More

    ಕ್ರಿಪ್ಟೋಕರೆನ್ಸಿ ಪ್ರಯೋಗ, ಕಂಡೀತೇ ಉಪಯೋಗ..

    ಆರ್ಥಿಕ ಜಗತ್ತಿನಲ್ಲಿ ಯಾವುದೇ ನಿಯಮಗಳ ಲಗಾಮಿಲ್ಲದೆ ಶ್ರೀಮಂತರನ್ನು ಸೃಷ್ಟಿಸುತ್ತಿರುವ ಖಾಸಗಿ ಕ್ರಿಪ್ಟೋಕರೆನ್ಸಿ ಎಚ್ಚರಿಕೆ ಗಂಟೆ ಬಾರಿಸುತ್ತಲೇ ಇದೆ. ಬಹುತೇಕ ದೇಶಗಳು ಖಾಸಗಿ ವಹಿವಾಟಿಗೆ ಲಗಾಮು ಹಾಕಲು ಪ್ರಯತ್ನ ನಡೆಸಿವೆ. ಈ ಮಧ್ಯೆ ಸರ್ಕಾರ ನಡೆಸಲು ಉದ್ದೇಶಿಸಿರುವ ‘ಕ್ರಿಪ್ಟೋ ಕರೆನ್ಸಿ’ ಪ್ರಯೋಗ ಉಪಯೋಗವಾದೀತೇ ಎಂಬುದು ಸಹಜ ಕುತೂಹಲ.

    ಜಗತ್ತಿನಾದ್ಯಂತ ಹೆಚ್ಚು ಪ್ರಚಲಿತದಲ್ಲಿರುವ ವರ್ಚುವಲ್ ಕರೆನ್ಸಿ ‘ಬಿಟ್​ಕಾಯಿನ್’. ಇದು ಹುಟ್ಟಿಸಿರುವ ಕ್ರೇಜ್ ವಿಭಿನ್ನವಾದುದು. ಜಗತ್ತಿನೆಲ್ಲ ಕರೆನ್ಸಿಗಳಿಗಿಂತಲೂ ಹೆಚ್ಚು ಬೆಲೆಬಾಳುವ ಈ ಕರೆನ್ಸಿಯ ವಯಸ್ಸು 13 ವರ್ಷದ ಆಸುಪಾಸು. ನೇರವಹಿವಾಟಿಗೆ ಬಳಕೆಯಾಗುವುದಕ್ಕಿಂತಲೂ ಇದು ಅಕ್ರಮ ಚಟುವಟಿಕೆಗೆ ಬಳಕೆಯಾಗುತ್ತಿರುವುದೇ ಹೆಚ್ಚು. ಹೀಗಾಗಿ ಭಾರತದಲ್ಲಿ ಇದನ್ನು ಕಾನೂನುಬಾಹಿರ ವಹಿವಾಟು ಎಂದು ಘೋಷಿಸಲಾಗಿದೆ. ಇವೆಲ್ಲದರ ನಡುವೆ, ಭಾರತದಲ್ಲಿ ತನ್ನದೇ ಆದ ಕ್ರಿಪ್ಟೋಕರೆನ್ಸಿಯನ್ನು ಚಲಾವಣೆಗೆ ತರಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ಸಿದ್ಧತೆ ನಡೆಸಿದೆ.

    ಹೊಸ ಮಸೂದೆ: ‘ದ ಕ್ರಿಪ್ಟೋಕರೆನ್ಸಿ ಆಂಡ್ ರೆಗ್ಯುಲೇಶನ್ ಆಫ್ ಅಫೀಷಿಯಲ್ ಡಿಜಿಟಲ್ ಕರೆನ್ಸಿ ಬಿಲ್ 2021’ ಎಂಬ ಮಸೂದೆಯನ್ನು ಕೇಂದ್ರ ಸರ್ಕಾರ ಸಿದ್ಧಪಡಿಸುತ್ತಿದೆ. ಬಿಟ್ ಕಾಯಿನ್ ಮಾದರಿಯ ಕ್ರಿಪ್ಟೋಕರೆನ್ಸಿಗಳನ್ನು ನಿಷೇಧಿಸಬೇಕು. ಆರ್​ಬಿಐ ನಿಯಂತ್ರಿತ ಡಿಜಿಟಲ್ ಕರೆನ್ಸಿ ಚಲಾವಣೆಗೆ ತರಬೇಕು ಎಂದು ಅಂತರಸಚಿವಾಲಯ ಸಮಿತಿ ಶಿಫಾರಸು ಮಾಡಿದ ನಂತರದಲ್ಲಿ ಈ ಮಸೂದೆ ಸಿದ್ಧವಾಗುತ್ತಿದೆ.

    ಪ್ರಸ್ತಾವಿತ ಮಸೂದೆಯ ಅಂಶಗಳು

    • ಖಾಸಗಿ ಕ್ರಿಪ್ಟೋಕರೆನ್ಸಿ ವಹಿವಾಟು ನಡೆಸಿದರೆ ಅಂಥ ವ್ಯಕ್ತಿಗಳು, ಕಾಪೋರೇಟ್ ಕಂಪನಿಗಳ ಮೇಲೆ ಭಾರಿ ಪ್ರಮಾಣದ ದಂಡ.
    • ವರ್ಚುವಲ್ ಕರೆನ್ಸಿ ವಹಿವಾಟು ನಿಯಂತ್ರಣಕ್ಕೆ ಸರ್ಕಾರದ ಹಿಡಿತದಲ್ಲಿರುವ ಕ್ರಿಪ್ಟೋಕರೆನ್ಸಿ ಸ್ಥಾಪನೆ.

    ಯಾಕೆ ಇಂಥ ಕ್ರಮ?: ಖಾಸಗಿ ಕ್ರಿಪ್ಟೋಕರೆನ್ಸಿ ವಹಿವಾಟು ನಿಷೇಧಿಸಿದರೆ ಈಗಾಗಲೆ ಖಾಸಗಿ ಕ್ರಿಪ್ಟೋಕರೆನ್ಸಿಯಲ್ಲಿ ಬೃಹತ್ ಪ್ರಮಾಣದ ಹಣ ಹೂಡಿಕೆ ಮಾಡಿಟ್ಟುಕೊಂಡವರು ಅದನ್ನು ನಗದೀಕರಿಸಬೇಕಾಗುತ್ತದೆ. ಇದರಿಂದ ಭಾರತದ ಅರ್ಥವ್ಯವಸ್ಥೆಗೆ ಉತ್ತೇಜನ ಸಿಗಲಿದೆ ಎಂಬುದು ಪರಿಣತರ ಅಭಿಪ್ರಾಯ. ಆರ್​ಬಿಐ ಡಿಜಿಟಲ್ ಕರೆನ್ಸಿ ಬಂದರೆ ಖಾಸಗಿ ಕ್ರಿಪ್ಟೋಕರೆನ್ಸಿ ವಹಿವಾಟು ಬಂದ್ ಆಗಿ, ಎಲ್ಲವೂ ಲೆಕ್ಕಪತ್ರದ ವ್ಯಾಪ್ತಿಗೆ ಬರಲಿದೆ. ಡಿಜಿಟಲ್ ಕರೆನ್ಸಿಯ ವಹಿವಾಟು ಸಂಪೂರ್ಣ ಆರ್​ಬಿಐ ಅಧೀನದಲ್ಲೇ ಇರಲಿದೆ. ಅಂತರ್ ಸಚಿವಾಲಯ ಸಮಿತಿ ಈ ಕುರಿತು ಸಭೆ ನಡೆಸಿ ಈ ನಿರ್ಧಾರಕ್ಕೆ ಬಂದಿದೆ. ದೇಶದ ಅರ್ಥವ್ಯವಸ್ಥೆಯ ಮೇಲೆ ಖಾಸಗಿ ಕ್ರಿಪ್ಟೋಕರೆನ್ಸಿ ದೊಡ್ಡ ಬೆದರಿಕೆಯಾಗಿ ಪರಿಣಮಿಸಲಿದೆ ಎಂಬ ಅಭಿಪ್ರಾಯವನ್ನು ಆರ್​ಬಿಐ ವ್ಯಕ್ತಪಡಿಸಿದೆ. ಕೇಂದ್ರ ಸರ್ಕಾರ ಇತ್ತೀಚೆಗೆ ನೀಡಿದ ಹೇಳಿಕೆ ಪ್ರಕಾರ, ಭಾರತದಲ್ಲಿ ಎರಡು ರೀತಿಯ ಕ್ರಿಪ್ಟೋಕರೆನ್ಸಿ ಚಾಲನೆ ವಿಚಾರ ಪರಿಶೀಲನೆಯಲ್ಲಿದೆ. ‘ಪಬ್ಲಿಕ್’ ಮತ್ತು ‘ಪ್ರೖೆವೇಟ್’ ಎಂದರೆ ಸರ್ಕಾರಿ ಸ್ವಾಮ್ಯ ಮತ್ತು ಖಾಸಗಿ ಸ್ವಾಮಿತ್ವದ ಎಂಬುದು ಸಾಮಾನ್ಯ ಅರ್ಥ.

    ಪ್ರಯೋಗಕ್ಕೆ ಅವಕಾಶ

    ನಾವು ಎಲ್ಲ ಆಯ್ಕೆ, ಅವಕಾಶ ನಿಷೇಧಿಸುತ್ತಿಲ್ಲ. ಬ್ಲಾಕ್​ಚೈನ್, ಬಿಟ್​ಕಾಯಿನ್ ಅಥವಾ ಕ್ರಿಪ್ಟೋಕರೆನ್ಸಿಗಳಲ್ಲಿ ಜನ ಪ್ರಯೋಗ ಮಾಡುವುದಕ್ಕೆ ಕೆಲ ಗವಾಕ್ಷಿ ಗಳನ್ನು ತೆರೆದಿಡುತ್ತೇವೆ. ಕ್ರಿಪ್ಟೋಕರೆನ್ಸಿಗೆ ಸಂಬಂಧಿಸಿ ಕ್ಯಾಬಿನೆಟ್ ಟಿಪ್ಪಣಿ ಸಿದ್ಧವಾಗಿದೆ. ಸುಪ್ರೀಂ ಕೋರ್ಟ್ ಹೇಳಿದ್ದು ನಮ್ಮ ಗಮನದಲ್ಲಿದೆ. ಕ್ರಿಪ್ಟೋಕರೆನ್ಸಿ ವಿಚಾರದಲ್ಲಿ ಆರ್​ಬಿಐ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ. ಗುಜರಾತಿನ ಗಾಂಧಿನಗರದ ಗಿಫ್ಟ್ ಸಿಟಿ (ಸ್ಮಾರ್ಟ್ ಸಿಟಿ)ಯಲ್ಲಿ ಬ್ಲಾಕ್​ಚೈನ್ ತಂತ್ರಜ್ಞಾನ ಬಳಕೆ ವ್ಯಾಪಕವಾಗಿ ನಡೆಯಲಿದೆ. ಇದನ್ನು ದೊಡ್ಡ ದಾಗಿ ವಿಸ್ತರಿಸುವ ಚಿಂತನೆ ಸರ್ಕಾರದ ಎದು ರಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇತ್ತೀಚೆಗೆ ಹೇಳಿದ್ದರು.

    ಕ್ರಿಪ್ಟೋ ಕರೆನ್ಸಿ ಎಂದರೆ…

    ಸರಕು ಮತ್ತು ಸೇವೆಗಳಿಗೆ ಆನ್​ಲೈನ್ ಮೂಲಕ ಪಾವತಿ ಮಾಡುವ ಮೌಲ್ಯದ ಒಂದು ಮಾದರಿ ಕ್ರಿಪ್ಟೋ ಕರೆನ್ಸಿ. ಸರಳವಾಗಿ ಹೇಳಬೇಕು ಎಂದರೆ ಹಣದ ಡಿಜಿಟಲ್ ರೂಪ. ಬ್ಲಾಕ್​ಚೇನ್ ತಂತ್ರಜ್ಞಾನ ಬಳಸಿಕೊಂಡು ಕ್ರಿಪ್ಟೋಕರೆನ್ಸಿ ವಹಿವಾಟು ನಡೆಯುತ್ತದೆ. ಬ್ಲಾಕ್​ಚೇನ್ ಎಂಬುದು ವಿಕೇಂದ್ರೀಕೃತ ತಂತ್ರಜ್ಞಾನವಾಗಿದ್ದು, ದಾಖಲೆ- ಮಾಹಿತಿಗಳು ಅನೇಕ ಕಂಪ್ಯೂಟರ್​ಗಳಲ್ಲಿ ಶೇಖರಗೊಂಡಿರುತ್ತವೆ. ಅಲ್ಲಿಂದಲೇ ನಿರ್ವಹಿಸಲ್ಪಡುತ್ತದೆ. ಕಾಯಿನ್​ವಾರ್ಕೆಟ್​ಕ್ಯಾಪ್.ಕಾಮ್ ಪ್ರಕಾರ, ಜಗತ್ತಿನಾದ್ಯಂತ ಸದ್ಯ 6,700ಕ್ಕೂ ಹೆಚ್ಚು ವಿಭಿನ್ನ ಕ್ರಿಪ್ಟೋಕರೆನ್ಸಿಗಳು ಚಲಾವಣೆಯಲ್ಲಿವೆ. 2021ರ ಮಾರ್ಚ್ 25ರ ಡೇಟಾದಂತೆ ಕ್ರಿಪ್ಟೋಕರೆನ್ಸಿಗಳ ಒಟ್ಟು ಮೌಲ್ಯ 1.66 ಲಕ್ಷ ಕೋಟಿ ಡಾಲರ್​ಗೂ ಅಧಿಕ. ಬಿಟ್​ಕಾಯಿನ್ ಜನಪ್ರಿಯ ಕ್ರಿಪ್ಟೋಕರೆನ್ಸಿಯಾಗಿದ್ದು, ಮಾರುಕಟ್ಟೆ ಬಂಡವಾಳ 991.9 ಶತಕೋಟಿ ಡಾಲರ್ ಆಗಿದೆ.

    ಕ್ರಿಪ್ಟೋ ಸಂಪತ್ತು: ಸರ್ಕಾರಿ ಅಂಕಿ-ಅಂಶಗಳ ಪ್ರಕಾರ ಅಂದಾಜು 70 ಲಕ್ಷ ಭಾರತೀಯರು ಕ್ರಿಪ್ಟೋಕರೆನ್ಸಿ ಹೊಂದಿದ್ದು, ಅವುಗಳ ಮೌಲ್ಯ 7.28 ಲಕ್ಷ ಕೋಟಿ ರೂಪಾಯಿ ಆಗಿದೆ. ಈ ಸಂಪತ್ತು ಕಳೆದ ಒಂದೇ ವರ್ಷದ ಅವಧಿಯಲ್ಲಿ ಶೇ.700 ಹೆಚ್ಚಳವಾಗಿದೆ.

    ಭಾರತದಲ್ಲಿ ಏನೇನಾಯಿತು?

    • 2017 ಫೆಬ್ರವರಿ-ಡಿಸೆಂಬರ್ ಅವಧಿಯಲ್ಲಿ ಕ್ರಿಪ್ಟೋಕರೆನ್ಸಿ ವ್ಯವಹಾರ, ಕಾನೂನು ಮಾನ್ಯತೆ, ಅಪಾಯಗಳ ಕುರಿತು ಎಚ್ಚರಿಕೆ ರೂಪದ ಸಲಹೆ ಇರುವ ಪ್ರಕಟಣೆ ಹೊರಡಿಸಿದ ಆರ್​ಬಿಐ.
    • 2017 ಏಪ್ರಿಲ್​ನಲ್ಲಿ ಆರ್ಥಿಕ ವ್ಯವಹಾರಗಳ ಇಲಾಖೆಯ ವಿಶೇಷ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಆಂತರಿಕ ಶಿಸ್ತು ಸಮಿತಿ ರಚಿಸಿದ ಸರ್ಕಾರ-ಜಾಗತಿಕವಾಗಿ ಹಾಗೂ ಭಾರತದಲ್ಲಿ ಕ್ರಿಪ್ಟೋಕರೆನ್ಸಿಗಳ ಹಾಲಿ ಸ್ಥಿತಿಗತಿ, ಅವುಗಳ ವಹಿವಾಟಿನ ಚೌಕಟ್ಟಿನ ಕುರಿತು ಅಧ್ಯಯನ ನಡೆಸಿ ವರದಿ ಸಲ್ಲಿಸುವ ಜವಾಬ್ದಾರಿ.
    • ಕ್ರಿಪ್ಟೋಕರೆನ್ಸಿಯಲ್ಲಿ ಬಳಕೆಯಾಗಿರುವ ತಂತ್ರಜ್ಞಾನದ ಬಗ್ಗೆ ತಿಳಿದುಕೊಳ್ಳಲು 2017 ಆಗಸ್ಟ್​ನಲ್ಲಿ ಟಿ.ವಿ.ಮೋಹನದಾಸ್ ಪೈ ನೇತೃತ್ವದಲ್ಲಿ ಹಣಕಾಸು ಮತ್ತು ನಿಯಂತ್ರಣ ತಂತ್ರಜ್ಞಾನ ಸಮಿತಿ ರಚಿಸಿದ ಸೆಬಿ.
    • ಬೆಂಗಳೂರು, ಹೈದರಾಬಾದ್, ಮುಂಬೈ, ಪುಣೆ, ಗುರುಗ್ರಾಮ್ ದೆಹಲಿಗಳಲ್ಲಿ ಕ್ರಿಪ್ಟೋಕರೆನ್ಸಿ ವಹಿವಾಟು/ವಿನಿಮಯಗಳಾಗುತ್ತಿರುವ ಕುರಿತು 2017 ಡಿಸೆಂಬರ್​ನಲ್ಲಿ ಸಮೀಕ್ಷೆ ಕೈಗೊಂಡ ಐಟಿ.
    • ಶಾದ್ಯಂತ ಗರಿಷ್ಠ ಆದಾಯ ಹೊಂದಿದವರು ಕ್ರಿಪ್ಟೋಕರೆನ್ಸಿ ಮೇಲೆ ಹೂಡಿಕೆ ಮಾಡಿದ್ದ ಹಣ ಹಿಂಪಡೆಯಲು ಪರದಾಡಿದ ಘಟನೆ 2017 ಡಿಸೆಂಬರ್​ನಲ್ಲಿ ನಡೆಯಿತು.
    • ಕ್ರಿಪ್ಟೋಕರೆನ್ಸಿ ವಹಿವಾಟು ನಡೆಸದಂತೆ ವಾಣಿಜ್ಯ, ಸಹಕಾರಿ, ಪಾವತಿ ಬ್ಯಾಂಕ್, ಕಿರುಹಣಕಾಸು ಬ್ಯಾಂಕ್, ಎನ್​ಬಿಎಫ್​ಸಿಗಳು ಮತ್ತು ಪಾವತಿ ಸೇವಾ ಪೂರೈಕೆದಾರರಿಗೆ 2018 ಏಪ್ರಿಲ್​ನಲ್ಲಿ ಆರ್​ಬಿಐ ಕಟ್ಟುನಿಟ್ಟಿನ ಸೂಚನೆ. ಪರಿಣಾಮ ಆಗಸ್ಟ್ ನಲ್ಲಿ ಸುಪ್ರೀಂ ಕೋರ್ಟ್​ನಲ್ಲಿ ರಿಟ್ ದಾಖಲು.
    • ಭಾರತದಲ್ಲಿ ಖಾಸಗಿ ಕ್ರಿಪ್ಟೋಕರೆನ್ಸಿಗಳನ್ನು ನಿಷೇಧಿಸುವಂತೆ ಅಂತರ ಸಚಿವಾಲಯ ಕಮಿಟಿ 2019 ಜುಲೈನಲ್ಲಿ ಶಿಫಾರಸು ಮಾಡಿತು. 
    • ಬ್ಯಾಂಕುಗಳಲ್ಲಿ ಕ್ರಿಪ್ಟೋಕರೆನ್ಸಿ ವಹಿವಾಟು ನಿಷೇಧಿಸಿದ ಆರ್​ಬಿಐ ಕ್ರಮ ಅಸಾಂವಿಧಾನಿಕ ಎಂದ ಸುಪ್ರೀಂ ಕೋರ್ಟ್ (2020 ಮಾರ್ಚ್). 
    • ವರಿನ್ ಡಿಜಿಟಲ್ ಕರೆನ್ಸಿ ಸೃಷ್ಟಿಗೆ ಮಸೂದೆ ಮಂಡಿಸುವುದಾಗಿ 2021ರಲ್ಲಿ ಕೇಂದ್ರ ಘೋಷಣೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts