More

    ತುಂಡಾದ ಕಾಲಿನೊಂದಿಗೆ ಆಸ್ಪತ್ರೆಗೆ ಬಂದ ಗಾಯಾಳು; ಯಶಸ್ವಿಯಾಗಿ ಜೋಡಿಸಿದ ವೈದ್ಯರು..

    ಬೆಂಗಳೂರು: ವೋಲ್ವೋ ಬಸ್ ಡಿಕ್ಕಿ ಹೊಡೆದು ಎರಡು ತುಂಡಾಗಿ ದೇಹದಿಂದ ಬೇರ್ಪಟ್ಟಿದ್ದ ಕಾಲಿನೊಂದಿಗೆ ಆಸ್ಪತ್ರೆಗೆ ಆಗಮಿಸಿದ್ದ 30 ವರ್ಷದ ವ್ಯಕ್ತಿಯ ಕಾಲು ಮರುಜೋಡಣೆ ಮಾಡುವಲ್ಲಿ ಹಾಸ್ಮಟ್ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿದ್ದಾರೆ.

    ಯಾದಗಿರಿ ಮೂಲದ ದಯಾನಂದ ಎಂಬುವರು ಬೆಂಗಳೂರಿನಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದು, ಸೆ. 7ರಂದು ಬೆಳಗ್ಗೆ 10 ಗಂಟೆ ಸುಮಾರಿಗೆ ದ್ವಿಚಕ್ರ ವಾಹನದಲ್ಲಿ ಕೆಲಸಕ್ಕೆ ಹೋಗುತ್ತಿದ್ದ ವೇಳೆ ಮಾರತ್ತಹಳ್ಳಿ ಸೇತುವೆ ಬಳಿ ಪಕ್ಕದಲ್ಲಿ ಬಂದ ವೋಲ್ವೋ ಬಸ್‌ನ ಮುಂಭಾಗದ ತುದಿತಾಗಿ ಅವರ ಎಡಗಾಲು ತುಂಡಾಗಿತ್ತು. ಘಟನೆ ನಡೆದ ಒಂದು ಗಂಟೆಯೊಳಗೆ (11 ಗಂಟೆ ವೇಳೆಗೆ) ತುಂಡಾದ ಕಾಲನ್ನು ಐಸ್ ಪ್ಯಾಕ್‌ನಲ್ಲಿಟ್ಟುಕೊಂಡು ಆಸ್ಪತ್ರೆಗೆ ರೋಗಿಯನ್ನು ಕರೆತರಲಾಯಿತು. ಈ ವೇಳೆ ಹಾಸ್ಮಟ್ ಆಸ್ಪತ್ರೆಯ ಹಿರಿಯ ಪ್ಲಾಸ್ಟಿಕ್ ಸರ್ಜನ್ ಡಾ. ವಿಠ್ಠಲ್ ಮಳಮಂಡೆ ನೇತೃತ್ವದ ವೈದ್ಯರ ತಂಡ ರೋಗಿಯ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಿ ತುರ್ತು ಶಸ್ತ್ರಚಿಕಿತ್ಸೆ ನಡೆಸಿದರು.

    ಈ ಕುರಿತು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಅಜಿತ್ ಬೆನೆಡಿಕ್ಟ್ ರಾಯನ್, ಗಾಯಾಳು ಆಸ್ಪತ್ರೆಯ ತುರ್ತು ವಿಭಾಗಕ್ಕೆ ಬಂದಾಗ ಕಾಲು ತುಂಡರಿಸಿತ್ತು. ಆದರೆ ಸಮಯ ವ್ಯರ್ಥ ಮಾಡದೆ ಘಟನೆ ನಡೆದ ಒಂದು ಗಂಟೆಯೊಳಗೆ ತುಂಡಾಗಿದ್ದ ಕಾಲನ್ನು ಐಸ್ ಕವರ್‌ನಲ್ಲಿ ಜೋಪಾನವಾಗಿ ತಂದಿದ್ದರು. ಕೂಡಲೇ ರೋಗಿಯ ಪರಿಶೀಲನೆ ನಡೆಸಿದ ವೈದ್ಯರು ಶಸ್ತ್ರಚಿಕಿತ್ಸೆಗೆ ಮುಂದಾದರು. ತುಂಡರಿಸಿದ್ದ ಕಾಲನ್ನು ಸ್ವಚ್ಛವಾದ ನೀರಿನಲ್ಲಿ ತೊಳೆದು. ಮೊದಲಿಗೆ ಪ್ಲೇಟ್ ಮತ್ತು ಸ್ಕ್ರೂಗಳನ್ನು ಬಳಸಿ ಮೂಳೆಯನ್ನು ಜೋಡಿಸಲಾಯಿತು. ನಂತರ ಸೂಕ್ಷ್ಮದರ್ಶಕ ಬಳಸಿ ನರ, ರಕ್ತನಾಳ ಬಳಿಕ ಮಾಂಸಖಂಡವನ್ನು ಜೋಡಿಸಲಾಯಿತು. ಸತತ 10 ಗಂಟೆಗಳ ಕಾಲ ನಡೆದ ಶಸ್ತ್ರಚಿಕಿತ್ಸೆಗೆ ಅರಿವಳಿಕೆ ತಜ್ಞ ಡಾ. ವಿಕ್ರಂ ಅರಿವಳಿಕೆ ನೀಡಿದರು ಎಂದು ವಿವರಿಸಿದರು.

    ಗಾಯಾಳು ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು, ತನ್ನ ಸ್ವಂತ ಕಾಲಿನ ಮೇಲೆ ನಡೆಯಲು ಕೆಲ ಸಮಯ ಬೇಕಾಗುತ್ತದೆ. ಈ ಚಿಕಿತ್ಸೆಗೆ ಸುಮಾರು 3.5 ಲಕ್ಷ ರೂ. ಆಗಲಿದ್ದು, ಹಾಸ್ಮಟ್ ಆಕ್ಸಿಡೆಂಟ್ ಟ್ರಾಮಾ ಪೂವರ್ ಪೇಷೆಂಟ್ ಫೌಂಡೇಷನ್​ ವತಿಯಿಂದ ರಿಯಾಯಿತಿ ನೀಡಲಾಗುವುದು.

    | ಡಾ. ಅಜಿತ್ ಬೆನಡಿಕ್ಟ್ ರಾಯನ್, ವ್ಯವಸ್ಥಾಪಕ ನಿರ್ದೇಶಕ, ಹಾಸ್ಮಟ್ ಆಸ್ಪತ್ರೆ

    ಇದೀಗ ರೋಗಿ ಚೇತರಿಸಿಕೊಂಡಿದ್ದು, ಐಸಿಯುನಿಂದ ಸಾಮಾನ್ಯ ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ. ನಿಧಾನವಾಗಿ ಕಾಲಿನಲ್ಲಿ ಸ್ಪರ್ಶಜ್ಞಾನ ಬರುತ್ತಿದೆ. 3-4 ದಿನಗಳ ನಂತರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುವುದು. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಮೊದಲಿನಂತೆ ನಡೆದಾಡಲು ಇನ್ನೂ ಕೆಲ ಸಮಯ ಬೇಕಾಗುತ್ತದೆ ಎಂದು ಹೇಳಿದರು.

    ತಜ್ಞರ ತಂಡ: ಹಾಸ್ಮಟ್ ಆಸ್ಪತ್ರೆಯ ಹಿರಿಯ ಪ್ಲಾಸ್ಟಿಕ್ ಸರ್ಜನ್ ಮತ್ತು ರೀಕನ್‌ಸ್ಟ್ರಕ್ಷನ್ ತಜ್ಞ ಡಾ. ವಿಠ್ಠಲ್ ಮಳಮಂಡೆ ನೇತೃತ್ವದಲ್ಲಿ, ಮೈಕ್ರೋವಾಸ್ಕುಲರ್ ಸರ್ಜನ್ ಡಾ.ಎನ್. ಕೆ. ದೀಪು, ಆರ್ಥೋಪೆಡಿಕ್ ಸರ್ಜನ್ ಡಾ. ವಿಜಯ್ ಗಿರೀಶ್, ಅರಿವಳಿಕೆ ತಜ್ಞ ಡಾ. ವಿಕ್ರಂ ಹಾಗೂ ಶುಶ್ರೂಷಕ ಶಸ್ತ್ರಚಿಕಿತ್ಸಕರನ್ನು ಒಳಗೊಂಡ ತಂಡವು ಶಸ್ತ್ರಚಿಕಿತ್ಸೆ ನಡೆಸಿತು.

    ತುಂಡಾದ ಅಂಗಾಂಗ ರಕ್ಷಣೆ ಹೇಗೆ?

    ಕೈ, ಕಾಲು, ಬೆರಳು ಹೀಗೆ ದೇಹದ ಯಾವುದೇ ಅಂಗಾಂಗ ತುಂಡಾದರೆ ಅದನ್ನು ಬಹಳ ಜತನದಿಂದ ಸಂರಕ್ಷಣೆ ಮಾಡಿ ಘಟನೆ ನಡೆದ 6 ಗಂಟೆ ಒಳಗೆ ಆಸ್ಪತ್ರೆಗೆ ತೆರಳಬೇಕು. ತುಂಡಾದ ಭಾಗದಲ್ಲಿ ರಕ್ತಸ್ರಾವ ಆಗುವುದನ್ನು ತಡೆಯಲು ಗಟ್ಟಿಯಾಗಿ ಬಟ್ಟೆ ಕಟ್ಟಬೇಕು. ಇಲ್ಲವೆ ಹತ್ತಿರದ ಆಸ್ಪತ್ರೆಗೆ ತೆರಳಿ ಬ್ಯಾಂಡೇಜ್ ಮಾಡಿಸಬೇಕು. ತುಂಡಾಗಿ ದೇಹದಿಂದ ಬೇರ್ಪಟ್ಟ ಅಂಗಾಂಗವನ್ನು ಕೂಡಲೇ ಶುದ್ಧವಾದ ನೀರಿನಿಂದ ತೊಳೆಯಬೇಕು. ನಂತರ ಒಂದು ಶುಭ್ರವಾದ ಬಟ್ಟೆಯನ್ನು ನೀರಿನಲ್ಲಿ ಅಥವಾ ( ಸ್ಟೆರಾಯಿಲ್ ಗಾಝ್)ನಲ್ಲಿ ನೆನೆಸಿ ನೀರನ್ನು ಸಂಪೂರ್ಣ ಹಿಂಡಿ ನಂತರ ಆ ಬಟ್ಟೆಯಲ್ಲಿ ತೊಳೆದಿರುವ ಅಂಗಾಂಗವನ್ನು ಸುತ್ತಬೇಕು. ಅದನ್ನು ಒಂದು ಪ್ಲಾಸ್ಟಿಕ್ ಕವರ್​​ನಲ್ಲಿ ಹಾಕಿ ಆ ಕವರನ್ನು ಐಸ್ ಮೇಲಿಟ್ಟುಕೊಂಡು ಆಸ್ಪತ್ರೆಗೆ ತರಬೇಕು. ಹೀಗೆ ಮಾಡುವುದರಿಂದ ಅಂಗಾಂಗವನ್ನು ಮರುಜೋಡಿಸಲು ಅನುಕೂಲವಾಗಲಿದೆ ಎಂದು ಡಾ. ವಿಠಲ್ ಮಳಮಂಡೆ ಮಾಹಿತಿ ನೀಡಿದರು.

    ರಸ್ತೆಯಲ್ಲಿ 3 ಕಿ.ಮೀ. ಓಡಿ ಆಸ್ಪತ್ರೆ ತಲುಪಿ ಸರ್ಜರಿ ನಡೆಸಿದ ವೈದ್ಯ; ಕಾರಣ ಟ್ರಾಫಿಕ್​..

    ವಿಷ್ಣುವರ್ಧನ್​ ಜನ್ಮದಿನಂದು ‘ಯಜಮಾನೋತ್ಸವ’; ನಡೆಯಲಿದೆ ದಾಖಲೆಯ ಕಟೌಟ್​​ ಜಾತ್ರೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts