More

    ಸಂಚಲನ ಮೂಡಿಸಿದ ಕೆಆರ್‌ಎಸ್ ಪಕ್ಷದ ಬೈಕ್ ಜಾಥಾ, ಸಂಸ್ಥಾಪಕ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ನೇತೃತ್ವ, ಬಹಿರಂಗ ಭಾಷಣದಲ್ಲಿ ಹೇಳೀದ್ದೇನು ಗೊತ್ತಾ?

    ವಿಜಯಪುರ: ದಯವೇ ಧರ್ಮದ ಮೂಲವೆಂದು ಸಾರಿದ ಮಹಾತ್ಮ ಬಸವೇಶ್ವರರ ಜನ್ಮ ಭೂಮಿಯಲ್ಲಿಯೇ ತಾಂಡವವಾಡುತ್ತಿರುವ ಹೊಡಿ, ಬಡಿ, ಕೊಲ್ಲು ಸಂಸ್ಕೃತಿಯನ್ನು ಬುಡ ಸಮೇತ ಕಿತ್ತೆಸೆಯಬೇಕೆಂದು ಕರ್ನಾಟಕ ರಾಷ್ಟ್ರಸಮಿತಿ ಪಕ್ಷದ ಸಂಸ್ಥಾಪಕ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ಹೇಳಿದರು.

    ನಗರದ ಹೃದಯ ಭಾಗದಲ್ಲಿರುವ ಭಾರತ ರತ್ನ ಡಾ.ಬಾಬಾಸಾಹೇಬ ಅಂಬೇಡ್ಕರ್ ವೃತ್ತದಲ್ಲಿ ಶನಿವಾರ ಸಂಜೆ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಬಸವಣ್ಣನವರು ‘ದಯವಿಲ್ಲದ ಧರ್ಮ ಅದಾವದಯ್ಯ, ದಯಬೇಕು ಸಕಲ ಪ್ರಾಣಿಗಳಲ್ಲಿ, ದಯವೇ ಧರ್ಮದ ಮೂಲ’ ಎಂದು ಸಾರಿದ್ದರು. ಆದರೆ, ಇಲ್ಲಿನ ರಾಜಕೀಯ ವ್ಯವಸ್ಥೆ ಬಸವಣ್ಣನವರ ಆಶಯಕ್ಕೆ ತದ್ವಿರುದ್ಧವಾದ ವಾತಾವರಣ ನಿರ್ಮಿಸಿದೆ ಎಂದು ಖೇಡ ವ್ಯಕ್ತಪಡಿಸಿದರು.

    ಇಲ್ಲಿನ ರಾಜಕಾರಣಿಗಳು ತಮ್ಮ ತಮ್ಮ ಸ್ವಾರ್ಥಕ್ಕೋಸ್ಕರ ಅಮಾಯಕರ ಜೀವ ಹಿಂಡುತ್ತಿದ್ದಾರೆ. ಪರಮ ಭ್ರಷ್ಟ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಒಂದಾಗಿ ಜನರ ರಕ್ತ ಹೀರುತ್ತಿವೆ. ಕುಟುಂಬ ರಾಜಕಾರಣ ಹೆಚ್ಚಾಗಿದೆ ಎಂದರು.

    ಸಂಸದ ರಮೇಶ ಜಿಗಜಿಣಗಿ ಲೋಕಸಭೆ ಅಧಿವೇಶನದಲ್ಲಿ ಈವರೆಗೆ ಒಂದೇ ಒಂದು ಪ್ರಶ್ನೆ ಕೇಳಿಲ್ಲ, ಪ್ರಮುಖ ವಿಷಯವನ್ನಿಟ್ಟುಕೊಂಡು ಚರ್ಚೆ ನಡೆಸಿಲ್ಲ. ಅವರ ಘೋಷಿತ ಆಸ್ತಿಯೇ ಅವರು ಎಷ್ಟೊಂದು ಪ್ರಾಮಾಣಿಕರೆಂಬುದನ್ನು ಬಹಿರಂಗ ಪಡಿಸುತ್ತಿದೆ ಎಂದರು.

    ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಜೆಡಿಎಸ್‌ಗೆ ಹೋಗಿ ‘ದೋಸ್ತೊ ಮಿತ್ರೋ’ ಎನ್ನುತ್ತಾರೆ. ಬಿಜೆಪಿಗೆ ಬಂದಾಗ ‘ಮುಸ್ಲಿಂರ ಮತ ಬೇಡ’ ಎನ್ನುತ್ತಾರೆ. ಇವರು ಒಂದು ನಾಲಿಗೆ ಇರುವವರಾ? ಎಂದು ಕಿಡಿಕಾರಿದರು.

    ಸಚಿವ ಎಂ.ಬಿ. ಪಾಟೀಲ ಮನಸ್ಸು ಮಾಡಿದರೆ ಈ ಜಿಲ್ಲೆಗೊಂದು ಸರ್ಕಾರಿ ವೈದ್ಯಕೀಯ ಕಾಲೇಜ್ ಮಂಜೂರು ಮಾಡಿಸುವುದು ದೊಡ್ಡ ವಿಷಯವೇ ಅಲ್ಲ. ಆದರೆ, ಅವರದ್ದೊಂದು ವೈದ್ಯಕೀಯ ಕಾಲೇಜ್ ಇದೆ. ಪಕ್ಕದ ಬಾಗಲಕೋಟೆಯದ್ದು ಅದೇ ಸ್ಥಿತಿ. ಹೀಗಾಗಿ ಎರಡೂ ಜಿಲ್ಲೆಯ ರಾಜಕಾಣಿಗಳು ಸರ್ಕಾರಿ ವೈದ್ಯಕೀಯ ಕಾಲೇಜ್ ಮಂಜೂರಾಗದಂತೆ ನೋಡಿಕೊಳ್ಳುತ್ತಿದ್ದಾರೆ. ಇವರಿಗೆ ಜನರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ಹಣ ಹೆಂಡಕ್ಕೆ ಮತ ಮಾರಿಕೊಳ್ಳುವ ಜನಕ್ಕೆ ಇದೆಲ್ಲ ಗೊತ್ತಾಗದೇ ಇರಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು.

    ಮುಖಂಡ ಶಿವಾನಂದ ಯಡಹಳ್ಳಿ ಮಾತನಾಡಿ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಭ್ರಷ್ಟರ ಎದೆಯಲ್ಲಿ ನಡುಕ ಹುಟ್ಟಿಸುತ್ತಿದೆ. ಇದು ಸೇನಾನಿಗಳ ಪಕ್ಷ; ಗುಲಾಮರ ಪಕ್ಷವಲ್ಲ. ಹೀಗಾಗಿ ರಾಜಕೀಯ ನಾಯಕತ್ವ ಮೈಗೂಡಿಸಿಕೊಳ್ಳಲು, ಕುಟುಂಬ ರಾಜಕಾರಣದಿಂದ ಹೊರತಾದ ರಾಜಕೀಯ ವ್ಯವಸ್ಥೆ ಹುಟ್ಟು ಹಾಕಲು ಕೆಆರ್‌ಎಸ್ ಪಕ್ಷವನ್ನು ಬೆಂಬಲಿಸಿ ಎಂದರು.

    ರಾಜ್ಯಾದ್ಯಂತ ಪಕ್ಷ ಸಂಘಟನೆಗಾಗಿ ಬೈಕ್ ಜಾಥಾ ಹಮ್ಮಿಕೊಳ್ಳಲಾಗಿದೆ. ಈಗಾಗಲೇ 15 ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಾಗಿದ್ದು, ವಿಜಯಪುರ 16ನೇ ಜಿಲ್ಲೆ. ಒಟ್ಟು 3000 ಕಿಮೀ ಬೈಕ್ ಜಾಥಾ ನಡೆಯಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಜನರು ಬೆಂಬಲಿಸಬೇಕೆಂದು ಮನವಿ ಮಾಡಿದರು.
    ಪಕ್ಷದ ಪ್ರಮುಖರಾದ ವಿಜಯಕುಮಾರ ಯು.ಬಿ, ಅಶೋಕ ಜಾಧವ, ದೀಪಕ ಸಿ.ಎನ್, ರಘು ಜಾಣಗೆರೆ, ವಿ.ಜಿ. ಕುಂಬಾರ, ಎಲ್.ಜೀವನ್ ಮತ್ತಿತರರಿದ್ದರು. ಸಭೆಗೂ ಮುನ್ನ ನಗರೆದೆಲ್ಲೆಡೆ ಬೃಹತ್ ಬೈಕ್ ಜಾಥಾ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts