More

    ಗಂಗಾಜಲ, ಪೂಜಾ ಸಾಮಗ್ರಿ ಮೇಲೆ ಯಾವುದೇ ಜಿಎಸ್​ಟಿ ಇಲ್ಲ; ಸಿಬಿಐಸಿ

    ನವದೆಹಲಿ: ಕೇಂದ್ರ ಹಣಕಾಸು ಸಚಿವಾಲಯ ಕಂದಾಯ ವಿಭಾಗ, ಗಂಗಾಜಲ, ಪೂಜಾ ಸಾಮಗ್ರಿಗಳಿಗೆ ಜಿಎಸ್​ಟಿ ವಿನಾಯಿತಿ ಪಟ್ಟಿಯಲ್ಲಿವೆ ಎಂದು ಹೇಳಿದೆ. ಗಂಗಾ ಜಲ, ಕುಂಕುಮ, ಸಿಂದೂರ, ಕೈಬಳೆ ಇತ್ಯಾದಿಗಳಿಗೆ ಜಿಎಸ್​ಟಿ ತೆರಿಗೆ ಇರುವುದಿಲ್ಲ ಎಂದು ಸಿಬಿಐಸಿ (CBIC- central board of indirect taxes and customs)  ಹೇಳಿದೆ.

    2017ರಲ್ಲಿ ನಡೆದ 14 ಮತ್ತು 15ನೇ ಜಿಎಸ್​ಟಿ ಮಂಡಳಿ ಸಭೆಯಲ್ಲಿ ಪೂಜಾ ಸಾಮಗ್ರಿಗಳಿಗೆ ಜಿಎಸ್​ಟಿ ವಿಧಿಸುವುದರ ಸಂಬಂಧ ವಿಸ್ತೃತವಾಗಿ ಚರ್ಚಿಸಲಾಗಿದೆ. ಇವುಗಳನ್ನು ಜಿಎಸ್​ಟಿ ವಿನಾಯಿತಿ ಪಟ್ಟಿಗೆ ಸೇರಿಸಲು ನಿರ್ಧರಿಸಲಾಗಿತ್ತು. ಜಿಎಸ್​ಟಿ ಜಾರಿಗೆ ಬಂದಾಗಿನಿಂದಲೂ ಈ ಐಟಂಗಳಿಗೆ ಜಿಎಸ್​ಟಿ ಇಲ್ಲ,’ ಎಂದು ಸಿಬಿಐಸಿ ಹೇಳಿದೆ.

    ಗಂಗಾಜಲಕ್ಕೆ 18% ಜಿಎಸ್‌ಟಿ ವಿಧಿಸುವ ಸರ್ಕಾರ ಎಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾಡಿದ ವಿವಾದಾತ್ಮಕ ಟ್ವೀಟ್ ಅನ್ನು ಗಮನಿಸಿದ ನಂತರ  ಸಿಬಿಐಸಿ ಈ ಸ್ಪಷ್ಟೀಕರಣವನ್ನು ನೀಡಿದೆ.
    ಖರ್ಗೆ ಅವರು ನೀಡಿರುವ ಟ್ವೀಟ್‌ ಪ್ರಕಾರ, “Mr. ಮೋದಿಯವರೇ, ಒಬ್ಬ ಸಾಮಾನ್ಯ ಭಾರತೀಯನಿಗೆ ಮೋಕ್ಷವನ್ನು ಒದಗಿಸುವ ಮಾತೆ ಗಂಗಾಮಾತೆಯ ಮಹತ್ವವು ಮುಖ್ಯವಾಗಿದೆ. ನಿಮ್ಮ ಸರ್ಕಾರವು ಪವಿತ್ರ ಗಂಗಾ ಜಲದ ಮೇಲೆಯೇ 18% ಜಿಎಸ್‌ಟಿ ವಿಧಿಸಿದೆ. ತಮ್ಮ ಮನೆಗಳಲ್ಲಿ ಗಂಗಾಜಲವನ್ನು ಆರ್ಡರ್ ಮಾಡುವವರಿಗೆ ಏನು ಹೊರೆ ಎಂದು ಒಮ್ಮೆಯೂ ಯೋಚಿಸಲಿಲ್ಲ. ಇದು ನಿಮ್ಮ ಸರ್ಕಾರದ ಲೂಟಿ ಮತ್ತು ಬೂಟಾಟಿಕೆಯ ಪರಮಾವಧಿಯಾಗಿದೆ ಎಂದು ಟ್ವೀಟ್​​​ ಮಾಡಿದ್ದರು.
    ಇದನ್ನು ನಿರಾಕರಿಸಿದ ಸಿಬಿಐಸಿ ಟ್ವೀಟ್ ಮಾಡಿದ್ದು, “ದೇಶದಾದ್ಯಂತದ ಗಂಗಾಜಲವನ್ನು ಪೂಜೆಯಲ್ಲಿ ಬಳಸುತ್ತಾರೆ. ಪೂಜಾ ಸಾಮಾಗ್ರಿಯನ್ನು ಜಿಎಸ್‌ಟಿ ಅಡಿಯಲ್ಲಿ ವಿನಾಯಿತಿ ನೀಡಲಾಗಿದೆ. 18/19 ಮೇ 2017 ಮತ್ತು 3ನೇ ಜೂನ್ 2017 ರಂದು ನಡೆದ ಜಿಎಸ್‌ಟಿ ಕೌನ್ಸಿಲ್‌ನ 14 ಮತ್ತು 15 ನೇ ಸಭೆಗಳಲ್ಲಿ ಪೂಜಾ ಸಾಮಾಗ್ರಿ ಮೇಲಿನ ಜಿಎಸ್‌ಟಿಯನ್ನು ವಿವರವಾಗಿ ಚರ್ಚಿಸಲಾಗಿದೆ ಮತ್ತು ಅವುಗಳನ್ನು ವಿನಾಯಿತಿ ಪಟ್ಟಿಯಲ್ಲಿ ಇರಿಸಲು ನಿರ್ಧರಿಸಿದೆ. ಆದ್ದರಿಂದ, ಜಿಎಸ್‌ಟಿ ಜಾರಿಯಾದಾಗಿನಿಂದ ಈ ಎಲ್ಲಾ ವಸ್ತುಗಳಿಗೆ ವಿನಾಯಿತಿ ನೀಡಲಾಗಿದೆ ಎಂದು ತಿಳಿಸಿದೆ.

    ಈ ಪೂಜಾ ಸಾಮಗ್ರಿಗಳಿಗೆ ಜಿಎಸ್​ಟಿ ಇಲ್ಲ: ಕುಂಕುಮ, ಸಿಂದೂರ, ಗಾಜಿನ ಕೈಬಳೆ, ಪ್ಲಾಸ್ಟಿಕ್ ಕೈಬಳೆ, ಕಾಡಿಗೆ, ಅಗರಬತ್ತಿ, ಹಣೆಬೊಟ್ಟು, ಗೋರಂಟಿ, ವಿಭೂತಿ, ಕರ್ಪೂರ ಇತ್ಯಾದಿ ಎಲ್ಲಾ ರೀತಿಯ ಪೂಜಾ ಸಾಮಗ್ರಿಗಳಿಗೆ ಜಿಎಸ್​ಟಿ ಇರುವುದಿಲ್ಲ.ಹಣ್ಣು, ತರಕಾರಿ, ಇತರ ಹಲವು ಅವಶ್ಯಕ ವಸ್ತುಗಳಿಗೂ ಜಿಎಸ್​ಟಿ ಇಲ್ಲ.

    ಭಾರತದಲ್ಲಿ ಹೆಚ್ಚುತ್ತಿರುವ ಜಿಎಸ್​ಟಿ ಸಂಗ್ರಹ : ಈ ಹಣಕಾಸು ವರ್ಷದಲ್ಲಿ ಈವರೆಗೆ ಆಗಿರುವ ಸರಾಸರಿ ಮಾಸಿಕ ಜಿಎಸ್​ಟಿ ಸಂಗ್ರಹ 1.65 ಲಕ್ಷಕೋಟಿ ರೂ ಇದೆ. ಹಿಂದಿನ ಹಣಕಾಸು ವರ್ಷದಲ್ಲಿ (2022-23) ಸರಾಸರಿ ಮಾಸಿಕ ಜಿಎಸ್​ಟಿ ಸಂಗ್ರಹ 1.51 ಲಕ್ಷ ಕೋಟಿ ರೂ ಇತ್ತು.

    ಜಿಎಸ್​ಟಿ ಸಂಗ್ರಹದಲ್ಲಿ ಮಹಾರಾಷ್ಟ್ರ ರಾಜ್ಯ ನಂಬರ್ ಒನ್ ಆಗಿದೆ. ವಾಣಿಜ್ಯ ನಗರಿ ಮುಂಬೈನಿಂದ ಅತಿಹೆಚ್ಚು ಜಿಎಸ್​ಟಿ ಸಂಗ್ರಹ ಆಗುತ್ತದೆ. ಮಹಾರಾಷ್ಟ್ರದ ಬಳಿಕ ಕರ್ನಾಟಕದಲ್ಲಿ ಅತಿಹೆಚ್ಚು ಜಿಎಸ್​ಟಿ ಸಂಗ್ರಹ ಆಗುವುದು. ಬಹಳಷ್ಟು ಸ್ಟಾರ್ಟಪ್​ಗಳು ಮತ್ತು ಉದ್ದಿಮೆಗಳು ಬೆಂಗಳೂರಿನಲ್ಲಿವೆ. ಹೀಗಾಗಿ, ಕರ್ನಾಟಕದಲ್ಲಿ ಜಿಎಸ್​ಟಿ ಕಲೆಕ್ಷನ್ಸ್ ಬಹಳ ಅಧಿಕ ಇವೆ. ತಮಿಳುನಾಡು, ಗುಜರಾತ್ ರಾಜ್ಯಗಳಲ್ಲೂ ಹೆಚ್ಚಿನ ಜಿಎಸ್​ಟಿ ಸಂಗ್ರಹ ಆಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts