More

    ಹೀಗೆ ಮಾಡಿದರೆ ಮೊಣಕಾಲು ನೋವು ಕಡಿಮೆಯಾಗುತ್ತದೆ

    ಹೀಗೆ ಮಾಡಿದರೆ ಮೊಣಕಾಲು ನೋವು ಕಡಿಮೆಯಾಗುತ್ತದೆ* ಇತ್ತೀಚೆಗೆ ನನಗೆ ಮೊಣಕಾಲು ನೋವು ಆರಂಭವಾಗಿದೆ. ಮೊಣಕಾಲುಗಳು ಬಲಗೊಳ್ಳಲು ಯೋಗ ಸಹಕಾರಿಯೆ? ಯಾವ ಆಸನಗಳನ್ನು ಅಭ್ಯಾಸ ಮಾಡಬೇಕೆಂದು ತಿಳಿಸಿ.

    | ಶಂಕರಪ್ಪ 57 ವರ್ಷ, ಬೆಂಗಳೂರು

    ಮೊಣಕಾಲು ನೋವು ಸಮಸ್ಯೆಯನ್ನು ಆರಂಭದಲ್ಲಿಯೇ ಪತ್ತೆಹಚ್ಚಿದರೆ ಯೋಗದ ಮೂಲಕ ಸಾಕಷ್ಟು ಪ್ರಮಾಣದಲ್ಲಿ ನಿಯಂತ್ರಿಸಬಹುದು. ದುರ್ಬಲ ಮೊಣಕಾಲುಗಳು ಅಥವಾ ಮೊಣಕಾಲುಗಳ ನೋವಿನಿಂದ ಬಳಲುತ್ತಿರುವವರಿಗೆ ಯೋಗವು ನಿಜವಾಗಿಯೂ ತುಂಬ ಪ್ರಯೋಜನಕಾರಿಯಾಗಿದೆ. ಕೆಲವು ಭಂಗಿಗಳು ಮೊಣಕಾಲು ಸ್ಥಿರಗೊಳಿಸಲು ಮತ್ತು ಮೊಣಕಾಲುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಮೊಣಕಾಲುಗಳನ್ನು ಬಲಪಡಿಸಲು ಮತ್ತು ದೇಹದ ಭಂಗಿಯನ್ನು ಸುಧಾರಿಸಲು ಕೆಲವು ಆಸನಗಳು ಅನುಕೂಲಕಾರಿಯಾಗಿವೆ. ಬಿಗಿಯಾದ ಸ್ನಾಯುಗಳನ್ನು ಹಿಗ್ಗಿಸಲು ಯೋಗ ಸಹಾಯ ಮಾಡುತ್ತದೆ. ಆರಂಭದಲ್ಲಿ ಮಲಗಿಕೊಂಡು ಮಾಡುವ ವ್ಯಾಯಾಮ ಹಾಗೂ ಆಸನಗಳನ್ನು ಮಾಡಿ. ನೋವು ಕಡಿಮೆಯಾದ ನಂತರ ಕುಳಿತು ಮಾಡುವ ಆಸನಗಳನ್ನು ಅಭ್ಯಾಸ ಮಾಡಿ.

    ಸೂಚಿತ ಆಸನಗಳು: ಮಲಗಿಕೊಂಡು ಒಂದೊಂದು ಕಾಲಿನಲ್ಲಿ ಸೊನ್ನೆ ಬರೆಯುವ ವ್ಯಾಯಾಮವನ್ನು ಅಭ್ಯಾಸ ಮಾಡಿ. ಆಸನಗಳಲ್ಲಿ ಉತ್ಥಿತ ಏಕಪಾದಾಸನ, ಊರ್ಧ್ವಪ್ರಸಾರಿತ ಪಾದಾಸನ, ಸೇತುಬಂಧ ಸರ್ವಾಂಗಾಸನ, ಹಲಾಸನ, ಮಕರಾಸನ, ಭುಜಂಗಾಸನ, ಅಧೋಮುಖ ಶ್ವಾನಾಸನ, ಏಕಪಾದ ಶಲಭಾಸನ. ನೋವು ಕಡಿಮೆ ಆದ ಮೇಲೆ ಕುಳಿತು ಮಾಡುವ ಆಸನಗಳಲ್ಲಿ ಬದ್ಧಕೋಣಾಸನ, ವಜ್ರಾಸನ, ಮಾರ್ಜಾಲಾಸನ, ಅರ್ಧ ಉಷ್ಟ್ರಾಸನ, ಶವಾಸನ ಮಾಡಿ.

    * ಉತ್ಥಿತ ಏಕಪಾದಾಸನ ಬಗ್ಗೆ ಮಾಹಿತಿಯನ್ನು ನೀಡಿ.

    | ಮೋಹನ 59 ವರ್ಷ, ರಾಜಾಜಿನಗರ

    ಈ ಆಸನದಲ್ಲಿ ಅಂಗಾತವಾಗಿ ಮಲಗಿಕೊಂಡು ಒಂದೊಂದು ಕಾಲನ್ನು ಮೇಲಕ್ಕೆತ್ತಿ ಕೆಳಗಿಳಿಸುವುದಾಗಿದೆ. ಇದೊಂದು ಸರಳ ಆಸನವಾಗಿದೆ.

    ವಿಧಾನ: ಜಮಖಾನದ ಹಾಸಿನ ಮೇಲೆ ಅಂಗಾತವಾಗಿ ನೇರವಾಗಿ ಮಲಗಿ. ಕಾಲುಗಳು ಜೋಡಣೆ, ಕೈಗಳನ್ನು ದೇಹಕ್ಕೆ ತಾಗಿಸಿ ಅಂಗೈಗಳನ್ನು ನೆಲದ ಮೇಲೆ ಇಡಿ. ಅನಂತರ ಉಸಿರನ್ನು ತೆಗೆದುಕೊಳ್ಳುತ್ತ ನಿಧಾನವಾಗಿ ಬಲಗಾಲನ್ನು ಮೇಲಕ್ಕೆತ್ತಿ ನೇರವಾಗಿಸಿ. ಒಂದು ಅಥವಾ ಎರಡು ಬಾರಿ ಸಮ ಉಸಿರಾಟ ನಡೆಸುತ್ತ ಅನಂತರ ಉಸಿರನ್ನು ಬಿಡುತ್ತ ಬಲಗಾಲನ್ನು ನಿಧಾನವಾಗಿ ನೆಲದ ಮೇಲೆ ಇಡಿ. ಇದೇ ರೀತಿ ಎಡಗಾಲಿನಲ್ಲಿಯೂ ಅಭ್ಯಸಿಸಿ. ಈ ರೀತಿಯಾಗಿ ಮೂರು ಬಾರಿ ಅಭ್ಯಾಸವನ್ನು ನಡೆಸಿ. ಕೊನೆಗೆ ವಿಶ್ರಾಂತಿ ಪಡೆಯಿರಿ.

    ಪ್ರಯೋಜನ: ಉತ್ಥಿತ ಏಕಪಾದಾಸನವು ಉತ್ತಮವಾದ ಸರಳ ಆಸನ. ಸಾಮಾನ್ಯ ಎಲ್ಲ ಸಮಸ್ಯೆ ಇದ್ದವರೂ ಸುಲಭವಾಗಿ ಈ ಆಸನ ಮಾಡಬಹುದು. ಕಾಲುಗಳಿಗೆ, ತೊಡೆಗಳಿಗೆ ಹೆಚ್ಚು ಶಕ್ತಿಯನ್ನು ಕೊಡುವ ಆಸನವಿದು. ಪಿತ್ತಜನಕಾಂಗ, ಮೂತ್ರಕೋಶಗಳ ಕಾರ್ಯ ಸಮರ್ಪಕವಾಗಿ ನಿರ್ವಹಿಸುವುದಲ್ಲದೆ ಸೊಂಟ ಮತ್ತು ಕಾಲಿನ ಸ್ನಾಯುಗಳನ್ನು ಬಲಪಡಿಸುತ್ತದೆ. ಮೊಣಕಾಲುಗಳನ್ನು ಬಲಪಡಿಸಲು ಸಹಕಾರಿ. ಪಾದದ ಕೀಲುಗಳನ್ನು ಬಲಪಡಿಸಿ, ಕೆಳಬೆನ್ನನ್ನು ಸಡಿಲಗೊಳಿಸುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts