More

    ಅನ್ನದಾತರೊಂದಿಗೆ ಚೆಲ್ಲಾಟ ಆಡದಿರಿ

    ಬೆಳಗಾವಿ: ಸರ್ಕಾರಗಳು ಜಾರಿಗೊಳಿಸಿರುವ ಹೊಸ ಕೃಷಿ ಕಾಯ್ದೆ ಖಂಡಿಸಿ ಹಾಗೂ ದೆಹಲಿ ಮತ್ತು ಬೆಂಗಳೂರಿನಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಿ ಇಲ್ಲಿನ ಸುವರ್ಣಸೌಧದ ಮುಂಭಾಗದಲ್ಲಿ ಸ್ಥಳೀಯ ರೈತ ಮುಖಂಡರು ಗುರುವಾರ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಿ, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

    ಬೆಳಗ್ಗೆಯಿಂದಲೇ ಸುವರ್ಣಸೌಧದ ಮುಂಭಾಗದಲ್ಲಿನ ರಾಷ್ಟ್ರೀಯ ಹೆದ್ದಾರಿ-4ರ ಸರ್ವಿಸ್ ರಸ್ತೆಯಲ್ಲಿ ವಾಹನ ಸಂಚಾರ ತಡೆದು ರೈತರು ಮೊದಲು ಪ್ರತಿಭಟಿಸಿದರು. ಬಳಿಕ ರಸ್ತೆಯಲ್ಲಿಯೇ ಅಡುಗೆ ತಯಾರಿಸಿದರು. ಮಧ್ಯಾಹ್ನದ ವೇಳೆ ಹೆದ್ದಾರಿಯಲ್ಲೇ ಪಂಕ್ತಿಯಾಗಿ ಕುಳಿತು ಊಟ ಮಾಡುವ ಮೂಲಕ ಉಭಯ ಸರ್ಕಾರಗಳ ರೈತ ವಿರೋಧಿ ಧೋರಣೆ ಖಂಡಿಸಿದರು.

    ಹೋರಾಟ ನಿಲ್ಲದು: ಈ ಸಂದರ್ಭದಲ್ಲಿ ರೈತ ಸಂಘದ ಚಿಕ್ಕೋಡಿ ಜಿಲ್ಲಾ ಅಧ್ಯಕ್ಷ ರಾಜು ಪವಾರ ಮಾತನಾಡಿ, ಇಡೀ ಜಗತ್ತಿಗೆ ಅನ್ನ ನೀಡುವ ರೈತರ ಬದುಕಿನೊಂದಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಚೆಲ್ಲಾಟ ಆಡಬಾರದು. ರೈತರಿಗೆ ಮಾರಕವಾಗಿರುವ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವವರೆಗೂ ರೈತ ಹೋರಾಟ ನಿಲ್ಲದು. ಸರ್ಕಾರ ರೈತ ಸಮುದಾಯದ ಹಿತ ಕಾಯಬೇಕು ಎಂದು ಒತ್ತಾಯಿಸಿದರು.

    ಮುತ್ತಿಗೆಗೆ ತಡೆ: ಈ ವೇಳೆ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಮುಂದಾಗಿದ್ದ ರೈತ ಹೋರಾಟಗಾರರನ್ನು ಬೆಳಗಾವಿ ನಗರ ಪೊಲೀಸರು ತಡೆದರು. ಸುವರ್ಣ ವಿಧಾನಸೌಧದ ಸುತ್ತಲೂ 500 ಮೀಟರ್ ನಿಷೇಧಾಜ್ಞೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಒಳಹೋಗಲು ಅವಕಾಶ ಇಲ್ಲ ಎಂದು ರೈತರನ್ನು ಗೇಟ್ ಬಳಿಯೇ ತಡೆದರು. ಪ್ರತಿಭಟನೆ ಹಿನ್ನೆಲೆಯಲ್ಲಿ ಸುವರ್ಣ ವಿಧಾನಸೌಧ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

    ಪ್ರತಿಭಟನೆಯಲ್ಲಿ ಹಸಿರು ಸೇನೆ ಸಂಘಟನೆ ಅಧ್ಯಕ್ಷ ಚೂನಪ್ಪ ಪೂಜಾರಿ, ಕಾರ್ಯಾಧ್ಯಕ್ಷ ವಾಸುದೇವ ಮೇಟಿ, ಗಂಗಾಧರ ಮೇಟಿ, ರಾಘವೇಂದ್ರ ನಾಯಕ, ಕೃಷ್ಣ ಭಟ್, ಸುರೇಶ ಭಟ್, ಶಂಕರಗೌಡ ಹಾಗೂ ವಕೀಲ ಶಿವಣ್ಣ, ಜಯಶ್ರೀ ಗುರಣ್ಣವರ, ಮಲ್ಲಿಕಾ ಬೆಳಗಾವಿ, ಅಶ್ವಿನಿ ಪೂಜೇರಿ, ಅಂಬಿಕಾ ರೇಣಕೇಕರ್, ತಾಯವ್ವ ಎದ್ದಲಬಾವಿಹಟ್ಟಿ, ಗಂಗವ್ವ ಚಂದೂರ, ರೈತ ಮಹಿಳೆಯರಿದ್ದರು.

    ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ೋಷಣೆ: ಕಳೆದ ವರ್ಷ ಜಿಲ್ಲಾದ್ಯಂತ ಸುರಿದ ಮಳೆ, ಪ್ರವಾಹದಲ್ಲಿ ನೂರಾರು ರೈತರು ಅಪಾರ ಪ್ರಮಾಣದ ಆಸ್ತಿ ಕಳೆದುಕೊಂಡಿದ್ದೇವೆ. ಅಪಾರ ಬೆಳೆ ನಾಶವಾಗಿದೆ. ರೈತರಿಗೆ ಈವರೆಗೂ ಸಮರ್ಪಕ ಪರಿಹಾರ ಸಿಗದಿರುವುದೇ ಸರ್ಕಾರ ರೈತರನ್ನು ಕಡೆಗಣಿಸುತ್ತಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಕೂಡಲೇ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ ರೈತ ಹೋರಾಟಗಾರರು, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts