More

    ಪ್ಲಾಸ್ಟಿಕ್ ಕೊಟ್ಟು ಅಕ್ಕಿ ಪಡೆಯಿರಿ!

    ಶಿರ್ವ: ಪ್ಲಾಸ್ಟಿಕ್ ನಿಷೇಧದ ಬಗ್ಗೆ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಶಿರ್ವದಲ್ಲಿ ಎರಡು ವರ್ಷಗಳಿಂದ ವಿವಿಧ ಪ್ರಯತ್ನ ನಡೆಯುತ್ತಿದೆ. ಪ್ರಸ್ತುತ ಲಯನ್ಸ್ ಕ್ಲಬ್ ವತಿಯಿಂದ ಒಂದು ಕೆಜಿ ಪ್ಲಾಸ್ಟಿಕ್ ಕಸಕ್ಕೆ ಒಂದು ಕೆಜಿ ಅಕ್ಕಿ ನೀಡುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಹದಿನೈದು ದಿನ ಈ ಜನಜಾಗೃತಿ ಕಾರ್ಯಕ್ರಮ ನಡೆಯಲಿದೆ.

    ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಬಂಟಕಲ್ಲು ಲಯನ್ಸ್ ಕ್ಲಬ್ ಅಧ್ಯಕ್ಷ ಕೆ.ಆರ್.ಪಾಟ್ಕರ್ ನೇತೃತ್ವದಲ್ಲಿ ಇಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಪಾಟ್ಕರ್ ಅವರು ತಮ್ಮ ವಾರ್ಡ್‌ನ ಪ್ರತಿಯೊಂದು ಮನೆಗಳಿಗೂ ಭೇಟಿ ನೀಡಿ, ಕರಪತ್ರದ ಜೊತೆಗೆ ಬಟ್ಟೆ ಚೀಲಗಳನ್ನು ಉಚಿತವಾಗಿ ವಿತರಿಸಿ ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವುದಲ್ಲದೆ, ಶಿರ್ವ ವಾರದ ಸಂತೆ ಮಾರ್ಕೆಟ್‌ನಲ್ಲಿಯೂ ಇಂತಹ ಕಾರ್ಯಕ್ರಮ ನಡೆಸಿ ಗಮನ ಸೆಳೆದಿದ್ದರು.

    ಬಂಟಕಲ್ಲು ವಾರ್ಡ್ ಸಭೆಗಳಲ್ಲಿಯೂ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಆಹ್ವಾನಿಸಿ ಸರ್ಕಾರದಿಂದ ಸಿಗುವ ಸೌಲಭ್ಯಗಳು ಹಾಗೂ ಅವುಗಳನ್ನು ಪಡೆಯುವ ವಿಧಾನ, ಅಲ್ಲದೆ ಪ್ಲಾಸ್ಟಿಕ್ ವಸ್ತುಗಳನ್ನು ಕಡ್ಡಾಯವಾಗಿ ಬಳಸದಂತೆ, ಪರ‌್ಯಾಯವಾಗಿ ಬಟ್ಟೆ ಚೀಲಗಳನ್ನು ಬಳಸುವಂತೆ ತಿಳಿಸಿ ಉಚಿತ ಚೀಲಗಳನ್ನು ನೀಡಿದ್ದು ಮಾತ್ರವಲ್ಲದೆ ತಮ್ಮ ಮನೆಯಲ್ಲಿ ಜರುಗಿದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿಯೂ ಭಾಗವಹಿಸಿದವರಿಗೆ ಕರಪತ್ರದೊಂದಿಗೆ ಬಟ್ಟೆಚೀಲ ವಿತರಿಸಿದ್ದರು. ರಾಜಾಪುರ ಸಾರಸ್ವತ ಯುವವೃಂದದ ಯುವಕರ ತಂಡದೊಂದಿಗೆ ಶಂಕರಪುರದ ಸಾಲ್ಮರದಿಂದ ಶಿರ್ವದ ಪಂಜಿಮಾರು ಕೋಡುಗುಡ್ಡೆಯವರೆಗೆ ರಸ್ತೆ ಬದಿಯಲ್ಲಿರುವ ಪ್ಲಾಸ್ಟಿಕ್ ಕಸ ಹೆಕ್ಕುವ ಕಾರ್ಯಕ್ರಮ ನಡೆಸಿ, ಬೀದಿ ಬದಿಯ ಅಂಗಡಿ ವ್ಯಾಪಾರಿಗಳಿಗೆ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವಂತೆ ಸಲಹೆ ನೀಡಿ ಪರಿಸರ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಿ ಗಮನ ಸೆಳೆದಿದ್ದರು.

    ಪ್ಲಾಸ್ಟಿಕ್ ಮುಕ್ತ ಗ್ರಾಮ ಆಶಯ
    2020ರಲ್ಲಿ ಭಾರತ ಸೂಪರ್‌ಪವರ್ ರಾಷ್ಟ್ರ ಆಗಬೇಕು ಎಂಬ ಕನಸನ್ನು ಕಂಡ ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ 1998 ರಿಂದಲೇ ವಿದ್ಯಾರ್ಥಿಬಳಗ, ಯುವ ಸಮುದಾಯವನ್ನು ಜಾಗೃತಗೊಳಿಸುವ ಕಾರ್ಯಕ್ಕೆ ನಾಂದಿ ಹಾಡಿದ್ದರು. ಇಂದು ಭಾರತ ಸ್ವಾಭಿಮಾನಿ ರಾಷ್ಟ್ರವಾಗಿ ವಿಶ್ವ ಮಟ್ಟದಲ್ಲಿ ಬೆಳೆದು ನಿಂತಿದ್ದು, ಅವರ ಕನಸು ನನಸಾಗುವತ್ತ ಸಾಗುತ್ತಿದೆ. ಅಂತೆಯೇ ಭವಿಷ್ಯದಲ್ಲಿ ಪ್ಲಾಸ್ಟಿಕ್ ಮುಕ್ತ ಭಾರತ ಆಗಬೇಕು. ಸ್ವಚ್ಛ ಭಾರತ ಆಗಬೇಕು. ಈ ನಿಟ್ಟಿನಲ್ಲಿ ಗ್ರಾಮ ಮಟ್ಟದಿಂದ ಮನೆಮನೆಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆದಾಗ ಮಾತ್ರ ಪ್ಲಾಸ್ಟಿಕ್ ಮುಕ್ತ ಊರನ್ನು ಕಾಣಲು ಸಾಧ್ಯ. ಹಳ್ಳಿಹಳ್ಳಿಗಳಲ್ಲಿ ಈ ಬಗ್ಗೆ ಜನಜಾಗೃತಿ ಮೂಡಿದಾಗ ಪ್ಲಾಸ್ಟಿಕ್ ಮುಕ್ತ ಗ್ರಾಮವನ್ನು ಕಾಣಬಹುದು. ಈ ನಿಟ್ಟಿನಲ್ಲಿ ಬಂಟಕಲ್ಲು ಲಯನ್ಸ್ ಕ್ಲಬ್‌ನ ಕಾರ್ಯ ಇತರ ಸಂಘಟನೆಗಳಿಗೂ ಪ್ರೇರಣೆಯಾಗಬೇಕು. ಉಡುಪಿ ಜಿಲ್ಲೆಯ ಪ್ರತಿಯೊಂದು ಗ್ರಾಮಗಳು ಪ್ಲಾಸ್ಟಿಕ್ ಮುಕ್ತ ಗ್ರಾಮಗಳಾಗಿ ಮೂಡಿಬರಬೇಕಾದರೆ ಸ್ಥಳೀಯ ಮಟ್ಟದ ಜನಪ್ರತಿನಿಧಿಗಳು ಮುಂಚೂಣಿಯಲ್ಲಿ ನಿಂತು, ಇತರ ಸಮಾಜಸೇವಾ ಸಂಘಟನೆಗಳ ಸಹಕಾರದಿಂದ ಯಶಸ್ವಿಯಾಗಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಧನಾತ್ಮಕವಾಗಿ ಸ್ಪಂದಿಸುವ ಮನಸ್ಸುಗಳು ಒಂದಾದಾಗ ಉಡುಪಿ ಜಿಲ್ಲೆ ಪ್ಲಾಸ್ಟಿಕ್ ಮುಕ್ತ ಜಿಲ್ಲೆಯಾಗುವುದರಲ್ಲಿ ಸಂಶಯವಿಲ್ಲ. 

    ಸಾರ್ವಜನಿಕರಿಗೆ ಮಾಹಿತಿ: ಸಾರ್ವಜನಿಕರು ತಮ್ಮ ಮನೆಯಲ್ಲಿರುವ ಅಥವಾ ರಸ್ತೆ ಬದಿಗಳಲ್ಲಿ ಹರಡಿಕೊಂಡಿರುವ ಪ್ಲಾಸ್ಟಿಕ್ (ಪ್ಲಾಸ್ಟಿಕ್ ಚೀಲಗಳು, ಬಾಟಲ್, ಆಹಾರ ಪೊಟ್ಟಣ)ಗಳನ್ನು ಸಂಗ್ರಹಿಸಿ ನೀಡಿದಲ್ಲಿ (ಕನಿಷ್ಠ ಒಂದು ಕೆಜಿ) ಒಂದು ಕೆ.ಜಿ ಅಕ್ಕಿ ನೀಡಲಾಗುವುದು. ಬಂಟಕಲ್ಲು ಕೇಂದ್ರವಾಗಿರಿಸಿ 8 ಕಿ.ಮೀ. ವ್ಯಾಪ್ತಿಯಲ್ಲಿ ಕನಿಷ್ಠ 10 ಕೆ.ಜಿ. ಮೇಲ್ಪಟ್ಟು ಪ್ಲಾಸ್ಟಿಕ್ ಕಸ ಸಂಗ್ರಹವಿದ್ದರೆ ಅವರ ಮನೆಗೆ ತೆರಳಿ ಕಸ ಪಡೆದು, ಅಷ್ಟೇ ತೂಕದ ಅಕ್ಕಿ ಸ್ಥಳದಲ್ಲೇ ನೀಡಲಾಗುತ್ತದೆ. ಅಕ್ಕಿ ಪಡೆಯುವವರು ಬಟ್ಟೆಚೀಲಗಳನ್ನು ತರಬೇಕು. ಐದು ಕೆ.ಜಿ.ಮೇಲ್ಪಟ್ಟು ಪ್ಲಾಸ್ಟಿಕ್ ನೀಡಿದವರಿಗೆ ಬಟ್ಟೆ ಚೀಲದಲ್ಲಿ ಉಚಿತ ಅಕ್ಕಿ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ 98807 24512 ಅಥವಾ 99803 29763 ಸಂಪರ್ಕಿಸುವಂತೆ ಲಯನ್ಸ್ ಕ್ಲ ತಿಳಿಸಿದೆ. ಬಂಟಕಲ್ಲು ಕರ್ಣಾಟಕ ಬ್ಯಾಂಕ್ ಸಮೀಪದ ಪಾಟ್ಕರ್ ಎಂಟರ್ ಪ್ರೈಸಸ್‌ನಲ್ಲಿ ಮತ್ತು ಶಿರ್ವ ಬಸ್ ನಿಲ್ದಾಣದ ರಿಕ್ಷಾ ತಂಗುದಾಣದ ಸಮೀಪದ ಶ್ಯಾಮ್‌ಕಮಲ್ ಕಾಂಪ್ಲೆಕ್ಸ್‌ನಲ್ಲಿರುವ ಲಕ್ಷ್ಮಿಸ್ಟೋರ್‌ನಲ್ಲಿ ಪ್ಲಾಸ್ಟಿಕ್ ನೀಡಿ ಅಷ್ಟೇ ತೂಕದ ಅಕ್ಕಿ ಪಡೆಯಬಹುದು.
     

    ಸಾರ್ವಜನಿಕರಲ್ಲಿ ನಿಷೇಧಿತ ಪ್ಲಾಸ್ಟಿಕ್ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಿಸುವ ಉದ್ದೇಶದಿಂದ ಬಂಟಕಲ್ಲು-ಬಿ.ಸಿ.ರೋಡ್ ಲಯನ್ಸ್ ಕ್ಲಬ್‌ವತಿಯಿಂದ ವಿನೂತನ ಕಾರ್ಯಕ್ರಮ ಒಂದು ಕೆಜಿ ಪ್ಲಾಸ್ಟಿಕ್ ಕಸಕ್ಕೆ ಒಂದು ಕೆಜಿ ಅಕ್ಕಿ ನೀಡುವ ಬಗ್ಗೆ ಪ್ರಕಟಿಸಲಾಗಿದೆ, ಹದಿನೈದು(ಪಾಕ್ಷಿಕ)ದಿನಗಳ ಪರ್ಯಂತ ಈ ಜನಜಾಗೃತಿ ಕಾರ್ಯಕ್ರಮ ನಡೆಯುತ್ತದೆ.
    ಕೆ.ಆರ್.ಪಾಟ್ಕರ್ ಬಂಟಕಲ್ಲು ಲಯನ್ಸ್ ಕ್ಲಬ್ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts