿರುತ್ತವೆ. ಅವು ಆಡಿಯೋ-ವಿಡಿಯೋ ಆಗಿರಬಹುದು, ಲಿಖಿತ ರೂಪದ ಮಾಹಿತಿ ಆಗಿರಬಹುದು… ಜಾಲತಾಣದಲ್ಲಿ ಹರಿದಾಡುವ ಪ್ರತಿಯೊಂದು ಸಂದೇಶವೂ ಸತ್ಯವಾಗಿರುವುದಿಲ್ಲ. ವಾಸ್ತವವನ್ನು ಪರಿಶೀಲಿಸುವ ಪ್ರಯತ್ನವನ್ನೂ ಮಾಡದೇ ಬೇರೆಯವರಿಗೆ ಶೇರ್ ಮಾಡುವ ಸಂದೇಶಗಳು ಕೆಲವೊಮ್ಮೆ ನಮ್ಮನ್ನು ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಿಸಬಹುದು, ಜೀವಕ್ಕೂ ಆಪತ್ತು ತಂದೊಡ್ಡಬಹುದು.

    | ರಮೇಶ್​ಕುಮಾರ ಎಡಮೋಳೆ

    ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನ ಇಡೀ ವಿಶ್ವವನ್ನೇ ಸಾಮಾಜಿಕ ಜಾಲತಾಣವೆಂಬ ಒಂದೇ ಸೂರಿನಡಿ ಸೇರಿಸಿದೆ. ಸುಧಾರಿತ ಇಂಟರ್ನೆಟ್ ಜನಪ್ರಿಯತೆಯೊಂದಿಗೆ ಹೆಚ್ಚು ಹೆಚ್ಚು ಯುವ ಜನರು ಜಾಲತಾಣದಲ್ಲಿ ಸಕ್ರಿಯವಾಗುತ್ತಿದ್ದಾರೆ. ಪ್ರಪಂಚದ ಮೂಲೆ ಮೂಲೆಗೂ ಜಾಲತಾಣ ಸಂಪರ್ಕ ಕೊಂಡಿಯಾಗಿದೆ. ಇದು ಉಪಕಾರಿಯೂ ಹೌದು. ಅಪಾಯಕಾರಿಯೂ ಹೌದು. ಜಾಲತಾಣಗಳಿಗೆ ನಕಲಿ ಸುದ್ದಿ, ತಪು್ಪ ಮಾಹಿತಿ ಕಳಂಕವಾಗಿದ್ದು, ಬಳಕೆದಾರರ ಮೇಲೆ ತುಂಬಾ ಪ್ರಭಾವ ಬೀರುತ್ತಿವೆ. ರಾಜಕೀಯ, ಆರ್ಥಿಕ ಮತ್ತು ವೈಯಕ್ತಿಕ ಕಾರಣಗಳಿಗೆ ಇಂತಹ ತಪ್ಪು ಮಾಹಿತಿಯನ್ನು ಕೆಲವರು ಹರಿಬಿಡುತ್ತಿರುತ್ತಾರೆ. ಕರೊನಾ ಬಿಕ್ಕಟ್ಟಿನ ಸಮಯದಲ್ಲಂತೂ ಜಾಲತಾಣದಲ್ಲಿ ಸಾಕಷ್ಟು ತಪು್ಪ ಸಂದೇಶಗಳು ಹರಿದಾಡುತ್ತಿವೆ. ಈ ಬಗ್ಗೆ ಸರ್ಕಾರಗಳು ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದರೂ ಅವುಗಳ ಸಂಖ್ಯೆ ಮಾತ್ರ ಕಡಿಮೆ ಆಗಿಲ್ಲ. ಮಾಹಿತಿಯ ಸತ್ಯಾಸತ್ಯತೆ ಅರಿಯದಿದ್ದರೆ ಇವು ಕೆಲವೊಮ್ಮೆ ಎಂಥಾ ಅನಾಹುತಗಳಿಗೆ ದಾರಿ ಮಾಡಿಕೊಡುತ್ತವೆ ಎಂಬುದಕ್ಕೆ ಇತ್ತೀಚೆಗೆ ತೆಲಂಗಾಣದಲ್ಲಿ ನಡೆದ ಘಟನೆಯೇ ತಾಜಾ ಉದಾಹರಣೆ ಆಗಿದೆ.

    ಪ್ರಾಣ ತೆಗೆದ ಫಾರ್ವರ್ಡ್ ಮೆಸೇಜ್: ಮೇ 14ರಂದು ತೆಲಂಗಾಣದ ಸೂರ್ಯನಾರಾಯಣ ಪೇಟೆಯ ನಿವಾಸಿ ಗುತ್ತಲ ಶ್ರೀನಿವಾಸ್ (38) ಪೂರ್ವ ಗೋದಾವರಿಯ ಅಮಲಾಪುರಂ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟರು. ಸಾವಿಗೆ ಕಾರಣ- ವಾಟ್ಸ್​ಆಪ್​ನಲ್ಲಿ ಬಂದ ನಕಲಿ ಸುದ್ದಿ! ಕೋಳಿಗಳಲ್ಲೂ ಕರೊನಾ ಸೋಂಕಿದೆ ಎಂಬ ಸುಳ್ಳು ಮಾಹಿತಿಯನ್ನು ಯೋಚಿಸದೇ ಬೇರೆ ಗ್ರೂಪ್​ಗಳಿಗೆ ಶೇರ್ ಮಾಡಿದ್ದರು. ಇದರ ಬೆನ್ನಲ್ಲೇ ಹೈದರಾಬಾದ್ ಪೊಲೀಸರು ಕರೆ ಮಾಡಿ ಸುಳ್ಳು ಸಂದೇಶದ ಬಗ್ಗೆ ಪ್ರಶ್ನಿಸಿದ್ದರು. ಈ ಬಗ್ಗೆ ಮತ್ತಷ್ಟು ವಿಚಾರಣೆ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಿದ್ದರು. ಇದರಿಂದ ಆತಂಕಗೊಂಡ ಶ್ರೀನಿವಾಸ್ ಪ್ರಜ್ಞೆ ತಪ್ಪಿ ಬಿದ್ದರು. ಆಸ್ಪತ್ರೆಗೆ ದಾಖಲಿಸಿದ ಒಂದೇ ಗಂಟೆಯಲ್ಲಿ ಪ್ರಾಣ ಬಿಟ್ಟರು. ಶ್ರೀನಿವಾಸ್ ಅಕಾಲಿಕ ಮರಣದಿಂದ ಪತ್ನಿ ಮತ್ತು ಇಬ್ಬರು ಮಕ್ಕಳ ಜೀವನ ಸಂಕಷ್ಟಕ್ಕೆ ಸಿಲುಕಿದೆ. ಸುಳ್ಳು ಸಂದೇಶವನ್ನು ಫಾರ್ವರ್ಡ್ ಮಾಡುವ ಮುನ್ನ ಯೋಚಿಸಿದ್ದರೆ ಇಂತಹ ಸ್ಥಿತಿ ಬರುತ್ತಿರಲಿಲ್ಲ. ಈ ರೀತಿಯ ಘಟನೆಗಳು ಮರುಕಳಿಸಬಾರದೆಂದರೆ ನಕಲಿ ಸುದ್ದಿಗಳ ಬಗ್ಗೆ ಇಂದಿನ ಯುವ ಸಮೂಹಕ್ಕೆ ಸ್ಪಷ್ಟ ಅರಿವಿರಬೇಕು.

    ಸುಳ್ಳು ಸುದ್ದಿಗಳ ಪತ್ತೆ ಹೇಗೆ?

    • ಅನುಮಾನಾಸ್ಪದ ವಿಷಯಗಳು ಕಂಡುಬಂದಾಗ ಅದನ್ನು ಬರೆದವರು ಮತ್ತು ಕಳಿಸಿದವರು (ಅರ್ಥಾತ್ ಲೇಖಕರು ಮತ್ತು ಪ್ರಕಾಶಕರು) ಯಾರೆಂಬುದನ್ನು ಗಮನಿಸಿ, ವಿಶ್ವಾಸಾರ್ಹವೇ ಎಂದು ಖಚಿತಪಡಿಸಿಕೊಳ್ಳಿ.
    • ಸುದ್ದಿಯಾಗಿದ್ದರೆ ಗೂಗಲ್​ನಲ್ಲಿ ಹುಡುಕಿ. ಅದಕ್ಕೆ ಸಂಬಂಧಿಸಿದ ಬೇರೆ ಲಿಂಕ್​ಗಳ ಮೇಲೆ ಕಣ್ಣಾಡಿಸಿ. ಚಿತ್ರವಾಗಿದ್ದರೆ ರಿವರ್ಸ್ ಇಮೇಜ್ ಸರ್ಚ್ ಮಾಡಿ. ವಿಡಿಯೋ ಆಗಿದ್ದರೆ, ದಿನಾಂಕ ಮತ್ತು ಮೂಲವನ್ನು ಪತ್ತೆ ಹಚ್ಚಿ.
    • ಸುಳ್ಳು ಸುದ್ದಿಗಳ ಬಗ್ಗೆ ವೆಬ್​ಸೈಟ್​ಗಳಲ್ಲಿ ಪ್ರಕಟವಾಗುವ ಫ್ಯಾಕ್ಟ್​ಚೆಕ್​ಗಳನ್ನು ನಿರಂತರವಾಗಿ ಅನುಸರಿಸಿ.
    • ಸುದ್ದಿ ಬಿತ್ತರಿಸುವ ಜಾಲತಾಣದ ಉದ್ದೇಶವೇನು ಮತ್ತು ಅವರ ಸಂಪರ್ಕ, ವಿಳಾಸ ಮತ್ತು ದೂರವಾಣಿ ಸಂಖ್ಯೆ ಇದೆಯೇ ಪರಿಶೀಲಿಸಿ.
    • ಬೇಕಿದ್ದರೆ ತಜ್ಞರನ್ನು ಸಂರ್ಪಸಿ, ಸಂದೇಶ ನಿಜವೋ ಸುಳ್ಳೋ ಎಂದು ಪರಿಶೀಲಿಸುವ ಫ್ಯಾಕ್ಟ್​ಚೆಕ್ ವೆಬ್​ಸೈಟ್​ಗಳಿಗೆ ಮಾಹಿತಿ ಕಳುಹಿಸಿ.

    ನಿಯಂತ್ರಿಸಲು ಇರುವ ಕಾನೂನುಗಳು

    1. 2008ರ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66 ಡಿ (ಯಾವುದೇ ಸಂವಹನ ಸಾಧನ ಅಥವಾ ಕಂಪ್ಯೂಟರ್ಸ್ ಸಂಪನ್ಮೂಲಗಳ ಮೂಲಕ ವಂಚನೆ)
    2. 2005ರ ವಿಪತ್ತು ನಿರ್ವಹಣಾ ಕಾಯ್ದೆಯ ಸೆಕ್ಷನ್ 54 (ವಿಪತ್ತು ಅಥವಾ ಅದರ ತೀವ್ರತೆ ಮತ್ತು ಪರಿಣಾಮದ ಬಗ್ಗೆ ಸುಳ್ಳು ಸುದ್ದಿ ಹರಡುವುದು)
    3. 1860ರ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153, 499, 500 ಮತ್ತು 505 (1)

    (ಸೆಕ್ಷನ್ 505 (1)- ಸಾರ್ವಜನಿಕರಿಗೆ ಭಯ ಉಂಟು ಮಾಡುವ ವದಂತಿ, ಸೆಕ್ಷನ್ 153- ಗಲಭೆಗೆ ಪ್ರಚೋ ದನೆ ನೀಡುವಂತಹ ಕಾನೂನುಬಾಹಿರ ಚಟುವಟಿಕೆ, ಸೆಕ್ಷನ್ 499, 500- ಮಾನಹಾನಿ ಉಂಟು ಮಾಡುವಂತಹ ಸುಳ್ಳು ಆರೋಪ)

    ನಿಖರವಾದ ವ್ಯಾಖ್ಯಾನ ಇಲ್ಲ: ಸುಳ್ಳು ಸುದ್ದಿ ಎಂಬ ಪದಕ್ಕೆ ನಿಖರ ವ್ಯಾಖ್ಯಾನ ಇಲ್ಲ. ತಪು್ಪ ದಾರಿಗೆಳೆಯುವ ಮಾಹಿತಿಯೆಲ್ಲವೂ ಸುಳ್ಳು ಸುದ್ದಿ. ಪರಿಶೀಲಿಸದ ಮಾಹಿತಿ, ವಂಚನೆ, ಇಂಟರ್ನೆಟ್ ಮೀಮ್ಸ್ ರೂಪದಲ್ಲಿ ಸುಳ್ಳು ಚಿತ್ರ ರಚಿಸುವುದು ಸುಳ್ಳು ಸುದ್ದಿಯಡಿ ಬರುತ್ತವೆ. ಕರೊನಾ ಚಿಕಿತ್ಸೆ ವಿಚಾರ ಮತ್ತು ಕರೊನಾದಿಂದ ಗಣ್ಯರು ಮೃತಪಟ್ಟಿದ್ದಾರೆಂಬ ಸುಳ್ಳು ಸುದ್ದಿಗಳೇ ಇದಕ್ಕೆ ಸಾಕ್ಷಿ. ಸುಳ್ಳು ಸುದ್ದಿಗಳು ವೈರಸ್​ಗಿಂತಲೂ ಅಪಾಯಕಾರಿ ಎಂದು ಸ್ವತಃ ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.

    ನಿರ್ವಹಣೆ ಹೇಗೆ?: ನೀವು ಸಾಮಾಜಿಕ ಜಾಲತಾಣಗಳನ್ನು ಬ್ರೌಸ್ ಮಾಡುವಾಗ ನಕಲಿ ಸುದ್ದಿ ಅಥವಾ ತಪ್ಪು ಮಾಹಿತಿ ಕಂಡುಬಂದರೆ ಆ ಪೋಸ್ಟ್ ಅನ್ನು ಮರೆ ಮಾಡಬಹುದು. ಆ ಬಳಕೆದಾರರು ಪದೇಪದೆ ಕಾಣಿಸಿಕೊಂಡರೆ ಅವರನ್ನು ನಿಮ್ಮ ಖಾತೆಯಿಂದ ನಿರ್ಬಂಧಿಸಬಹುದು. ನಕಲಿ ಸುದ್ದಿ ಹರಡುವ ಪೇಜ್​ಗಳನ್ನು ಫಾಲೋ ಮಾಡುತ್ತಿದ್ದರೆ ತಕ್ಷಣ ಅನ್​ಫಾಲೋ ಮಾಡಿ. ಈ ರೀತಿ ನಿರಂತರವಾಗಿ ನಿರ್ವಹಣೆ ಮಾಡಿದರೆ ನಕಲಿ ಸುದ್ದಿಗಳ ಹಾವಳಿ ಕಡಿಮೆ ಆಗುತ್ತದೆ.

    ರಿಪೋರ್ಟ್ ಮಾಡಿ: ತಪ್ಪು ಮಾಹಿತಿ ಕಂಡ ತಕ್ಷಣ ಅವುಗಳನ್ನು ಆಯಾ ತಾಣದ ಅಡ್ಮಿನ್​ಗೆ ವರದಿ ಮಾಡಿ. ಎಲ್ಲ ಮಾಧ್ಯಮಗಳು ನಕಲಿ ಸುದ್ದಿಗಳಿಗಾಗಿ ಮಾರ್ಗಸೂಚಿಗಳನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಿಲ್ಲ. ಆದರೆ, ತಪು್ಪ ಮಾಹಿತಿಯು ನಿಂದನೀಯ ಅಥವಾ ಹಾನಿಕಾರಕವಾಗಿದ್ದರೆ ಅದನ್ನು ರಿಪೋರ್ಟ್ ಮಾಡಬ ಹುದು. ಪ್ರತಿ ಜಾಲತಾಣ ವೇದಿಕೆಯಲ್ಲಿ ‘‘ರಿಪೋರ್ಟ್ ದಿ ಪೋಸ್ಟ್’ ಎಂಬ ಆಯ್ಕೆ ಇರುತ್ತದೆ. ಅದನ್ನು ಕ್ಲಿಕ್ ಮಾಡಿ ದರೆ ಆ ವರದಿಯಲ್ಲಿ ಅಶ್ಲೀಲತೆ, ಕಿರುಕುಳ, ಆತ್ಮಹತ್ಯೆ, ತಪು್ಪ ಮಾಹಿತಿ, ದ್ವೇಷ ಭಾಷಣ ಮುಂತಾದವು ಇವೆಯೇ ಎಂದು ಕೇಳುತ್ತದೆ. ಸಂಬಂಧ ಪಟ್ಟದ್ದನ್ನು ಆಯ್ಕೆ ಮಾಡಿ ರಿಪೋರ್ಟ್ ಮಾಡಬಹುದು.


    ಸಾಮಾನ್ಯ ಜ್ಞಾನದ ಕೊರತೆ ಇರುವವರು ಜಾಲತಾಣಗಳಲ್ಲಿ ನಕಲಿ ಸುದ್ದಿಗಳಿಗೆ ಪ್ರೇರಿತರಾಗಿ ಬಲಿಪಶು ಆಗುತ್ತಿದ್ದಾರೆ. ಪೊಲೀಸ್ ಕೇಸ್ ಆಗುತ್ತದೆ ಎಂಬ ಆಲೋಚನೆಯೂ ಅವರಿಗೆ ಇರುವುದಿಲ್ಲ. ಯಾವುದೇ ಸಂದೇಶ ಬಂದಾಗ ತಕ್ಷಣ ಪ್ರತಿಕ್ರಿಯಿಸದೇ ಮೊದಲು ಪರಿಶೀಲಿಸಬೇಕು. ಪ್ರಚೋದನೆಗೆ ಒಳಗಾಗಿ ಅಥವಾ ಭಾವುಕರಾಗಿ ತಕ್ಷಣ ಪ್ರತಿಕ್ರಿಯಿಸಬಾರದು. ನಕಲಿ ಸುದ್ದಿ ಸೃಷ್ಟಿಸುವವರು, ಹರಡುವವರ ವಿರುದ್ಧ ಕೇಸ್ ದಾಖಲಿಸಿ, ಕಠಿಣ ಕ್ರಮ ಕೈಗೊಳ್ಳುವುದು ಅನಿವಾರ್ಯ. ಯಾವುದೇ ಸುದ್ದಿಯನ್ನು ಹಂಚಿಕೊಳ್ಳುವ ಮುನ್ನ ಸತ್ಯಾಸತ್ಯತೆ ತಿಳಿದುಕೊಳ್ಳಬೇಕು.
    | ರೇಣುಕಾ ಜೆ.ಎನ್ ಇನ್ಸ್​ಪೆಕ್ಟರ್, ದಕ್ಷಿಣ ಸಿಇಎನ್ ಸೈಬರ್ ಕ್ರೖೆಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts