More

    ನಿತ್ಯ ಒಂದು ಗಂಟೆ ವ್ಯಾಯಾಮ ಮಾಡಿ

    ಹುಬ್ಬಳ್ಳಿ: ಪೊಲೀಸರ ಜೀವನ ಚೆನ್ನಾಗಿದ್ದರೆ ಸಮಾಜ ಚೆನ್ನಾಗಿರುತ್ತದೆ. ಹಾಗಾಗಿ, ದಿನಕ್ಕೆ ಕನಿಷ್ಠ 1 ಗಂಟೆ ವ್ಯಾಯಾಮ ಮಾಡಿ, ಇಲ್ಲವೇ ಯಾವುದಾದರೊಂದು ಕ್ರೀಡೆಯ ಹವ್ಯಾಸ ಬೆಳೆಸಿಕೊಳ್ಳಿ. ಆ ಮೂಲಕ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಿ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಪೊಲೀಸರಿಗೆ ಸಲಹೆ ನೀಡಿದರು.

    ಹುಬ್ಬಳ್ಳಿ- ಧಾರವಾಡ ಪೊಲೀಸ್ ಕಮಿಷನರೇಟ್ ವತಿಯಿಂದ ಗೋಕುಲ ರಸ್ತೆಯ ಹೊಸ ಸಿಎಆರ್ ಕವಾಯತು ಮೈದಾನದಲ್ಲಿ ಆಯೋಜಿಸಿರುವ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ತಮ್ಮ ಸ್ವಾರ್ಥವನ್ನು ಬಲಿಕೊಟ್ಟು ಸಮಾಜದ ರಕ್ಷಣೆಗೆ ನಿಲ್ಲುವ ಪೊಲೀಸರ ಕೆಲಸ ನಿಜಕ್ಕೂ ಶ್ಲಾಘನೀಯ. ಕರೊನಾ ಸಂದರ್ಭದಲ್ಲಿ ಪೊಲೀಸರ ಕೆಲಸ ಮರೆಯುವಂತಿಲ್ಲ ಎಂದರು.

    ಕರೊನಾ ಬಂದಮೇಲೆ ಎಲ್ಲರಿಗೂ ಆರೋಗ್ಯ ಕಾಳಜಿ ಹೆಚ್ಚಾಗಿದೆ. ಕರೊನಾ ಜೀವನದ ಮೌಲ್ಯ, ಸಂಬಂಧಗಳ ಮೌಲ್ಯದ ಅರಿವಾಗಿದೆ. ಆರೋಗ್ಯದ ಮಹತ್ವ ತಿಳಿಸಿಕೊಟ್ಟಿದೆ ಎಂದರು.

    ಪೊಲೀಸ್ ಆಯುಕ್ತ ಲಾಭೂರಾಮ ಮಾತನಾಡಿ, ದೈಹಿಕವಾಗಿ ಸದೃಢರಾಗಿದ್ದರೆ ಕೆಲಸ ಮಾಡಲು ಹುಮ್ಮಸ್ಸು ಬರುತ್ತದೆ. ದಕ್ಷತೆಯಿಂದ ಕರ್ತವ್ಯ ನಿರ್ವಹಿಸಲು ಸಾಧ್ಯವಾಗುತ್ತದೆ. ಹಾಗಾಗಿ, ದೈಹಿಕ ಚಟುವಟಿಕೆ ನಿರಂತರವಾಗಿರಲಿ ಎಂದರು.

    ಕ್ರೀಡಾಕೂಟದಲ್ಲಿ ಸಿಎಆರ್ ವಿಭಾಗ, ಉತ್ತರ ವಿಭಾಗ, ದಕ್ಷಿಣ, ಸಂಚಾರ, ಮಹಿಳಾ ಮತ್ತು ಧಾರವಾಡ ವಿಭಾಗದ ಒಟ್ಟು ಆರು ತಂಡಗಳು ಭಾಗವಹಿಸಿವೆ. ಆಕರ್ಷಕ ಪಥ ಸಂಚಲನ, ಕ್ರೀಡಾಜ್ಯೋತಿ ಬೆಳಗುವಿಕೆ, ಕ್ರೀಡಾಪಟುಗಳಿಂದ ಪ್ರತಿಜ್ಞಾವಿಧಿ ಸ್ವೀಕಾರ ನಂತರ ವಿವಿಧ ಕ್ರೀಡೆಗಳು ನಡೆದವು. ಮಾ.7ರವರೆಗೆ ಕ್ರೀಡಾಕೂಟ ನಡೆಯಲಿದೆ.

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ಕೃಷ್ಣಕಾಂತ, ಡಿಸಿಪಿಗಳಾದ ಕೆ. ರಾಮರಾಜನ್, ಆರ್.ಬಿ. ಬಸರಗಿ, ಎಸಿಪಿಗಳಾದ ವಿನೋದ ಮುಕ್ತೇದಾರ, ಎಂ.ವಿ. ಮಲ್ಲಾಪುರ, ಎಸ್.ಎಂ. ಹೊಸಮನಿ, ಜಿ. ಅನುಷಾ, ವಿವಿಧ ಠಾಣೆಗಳ ಇನ್​ಸ್ಪೆಕ್ಟರ್​ಗಳು, ಸಿಬ್ಬಂದಿ, ನಿವೃತ್ತ ಪೊಲೀಸ್ ಅಧಿಕಾರಿಗಳು, ಮತ್ತಿತರರು ಪಾಲ್ಗೊಂಡಿದ್ದರು. ಡಿಸಿಪಿ ಎಸ್.ವಿ. ಯಾದವ ವಂದಿಸಿದರು. ಇನ್​ಸ್ಪೆಕ್ಟರ್ ಜಗದೀಶ ಹಂಚಿನಾಳ ನಿರೂಪಿಸಿದರು.

    ಹತ್ತು ಬಾರಿ ವೀರಾಗ್ರಣಿ

    ಸತತ ಹತ್ತು ಬಾರಿ ವೀರಾಗ್ರಣಿ ಪ್ರಶಸ್ತಿ ಪಡೆದಿರುವ ಸಿಎಆರ್ ಹೆಡ್ ಕಾನ್​ಸ್ಟೇಬಲ್ ಈರಣ್ಣ ದೇಸಾಯಿ ಈ ಬಾರಿಯ ಕ್ರೀಡಾಜ್ಯೋತಿ ಹಿಡಿದು ಮೈದಾನದಲ್ಲಿ ಸುತ್ತು ಹಾಕಿದರು. ಈ ಬಾರಿಯೂ ವೀರಾಗ್ರಣಿ ಪಡೆಯಲು ಪ್ರಯತ್ನಿಸುವುದಾಗಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts