More

    ವೈದ್ಯಕೀಯ ವೃತ್ತಿ ವ್ಯಾಪಾರವಲ್ಲ

    ಹೃದ್ರೋಗ ತಜ್ಞರಾಗಿ, ವೈದ್ಯಕೀಯ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿರುವ ಡಾ.ಹೆಗ್ಡೆ ಭಾರತ ಸರ್ಕಾರದಿಂದ 2010ರಲ್ಲಿ ಪದ್ಮಭೂಷಣ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಹಿತ ಹಲವು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರು. 2021ನೇ ಸಾಲಿನಲ್ಲಿ ಪದ್ಮವಿಭೂಷಣ ಪುರಸ್ಕಾರಕ್ಕೆ ಆಯ್ಕೆಯಾಗಿರುವ ಡಾ.ಹೆಗ್ಡೆ ಜತೆ ‘ವಿಜಯವಾಣಿ’ ಮಾತುಕತೆ.

    ಮಂಗಳೂರು: ವೈದ್ಯಕೀಯ ವೃತ್ತಿ ವ್ಯಾಪಾರವಲ್ಲ. ಈ ವೃತ್ತಿಗೆ ಉನ್ನತ ಮೌಲ್ಯವಿದೆ. ಸಮಾಜದ ಎಲ್ಲ ವರ್ಗದ ಜನರ ಹಿತ ಬಯಸಿ ನಾನು ಶೃದ್ಧೆಯಿಂದ ಕೆಲಸ ಮಾಡುತ್ತಾ ಬಂದಿದ್ದೇನೆ. ವೈದ್ಯಕೀಯ ಕ್ಷೇತ್ರದ ಕೆಲವು ಕಟು ಸತ್ಯಗಳನ್ನು ಕೂಡ ಬಹಿರಂಗಪಡಿಸಿದ್ದೇನೆ. ಪ್ರಚಾರ ಬಯಸಿ ಕೆಲಸ ಮಾಡಿಲ್ಲ. ರಾಜಕೀಯದ ಹಿಂದೆಯೂ ಹೋಗಿಲ್ಲ. ಕೇಂದ್ರ ಸರ್ಕಾರ ಈಗ ಉನ್ನತ ನಾಗರಿಕ ಗೌರವಕ್ಕೆ ಪರಿಗಣಿಸಿರುವುದು ಸಂತಸ ತಂದಿದೆ.
    – ಹೀಗೆಂದವರು ಪದ್ಮವಿಭೂಷಣ ಪುರಸ್ಕಾರಕ್ಕೆ ಆಯ್ಕೆಯಾದ ಮಂಗಳೂರಿನ ಡಾ.ಬಿ.ಎಂ.ಹೆಗ್ಡೆ.

     ವೈದ್ಯಕೀಯ ಕ್ಷೇತ್ರದಲ್ಲಿ ಲಕ್ಷಾಂತರ ಮಂದಿ ಸೇವೆ ಸಲ್ಲಿಸಿದ್ದಾರೆ. ನೀವು ಹೇಗೆ ಭಿನ್ನ?
    ಅನವಶ್ಯಕ ಚಿಕಿತ್ಸೆ ಸಹಿತ ವೈದ್ಯಕೀಯ ಕ್ಷೇತ್ರದ ತಪ್ಪುಗಳನ್ನು ಹೇಳುತ್ತಾ ಬಂದಿದ್ದೇನೆ. ಕಟು ಸತ್ಯವನ್ನು ಕೆಲವರು ಒಪ್ಪಲು ಸಾಧ್ಯವಿಲ್ಲ. ಹಾಗಾಗಿ ವಿರೋಧವನ್ನು ಕೇಳಬೇಕಾಯಿತು. ಆದರೆ ಜನಹಿತದ ಕಾರ್ಯವನ್ನು ಸಮಾಜ ಮೆಚ್ಚುತ್ತದೆ. ವೈದ್ಯಕೀಯ ವೃತ್ತಿ ವ್ಯಾಪಾರವಲ್ಲ ಎಂದು ನಂಬಿದವನು ನಾನು.

    ನೀವು ಅಲೋಪತಿ ವೈದ್ಯರಾಗಿದ್ದರೂ ಇತರ ಚಿಕಿತ್ಸಾ ಪದ್ಧತಿಗಳ ಬಗ್ಗೆಯೂ ಅರಿವು ಮೂಡಿಸುತ್ತಿದ್ದೀರಿ?
    ಆಧುನಿಕ ವೈದ್ಯಕೀಯ ಪದ್ಧತಿ ಮಾತ್ರ ಎಲ್ಲ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಎನ್ನುವುದು ತಪ್ಪು ಕಲ್ಪನೆ. ಎಲ್ಲ ರೀತಿಯ ವೈದ್ಯಕೀಯ ಪದ್ಧತಿಗೂ ಅದರದ್ದೇ ಆದ ಮೌಲ್ಯ ಇದೆ. ನಮ್ಮ ಹಿರಿಯರ ಆಯುರ್ವೇದ, ಪ್ರಕೃತಿ ಚಿಕಿತ್ಸೆ, ಯೋಗ, ಧ್ಯಾನ, ಆಹಾರ ಕ್ರಮ ಎಲ್ಲವೂ ಆರೋಗ್ಯ ಕಾಪಾಡಲು ಪೂರಕ. ಇದನ್ನು ಜನತೆಗೆ ತಿಳಿಸುತ್ತಿದ್ದೇನೆ. ಇತ್ತೀಚಿನ ವರ್ಷಗಳಲ್ಲಿ ವೈದ್ಯಕೀಯ ವೃತ್ತಿ ಯಾಂತ್ರಿಕವಾಗುತ್ತಿದೆ. ಔಷಧಿ ನೀಡುವುದೇ ಎಲ್ಲ ಆರೋಗ್ಯ ಸಮಸ್ಯೆಗಳಿಗೆ ಪರಿಹಾರವಲ್ಲ. ರೋಗ ಭೀತಿ ಮೂಡಿಸುವ ಬದಲು ರೋಗಿಯ ಬಳಿ ಸಮಾಧಾನದಿಂದ ಮಾತನಾಡಿ ಧೈರ್ಯ ತುಂಬಿದರೆ ಸಾಕು. ಅವನ ಕಾಯಿಲೆ ಅರ್ಧ ವಾಸಿಯಾಗುತ್ತದೆ.

     ಕರೊನಾ ಸಂದರ್ಭ ಲಾಕ್‌ಡೌನ್ ಅಗತ್ಯ ಇರಲಿಲ್ಲ ಎಂದು ಕೆಲವು ವೈದ್ಯರು ಪ್ರತಿಪಾದಿಸಿದ್ದರು?
    ವ್ಯಾಪಾರಿ ಮನೋಭಾವನೆ ಇದ್ದವರ ಅಭಿಪ್ರಾಯ ಅದು. ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡ ಕಾರಣ ಕರೊನಾ ನಿಯಂತ್ರಣ ಸಾಧ್ಯವಾಯಿತು. ಮೋದಿ ಸರ್ಕಾರದ ಕಾರ್ಯನಿರ್ವಹಣೆ ಚೆನ್ನಾಗಿದೆ.

     ಲಸಿಕೆಗೂ ಕೆಲವರ ಅಪಸ್ವರ ಇದೆಯಲ್ಲ ?
    ಲಸಿಕೆ ಒಳ್ಳೆಯದು. ಬಹಳ ವರ್ಷಗಳ ಹಿಂದೆ ಸಿಡುಬು ರೋಗ ವ್ಯಾಪಕವಾಗಿತ್ತು. ಸಾಮೂಹಿಕ ಲಸಿಕೆ ಪರಿಣಾಮ ಸಿಡುಬು ಈಗ ಮಾಯವಾಗಿದೆ. ಹಾಗೆಂದು ಲಸಿಕೆ ಮಾತ್ರ ಪರಿಹಾರವಲ್ಲ. ದೇಹದಲ್ಲಿ ರೋಗ ನಿರೋಧಕ ಶಕ್ತಿಗೆ ಪೂರಕವಾಗಿ ಆಹಾರ ಸೇವಿಸುವುದು ಕೂಡ ರೂಢಿಯಾಗಬೇಕು.

     ದೇಶದಲ್ಲಿ ಇಂದಿಗೂ ಒಂದು ವರ್ಗದ ಜನ ಆರೋಗ್ಯ ಸೌಲಭ್ಯದಿಂದ ವಂಚಿತರಾಗಿದ್ದಾರೆ ?
    ಎಲ್ಲವನ್ನೂ ಸರ್ಕಾರ ಮಾಡಬೇಕು ಎನ್ನುವ ಮನೋಭಾವ ಇರಬಾರದು. ಸ್ವಾರ್ಥದಿಂದ ಕೆಲವು ವ್ಯವಸ್ಥೆ ಹಾಳಾಗಿದೆ. ಸರ್ಕಾರದ ಜತೆ ಖಾಸಗಿಯವರು ಕೈಜೋಡಿಸಿದರೆ ಸಮಸ್ಯೆ ಬಗೆಹರಿಸಬಹುದು. ಖಾಸಗಿ, ಸರ್ಕಾರಿ ಎನ್ನುವ ಸ್ಪರ್ಧೆ ಸರಿಯಲ್ಲ. ಎಲ್ಲರಿಗೂ ಜವಾಬ್ದಾರಿ ಇದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts