More

    ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗೆ ಸೈಕ್ಲಿಂಗ್ ಕಾಶಿ ಸಜ್ಜು, ಸೈಕ್ಲಿಸ್ಟ್‌ಗಳ ತವರಲ್ಲಿ ಹೇಗಿದೆ ಗೊತ್ತಾ ಸಿದ್ಧತೆ?

    ವಿಜಯಪುರ: ರಾಷ್ಟ್ರ ಹಾಗೂ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ಸೈಕ್ಲಿಸ್ಟರ್‌ಗಳ ತವರು, ಸೈಕ್ಲಿಂಗ್ ಕಾಶಿ ಖ್ಯಾತಿಯ ಐತಿಹಾಸಿಕ ಗುಮ್ಮಟ ನಗರಿ 28ನೇ ರಾಷ್ಟ್ರೀಯ ರೋಡ್ ಸೈಕ್ಲಿಂಗ್ ಚಾಂಪಿಯನ್‌ಶಿಪ್‌ಗೆ ಸಜ್ಜಾಗಿದೆ !

    ಇದೇ ಜ. 9 ರಿಂದ 12ರವರೆಗೆ ನಡೆಯಲಿರುವ ಚಾಂಪಿಯನ್‌ಶಿಪ್‌ಗೆ ಈಗಾಗಲೇ ಸಕಲ ಸಿದ್ಧತೆ ಪೂರ್ಣಗೊಳಿಸಲಾಗಿದೆ. ಭಾರತೀಯ ಸೈಕ್ಲಿಂಗ್ ಫೆಡರೇಶನ್ ನವದೆಹಲಿ ಮಾನ್ಯತೆಯೊಂದಿಗೆ ಕರ್ನಾಟಕ ಅಮೇಚ್ಯೂರ್ ಸೈಕ್ಲಿಂಗ್ ಅಸೋಶಿಯೇಶನ್, ವಿಜಯಪುರ ಅಮೇಚ್ಯೂರ್ ಸೈಕ್ಲಿಂಗ್ ಅಸೋಶಿಯೇಶನ್ ಮತ್ತು ಜಿಲ್ಲಾ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿರುವ ಈ ಚಾಂಪಿಯನ್‌ಶಿಪ್ ಆಯೋಜಿಸಲಾಗಿದೆ ಎಂದು ಕರ್ನಾಟಕ ಅಮೇಚ್ಯೂರ್ ಸೈಕ್ಲಿಂಗ್ ಅಸೋಶಿಯೇಶನ್ ಅಧ್ಯಕ್ಷ ರಾಜು ಬಿರಾದಾರ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

    ವಿಜಯಪುರ-ಸೋಲಾಪುರ ರಾಷ್ಟ್ರೀಯ ಹೆದ್ದಾರಿ-52ರಲ್ಲಿ ಜ. 9 ರಿಂದ 12ರವರೆಗೆ ಪ್ರತಿ ದಿನ ಬೆಳಗ್ಗೆ 8 ರಿಂದ 6ರವರೆಗೆ ಸ್ಪರ್ಧೆಗಳು ನಡೆಯಲಿವೆ. ಈಗಾಗಲೇ ರಾಜ್ಯ ಹಾಗೂ ಅಂತರಾಜ್ಯಗಳಿಂದ ಸಾಕಷ್ಟು ಸೈಕ್ಲಿಸ್ಟ್‌ಗಳು ಹೆಸರು ನೋಂದಾಯಿಸಿದ್ದಾರೆ. ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿದ ಸೈಕ್ಲಿಸ್ಟ್‌ಗಳು ಈ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುತ್ತಿರುವುದು ವಿಶೇಷ. ಈವರೆಗೆ 850 ಸೈಕ್ಲಿಸ್ಟ್‌ಗಳು ಹೆಸರು ನೋಂದಾಯಿಸಿದ್ದು, ಆಗಲೇ ಗುಮ್ಮಟ ನಗರಿಯಲ್ಲಿ ಬೀಡು ಬಿಟ್ಟಿರುವ ಕೆಲವರು ತರಬೇತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಗುಮ್ಮಟ ನಗರಿಯಲ್ಲಿ 3ನೇ ಬಾರಿಗೆ ಈ ಚಾಂಪಿಯನ್ ಶಿಪ್ ನಡೆಯುತ್ತಿದ್ದು, ಈಗಾಗಲೇ 1998 ಹಾಗೂ 2006ರಲ್ಲಿ ಯಶಸ್ವಿಯಾಗಿ ನಿರ್ವಹಿಸಲಾಗಿದೆ. ಇದೀಗ ಮೂರನೇ ಬಾರಿಗೆ ಯಶಸ್ವಿಯಾಗಿ ಆಯೋಜನೆ ಮಾಡಲಾಗುತ್ತಿದ್ದು ಸಾಕಷ್ಟು ಸಹಾಯ-ಸಹಕಾರ ಮತ್ತು ಪ್ರೋತ್ಸಾಹ ಸಿಕ್ಕಿದೆ ಎನ್ನುತ್ತಾರೆ ರಾಜು ಬಿರಾದಾರ.

    ರಾಜ್ಯದ ಫೆವರೆಟ್ ಹಾಗೂ ಟೈಮ್ ಟ್ರೈಲ್ ಕಿಂಗ್ ಎಂದೇ ಖ್ಯಾತಿ ಪಡೆದ ಬೆಂಗಳೂರಿನ ನವೀನ್ ಜಾನ್ ಈ ಚಾಂಪಿಯನ್‌ಶಿಪ್‌ನ ಪ್ರಮುಖ ಆಕರ್ಷಣೆಯಾಗಲಿದ್ದಾರೆ. ರಾಷ್ಟ್ರ ಬೇರೆ ಬೇರೆ ರಾಜ್ಯ ಮತ್ತು ಸರ್ವಿಸಿಸ್‌ಗಳಿಂದ ಒಟ್ಟು 33 ತಂಡಗಳಿಂದ ರಾಷ್ಟ್ರ ಹಾಗೂ ಅಂತರ ರಾಷ್ಟ್ರೀಯ ಖ್ಯಾತಿ ಗಳಿಸಿದ 705 ಸ್ಪರ್ಧಾಳುಗಳು, 113 ತಂಡ ವ್ಯವಸ್ಥಾಪಕರು-ತರಬೇತುದಾರರು ಮತ್ತು 25 ಸಿಎಫ್‌ಐ ಕ್ರೀಡಾಧಿಕಾರಿಗಳು ಭಾಗವಹಿಸಲಿದ್ದಾರೆ. ನಾಲ್ಕು ದಿನಗಳ ಕಾಲ ನಡೆಯಲಿರುವ ಈ ಚಾಂಪಿಯನ್‌ಶಿಪ್ನ್‌ಲ್ಲಿ ಬಾಲಕರಿಗಾಗಿ 5 ವಯೋಮಾನದಲ್ಲಿ ಮತ್ತು ಬಾಲಕಿಯರಿಗಾಗಿ 4 ವಯೋಮಾನದಲ್ಲಿ ಸೇರಿ ಒಟ್ಟು 25 ಸ್ಪರ್ಧೆಗಳು ಜರುಗಲಿವೆ. ಇದರಲ್ಲಿ ವೈಯಕ್ತಿಕ ಟೈಮ್ ಟ್ರೈಲ್, ಮಾಸ್ ಸ್ಟಾರ್ಟ್, ಮಿಕ್ಸಡ್ ರಿಲೇ, ಟೀಮ್ ಟೈಮ್ ಟ್ರೈಲ್ ಮತ್ತು ಕ್ರೈಟೇರಿಯಂ ರೇಸ್ ಎಂಬ ಬೇರೆ ಬೇರೆ ಹೆಸರಿನ ಸ್ಪರ್ಧೆಗಳು ನಡೆಯಲಿವೆ ಎಂದು ಬಿರಾದಾರ ತಿಳಿಸಿದರು.

    ಏಶಿಯನ್ ಸೈಕ್ಲಿಂಗ್ ಕಾನ್ಫೆಡರೇಶನ್ನಿನ ಮಹಾ ಕಾರ್ಯದರ್ಶಿ ಓಂಕಾರ ಸಿಂಗ್ ಮತ್ತು ಭಾರತೀಯ ಸೈಕ್ಲಿಂಗ್ ಫೆಡರೇಶನ್ನಿನ ಮಹಾ ಕಾರ್ಯದರ್ಶಿ ಮನೀಂದ್ ಸಿಂಗ್ ಪ್ರತ್ಯಕ್ಷ ಸಾಕ್ಷಿಯಾಗಲಿದ್ದಾರೆ. ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಉದ್ಘಾಟಿಸಿದರೆ, ಸಚಿವ ಶಿವಾನಂದ ಪಾಟೀಲ ಜ್ಯೋತಿ ಬೆಳಗಿಸುವರು. ಸಂಸದ ರಮೇಶ ಜಿಗಿಜಿಣಗಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳುವರು. ಅಧ್ಯಕ್ಷರನ್ನಾಗಿ ಉದ್ಯಮಿ ಪ್ರಕಾಶ ಶೆಟ್ಟಿ ಅವರನ್ನು ನೇಮಕ ಮಾಡಲಾಗಿದೆ. ರಾಜು ಬಿಜ್ಜರಗಿ ಸೇರಿದಂತೆ ಅನೇಕ ಗಣ್ಯರು ಸಹಾಯ-ಸಹಕಾರ ನೀಡುತ್ತಿದ್ದಾರೆ. ಊಟ, ವಸತಿ ವ್ಯವಸ್ಥೆಗೆ ಅನೇಕರು ಪ್ರಾಯೋಜಕತ್ವ ಪಡೆದಿದ್ದಾರೆ ಎಂದರು.

    ಅಸೋಸಿಯೇಶನ್‌ನ ಪ್ರಮುಖರಾದ ಪ್ರದೀಪ ರಾಠೋಡ, ಶ್ರೀಕಾಂತ ಮಠ, ಸಂಜೀವ ಪಡತಾರೆ, ಜಿ.ಎಂ. ಪತ್ತಾರ, ರಮೇಶ ಕಾಕ್ಲರ್, ರಮೇಶ ಪಾಟೀಲ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts