More

    ಸವಾಲಿಗೆ ಸೋಲದ ಸೇನಾನಿಗಳು: ಸಂಕಷ್ಟದ ಹೊತ್ತಿನಲ್ಲಿ ವೃತ್ತಿ ಧರ್ಮ ಮೆರೆದ ವೈದ್ಯರು..

    ಕರೊನಾ ಸೋಂಕಿತರ ದೊಡ್ಡ ಸಂಖ್ಯೆ, ತೀವ್ರ ಒತ್ತಡ, ಜೀವ ಉಳಿಸುವ ಹೋರಾಟ, ಸೌಲಭ್ಯಗಳ ಕೊರತೆ, ವಿಶ್ರಾಂತಿಯಿಲ್ಲದ ದುಡಿಮೆ- ಹೀಗೆ ಸಾಲು ಸಾಲು ಸವಾಲುಗಳನ್ನು ಎದುರಿಸುತ್ತಲೇ ಕರೊನಾ ಎರಡನೇ ಅಲೆ ವಿರುದ್ಧ ನಿರ್ಣಾಯಕ ಸಮರ ಸಾರಿದ್ದಾರೆ ವೈದ್ಯರು. ಪ್ರತಿದಿನ ಸೋಂಕಿಗೆ ಒಳಗಾಗುವವರಿಗಿಂತ ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗುತ್ತಿರುವವರ ಸಂಖ್ಯೆ ಜಾಸ್ತಿ ಇರುವುದಕ್ಕೆ ಕಾರಣ- ವೈದ್ಯಲೋಕದ ಶ್ರಮ. ಈ ನಡುವೆ ವೈದ್ಯರ ಮೇಲೆ ಹಲ್ಲೆ ನಡೆಸಿದ, ವಾಗ್ದಾಳಿ ಮಾಡಿದ ಪ್ರಕರಣಗಳು ಜೀವರಕ್ಷಕರ ಮನಸ್ಸನ್ನು ನೋಯಿಸಿವೆ. ಆದರೂ, ಧೃತಿಗೆಡದೆ, ಕರ್ತವ್ಯವಿಮುಖರಾಗದೆ ರೋಗಿಗಳ ಪ್ರಾಣ ಉಳಿಸಲು ಶ್ರಮಿಸುತ್ತಿದ್ದಾರೆ ವೈದ್ಯರು.

    | ರವೀಂದ್ರ ಎಸ್. ದೇಶಮುಖ್

    ನೋವು-ನಲಿವಿನ ಮಿಶ್ರಣ

    ಸವಾಲಿಗೆ ಸೋಲದ ಸೇನಾನಿಗಳು: ಸಂಕಷ್ಟದ ಹೊತ್ತಿನಲ್ಲಿ ವೃತ್ತಿ ಧರ್ಮ ಮೆರೆದ ವೈದ್ಯರು..ವೈದ್ಯನಾಗಿ ಸಮಾಧಾನ-ದುಃಖ ಎರಡೂ ಅನುಭವಿಸಿದ ಕಾಲಘಟ್ಟವಿದು. ಕಣ್ಣೆದುರೇ ಜನರು ಪ್ರಾಣ ಬಿಡುತ್ತಿರುವಾಗ, ಅವರನ್ನು ಉಳಿಸಿಕೊಳ್ಳಲು ಆಗಲಿಲ್ಲವಲ್ಲ ಎಂಬ ಕೊರಗು. ಸೂಕ್ತ ಚಿಕಿತ್ಸೆ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಸೋಂಕುಮುಕ್ತರಾಗಿ ಮನೆಗೆ ಮರಳಿದಾಗ ಧನ್ಯತೆಯ ಭಾವ. ನಮ್ಮದು 100 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ. ನಿಯಮಗಳ ಪ್ರಕಾರ ಸರ್ಕಾರಕ್ಕೆ 50 ಹಾಸಿಗೆ ಬಿಟ್ಟುಕೊಡಬೇಕಿತ್ತು. ಆದರೆ, ಪ್ರಕರಣಗಳ ಸಂಖ್ಯೆ ಹೆಚ್ಚಿದ್ದರಿಂದ ಎಲ್ಲ ಹಾಸಿಗೆಗಳು ಕೋವಿಡ್ ರೋಗಿಗಳಿಂದ ಭರ್ತಿಯಾದವು. ಆ ಬಳಿಕ ತಿಪಟೂರಿನಲ್ಲಿ ಏಪ್ರಿಲ್ 22ರಂದು ಮೊದಲ ಕೋವಿಡ್ ಕೇರ್ ಕೇಂದ್ರ ಆರಂಭಿಸಿದೆವು. ಮೊದಲು 40, ಬಳಿಕ 80 ಹಾಸಿಗೆಗಳಿಗೆ ಹೆಚ್ಚಿಸಿದೆವು. ಸೋಂಕಿತರು ಮತ್ತು ಅವರ ಸಂಬಂಧಿಕರು ತುಂಬ ಭಯಭೀತರಾಗಿದ್ದರು. ಅದೆಷ್ಟೋ ಜನ, ‘ದೊಡ್ಡ ಪಟ್ಟಣಕ್ಕೆ ಹೋಗೋದಿಲ್ಲ. ಸತ್ರೆ ಇಲ್ಲೇ ಸಾಯ್ತೀವಿ, ದಾಖಲು ಮಾಡಿಕೊಳ್ಳಿ’ ಎಂದು ದುಂಬಾಲು ಬಿದ್ದರು. ಹಾಗಾಗಿ, ಮೊದಲು ಅವರಿಗೆ ಸಂತೈಸಿ, ದಾಖಲು ಮಾಡಿಕೊಂಡು ಚಿಕಿತ್ಸೆ ಆರಂಭಿಸಿದೆ. ‘ಧೈರ್ಯಗೆಡಬೇಡಿ, ಸೋಂಕು ಬಂದ ಮಾತ್ರಕ್ಕೆ ಸಾಯುವುದಿಲ್ಲ’ ಎಂದು ಹೇಳಿ ಬೆನ್ನು ನೇವರಿಸಿದೆ.

    ಕರೊನಾ ರೋಗಿಗಳಿಗೆ ಬಹುತೇಕರು ದೂರದಿಂದಲೇ ಚಿಕಿತ್ಸೆ ನೀಡುತ್ತಾರೆ. ಆದರೆ, ಸುರಕ್ಷತಾ ಕ್ರಮ ಅನುಸರಿಸಿ ನಾನು ರೋಗಿಗಳ ಬಳಿ ಹೋದಾಗ ಅವರಿಗೆ ಆದ ಆನಂದ ಅಷ್ಟಿಷ್ಟಲ್ಲ. ಗುಣಮುಖರಾಗಿ ಮನೆಗೆ ತೆರಳುವ ವೇಳೆ ಬಂದು ಕಾಲಿಗೆ ನಮಸ್ಕರಿಸುತ್ತಾರೆ. ಹಾಗಂತ, ನಾವು ದೊಡ್ಡದೇನು ಮಾಡಿಲ್ಲ. ವೈದ್ಯಕೀಯ ಶಾಸ್ತ್ರ ಓದಿದ ಮೇಲೆ ಆ ಜ್ಞಾನವನ್ನು ರೋಗಿಗಳ ಪ್ರಾಣರಕ್ಷಣೆಗೆ ಪ್ರಾಮಾಣಿಕವಾಗಿ ವಿನಿಯೋಗಿಸಬೇಕು. ಅಷ್ಟನ್ನೇ ಮಾಡಿದೆ. ವೃತ್ತಿಧರ್ಮ ಪಾಲಿಸಿದ ಸಂತೃಪ್ತಿಗಿಂತ ಯಾವುದೂ ಮಿಗಿಲಲ್ಲ. ಇನ್ನು ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಉಚಿತ ಚಿಕಿತ್ಸೆಯ ಅಗತ್ಯವಿತ್ತು, ಅದನ್ನೂ ಮಾಡುತ್ತಿದ್ದೇನೆ. ಏಕೆಂದರೆ, ಇದು ದುಡ್ಡು ಮಾಡುವ ಸಮಯವಲ್ಲ, ಮಾನವೀಯ ಸೇವೆಯ ಅಗತ್ಯ ಹಿಂದೆಂದಿಗಿಂತಲೂ ಈಗ ಹೆಚ್ಚಿದೆ. ಕರೊನಾ ಬಂದಿದ್ದಕ್ಕೆ ಮನೆಯ ಸದಸ್ಯರನ್ನೇ ಆಚೆ ಹಾಕುವ ಇಲ್ಲವೆ ಒಬ್ಬಂಟಿಯಾಗಿಸುವ ಘಟನೆಗಳು ಹೆಚ್ಚುತ್ತಿದ್ದವು. ಇದನ್ನು ನೋಡಿ ತುಂಬ ದುಃಖವಾಗುತ್ತಿತ್ತು. ಜನರಲ್ಲಿ ಈ ಬಗ್ಗೆ ಸೂಕ್ತ ಅರಿವು ಮೂಡಿಸಿದ ಮೇಲೆ ಪರಿಸ್ಥಿತಿ ಕ್ರಮೇಣ ಬದಲಾಗುತ್ತಿದೆ. ಕರೊನಾ ವಿರುದ್ಧದ ಯುದ್ಧ ಇನ್ನೂ ಮುಗಿದಿಲ್ಲ; ಹಾಗಾಗಿ ವೈದ್ಯರ ಮೇಲೆ ತುಂಬ ದೊಡ್ಡ ಜವಾಬ್ದಾರಿ ಇದೆ, ಅಮೂಲ್ಯ ಜೀವಗಳನ್ನು ಉಳಿಸಬೇಕಿದೆ ಎಂಬ ಅರಿವಿನೊಂದಿಗೆ ಮುಂದೆ ಸಾಗಬೇಕಿದೆ.

    | ಡಾ. ಶ್ರೀಧರ್ ಕುಮಾರ್ ಹಾಸ್ಪಿಟಲ್ ಸಂಸ್ಥಾಪಕರು, ತಿಪಟೂರು

    (ಡಾ.ಶ್ರೀಧರ್ ಅವರು ತಿಪಟೂರು ತಾಲೂಕಿನ ಕರೊನಾ ರೋಗಿಗಳಿಗೆ ಆಂಬುಲೆನ್ಸ್, ಬೆಡ್ ಮತ್ತು ಚಿಕಿತ್ಸೆಗೆ ಶುಲ್ಕ ಪಡೆಯುತ್ತಿಲ್ಲ. ಆಹಾರವನ್ನೂ ಉಚಿತವಾಗಿ ನೀಡುತ್ತಿದ್ದಾರೆ.)

    ವೈದ್ಯರಿಗೆ ಅಭದ್ರತೆಯ ಭಾವ…

    ಸವಾಲಿಗೆ ಸೋಲದ ಸೇನಾನಿಗಳು: ಸಂಕಷ್ಟದ ಹೊತ್ತಿನಲ್ಲಿ ವೃತ್ತಿ ಧರ್ಮ ಮೆರೆದ ವೈದ್ಯರು..ಕಳೆದ ಒಂದೂವರೆ ವರ್ಷದ ಅವಧಿ ವೈದ್ಯರ ಪಾಲಿಗೆ ತುಂಬ ಕೆಟ್ಟ ಸಮಯ. ವೈದ್ಯರು ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರಯತ್ನ ಮಾಡಿಯೂ ಹಲವು ರೋಗಿಗಳನ್ನು ಉಳಿಸಿಕೊಳ್ಳಲಾಗುತ್ತಿಲ್ಲ ಎಂಬ ಬೇಸರವಿದೆ. ಮತ್ತೊಂದು ಅಪಾಯಕಾರಿ ಬೆಳವಣಿಗೆ ಇಲ್ಲಿ ಸಂಭವಿಸಿದೆ. ಕರೊನಾ ಹೊರತಾದ ರೋಗಿಗಳು ಮುಂಚೆಯೆಲ್ಲ ಸಮಸ್ಯೆ ಕಂಡುಬಂದ ತಕ್ಷಣ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದರು. ಹಾಗಾಗಿ ಆರಂಭಿಕ ಹಂತದಲ್ಲೇ ಕಾಯಿಲೆ ಗುರುತಿಸಿ, ಸಮರ್ಪಕ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿತ್ತು. ಈಗ ಹಾಗಾಗುತ್ತಿಲ್ಲ. ಕ್ಯಾನ್ಸರ್ ಇರುವವರು, ಅಪೆಂಡಿಕ್ಸ್ ಇರುವವರು ಪರಿಸ್ಥಿತಿ ವಿಕೋಪಕ್ಕೆ ಹೋದ ಮೇಲೆ ಆಸ್ಪತ್ರೆಗಳಿಗೆ ಬರುತ್ತಿದ್ದಾರೆ. ಇಂಥವರನ್ನು ಉಳಿಸಿಕೊಳ್ಳಲು ವೈದ್ಯರು ಪರದಾಡಬೇಕಿದೆ. ತುರ್ತು ಶಸ್ತ್ರಚಿಕಿತ್ಸೆಗಳೂ ಮುಂದಕ್ಕೆ ಹೋಗಿವೆ. ವೈದ್ಯರು ಅಭದ್ರತೆಯ ಭಾವವನ್ನೂ ಎದುರಿಸುತ್ತಿದ್ದಾರೆ. ಕುಟುಂಬದ ಸದಸ್ಯರಿಗೆಲ್ಲ ಸೋಂಕು ತಗುಲಿದರೆ ಹೇಗೆ ಎಂಬ ಭಯ ಖಿನ್ನತೆಗೂ ನೂಕುತ್ತಿದೆ. ಕರೊನಾ ಹೊರತಾದ ಚಿಕಿತ್ಸೆ ಕಡಿಮೆ ಆಗಿರುವುದರಿಂದ ಆಸ್ಪತ್ರೆಗಳ ನಿರ್ವಹಣೆ ಸವಾಲಾಗಿದೆ. ಎಷ್ಟೋ ಖಾಸಗಿ ಆಸ್ಪತ್ರೆಗಳು ವೈದ್ಯರಿಗೆ ಸಂಬಳ ನೀಡುತ್ತಿಲ್ಲ. ಆದಾಯ ಇಲ್ಲ. ವಾಸ್ತವದಲ್ಲಿ, ಕರೊನಾದಿಂದ ಮನುಕುಲವೇ ಸಂಕಷ್ಟ ಎದುರಿಸುತ್ತಿದ್ದು, ವೈದ್ಯರು, ಇತರ ವೈದ್ಯಕೀಯ ಸಿಬ್ಬಂದಿ ಇದರಿಂದ ಹೊರತಾಗಿಲ್ಲ. ಈ ಪಿಡುಗಿನ ವಿರುದ್ಧ ಹೋರಾಡುವುದೇ ಈಗಿನ ಅಗತ್ಯವಾಗಿದೆ.

    | ಡಾ. ನಾಗರಾಜ ಪಾಲನಕರ್ ಮಣಿಪಾಲ ಆಸ್ಪತ್ರೆ ಬೆಂಗಳೂರು

    ಸಂಬಂಧಿಗಳು ಜಗಳಕ್ಕೇ ಬರ್ತಾರೆ…

    ಸವಾಲಿಗೆ ಸೋಲದ ಸೇನಾನಿಗಳು: ಸಂಕಷ್ಟದ ಹೊತ್ತಿನಲ್ಲಿ ವೃತ್ತಿ ಧರ್ಮ ಮೆರೆದ ವೈದ್ಯರು..ಕರೊನಾದ ಮೊದಲ ಅಲೆಗಿಂತ, ಎರಡನೇ ಅಲೆಯಲ್ಲಿ ವೈದ್ಯರು ತುಂಬ ಒತ್ತಡ ಅನುಭವಿಸುತ್ತಿದ್ದಾರೆ. ರೋಗಿಗಳ ಸಂಖ್ಯೆ ಹೆಚ್ಚಿದೆ, ಚಿಕಿತ್ಸೆ ಮಾಡುತ್ತ ಮಾಡುತ್ತ ವೈದ್ಯರೇ ಸೋಂಕಿಗೆ ಒಳಗಾಗುತ್ತಿದ್ದಾರೆ. ನಮ್ಮ ಆಸ್ಪತ್ರೆಯ 24 ವೈದ್ಯರಿಗೆ ಸೋಂಕು ತಗುಲಿತ್ತು. ಸುದೈವವಶಾತ್, ಎಲ್ಲರೂ ಗುಣವಾಗಿದ್ದಾರೆ. ವೈದ್ಯರು ಸೋಂಕುಪೀಡಿತರಾದಾಗ ದೀರ್ಘಾವಧಿ ರಜೆ ನೀಡಬೇಕು. ಅದರಿಂದ ಇತರ ಸಹೋದ್ಯೋಗಿ ವೈದ್ಯರ ಮೇಲೆ ಒತ್ತಡ ಬೀಳುತ್ತದೆ. ರಾತ್ರಿ ಪಾಳಿಯಲ್ಲಿ ಕಾರ್ಯ ನಿರ್ವಹಿಸಿದವರೆ, ಬೆಳಗಿನ ಶಿಫ್ಟ್​ನಲ್ಲೂ ಕೆಲಸ ಮಾಡಬೇಕು. ಆರೇಳು ಗಂಟೆ ಪಿಪಿಇ ಕಿಟ್ ಧರಿಸಿ ಕಾರ್ಯ ನಿರ್ವಹಿಸುವಾಗ ಭಾರಿ ಕಿರಿಕಿರಿ. ನೀರು ಕೂಡ ಕುಡಿಯಲು ಆಗುವುದಿಲ್ಲ. ಹಗಲು-ರಾತ್ರಿ ಕಾರ್ಯ ನಿರ್ವಹಿಸುವುದರಿಂದ ನಿದ್ದೆ ಇಲ್ಲದೆ ಬಳಲುತ್ತಾರೆ. ಒಮ್ಮೊಮ್ಮೆ ವಿಚಿತ್ರ ಸಮಸ್ಯೆಗಳನ್ನೂ ಎದುರಿಸಬೇಕಾಗುತ್ತದೆ. ಕೆಲ ರೋಗಿಗಳು ಆಸ್ಪತ್ರೆಗೆ ದಾಖಲಾಗಿ 20 ದಿನ ಕಳೆದರೂ, ಕರೊನಾ ನೆಗೆಟಿವ್ ಆಗಿರುವುದಿಲ್ಲ. ಅವರನ್ನು ಮನೆಗೆ ಕಳಿಸಲು ಆಗುವುದಿಲ್ಲ. ಇತ್ತ ಹಾಸಿಗೆ ಖಾಲಿಯಾಗದೆ ಇತರ ರೋಗಿಗಳು ಆಸ್ಪತ್ರೆಗೆ ದಾಖಲಾಗುವಂತಿಲ್ಲ. ರೋಗಿಗಳು ಸ್ವಲ್ಪ ಚೇತರಿಸಿಕೊಂಡ ಬಳಿಕ ಡಿಸ್ಚಾರ್ಜ್ ಮಾಡಿದರೆ, ಕೆಲವರು ವೈದ್ಯರ ಜತೆಯೇ ಜಗಳಕ್ಕೆ ಬರುತ್ತಾರೆ. ಕೆಲವರಂತೂ, ಆಮ್ಲಜನಕ ಗಣನೀಯವಾಗಿ ಕುಸಿದ ಬಳಿಕ ರೋಗಿಯನ್ನು ಆಸ್ಪತ್ರೆಗೆ ದಾಖಲು ಮಾಡುತ್ತಾರೆ. ಪ್ರಾಣ ಹೋದರೆ, ‘ವೈದ್ಯರ ನಿರ್ಲಕ್ಷ್ಯ’ ಎಂದು ಗಲಾಟೆ ಮಾಡುತ್ತಾರೆ. ನಿಜವಾಗಿಯೂ ಯಾರೂ ಕೆಟ್ಟವರಲ್ಲ. ಈಗಿನ ಪರಿಸ್ಥಿತಿ ಮಾತ್ರ ಕೆಟ್ಟದ್ದು. ಅದರ ವಿರುದ್ಧ ಎಲ್ಲರೂ ಹೋರಾಡಬೇಕಿದೆ. ಸರ್ಕಾರ, ಸಮಾಜ ವೈದ್ಯ ಸಮುದಾಯದ ಬೆಂಬಲಕ್ಕೆ ನಿಲ್ಲಬೇಕಿದೆ.

    | ಡಾ. ಬಿ.ಎಸ್. ಶ್ರೀನಾಥ್ ತಜ್ಞ ವೈದ್ಯರು, ಶ್ರೀ ಶಂಕರ ಕ್ಯಾನ್ಸರ್ ಆಸ್ಪತ್ರೆ, ಬೆಂಗಳೂರು

    ಇದನ್ನೆಲ್ಲ ನಾವು ಲಾಭಕ್ಕಾಗಿ ಮಾಡ್ತಿಲ್ಲ

    ಸವಾಲಿಗೆ ಸೋಲದ ಸೇನಾನಿಗಳು: ಸಂಕಷ್ಟದ ಹೊತ್ತಿನಲ್ಲಿ ವೃತ್ತಿ ಧರ್ಮ ಮೆರೆದ ವೈದ್ಯರು..ನನ್ನದು ಯಾವ ತಪ್ಪಿಲ್ಲದಿದ್ದರೂ ಹಲ್ಲೆಗೊಳಗಾದೆ. ಈವರೆಗೆ ಪ್ರಮುಖ ಆರೋಪಿಯ ಬಂಧನವಾಗಿಲ್ಲ. ಒಂದು ವೇಳೆ ರಾಜಕೀಯ ಕಾರ್ಯಕರ್ತ ಅಥವಾ ಬೆಂಬಲಿಗರ ಮೇಲೆ ಹಲ್ಲೆ ನಡೆದಿದ್ದರೆ ಎಷ್ಟೊಂದು ರಾದ್ಧಾಂತ ನಡೆಯುತ್ತಿತ್ತು? ವೈದ್ಯರು ಎಂದಾಕ್ಷಣ ಅಷ್ಟು ಕಡೆಗಣನೆ ಏಕೆ? ಅದೆಷ್ಟೋ ಜನರ ಜೀವ ಉಳಿಸಿದ ನಾವು ಜೀವಭಯದಲ್ಲಿ ಬದುಕಬೇಕೆ? ಯಾರೋ ವೈದ್ಯರು ತಪು್ಪ ಮಾಡಿದ್ದಾರೆ ಎಂದೆನಿಸಿದರೆ ಕಾನೂನು ಹೋರಾಟ ಕೈಗೊಳ್ಳಲಿ. ಅದು ಬಿಟ್ಟು ಹೊಡೆಯುವುದು ಅನಾಗರಿಕತನ. ವೈದ್ಯರ ಮೇಲೆ ಹಲ್ಲೆ ಸಂಭವಿಸಿದಾಗ ಅಂಥ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆ ನೀಡಬೇಕೇ ಹೊರತು ಅದರಲ್ಲಿ ರಾಜಕೀಯ ಮಧ್ಯಪ್ರವೇಶಿಸಬಾರದು. ವೈದ್ಯರ ರಕ್ಷಣೆಗೆ ಸರ್ಕಾರ, ಸ್ಥಳೀಯಾಡಳಿತ ಮುಂದಾಗಬೇಕು. ಈ ಕುರಿತು ಕಾನೂನಿದ್ದರೂ, ಅದು ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ಏನೇ ಆಗಲಿ, ನಾವು ಎಥಿಕ್ಸ್ ಬಿಡಲಾಗುವುದಿಲ್ಲ. ವೈದ್ಯವೃತ್ತಿಯಿಂದ ದೂರ ಉಳಿಯುವುದೂ ಸಾಧ್ಯವಾಗುವುದಿಲ್ಲ. ಆದರೆ, ಇಂಥ ಪ್ರಕರಣಗಳಿಂದ ಯುವವೈದ್ಯರು ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ವೃತ್ತಿ ತೊರೆಯುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಲೋಪಗಳನ್ನು ತಿದ್ದಿಕೊಂಡು, ವೈದ್ಯರ ಮನೋಬಲ ಹೆಚ್ಚಿಸುವಂಥ ಕೆಲಸ ಆಗಬೇಕು. ಈಗಿನ ಸನ್ನಿವೇಶದಲ್ಲಿ ಶಕ್ತಿ ಮೀರಿ ಹೋರಾಡುತ್ತಿದ್ದೇವೆ. ಇದನ್ನೆಲ್ಲ ಲಾಭಕ್ಕಾಗಿ ಮಾಡುತ್ತಿಲ್ಲ. ಹೊಟ್ಟೆಪಾಡಿಗಾಗಿ ದಿನಕ್ಕೆ ಹತ್ತು ರೋಗಿಗಳನ್ನು ಉಪಚರಿಸಿದರೂ ಸಾಕು. ಆದರೆ, ಹಲ್ಲೆ ಘಟನೆಗಳಿಂದ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಾಗುತ್ತದೆ.

    | ಡಾ. ಜಯಪ್ರಕಾಶ್ ಖ್ಯಾತ ವೈದ್ಯರು, ಮಂಗಳೂರು

    ಡ್ಯೂಟಿ ಮಾಡಿದ್ದಕ್ಕೆ ಸಿಕ್ಕಿದ್ದು ಹೊಡೆತ!

    ಸವಾಲಿಗೆ ಸೋಲದ ಸೇನಾನಿಗಳು: ಸಂಕಷ್ಟದ ಹೊತ್ತಿನಲ್ಲಿ ವೃತ್ತಿ ಧರ್ಮ ಮೆರೆದ ವೈದ್ಯರು..ಕರೊನಾ ಆಗಿದ್ದ ಇಳಿ ವಯಸ್ಸಿನ ವ್ಯಕ್ತಿಯನ್ನು ಅವರ ಕುಟುಂಬದವರು ನಮ್ಮಆಸ್ಪತ್ರೆಗೆ ದಾಖಲಿಸಿದ್ದರು. ಅವರು ಬಹು ಅಂಗಾಂಗ ವೈಫಲ್ಯ, ಪಾರ್ಶ್ವವಾಯುವಿನಿಂದಲೂ ಬಳಲುತ್ತಿದ್ದರು. ಅವರು ಬದುಕುವುದು ಕಷ್ಟವಿತ್ತು. ಆದರೂ ಕುಟುಂಬದವರು ಬದುಕಿಸಲೇಬೇಕೆಂಬ ಹಠ ಹಿಡಿದಿದ್ದರು. ಅವರಿಗೆ ರೋಗಿಯ ಸ್ಥಿತಿ ಅರ್ಥ ಮಾಡಿಸಲು ಪ್ರಯತ್ನಪಟ್ಟೆವು. ಪ್ರಯೋಜನವಾಗಲಿಲ್ಲ. ಸರಿ, ಪ್ರಯತ್ನಪಡುವುದಾಗಿಯೂ ಬದುಕುತ್ತಾರೆಂದು ಗ್ಯಾರಂಟಿ ಕೊಡಲು ಆಗುವುದಿಲ್ಲವೆಂದೂ ಹೇಳಿದೆವು. ಆದರೆ ರೋಗಿಯ ಮಗನಿಗೆ ಅದನ್ನೆಲ್ಲ ಕೇಳುವಷ್ಟು ತಾಳ್ಮೆ ಇರಲಿಲ್ಲ. ಏಕಾಏಕಿ ನನ್ನ ಮೇಲೆ ಹಾಗೂ ಡ್ಯೂಟಿಯಲ್ಲಿದ್ದ ನರ್ಸ್ ಮೇಲೆ ಹಲ್ಲೆ ಮಾಡಲು ಮುಂದಾದ. ನನ್ನ ತಲೆಗೆ ಗಾಯವಾಗಿ ರಕ್ತ ಬಂತು. ಕರೊನಾ ಶುರುವಾದ ಬಳಿಕ ನಾನು ಒಂದು ದಿನವೂ ರಜೆ ಪಡೆಯದೆ ಕೆಲಸ ಮಾಡುತ್ತಿದ್ದೆ. ಆತನ ಈ ವರ್ತನೆ ನನ್ನ ಮನಸ್ಸಿಗೆ ಘಾಸಿ ಮಾಡಿತು. 30 ವರ್ಷದ ನನ್ನ ವೃತ್ತಿ ಬದುಕಿನಲ್ಲಿ ಇಂಥ ಘಟನೆ ಇದೇ ಮೊದಲು. ಇದರಿಂದ ನನ್ನ ಕುಟುಂಬಸ್ಥರೂ ಭಯಭೀತರಾಗಿ ಕೆಲಸ ಬಿಡುವಂತೆ ಹೇಳಿದರು. ಹಲ್ಲೆ ಮಾಡಿದ ವ್ಯಕ್ತಿಯ ಮೇಲೆ ಪೊಲೀಸರು ಎಫ್​ಐಆರ್ ಹಾಕಿ ಜೈಲಿಗೆ ಕಳಿಸಿದರೂ ಮಾರನೇ ದಿನವೇ ಆತ ಬೇಲ್ ಮೇಲೆ ಹೊರಗೆ ಬಂದ. ಇದು ನಿಜಕ್ಕೂ ವೈದ್ಯ ಕ್ಷೇತ್ರಕ್ಕೆ ಕೆಟ್ಟ ಸಂದೇಶ. ನಾನ್​ಬೇಲೆಬಲ್ ಪ್ರಕರಣವಾದರೂ ಆರೋಪಿ ಹೊರಗೆ ಬರಬಹುದು ಎಂದಾದರೆ ವೈದ್ಯರಿಗೆ ಯಾರು ರಕ್ಷಣೆ ಕೊಡಲು ಸಾಧ್ಯ? ವೈದ್ಯರ ಮೇಲೆ ಹಲ್ಲೆ ಮಾಡುವವರಿಗೆ ಕಠಿಣ ಶಿಕ್ಷೆಯಾಗಬೇಕು.

    | ಡಾ. ಪದ್ಮಕುಮಾರ್ ಎ.ವಿ. ಬನ್ನೇರುಘಟ್ಟ ಫೋರ್ಟಿಸ್ ಆಸ್ಪತ್ರೆ, ಬೆಂಗಳೂರು

    ಕರೊನಾಕ್ಕೆ ಬಲಿಯಾದ ವೈದ್ಯರು ಸಾವಿರಾರು!

    ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ವರದಿ ಪ್ರಕಾರ ದೇಶಾದ್ಯಂತ 15 ತಿಂಗಳಲ್ಲಿ 1,300ಕ್ಕೂ ಹೆಚ್ಚು ವೈದ್ಯರು ಕರೊನಾಗೆ ಬಲಿಯಾಗಿದ್ದಾರೆ. ಸೋಂಕಿನ ಮೊದಲ ಅಲೆಯಲ್ಲಿ 748, ಎರಡನೇ ಅಲೆಯಲ್ಲಿ ಈವರೆಗೆ 646 ವೈದ್ಯರು ಮೃತಪಟ್ಟಿದ್ದಾರೆ. ಕರ್ನಾಟಕದಲ್ಲಿ ಮೊದಲ ಅಲೆಯಲ್ಲಿ 61, ಎರಡನೇ ಅಲೆಯಲ್ಲಿ 9 ವೈದ್ಯರು ಸೇರಿ 70 ವೈದ್ಯರು ಪ್ರಾಣ ಕಳೆದುಕೊಂಡಿದ್ದಾರೆ.

    ಕುಟುಂಬ ಸದಸ್ಯರ ಮುಖ ನೋಡದೆ ತಿಂಗಳು ಕಳೆದಿದೆ!

    ರಾಜ್ಯದಲ್ಲಿ ಎಷ್ಟೋ ವೈದ್ಯರು ಹಲವು ಶಿಫ್ಟ್​ಗಳಲ್ಲಿ ನಿರಂತರವಾಗಿ ದುಡಿಯುತ್ತಿದ್ದಾರೆ. ವಾರದ ರಜೆ ಇಲ್ಲ. ಕೋವಿಡ್ ವಾರ್ಡ್​ನಲ್ಲಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಕುಟುಂಬ ಸದಸ್ಯರೊಡನೆ ಬೆರೆಯುವಂತಿಲ್ಲ. ಇದರಿಂದ ಸಾಕಷ್ಟು ವೈದ್ಯರು ತಂದೆ-ತಾಯಿ, ಹೆಂಡತಿ-ಮಕ್ಕಳ ಮುಖ ನೋಡದೆ ತಿಂಗಳುಗಟ್ಟಲೇ ಆಗಿವೆ. ಆಸ್ಪತ್ರೆಗಳಲ್ಲಿ ರೋಗಿಗಳ ನರಳಾಟ, ಆಕ್ರಂದನವನ್ನು ಪ್ರತಿದಿನ ನೋಡುತ್ತಿದ್ದರೂ, ಕುಗ್ಗದೆ ಮತ್ತೆ ಹೊಸ ಹುಮ್ಮಸ್ಸಿನಿಂದ ರೋಗಿಗಳ ಸೇವೆಗೆ ಅಣಿಯಾಗುತ್ತಿದ್ದಾರೆ. ರೋಗಿಯ ಪ್ರಾಣ ಉಳಿಸುವ ಏಕೈಕ ಗುರಿಯೊಂದಿಗೆ ಸಮಯದ ಚೌಕಟ್ಟು ಇಲ್ಲದೆ, ಕುಟುಂಬದವರಿಂದ ದೂರ ಉಳಿದು ಕೆಲಸ ಮಾಡುತ್ತಿದ್ದಾರೆ. ಪರಿಣಾಮ, ಕೆಲ ವೈದ್ಯರು ತೀವ್ರ ಒತ್ತಡವನ್ನೂ, ಖಿನ್ನತೆಯನ್ನೂ ಅನುಭವಿಸುತ್ತಿದ್ದಾರೆ.

    ಮನೋಬಲ ಕುಗ್ಗಿಸುವ ಹಲ್ಲೆ

    ರೋಗಿಗಳ ಸ್ಥಿತಿ ಗಂಭೀರವಾದಾಗ ಕುಟುಂಬದವರು ಅಥವಾ ಸಂಬಂಧಿಕರು ಆಸ್ಪತ್ರೆಗೆ ದಾಖಲಿಸುವುದುಂಟು. ಅಂಥ ಕೊನೆಯ ಕ್ಷಣದಲ್ಲಿ ಏನೂ ಮಾಡಲಾಗದಂಥ ಅಸಹಾಯಕತೆ ವೈದ್ಯರದ್ದು. ಆದರೂ, ತಮ್ಮ ಪ್ರಯತ್ನ ಮಾಡಿ, ಪರಿಸ್ಥಿತಿ ಬದಲಿಸಲು ಪ್ರಯತ್ನಿಸುತ್ತಾರೆ. ರೋಗಿಯ ಸಾವು ಸಂಭವಿಸಿದಾಗ ಕುಟುಂಬ ಸದಸ್ಯರು ನೈಜ ಪರಿಸ್ಥಿತಿ ಅರಿಯುವ ಬದಲು ಭಾವಾವೇಶದಲ್ಲಿ ವೈದ್ಯರ ಮೇಲೆ, ಇತರ ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸುತ್ತಾರೆ. ಇಂಥ ಘಟನೆಗಳು ವೈದ್ಯರ ಮನೋಬಲ, ಆತ್ಮವಿಶ್ವಾಸವನ್ನು ಕುಗ್ಗಿಸುತ್ತವೆ. ಯುವವೈದ್ಯರ ಪೈಕಿ ಬಹುತೇಕರು ‘ಕರೊನಾ ಡ್ಯೂಟಿ ಬೇಡ’ ಎಂದು ಹೇಳುತ್ತಿರುವುದು ಇದೇ ಕಾರಣಕ್ಕಾಗಿ. ಮಂಗಳೂರು, ಆನೆಗುಂದಿ, ಬಳ್ಳಾರಿ ಸೇರಿದಂತೆ ರಾಜ್ಯದ ವಿವಿಧೆಡೆ ವೈದ್ಯರ ಮೇಲೆ ಹಲ್ಲೆ ಪ್ರಕರಣಗಳು ನಡೆದಿದ್ದು, ಆರೋಪಿಗಳ ವಿರುದ್ಧ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ. ಆದರೆ, ವೈದ್ಯರ ಶ್ರಮ, ಸಮರ್ಪಣೆಯನ್ನು ಅರ್ಥ ಮಾಡಿಕೊಳ್ಳದೆ ದುಡುಕಿದರೆ, ಅದರಿಂದ ಕರೊನಾ ವಿರುದ್ಧದ ಹೋರಾ ಟಕ್ಕೆ ಭಾರಿ ಹಿನ್ನಡೆಯಾಗಬಹುದು ಎಂಬುದನ್ನು ಮರೆಯುವಂತಿಲ್ಲ.

    ಜನಸಾಮಾನ್ಯರ ಕರ್ತವ್ಯವೇನು?

    • ಈಗಿನ ಕ್ಲಿಷ್ಟ ಸನ್ನಿವೇಶ ಅರ್ಥ ಮಾಡಿಕೊಂಡು ವೈದ್ಯರೊಂದಿಗೆ ನಿಲ್ಲಬೇಕು.
    • ವೈದ್ಯರ, ಇತರ ವೈದ್ಯಕೀಯ ಸಿಬ್ಬಂದಿಯ ಮನೋಬಲ ಕುಗ್ಗದಂತೆ ನೋಡಿಕೊಳ್ಳಬೇಕು.
    • ತೀವ್ರ ಒತ್ತಡದ ಸ್ಥಿತಿಯನ್ನು ಸೃಷ್ಟಿಸಬಾರದು. ಯಾವುದೋ ತಪ್ಪುಗಳಿಗೆ ವೈದ್ಯರನ್ನು ದೂಷಿಸಬಾರದು.
    • ವೈದ್ಯರು ಮತ್ತು ಇತರ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸುವುದು, ಪ್ರಾಣಬೆದರಿಕೆ ಒಡ್ಡುವುದು ಕಾನೂನಿನ ಪ್ರಕಾರ ಅಪರಾಧ. ಇಂಥ ಕೃತ್ಯಗಳಿಗೆ ಶಿಕ್ಷೆ ಅನುಭವಿಸಬೇಕಾಗುತ್ತದೆ.

    ಸವಾಲಿಗೆ ಸೋಲದ ಸೇನಾನಿಗಳು: ಸಂಕಷ್ಟದ ಹೊತ್ತಿನಲ್ಲಿ ವೃತ್ತಿ ಧರ್ಮ ಮೆರೆದ ವೈದ್ಯರು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts