More

    ಅಪರಿಚಿತ ಕರೆಗಳ ಆಸೆ-ಆಮಿಷಕ್ಕೆ ಬಲಿಯಾಗದಿರಿ

    ರಟ್ಟಿಹಳ್ಳಿ: ಯಾವುದೇ ವ್ಯಕ್ತಿಯ ಅಪರಿಚಿತ ಕರೆಗಳಲ್ಲಿ ನೀಡುವ ಬಹುಮಾನದ ಆಸೆ-ಆಮಿಷಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು. ಮೊಬೈಲ್‌ಗಳಲ್ಲಿ ತಮ್ಮ ಬ್ಯಾಂಕ್ ಖಾತೆಗೆ ಸಂಬಂಧಿಸಿದ ಯಾವುದೇ ಮಾಹಿತಿ ನೀಡಬಾರದು. ಇತ್ತೀಚೆಗೆ ಹೆಚ್ಚು ಜನರು ಸೈಬರ್ ವಂಚನೆಗೆ ಒಳಗಾಗುತ್ತಿದ್ದಾರೆ ಎಂದು ಹಾವೇರಿ ಜಿಲ್ಲಾ ಸಿಇಎನ್ ಅಪರಾಧ ಪೊಲೀಸ್ ಠಾಣೆ ಅಧಿಕಾರಿ ಎನ್.ಪರಶುರಾಮ ಹೇಳಿದರು.

    ಪಟ್ಟಣದ ಪ್ರಿಯದರ್ಶಿನಿ ವಿದ್ಯಾಸಂಸ್ಥೆಯಲ್ಲಿ ಜಿಲ್ಲಾ ಸಿಇಎನ್ ಅಪರಾಧ ಪೊಲೀಸ್ ಠಾಣೆ ಸಹಯೋಗದೊಂದಿಗೆ ಸೋಮವಾರ ಆಯೋಜಿಸಿದ್ದ ಸೈಬರ್ ಕ್ರೈಂ ಮತ್ತು ಮಾದಕ ವಸ್ತುಗಳ ಬಗ್ಗೆ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಫೇಸ್‌ಬುಕ್, ಇನ್‌ಸ್ಟಾಗ್ರಾಂ, ವಾಟ್ಸ್‌ಆ್ಯಪ್, ಒಎಲ್‌ಎಕ್ಸ್‌ಗಳಲ್ಲಿ ವಿವಿಧ ವಸ್ತುಗಳನ್ನು ಮಾರಾಟ ಮಾಡಲು ಜಾಹೀರಾತು ಹಾಕಿ ಮೋಸ ಮಾಡುತ್ತಿದ್ದಾರೆ. ಪೆಟ್ರೋಲ್ ಬಂಕ್, ಮೊಬೈಲ್ ಟವರ್, ಗ್ರಾಹಕರ ಸೇವಾ ಕೇಂದ್ರ, ಇತರ ಸೌಲಭ್ಯ ಒದಗಿಸಲಾಗುವುದು ಎಂದು ಕರೆ ಮಾಡಿ ಮೋಸ ಮಾಡಲಾಗುತ್ತಿದೆ. ಇಂತಹವುಗಳನ್ನು ನಂಬಬಾರದು ಎಂದರು.

    ವಿದ್ಯಾರ್ಥಿಗಳು ಮಾದಕ ವಸ್ತುಗಳ ಸೇವನೆಯಿಂದ ದೂರ ಉಳಿದು ಉತ್ತಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

    ಪೊಲೀಸ್ ಕಾನ್‌ಸ್ಟೆಬಲ್ ರಾಜಪ್ಪ ಮೇಲ್ಮುರಿ ಮಾತನಾಡಿ, ಮಾದಕ ವಸ್ತುಗಳ ಮಾರಾಟ ಮತ್ತು ಸೇವನೆ ಎರಡೂ ಅಪರಾಧವಾಗಿದೆ. ವಿದ್ಯಾರ್ಥಿಗಳು ಉತ್ತಮ ಭವಿಷ್ಯಕ್ಕೆ ಉತ್ತಮ ಆರೋಗ್ಯ ಮುಖ್ಯವಾಗಿರುತ್ತದೆ. ಯುವಪೀಳಿಗೆ ದುಶ್ಚಟಗಳಿಗೆ ಬಲಿಯಾಗಿ ಆರೋಗ್ಯ, ಭವಿಷ್ಯ ಕೆಡಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಜಾಗೃತರಾಗಿಬೇಕು ಎಂದರು.

    ಪಪೂ ಕಾಲೇಜ್ ಪ್ರಾಚಾರ್ಯ ಎಚ್.ಎಚ್. ಬ್ಯಾಡಗೌಡ್ರ ಅಧ್ಯಕ್ಷತೆ ವಹಿಸಿದ್ದರು. ಪದವಿ ಕಾಲೇಜ್ ಪ್ರಾಚಾರ್ಯ ಎ.ಜಿ. ರಾಘವೇಂದ್ರ, ಎಎಸ್‌ಐ ಎಸ್.ಎಸ್. ರಾಯ್ಕರ್, ಸಂತೋಷ ಸೊರಟೂರ, ರೋಜಾ ಗುತ್ಯಾಲರ, ನಂದನಾ ಪಾಟೀಲ, ಶಿಲ್ಪಾ ಸಂಗಾಪುರ, ರೋಹಿಣಿ ಎಂ. ಇತರರು ಉಪಸ್ಥಿತರಿದ್ದರು. ರವಿ ಲಕ್ನೊಳ್ಳಿ, ರಮೇಶ ಕಮತಹಳ್ಳಿ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts