More

    ದೇವರಿಲ್ಲವೆಂದು ನಾನು ಹೇಳಲ್ಲ: ಸಿದ್ದರಾಮಯ್ಯ

    ಬೆಂಗಳೂರು ನಾನು ದೇವರಿಲ್ಲವೆಂದು ಹೇಳಲ್ಲ. ಕಾಯಕ ಮಾಡುವಲ್ಲಿ, ಸತ್ಯ ನುಡಿಯುವಲ್ಲಿ ದೇವರನ್ನು ಕಾಣಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.

    ಸವಿತಾ ಸಮಾಜದ ವತಿಯಿಂದ ಗಾಂಧಿ ಭವನದಲ್ಲಿ ಮಂಗಳವಾರ ಲೇಖಕ ಡಾ. ಎಂ.ಎಸ್. ಮುತ್ತುರಾಜ್ ರಚಿತ ‘ಮಂಗಳವಾದ್ಯ’ ಕಾದಂಬರಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ನಾವು ಮಾಡುವುದೆಲ್ಲವನ್ನೂ ದೇವರು ನೋಡುತ್ತಿರುತ್ತಾನೆ. ಆದ್ದೆರಿಂದ ಸುಳ್ಳು ಹೇಳಬಾರದು, ಸತ್ಯವೇ ದೇವರು. ಸತ್ಯವೇ ಸ್ವರ್ಗ,ಮಿಥ್ಯವೇ ನರಕ. ಸ್ವರ್ಗ ನರಕಗಳೆಲ್ಲವೂ ಇಲ್ಲೇ ಇವೆ ಎಂಬುದನ್ನು ತಿಳಿಯಬೇಕು. ಮನುಷ್ಯರನ್ನು ಮನುಷ್ಯರನ್ನಾಗಿ ಗೌರವದಿಂದ ನೋಡುವ ಮೂಲಕ ಮನುಷ್ಯತ್ವ ಉಳಿಸಿಕೊಳ್ಳಬೇಕು ಎಂದು ಹೇಳಿದರು.

    ಯಾವುದೇ ಕಾಯಕವೂ ಮೇಲು- ಕೀಳಲ್ಲ. ವ್ಯವಸ್ಥೆಗಳನ್ನು ದೇವರು ಮಾಡಿಲ್ಲ. ನಾವೇ ಮಾಡಿಕೊಂಡಿದ್ದೇವೆ. ದೇವರು ಕೇವಲ ದೇವಾಲಯದಲ್ಲಿ ಮಾತ್ರವಿಲ್ಲ, ಎಲ್ಲೆಲ್ಲಿಯೂ ಇದ್ದಾನೆ. ಈ ಕಾರಣದಿಂದಲೇ ಬಸವಾದಿ ಶರಣರು ಕಾಯಕವೇ ಕೈಲಾಸ, ದೇಹವೇ ದೇಗುಲವೆಂದರು, ನಾರಾಯಣಗುರುಗಳು ಒಂದೇ ಮತ, ಒಂದೇ ಜಾತಿ, ಒಂದೇ ಮತವೆಂದರು. ಇದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದು ಹೇಳಿದರು.

    ಹಜಾಮ ಪದ ತೆಗೆಸಿದ್ದು ನಾನೇ:

    ನಾನು ಅಧಿಕಾರದಲ್ಲಿ ಇರುವ ತನಕ ಸಾಮಾಜಿಕ ನ್ಯಾಯದ ಪರವಾಗಿ ಇರುತ್ತೇನೆ. ಸ್ವಾಭಿಮಾನದಿಂದ ರಾಜಕೀಯ ಮಾಡುತ್ತೇನೆ. ಹಿಂದುಳಿದವರು, ದಲಿತರು, ಮಹಿಳೆಯರು ಮತ್ತು ಅವಕಾಶದಿಂದ ವಂಚಿತರಾಗಿರುವವರಿಗೆ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಶಕ್ತಿ ತುಂಬುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ. ಈ ಕಾರಣದಿಂದಲೇ ‘ಹಜಾಮ’ ಎಂಬ ಪದ ನಿಂದನಾಸೂಚಕವಾಗಿತ್ತೆಂದು ನಾನೇ ತೆಗೆಸಿದೆ ಎಂದು ಹೇಳಿದರು.

    ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಚ್.ಎಂ. ರೇವಣ್ಣ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಸೇರಿ ಹಲವರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts