More

    ಪಿಎಸ್​ಐ ಹಗರಣ ಸಾಮಾನ್ಯ ಅಪರಾಧವಲ್ಲ, ಆರೋಪಿಗಳಿಗೆ ಜಾಮೀನು ಕೊಡಬೇಡಿ: ಸಿಐಡಿ

    ಬೆಂಗಳೂರು: ಪೊಲೀಸ್ ಸಬ್ ಇನ್‌ಸ್ಪೆಕ್ಟರ್ (ಪಿಎಸ್‌ಐ) ನೇಮಕಾತಿಯಲ್ಲಿ ನಡೆದಿರುವ ಅಕ್ರಮ ಸಾಮಾನ್ಯ ಅಪರಾಧ ಕೃತ್ಯವಲ್ಲ. ಅದೊಂದು ದೊಡ್ಡ ಹಗರಣವೇ ಆಗಿದೆ. ಪೊಲೀಸ್ ಅಧಿಕಾರಿಗಳೂ ಸೇರಿ ಹಲವರು ಶಾಮೀಲಾಗಿದ್ದು, ಅವರನ್ನು ಪತ್ತೆ ಹಚ್ಚಲಾಗುತ್ತಿದೆ. ಆದ್ದರಿಂದ, ಈ ಹಂತದಲ್ಲಿ ಆರೋಪಿಗಳಿಗೆ ಜಾಮೀನು ನೀಡಬಾರದು ಎಂದು ಸಿಐಡಿ ಹೈಕೋರ್ಟ್‌ಗೆ ಮನವಿ ಮಾಡಿದೆ.

    ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಬಂಧನಕ್ಕೊಳಗಾಗಿರುವ 6 ಆರೋಪಿಗಳು ಸಲ್ಲಿಸಿರುವ ಜಾಮೀನು ಅರ್ಜಿ ಹಾಗೂ ಓರ್ವ ಆರೋಪಿ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರಿದ್ದ ಪೀಠ ಬುಧವಾರ ವಿಚಾರಣೆ ನಡೆಸಿತು. ಸಿಐಡಿ ಪರವಾಗಿ ಪ್ರಬಲ ವಾದ ಮಂಡಿಸಿದ ಸರ್ಕಾರಿ ಅಭಿಯೋಜಕ (ಎಸ್‌ಪಿಪಿ) ವಿ.ಎಸ್. ಹೆಗಡೆ, ಜಾಮೀನು ಅರ್ಜಿಗಳನ್ನು ವಜಾಗೊಳಿಸಬೇಕೆಂದು ಕೋರಿದರು.

    ಇದೊಂದು ದೊಡ್ಡ ಹಗರಣವಾಗಿದ್ದು, ಸಮಾಜದ ಮೇಲಿನ ಭಯೋತ್ಪಾದನೆಯಾಗಿದೆ. ಒಟ್ಟು 545 ಪಿಎಸ್‌ಐ ಹುದ್ದೆಗಳಿಗೆ 50 ಸಾವಿರಕ್ಕೂ ಅಧಿಕ ಆಕಾಂಕ್ಷಿಗಳು ಪರೀಕ್ಷೆ ಎದುರಿಸಿದ್ದರು. ಆದರೆ, ಕೆಲ ಪೊಲೀಸ್ ಅಧಿಕಾರಿಗಳು, ಮಧ್ಯವರ್ತಿಗಳು ಮತ್ತು ಅಭ್ಯರ್ಥಿಗಳು ನಡೆಸಿರುವ ಅಕ್ರಮದಿಂದ ಇಡೀ ನೇಮಕಾತಿ ಪ್ರಕ್ರಿಯೆ ರದ್ದುಮಾಡುವ ಪರಿಸ್ಥಿತಿ ಸೃಷ್ಟಿಯಾಗಿದೆ. ಪ್ರಕರಣದಲ್ಲಿ ಎಡಿಜಿಪಿ, ಡಿವೈಎಸ್‌ಪಿ, ಸಬ್ ಇನ್‌ಸ್ಪೆಕ್ಟರ್ ಸೇರಿ ಅನೇಕ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದಾರೆ. ಇದರಿಂದ, ಇಡೀ ಪೊಲೀಸ್ ಇಲಾಖೆಗೆ ಕೆಟ್ಟ ಹೆಸರು ಬಂದಿದೆ. ಹಗರಣದಲ್ಲಿ ಮತ್ತಷ್ಟು ಕಾಣದ ಕೈಗಳಿದ್ದು, ಅವುಗಳನ್ನು ಪತ್ತೆ ಹಚ್ಚಬೇಕಿದೆ. ತನಿಖೆ ಇನ್ನೂ ಪ್ರಗತಿಯಲ್ಲಿದ್ದು, ಯಾವುದೇ ಕಾರಣಕ್ಕೂ ಆರೋಪಿಗಳಿಗೆ ಜಾಮೀನು ನೀಡಬಾರದು ಎಂದು ಮನವಿ ಮಾಡಿದರು.

    ಇದನ್ನೂ ಓದಿ: ಸೇತುವೆ ಮೇಲೆ ಡಿಯೋ ನಿಲ್ಲಿಸಿ, ನದಿಗೆ ಹಾರಿದ ವಿದ್ಯಾರ್ಥಿನಿ; ತಾಲೂಕು ಪಂಚಾಯಿತಿ ಸದಸ್ಯನ ಪುತ್ರಿ ಸಾವು

    ಲೋಪರಹಿತ ತನಿಖೆಯ ಭರವಸೆ

    ಯಾವುದೇ ಲೋಪಕ್ಕೆ ಅವಕಾಶವಿಲ್ಲದೆ ಅತ್ಯಂತ ವೈಜ್ಞಾನಿಕ, ವೃತ್ತಿಪರ ಮತ್ತು ಕಾನೂನಾತ್ಮಕವಾಗಿ ಪ್ರಕರಣದ ತನಿಖೆ ನಡೆಸಲಾಗುತ್ತಿದೆ. ಹಗರಣದಲ್ಲಿ ಭಾಗಿಯಾಗಿರುವ ಎಲ್ಲರನ್ನೂ ಪತ್ತೆ ಹಚ್ಚಲಾಗುವುದು. ಎಲ್ಲ ಅಭ್ಯರ್ಥಿಗಳೂ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗದು. ಕೆಲ ಅಭ್ಯರ್ಥಿಗಳ ಪಾತ್ರವಿದ್ದು, ಅವರ ವಿರುದ್ಧ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಲಿದೆ ಎಂದು ನ್ಯಾಯಪೀಠಕ್ಕೆ ಎಸ್‌ಪಿಪಿ ಭರವಸೆ ನೀಡಿದರು. ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಎಡಿಜಿಪಿ ಅಮೃತ್ ಪೌಲ್ ಅವರ ಮೊಬೈಲ್ ಪೋನ್ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ಕಳುಹಿಸಲಾಗಿದ್ದು, ವರದಿಗಾಗಿ ಕಾಯುತ್ತಿದ್ದೇವೆ. ಎಫ್​ಎಸ್‌ಎಲ್ ವರದಿ ಕೈಸೇರಿದ ಬಳಿಕ ಮತ್ತಷ್ಟು ಸಂಗತಿಗಳು ಬೆಳಕಿಗೆ ಬರುವ ಸಾಧ್ಯತೆ ಇದೆ. ಹೀಗಿರುವಾಗ ಈಗಲೇ ಆರೋಪಿಗಳಿಗೆ ಜಾಮೀನು ನೀಡಿದರೆ ತನಿಖೆಗೆ ಹಿನ್ನಡೆಯಾಗಲಿದೆ ಎಂದು ಕೋರ್ಟ್‌ಗೆ ವಿವರಿಸಿದರು.

    ಆರೋಪಿಗಳ ವಿರುದ್ಧ ಇದೆ ಸಾಕ್ಷ್ಯಾಧಾರ

    ಪ್ರಕರಣದಲ್ಲಿ ಅರ್ಜಿದಾರರ ಪಾತ್ರ ಸಾಬೀತುಪಡಿಸುವ ಹಲವು ಸಾಕ್ಷ್ಯಗಳು ಲಭ್ಯ ಇವೆ. ಸಿಡಿಆರ್, ಸಿಸಿ ಕ್ಯಾಮರಾ ದೃಶ್ಯಾವಳಿ, ಹಣ ವರ್ಗಾವಣೆಗೆ ಸಂಬಂಧಿಸಿದ ದಾಖಲೆಗಳಿವೆ. ಶ್ರೀಧರ್ ಎಂಬುವರಿಂದ 2 ಕೋಟಿ ರೂಪಾಯಿಗೂ ಅಧಿಕ ಹಣ ಜಪ್ತಿ ಮಾಡಲಾಗಿದ್ದು, ಆ ಹಣವನ್ನು ಯಾರು, ಯಾರಿಗೆ, ಎಷ್ಟು ಹಣ ನೀಡಿದ್ದಾರೆ ಎಂಬ ಬಗ್ಗೆ ವಿವರ ಕಲೆ ಹಾಕಬೇಕಿದೆ. ಆರೋಪಿಗಳು ಮತ್ತು ಅಭ್ಯರ್ಥಿಗಳ ಸಂಭಾಷಣೆ, ಅವರು ಹಣಕಾಸಿಗೆ ಬೇಡಿಕೆ ಇಟ್ಟ, ಚೌಕಾಸಿ ನಡೆಸಿದ, ಹಣ ಪಾವತಿಯಾದ ಮತ್ತು ವಸೂಲಿ ಮಾಡಿರುವ ಬಗ್ಗೆ ಸಂಪೂರ್ಣ ವಿವರಗಳನ್ನು ಒಳಗೊಂಡ ಸಿಡಿಆರ್ ಲಭ್ಯವಿದೆ. ಆದ್ದರಿಂದ, ಜಾಮೀನು ಅರ್ಜಿಗಳನ್ನು ವಜಾಗೊಳಿಸಬೇಕು. ಕೇವಲ ವಜಾಗೊಳಿಸಿದರೆ ಸಾಲದು, ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ದಂಡ ವಿಧಿಸಿ ಅರ್ಜಿ ವಜಾಗೊಳಿಸಬೇಕು ಎಂದು ಕೋರಿದರು.

    ಇದನ್ನೂ ಓದಿ: ಪರೀಕ್ಷೆಗೆ ಹಾಜರಾಗದ ವಿದ್ಯಾರ್ಥಿನಿ; ಹಾಸ್ಟೆಲ್​ನಲ್ಲಿ ನೇತಾಡುತ್ತಿತ್ತು ಶವ!

    ತೀರ್ಪು ಕಾಯ್ದಿರಿಸಿದ ಹೈಕೋರ್ಟ್: ಅರ್ಜಿ ಸಂಬಂಧ ಎಲ್ಲ ಆರೋಪಿಗಳ ಪರ ವಕೀಲರು ಹಾಗೂ ಸಿಐಡಿ ಪರ ವಕೀಲರ ವಾದ-ಪ್ರತಿವಾದ ಆಲಿಸಿ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಪೀಠ ತೀರ್ಪು ಕಾಯ್ದಿರಿಸಿತು. ಸಾಧ್ಯವಾದರೆ ಶುಕ್ರವಾರ ತೀರ್ಪು ಪ್ರಕಟಿಸಲಾಗುವುದು ಅಥವಾ ಅಂದೇ ತೀರ್ಪಿನ ಉಕ್ತಲೇಖನ ನೀಡಲಾಗುವುದು ಎಂದು ನ್ಯಾಯಪೀಠ ತಿಳಿಸಿತು.

    ಮಗಳನ್ನು ಅಮೆರಿಕಕ್ಕೆ ಕಳಿಸಿ ಮರಳುತ್ತಿದ್ದ ದಂಪತಿ ಅಪಘಾತಕ್ಕೀಡಾಗಿ ಸ್ಥಳದಲ್ಲೇ ಸಾವು!

    ಜೀವ ಉಳಿಸಲು ಹೋಗಿ ಪ್ರಾಣ ಕಳ್ಕೊಂಡ್ರು!: ಟೋಲ್​ ಗೇಟ್​ನಲ್ಲಿ ಆ್ಯಂಬುಲೆನ್ಸ್ ಪಲ್ಟಿ, ಮೂವರು ಸ್ಥಳದಲ್ಲೇ ಸಾವು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts