More

    ಮದ್ಯಕ್ಕಾಗಿ ಚಡಪಡಿಸಿ ಅಲ್ಕೋಹಾಲ್‌ಯುಕ್ತ ಔಷಧ ಕುಡಿದ ಯುವಕರಿಗೆ ಏನಾಯಿತು ಗೊತ್ತೆ?

    ಕೋಲ್ಕತಾ: ಹೆಂಡದ ಸಹವಾಸ, ಹೆಂಡತಿ- ಮಕ್ಕಳ ಉಪವಾಸ ಎನ್ನುವುದು ಬಹಳ ಹಳೆಯ ನಾಣ್ಣುಡಿ. ಆದರೆ ಲಾಕ್‌ಡೌನ್‌ನಿಂದಾಗಿ ಹೆಂಡ ಸಿಗದೇ ‘ಉಪವಾಸ’ ಬಿದ್ದಿರುವವರ ಪಾಡಂತೂ ಹೇಳತೀರದಾಗಿದೆ. ಜೀವವನ್ನಾದರೂ ಪಣಕ್ಕಿಟ್ಟು ಮದ್ಯವನ್ನು ಕುಡಿಯಲು ಹಾತೊರೆಯುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ.

    ಒಬ್ಬ ಮದ್ಯದ ಅಂಗಡಿ ಬಾಗಿಲು ಒಡೆದು ಒಳಹೋದರೆ, ಇನ್ನೊಬ್ಬರು ಗೋಡೆ ಒಡೆದು ಒಳಕ್ಕೆ ನುಸುಳಿ ಸಿಕ್ಕಿಬಿದ್ದಿದ್ದಾನೆ. ಮತ್ತೊಬ್ಬ ಮದ್ಯದ ಅಂಗಡಿಗೆ ಕನ್ನ ಹಾಕಿ ಒಳಹೋಗಿ ಅಲ್ಲಿರುವ ಲಕ್ಷಾಂತರ ಹಣವನ್ನೂ ಲೆಕ್ಕಿಸದೇ ಕೈಗೆ ಸಿಕ್ಕಷ್ಟು ಮದ್ಯದ ಬಾಟಲಿಯನ್ನು ಬಾಚಿಕೊಂಡಿದ್ದಾನೆ. ಏನೇನೋ ಹರಸಾಸಹ ಮಾಡಿ ಪೊಲೀಸರ ಅತಿಥಿಯಾದವರು ಇವರೆಲ್ಲಾ.

    ಆದರೆ ಕೋಲ್ಕತದ ಮಿಡ್ನಾಪುರ ಊರಲ್ಲೊಂದು ಇನ್ನೂ ವಿಚಿತ್ರ ಘಟನೆ ನಡೆದಿದೆ. ನಾಲ್ವರು ಹದಿಹರೆಯದ ಯುವಕರು ಮದ್ಯ ಸಿಗದೇ ರೋಸಿ ಹೋಗಿದ್ದಾರೆ. ಹೇಗಾದರೂ, ಎಲ್ಲಿಂದಾದರೂ ಮದ್ಯ ಏರಿಸುವ ಪ್ಲ್ಯಾನ್‌ ಮಾಡಿದ್ದಾರೆ.

    ಮದ್ಯದಂಗಡಿಯೊಳಕ್ಕೆ ಕನ್ನ ಹಾಕುವಷ್ಟು ಕೆಟ್ಟ ಧೈರ್ಯ ಇವರಿಗೆ ಇರಲಿಲ್ಲವೇನೋ. ಆದ್ದರಿಂದ ಕಳ್ಳತನ ಏನೂ ಮಾಡದೇ, ಒಳ್ಳೆಯತನದಲ್ಲಿಯೇ ಮದ್ಯ ಸೇವಿಸುವ ಬಗ್ಗೆ ತೀರ್ಮಾನ ಮಾಡಿದ ಈ ಯುವಕರು ಮಾಡಿದ್ದೇನು ಗೊತ್ತೆ?
    ಸೀದಾ ಸಮೀಪದ ಔಷಧ ಅಂಗಡಿಗೆ ಹೋಗಿರುವ ಈ ಯುವಕರು ಅಲ್ಲಿಂದ ಔಷಧವೊಂದನ್ನು ಖರೀದಿಸಿದ್ದಾರೆ. ಸಾಮಾನ್ಯವಾಗಿ ಬಹುತೇಕ ಔಷಧಗಳಲ್ಲಿ ಆಲ್ಕೋಹಾಲ್‌ ಅಂಶಗಳು ಇರುತ್ತವೆ. ಕೆಲವು ಔಷಧಗಳಲ್ಲಿ ಇವುಗಳ ಅಂಶ ಹೆಚ್ಚಿಗೆ ಇರುತ್ತದೆ. ಇದನ್ನು ತಿಳಿದುಕೊಂಡ ಈ ಯುವಕರು, ಆಲ್ಕೋಹಾಲ್‌ ಅಂಶ ಹೆಚ್ಚಿಗೆ ಇರುವ ಔಷಧಗಳನ್ನು ಖರೀದಿಸಿ ಮನೆಗೆ ಬಂದಿದ್ದಾರೆ.

    ಎಲ್ಲರೂ ಸೇರಿ ಆ ಔಷಧವನ್ನು ಸೇವಿಸಿದ್ದಾರೆ. ಔಷಧವೇನೋ ಆಲ್ಕೋಹಾಲ್‌ ಭರಿತವಾಗಿದ್ದು ನಿಜ. ಹಾಗೆಂದು ಅದು ಆಲ್ಕೋಹಾಲ್‌ ಆಗಲು ಅದೀತೆ? ಅದನ್ನು ಕುಡಿಯುತ್ತಿದ್ದಂತೆಯೇ ನಾಲ್ವರೂ ಮೂರ್ಛೆ ತಪ್ಪಿ ಬಿದ್ದಿದ್ದಾರೆ. ಸ್ವಲ್ಪ ಗಂಟೆಗಳ ಬಳಿಕ ಎದ್ದಾಗ ಎಲ್ಲರಲ್ಲಿಯೂ ವಿಪರೀತ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಇಬ್ಬರು ಯುವಕರಲ್ಲಿ ಸಹಿಸಲಾರದಷ್ಟು ಸಂಕಷ್ಟ ಆಗಿದೆ. ಒದ್ದಾಡುತ್ತಿದ್ದ ಅವರನ್ನು ಕುಟುಂಬಸ್ಥರು ಮತ್ತು ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದಾರೆ.

    ಇದ್ದಕ್ಕಿದ್ದಂತೆಯೇ ಹೀಗೇಗಾಯಿತು ಎಂದು ಕೇಳಿದಾಗ ಮೊದಮೊದಲು ವಿಷಯ ಬಾಯಿಬಿಡದ ನಾಲ್ವರು, ನಂತರ ಅನಿವಾರ್ಯವಾಗಿ ನಡೆದ ವಿಷಯಗಳನ್ನೆಲ್ಲಾ ತಿಳಿಸಿದ್ದಾರೆ. ಅದಾಗಲೇ ಭರತ್‌ ದಾಸ್‌ ಮತ್ತು ಪಂಕಜ್‌ ದಾಸ್‌ ಯುವಕರಿಬ್ಬರು ಚಿಕಿತ್ಸೆ ಫಲಿಸದೇ ಮೃತಪಟ್ಟರು. ಉಳಿದವರು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದು ಸ್ಥಿತಿ ಗಂಭೀರವಾಗಿದೆ.
    ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇವರ ಜತೆ ಇನ್ನೂ ಯಾರಾದರೂ ಇಂಥ ಕೃತ್ಯಕ್ಕೆ ಕೈಹಾಕಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

    ಲಾಕ್‌ಡೌನ್‌ ಕುರಿತು ದೇಶವನ್ನುದ್ದೇಶಿಸಿ ನಾಳೆ ಪ್ರಧಾನಿ ಭಾಷಣ: ಬೆಳಗ್ಗೆ 10 ಗಂಟೆಗೆ ಜನರ ಪ್ರಶ್ನೆಗಳಿಗೆ ಬೀಳಲಿದೆ ತೆರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts