More

    ಸಾಲ ವಸೂಲಿಗೆ ಒತ್ತಡ ಹೇರದಿರಿ

    ವಿಜಯವಾಣಿ ಸುದ್ದಿಜಾಲ ಧಾರವಾಡ

    ಯಾವುದೇ ರೀತಿಯ ಹಣಕಾಸು ಸಂಸ್ಥೆ, ಬ್ಯಾಂಕರ್ಸ್ ತಮ್ಮಲ್ಲಿ ಸಾಲ ಪಡೆದ ಗ್ರಾಹಕರಿಗೆ ದೂರವಾಣಿ ಕರೆ ಮಾಡಿ ಅಥವಾ ನೋಟಿಸ್ ನೀಡುವ ಮೂಲಕ ವಸೂಲಿಗೆ ಒತ್ತಡ ಹಾಕಿದರೆ ಸರ್ಕಾರದ ನಿರ್ದೇಶನದಂತೆ ಸೂಕ್ತ ಕ್ರಮ ಜರುಗಿಸುವುದಾಗಿ ಜಿಲ್ಲಾಧಿಕಾರಿ ದೀಪಾ ಚೋಳನ್ ಬ್ಯಾಂಕ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲೆಯ ರಾಷ್ಟ್ರೀಕೃತ, ವಾಣಿಜ್ಯ ಹಾಗೂ ಕಿರು ಹಣಕಾಸು ಸೇವಾ ಸಂಸ್ಥೆಗಳ ಪ್ರತಿನಿಧಿಗಳ ಸಭೆಯಲ್ಲಿ ಅವರು ಮಾತನಾಡಿದರು.

    ಆಗಸ್ಟ್ 2020ರವರೆಗೆ ಯಾವುದೇ ರೀತಿಯ ಸಾಲಗಾರರಿಗೆ ಇಎಂಐ ತುಂಬಲು ಒತ್ತಾಯಿಸುವುದು ಅಥವಾ ಟಾಪ್ ಅಪ್ ಆಫರ್​ನಂತಹ ಆಮಿಷಗಳನ್ನು ನೀಡಿ ಒತ್ತಡ, ಮಾನಸಿಕ ಕಿರಿಕಿರಿ ಉಂಟು ಮಾಡಿದ ಬಗ್ಗೆ ದೂರು ಬಂದಲ್ಲಿ ಜಿಲ್ಲಾಡಳಿತ ಅದನ್ನು ಗಂಭೀರವಾಗಿ ಪರಿಗಣಿಸಲಿದೆ. ಕರೊನಾ ಹಾವಳಿಯಿಂದ ಎಲ್ಲ ರೀತಿಯ ಆರ್ಥಿಕ ಹಾಗೂ ಕೃಷಿಕ ಚಟುವಟಿಕೆ ಕುಂಠಿತಗೊಂಡಿವೆ. ಸರ್ಕಾರ ಅಸಹಾಯಕರ ನೆರವಿಗೆ ಹಲವು ಯೋಜನೆ, ಪ್ರೋತ್ಸಾಹದಾಯಕ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇಂತಹ ಸಂದರ್ಭದಲ್ಲಿ ಸಾಲಗಾರರಿಗೆ ಕರೆ ಮಾಡಿ ಇಎಂಐ ಕಂತು ತುಂಬಲು, ಟಾಪ್ ಅಪ್ ಯೋಜನೆ ಆಮಿಷ ನೀಡುವುದು ಹಾಗೂ ನೋಟಿಸ್ ನೀಡುವುದು ಸೂಕ್ತವಲ್ಲ ಎಂದು ಎಚ್ಚರಿಸಿದರು.

    ಹಲವು ಗ್ರಾಹಕರು ಲೀಡ್ ಬ್ಯಾಂಕ್​ಗೆ ಈ ಕುರಿತು ದೂರುಗಳನ್ನು ನೀಡುತ್ತಿದ್ದಾರೆ. ಲೀಡ್ ಬ್ಯಾಂಕ್ ಮೂಲಕ ಅಗತ್ಯ ಮಾಹಿತಿಯನ್ನು ಎಲ್ಲ ಬ್ಯಾಂಕ್, ಶಾಖೆಗಳಿಗೆ ಈಗಾಗಲೇ ತಲುಪಿಸಲಾಗಿದೆ. ಇದರ ಹೊರತಾಗಿ ಮುಂದಿನ ದಿನಗಳಲ್ಲಿ ಗ್ರಾಹಕರಿಂದ ಒತ್ತಾಯದ ವಸೂಲಾತಿ ಕುರಿತು ನಿರ್ದಿಷ್ಟ ದೂರು ಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

    ಜಿಪಂ ಸಿಇಒ ಡಾ. ಬಿ.ಸಿ. ಸತೀಶ ಮಾತನಾಡಿ, ಕಿರು ಹಣಕಾಸು ಸಂಸ್ಥೆಗಳು ತಮ್ಮ ಗ್ರಾಹಕರಿಗೆ ಹೊಸ ಯೋಜನೆಗಳ ಬಗ್ಗೆ ಸಾರ್ವಜನಿಕವಾಗಿ ಮಾಹಿತಿ ನೀಡಿ ಪ್ರಕಟಿಸಲಿ. ನರೇಗಾ ಯೋಜನೆ ಫಲಾನುಭವಿಗಳಿಗೆ ಅವರ ವ್ಯಾಪ್ತಿಯ ಎಲ್ಲ ಬ್ಯಾಂಕ್​ಗಳಲ್ಲಿ ಶೂನ್ಯ ಬ್ಯಾಲೆನ್ಸ್ ಖಾತೆ ತೆರೆಯಲು ಯಾವುದೇ ಅಡೆತಡೆ ಆಗದಂತೆ ಶಾಖೆ ಮುಖ್ಯಸ್ಥರು ಮುನ್ನೆಚ್ಚರಿಕೆ ವಹಿಸಬೇಕು. ಈ ಕುರಿತು ಲೀಡ್ ಬ್ಯಾಂಕ್ ಸಮನ್ವಯ ಮಾಡಬೇಕು ಎಂದರು.

    ಉಪವಿಭಾಗಾಧಿಕಾರಿ ಮಹಮ್ಮದ್ ಜುಬೇರ, ಕರ್ನಾಟಕ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ನಾಗರಾಜ ಐತಾಳ, ಕೆನರಾ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಮಂಜುನಾಥ ಕೆ., ಬ್ಯಾಂಕ್ ಆಫ್ ಬರೋಡಾ ಧಾರವಾಡ ಶಾಖೆ ಪ್ರಧಾನ ವ್ಯವಸ್ಥಾಪಕ ಬಸವರಾಜ ಬೆಲ್ಲದ, ನಬಾರ್ಡ್ ಸಂಸ್ಥೆ ಜಿಲ್ಲಾ ಉಪ ವ್ಯವಸ್ಥಾಪಕಿ ಶೀಲಾ ಭಂಡಾರಕರ, ಕಿರು ಹಣಕಾಸು ಸೇವಾ ಸಂಸ್ಥೆ ಅಧ್ಯಕ್ಷ ರಾಘವೇಂದ್ರ, ವಿವಿಧ ಬ್ಯಾಂಕ್​ಗಳ ಪ್ರತಿನಿಧಿಗಳು, ಕಿರು ಹಣಕಾಸು ಸೇವಾ ಸಂಸ್ಥೆಗಳ ಪ್ರತಿನಿಧಿಗಳು, ಇತರರು ಇದ್ದರು.

    ಸ್ವಯಂ ಪ್ರೇರಣೆಯಿಂದ ತುಂಬಲಿ: ಲೀಡ್ ಬ್ಯಾಂಕ್ ಮ್ಯಾನೇಜರ್ ಈಶ್ವರನಾಥ ಮಾತನಾಡಿ, ಸರ್ಕಾರ ಹಾಗೂ ಆರ್​ಬಿಐ ನೀಡುವ ಎಲ್ಲ ನಿರ್ದೇಶನ, ಸುತ್ತೋಲೆಗಳನ್ನು ಕಾಲಕಾಲಕ್ಕೆ ಜಿಲ್ಲೆಯ ಬ್ಯಾಂಕ್ ಮತ್ತು ಬ್ಯಾಂಕ್ ಶಾಖೆಗಳಿಗೆ ತಲುಪಿಸಲು ಕ್ರಮ ಕೈಗೊಳ್ಳಲಾಗಿದೆ. ಸ್ವಯಂ ಪ್ರೇರಣೆಯಿಂದ ಗ್ರಾಹಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಇಎಂಐ ತುಂಬಲಿ. ಇದಕ್ಕೆ ಎಲ್ಲ ರೀತಿಯ ಹಣಕಾಸು ಸಂಸ್ಥೆಗಳು ಅವಕಾಶ ಮಾಡಬೇಕು ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts