More

    ಅಭಿವೃದ್ಧಿಯಲ್ಲಿ ಚಿಲ್ಲರೆ ರಾಜಕೀಯ ಸಲ್ಲ ; ಶಾಸಕರ ವಿರುದ್ಧ ಸಚಿವ ಡಾ.ಕೆ.ಸುಧಾಕರ್ ಕಿಡಿ

    ದೊಡ್ಡಬಳ್ಳಾಪುರ: ನಗರಸಭೆ ಕಟ್ಟಡ ಉದ್ಘಾಟನೆಯಲ್ಲಿ ರಾಜಕಾರಣ ಮಾಡಿಲ್ಲ. ಅಂದು ಸದನದಲ್ಲಿ ಸಿಎಂ ಉತ್ತರಕ್ಕಾಗಿ ಹಾಜರಿರಲೇಬೇಕಾದ ಬಲವಾದ ಕಾರಣದಿಂದ ಬರಲು ಸಾಧ್ಯವಾಗಲಿಲ್ಲ. ಇದಕ್ಕೆ ರಾಜಕೀಯ ಬಣ್ಣ ಬೆರೆಸಬೇಡಿ ಎಂದು ಶಾಸಕ ವೆಂಟಕರಮಣಯ್ಯ ವಿರುದ್ಧ ಸಚಿವ ವೈದ್ಯಕೀಯ ಶಿಕ್ಷಣ ಹಾಗೂ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಕಿಡಿಕಾರಿದರು.

    ಮಂಗಳವಾರ ನಗರಸಭೆ ನೂತನ ಕಟ್ಟಡ ಉದ್ಘಾಟನೆ ವೇಳೆ ಮಾತನಾಡಿದರು. ಅಭಿವೃದ್ಧಿ ವಿಚಾರದಲ್ಲಿ ನಾವು ರಾಜಕಾರಣ ಮಾಡಲ್ಲ. ನಗರದಲ್ಲಿ ಮೂಲಸೌಕರ್ಯ ಕಲ್ಪಿಸುವ ಅಗತ್ಯವಿದೆ. ಕುಡಿಯುವ ನೀರಿನ ಪರಿಸ್ಥಿತಿ ಹದಗೆಟ್ಟಿದೆ. ಈ ನಿಟ್ಟಿನಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಜಕ್ಕಲಮಡಗು ಜಲಾಶಯದಿಂದ ಹೆಚ್ಚುವರಿ ನೀರನ್ನು ದೊಡ್ಡಬಳ್ಳಾಪುರಕ್ಕೂ ನೀಡಿದ್ದೇವೆ ಎಂದರು.

    ವಿಶ್ವದ ಬಡ ರಾಷ್ಟ್ರಗಳಿಗೂ ಕೇಂದ್ರ ಸರ್ಕಾರ ನೀರು, ಆಹಾರ ಧಾನ್ಯ, ಕೋವಿಡ್ ವ್ಯಾಕ್ಸಿನ್ ನೀಡಿದೆ. ಈ ಹಂತದಲ್ಲಿ ವಿಶ್ವ ಸಂಸ್ಥೆ ಪ್ರಧಾನಿ ನಡೆಯನ್ನು ಪ್ರಶಂಸಿಸಿದೆ. ಈ ಬಗ್ಗೆ ಕಾಂಗ್ರೆಸ್ ವಿರೋಧಿಸುವ ಮೂಲಕ ರಾಜಕಾರಣ ಮಾಡುತ್ತಿದೆ ಎಂದು ಟೀಕಿಸಿದರು. ಎಲ್ಲ ತಾಲೂಕುಗಳಲ್ಲಿ ಖಾಸಗಿ ಮೆಡಿಕಲ್ ಕಾಲೇಜು, ಆಸ್ಪತ್ರೆಗಳಿವೆ. ಆದರೆ, ದೊಡ್ಡಬಳ್ಳಾಪುರದಲ್ಲಿ ಸುಸಜ್ಜಿತ ಆಸ್ಪತ್ರೆ ಇಲ್ಲ. ಆದ್ದರಿಂದ ಇಲ್ಲಿ ಜಿಲ್ಲಾಸ್ಪತ್ರೆ ಮಾಡಲು ತೀರ್ಮಾನಿಸಲಾಗಿದೆ. ಈ ಮೂಲಕ ಕಡತದಲ್ಲಿ ಅನುಮೋದನೆ ನೀಡಿದ್ದೇನೆ. ಒಂದೂವರೆ ತಿಂಗಳಲ್ಲಿ ಟೆಂಡರ್ ಕರೆದು ಭೂಮಿ ಪೂಜೆ ಮಾಡುತ್ತೇವೆ ಎಂದು ಭರವಸೆ ನೀಡಿದರು.

    ಎಷ್ಟೇ ಸೌಲಭ್ಯ ಕೊಟ್ಟರೂ ಕಡಿಮೆಯೇ: ಪೌರ ಕಾರ್ಮಿಕರಿಗೆ ಎಷ್ಟೇ ಸೌಲಭ್ಯ ಕೊಟ್ಟರೂ ಕಡಿಮೆ ಎನಿಸುತ್ತದೆ. ಪೌರಕಾರ್ಮಿಕರ ಅಭಿವೃದ್ಧಿಗೆ ವಿಶೇಷ ಒತ್ತು ನೀಡಬೇಕಾಗಿದ್ದು, ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗಿದೆ ಎಂದು ಪೌರಾಡಳಿತ ಹಾಗೂ ಸಣ್ಣ ಕೈಗಾರಿಕೆ ಖಾತೆ ಸಚಿವ ಎಂಟಿಬಿ ನಾಗರಾಜ್ ಹೇಳಿದರು. ನಗರಸಭೆಗೆ ವಿಶೇಷ ಅನುದಾನದಲ್ಲಿ 8 ಕೋಟಿ ರೂ.ಕೊಡಲಾಗಿದೆ. ನಗರಕ್ಕೆ ಅಗತ್ಯ ಮೂಲಸೌಕರ್ಯ ಕಲ್ಪಿಸಲು ನಾಗರಿಕರು ಕಾಲಕಾಲಕ್ಕೆ ತೆರಿಗೆ ಕಟ್ಟಬೇಕು. ಅಭಿವೃದ್ಧಿ ಕೆಲಸ ಮಾಡಿಸಿಕೊಳ್ಳಲು ಸರ್ಕಾರವನ್ನು ಗಟ್ಟಿ ದನಿಯಲ್ಲಿ ಕೇಳಬೇಕು. ಈಗಾಗಲೇ ಪೌರಾಡಳಿತ ಇಲಾಖೆಯಿಂದ ಮೊದಲು 30 ಕೋಟಿ ರೂ. ಹಾಗೂ 4ನೇ ಹಂತದಲ್ಲಿ 40 ಕೋಟಿ ರೂ., 15ನೇ ಹಣಕಾಸು ಯೋಜನೆಯಡಿ 90 ಲಕ್ಷ ರೂ.ಬಿಡುಗಡೆ ಮಾಡಲಾಗಿದೆ ಎಂದರು. ಪೌರಕಾರ್ಮಿಕರಿಗೆ ವಸತಿ ಸೌಲಭ್ಯ ಕಲ್ಪಿಸುತ್ತಿರುವುದು ಶ್ಲಾಘನೀಯ. 34 ಮನೆಗಳನ್ನು ನಿರ್ಮಿಸುತ್ತಿದ್ದು, ತಲಾ ಒಂದು ಮನೆಗೆ ರಾಜ್ಯ ಸರ್ಕಾರ 6.5 ಲಕ್ಷ ರೂ. ಕೇಂದ್ರ 1.5 ಲಕ್ಷ ರೂ. ವ್ಯಯಿಸುತ್ತಿವೆ ಎಂದರು.

    ಅನುದಾನ ಸಮರ್ಪಕವಾಗಿ ಬಳಸಿ:ದೊಡ್ಡಬಳ್ಳಾಪುರ ಅತಿವೇಗವಾಗಿ ಬೆಳೆಯುತ್ತಿದ್ದು ಅಂತಾರಾಷ್ಟ್ರೀಯಮಟ್ಟದ ಕೈಗಾರಿಕೆಗಳು, ಖಾಸಗಿ ಶಾಲಾ-ಕಾಲೇಜು ಕೇಂದ್ರಗಳು, ಖಾಸಗಿ ಬಡಾವಣೆಗಳು ತಲೆ ಎತ್ತುತ್ತಿದೆ. ದೊಡ್ಡಬಳ್ಳಾಪುರ ನಗರಸಭೆಯ ವ್ಯಾಪ್ತಿಯ ಅಭಿವೃದ್ಧಿ ಕಾಮಗಾರಿಗಳಿಗಾಗಿ ಸಾಕಷ್ಟು ಅನುದಾನ ನೀಡಲಾಗಿದ್ದು, ಸಮರ್ಪಕವಾಗಿ ಬಳಸಬೇಕು ಎಂದು ಸಚಿವರು ತಿಳಿಸಿದರು.

    ಕಾಂಗ್ರೆಸ್ ಸದಸ್ಯರ ಪ್ರತಿಭಟನೆ;ಈಗಾಗಲೇ ಉದ್ಘಾಟನೆಗೊಂಡಿರುವ ನಗರಸಭೆ ಕಟ್ಟಡವನ್ನು ಮತ್ತೆ ಉದ್ಘಾಟಿಸುವ ಮೂಲಕ ಸಾರ್ವಜನಿಕರ ತೆರಿಗೆ ಹಣ ದುಂದು ವೆಚ್ಚ ಮಾಡಲಾಗುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ನಗರಸಭೆ ಸದಸ್ಯರು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಘೋಷಣೆ ಕೂಗುತ್ತಾ ವೇದಿಕೆ ಬಳಿ ಬರಲು ಯತ್ನಿಸಿದ ಕಾರ್ಯಕರ್ತರು ಹಾಗೂ ಸದಸ್ಯರನ್ನು ಪೊಲೀಸರು ತಡೆದರು. ಬಿಜೆಪಿ ಸರ್ಕಾರ ಪೌರಕಾರ್ಮಿಕರಿಗೆ ಅವಮಾನ ಮಾಡಿದೆ. ನಾಲ್ಕು ಬಾರಿ ಉದ್ಘಾಟನೆಗಾಗಿ ಸಾಕಷ್ಟು ಹಣ ಪೋಲು ಮಾಡಿದೆ ಎಂದು ಆರೋಪಿಸಿದರು.

    ಜಿಲ್ಲೆಯ ಅಭಿವೃದ್ಧಿ ವೇಗ ಹೆಚ್ಚಲಿದೆ: ಸಚಿವ ಎಂಟಿಬಿ ನಾಗರಾಜ್ ಭರವಸೆ 

    ಕುಂದಾಣ: ಗ್ರಾಮಾಂತರ ಜಿಲ್ಲೆಯ ಸಾರ್ವಜನಿಕರ ಅನುಕೂಲದ ದೃಷ್ಟಿಯಿಂದ ಜಿಲ್ಲಾ ಪಂಚಾಯಿತಿಯ ಹೆಚ್ಚುವರಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ, ಇದರಿಂದ ಪಂಚಾಯಿತಿಗಳಿಗೆ ಸಂಬಂಧಿಸಿದ ಎಲ್ಲ ಪ್ರಮುಖ ವಿಭಾಗಗಳು ಒಂದೇ ಸೂರಿನಡಿ ಕಾರ್ಯ ನಿರ್ವಹಣೆ ಮಾಡಲು ಸಹಕಾರಿಯಾಗಲಿದೆ ಜತೆಗೆ ಬೆಂಗಳೂರು ಗ್ರಾಮಾಂತರ ಪ್ರದೇಶಗಳ ಅಭಿವೃದ್ಧಿಯ ವೇಗ ಹೆಚ್ಚಾಗಲಿದೆ ಎಂದು ಸಚಿವ ಎಂಟಿಬಿ ನಾಗರಾಜ್ ಹೇಳಿದರು.

    ದೇವನಹಳ್ಳಿ ತಾಲೂಕು ಚಪ್ಪರದಕಲ್ಲಿನ ಜಿಲ್ಲಾಡಳಿತಭವನ ಪಕ್ಕದಲ್ಲಿ ಜಿಪಂ ಹೆಚ್ಚುವರಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯಿಂದ ಅನುಷ್ಠಾನಗೊಳಿಸಲಾದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಹೆಚ್ಚುವರಿ ಕಟ್ಟಡ ಜಿಲ್ಲಾಡಳಿತ ಭವನದ ಹಿಂಭಾಗದಲ್ಲಿ 612.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದು, ಬ್ಲಾಕ್ 2 ಬ್ಲಾಕ್ 3 ಎಂಬ 2 ಕಟ್ಟಡಗಳನ್ನು ಹೊಂದಿದ್ದು, 5442 ಚ.ಮೀ ವಿಸ್ತೀರ್ಣದಲ್ಲಿ 36 ಕೊಠಡಿ ಹೊಂದಿರುತ್ತದೆ ಎಂದು ಮಾಹಿತಿ ನೀಡಿದರು.

    ಬೆಂಗಳೂರಿಗೆ ಹೊಂದಿಕೊಂಡಿರುವ ಗ್ರಾಮಾಂತರ ಜಿಲ್ಲೆ ವೇಗವಾಗಿ ಬೆಳೆಯುತ್ತಿದೆ, ಸಾರ್ವಜನಿಕ ಕೆಲಸ ಕಾರ್ಯಗಳಿಗೆ ಅಷ್ಟೇ ವೇಗವಾಗಿ ಸ್ಪಂದಿಸಲು ಇಲಾಖೆಗಳು ಒಂದೇ ಸೂರಿನಡಿ ಕಾರ್ಯನಿರ್ವಹಿಸುವುದು ಸೂಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಇದನ್ನು ಕಾರ್ಯಗತಗೊಳಿಸಲು ಇದು ಸಹಕಾರಿಯಾಗಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts