More

    ನಿಮ್ಮ ಪೋಷಕರು ನನಗೆ ಮತ ಹಾಕದಿದ್ದರೆ 2 ದಿನ ಊಟ ಬಿಡಿ: ಮಕ್ಕಳಿಗೆ ಶಾಸಕ ಸಂತೋಷ್‌ ಕರೆ

    ಮುಂಬೈ: ಮುಂಬರುವ ಚುನಾವಣೆಯಲ್ಲಿ ನಿಮ್ಮ ಪೋಷಕರು ನನಗೆ ಮತ ಹಾಕದಿದ್ದರೆ, ಎರಡು ದಿನ ಊಟ ಮಾಡಬೇಡಿ ಎಂದು ಸಿಎಂ ಏಕನಾಥ ಶಿಂದೆ ನೇತೃತ್ವದ ಶಿವಸೇನಾ ಬಣದ ಶಾಸಕ ಸಂತೋಷ್‌ ಬಂಗಾರ್‌ ಅವರು ಶಾಲಾ ಮಕ್ಕಳಿಗೆ ಕರೆ ನೀಡಿದ್ದಾರೆ. ಈ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.

    ಇದನ್ನೂ ಓದಿ:​‘ವೆಟ್ಟೈಯನ್’ ಸಿನಿಮಾ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ರಜನಿಕಾಂತ್​!‘

    ಚುನಾವಣಾ ಆಯೋಗವು ಚುನಾವಣಾ ಸಂಬಂಧಿತ ಚಟುವಟಿಕೆಗಳಲ್ಲಿ ಮಕ್ಕಳನ್ನು ಬಳಸದಂತೆ ನಿರ್ದೇಶನಗಳನ್ನು ಹೊರಡಿಸಿದ ಒಂದು ವಾರದ ನಂತರ ಕಳಮ್ನೂರಿ ಶಾಸಕ ಸಂತೋಷ್ ಬಂಗಾರ್ ಅವರ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ. ಕಲಾಮ್ನುರಿ ಕ್ಷೇತ್ರದ ಶಾಸಕ ಸಂತೋಷ್‌, ಹಿಂಗೋಳಿ ಜಿಲ್ಲೆಯ ಜಿಲ್ಲಾ ಪರಿಷತ್‌ ಶಾಲೆಗೆ ಭೇಟಿ ನೀಡಿದ್ದಾಗ 10ಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನುದ್ದೇಶಿಸಿ ಮಾತನಾಡಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

    ಮುಂದಿನ ಚುನಾವಣೆಯಲ್ಲಿ ನಿಮ್ಮ ಪೋಷಕರು ನನಗೆ ಮತ ಹಾಕದಿದ್ದರೆ, ಎರಡು ದಿನ ಊಟ ಮಾಡಬೇಡಿ” ಎಂದು ಬಂಗಾರ್ ಅವರು ಹಿಂಗೋಲಿ ಜಿಲ್ಲೆಯ ಜಿಲ್ಲಾ ಪರಿಷತ್ ಶಾಲೆಗೆ ಭೇಟಿ ನೀಡಿದಾಗ ಚಿತ್ರೀಕರಿಸಿದ ವೈರಲ್ ವಿಡಿಯೋದಲ್ಲಿ ಶಾಲಾ ಮಕ್ಕಳಿಗೆ ಹೇಳುತ್ತಿರುವುದು ಕಂಡುಬಂದಿದೆ.

    ಇದರ ಬೆನ್ನಲ್ಲೇ, ಕಾಂಗ್ರೆಸ್‌ ಹಾಗೂ ಎನ್‌ಸಿಪಿ–ಎಸ್‌ಪಿ (ಶರದ್‌ ಪವಾರ್‌) ಪಕ್ಷದ ನಾಯಕರು ಸಂತೋಷ್‌ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.
    ಎನ್‌ಸಿಪಿ–ಎಸ್‌ಪಿ ವಕ್ತಾರ ಕ್ಲೈಡ್ ಕ್ರಾಸ್ಟೊ, ‘ಶಾಲಾ ಮಕ್ಕಳನ್ನು ಉದ್ದೇಶಿಸಿ ಬಂಗಾರ್‌ ನೀಡಿರುವ ಹೇಳಿಕೆ ಚುನಾವಣಾ ಆಯೋಗದ ನಿರ್ದೇಶನಕ್ಕೆ ವಿರುದ್ಧವಾಗಿದೆ. ಹಾಗಾಗಿ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ. ಅವರು ಮತ್ತೆ ಮತ್ತೆ ಇಂತಹ ತಪ್ಪು ಮಾಡುತ್ತಿದ್ದರೂ, ಬಿಜೆಪಿಯ ಮಿತ್ರಪಕ್ಷದಲ್ಲಿ ಇರುವುದರಿಂದ ಶಿಕ್ಷೆಯಿಂದ ಪಾರಾಗುತ್ತಿದ್ದಾರೆ. ಚುನಾವಣಾ ಆಯೋಗವು ಅವರ ವಿರುದ್ಧ ನಿಪಕ್ಷಪಾತವಾಗಿ ಕ್ರಮ ಕೈಗೊಳ್ಳಲಿ’ ಎಂದು ಒತ್ತಾಯಿಸಿದ್ದಾರೆ.

    ತಮ್ಮ ಪಕ್ಷದ ಶಾಸಕರು ಇಂತಹ ಹೇಳಿಕೆ ನೀಡುತ್ತಿರುವಾಗ, ಶಿಕ್ಷಣ ಸಚಿವರು ನಿದ್ರಿಸುತ್ತಿದ್ದಾರೆ ಎಂದು ಕಾಂಗ್ರೆಸ್‌ ನಾಯಕ ವಿಜಯ್‌ ನಾಮದೇವರಾವ್‌ ಆರೋಪಿಸಿದ್ದಾರೆ. ಬಂಗಾರ್‌ ಈ ಹಿಂದೆಯೂ ಇಂತಹ ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಸುದ್ದಿಯಾಗಿದ್ದರು. 2024ರ ಲೋಕಸಭೆ ಚುನಾವಣೆ ಬಳಿಕ ಪ್ರಧಾನಿ ನರೇಂದ್ರ ಮೋದಿ ಮತ್ತೆ ಅಧಿಕಾರಕ್ಕೇರದಿದ್ದರೆ ನೇಣುಹಾಕಿಕೊಳ್ಳುವುದಾಗಿ ಕಳೆದ ತಿಂಗಳು ಹೇಳಿದ್ದರು.

    2023ರ ಆಗಸ್ಟ್‌ನಲ್ಲಿ ನಡೆದ ಉತ್ಸವವೊಂದರಲ್ಲಿ ಭಾಗವಹಿಸಿದ್ದಾಗ ಖಡ್ಗ ಝಳಪಿಸಿದ್ದರು. ಈ ಸಂಬಂಧ ಕಲಾಮ್ನುರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಕಾರ್ಮಿಕರಿಗಾಗಿ ಜಾರಿಗೊಳಿಸಲಾಗಿರುವ ಮಧ್ಯಾಹ್ನದ ಬಿಸಿಯೂಟ ಯೋಜನೆಯ ಸಿಬ್ಬಂದಿಯೊಬ್ಬರಿಗೆ 2023ರಲ್ಲಿ ಕಪಾಳಕ್ಕೆ ಹೊಡೆದಿದ್ದರು. ಆ ವಿಡಿಯೋ ಕೂಡ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು.

    ಯಾವುದೇ ರೀತಿಯ ಚುನಾವಣಾ ಪ್ರಚಾರ ಕಾರ್ಯದಲ್ಲಿ ಮಕ್ಕಳನ್ನು ಬಳಸಿಕೊಳ್ಳಬಾರದು ಎಂದು ಚುನಾವಣಾ ಆಯೋಗವು ರಾಜಕೀಯ ಪಕ್ಷಗಳಿಗೆ ಕಳೆದವಾರವಷ್ಟೇ ಸೂಚನೆ ನೀಡಿತ್ತು.

    ಬಾಲಿವುಡ್​ ಖ್ಯಾತ ನಟ ಪೊಲೀಸರ ವಶಕ್ಕೆ! ಕಾರಣವಾಯ್ತು ಈ ಸಿನಿಮಾದ ಟ್ರೇಲರ್?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts