More

    ಶಾಲೆಗಳಿಗೆ ರಜೆ ನೀಡಬೇಡಿ

    ಹಾವೇರಿ: ಕೋವಿಡ್​ನಿಂದಾಗಿ ವಿದ್ಯಾರ್ಥಿಗಳು 9 ತಿಂಗಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಈಗ ಕಲಿಕಾ ಮಟ್ಟವನ್ನು ಸುಧಾರಿಸುವ ಗುರುತರ ಜವಾಬ್ದಾರಿ ಶಿಕ್ಷಕರ ಮೇಲಿದೆ. ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆ ನಿಟ್ಟಿನಲ್ಲಿ ಎಲ್ಲರೂ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಜಿಪಂ ಅಧ್ಯಕ್ಷ ಏಕನಾಥ ಬಾನುವಳ್ಳಿ ಹೇಳಿದರು.

    ನಗರದ ಗುರುಭವನದಲ್ಲಿ ಬುಧವಾರ ಜಿಲ್ಲಾಡಳಿತ, ಜಿಪಂ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶದ ಸುಧಾರಣೆ ಕುರಿತು ಪ್ರೌಢಶಾಲೆ ಮುಖ್ಯೋಪಾಧ್ಯಾಯರಿಗೆ ಹಾಗೂ ಖಾಸಗಿ ಶಾಲಾ ಆಡಳಿತ ಮಂಡಳಿ ಸದಸ್ಯರಿಗೆ ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

    ಕೋವಿಡ್ ಹಿನ್ನೆಲೆಯಲ್ಲಿ ತರಗತಿಗಳು ನಡೆದಿಲ್ಲ. ಇಂತಹ ಸಂದರ್ಭದಲ್ಲಿ ಜಾತ್ರೆ ಹಾಗೂ ಅನಗತ್ಯ ಸಂದರ್ಭಗಳಲ್ಲಿ ಶಾಲೆಗಳಿಗೆ ರಜೆ ನೀಡಿದರೆ ವಿದ್ಯಾರ್ಥಿಗಳ ಕಲಿಕೆಗೆ ಹಿನ್ನಡೆ ಉಂಟಾಗುತ್ತದೆ. ಹೀಗಾಗಿ, ಸಣ್ಣಪುಟ್ಟ ಕಾರಣಗಳಿಗೆ ಶಾಲೆಗೆ ರಜೆ ನೀಡಬೇಡಿ. ಒಂದು ವೇಳೆ ರಜೆ ನೀಡಿದರೆ ಪರ್ಯಾಯವಾಗಿ ಭಾನುವಾರ ಶಾಲೆ ನಡೆಸಿ ಎಂದರು.

    ಜಿಲ್ಲಾಧಿಕಾರಿ ಸಂಜಯ ಶೆಟ್ಟ್ಟ್ಣರ ಮಾತನಾಡಿ, ಕಳೆದ ಸಾಲಿನಲ್ಲಿ ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ 33ನೇ ಸ್ಥಾನದಲ್ಲಿತ್ತು. ಈ ಶೈಕ್ಷಣಿಕ ವರ್ಷದಲ್ಲಿ ಕೋವಿಡ್​ನಿಂದಾಗಿ ಮಕ್ಕಳ ಕಲಿಕೆಯಲ್ಲಿ ತೊಂದರೆಯಾಗಿದೆ. ಶಿಕ್ಷಕರು ಕ್ರಿಯಾಶೀಲರಾಗಿ ಎಲ್ಲ ವಿದ್ಯಾರ್ಥಿಗಳನ್ನು ಗಣನೆಗೆ ತೆಗೆದುಕೊಂಡು ಉತ್ತಮ ಫಲಿತಾಂಶ ಬರುವಂತೆ ಕಾರ್ಯನಿರ್ವಹಿಸಿ ಎಂದರು.

    ಜಿಪಂ ಸಿಇಒ ಮಹಮ್ಮದ ರೋಷನ್ ಮಾತನಾಡಿ, ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯಿಂದ ಈಗಾಗಲೇ ಕ್ವಿಜ್ ಹಾಗೂ ಟೆಸ್ಟ್ ನಡೆಸಲಾಗಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟ ತಿಳಿಯಲು ಕೆಂಪು, ಹಳದಿ ಹಾಗೂ ಹಸಿರು ಗುಂಪುಗಳಾಗಿ ವಿಂಗಡಿಸಲಾಗಿದೆ. ಕೆಂಪು ಗುಂಪಿನ ಮಕ್ಕಳ ಕಲಿಕೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಎಂದರು.

    ಡಿಡಿಪಿಐ ಅಂದಾನೆಪ್ಪ ವಡಗೇರಿ ಮಾತನಾಡಿ, ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಶಿಕ್ಷಕರು ಇನ್ಮುಂದೆ ರಜೆ ಪಡೆಯದೇ ಕಲಿಕೆ ಒತ್ತು ನೀಡಬೇಕು. ಸಾಧ್ಯವಾದರೆ ರಜೆ ದಿನಗಳಲ್ಲಿ ವಿಶೇಷ ತರಗತಿ ನಡೆಸಿ ಎಂದರು. ಡಯಟ್ ಉಪನಿರ್ದೇಶಕ ಡಿ.ಎಂ. ಬಸವರಾಜ, ಬಿಇಒಗಳಾದ ಐ.ಬಿ. ಬೆನಕೊಪ್ಪ, ಎಂ.ಎಚ್. ಪಾಟೀಲ, ಶ್ರೀನಿವಾಸ, ಗುರುಪ್ರಸಾದ, ಸಿದ್ದಲಿಂಗಪ್ಪ ಇತರರಿದ್ದರು.

    ಸರ್ಕಾರದಿಂದ ದಿನಕ್ಕೊಂದು ನಿಯಮ ಸರಿಯಲ್ಲ

    ‘ನಮಗೆ ವಿದ್ಯಾರ್ಥಿಗಳ ಹಾಗೂ ಶಿಕ್ಷಣದ ಬಗ್ಗೆ ಕಾಳಜಿಯಿದೆ. ಆದರೆ, ಸರ್ಕಾರದ ಸೂಚನೆಯಿಂದ ಬಹಳ ತೊಂದರೆಯಾಗಿದೆ. ದೊಡ್ಡ ನಗರ ಹಾಗೂ ಸಾಮಾನ್ಯ ನಗರಗಳಿಗೆ ಒಂದೇ ಶುಲ್ಕ ಇರುವುದಿಲ್ಲ. ಶುಲ್ಕ ವಿನಾಯಿತಿ ಮಾಡಿದರೆ ಶಿಕ್ಷಣ ಸಂಸ್ಥೆಗಳ ಶಿಕ್ಷಕರಿಗೆ ಹಾಗೂ ಸಿಬ್ಬಂದಿಗೆ ವೇತನ ಪಾವತಿ ಹಾಗೂ ಕಟ್ಟಡ ನಿರ್ವಹಣೆ ಕಷ್ಟವಾಗುತ್ತದೆ. ಸರ್ಕಾರ ದಿನಕ್ಕೊಂದು ನಿಯಮ ಮಾಡುವುದು ಸರಿಯಲ್ಲ. ನಾವು ಕೋವಿಡ್ ನಿಯಮ ಪಾಲಿಸುತ್ತೇವೆ. ಅಂಗನವಾಡಿ ಆರಂಭಕ್ಕೆ ಅನುಮತಿ ಕೊಡುತ್ತೀರಿ. 1ರಿಂದ 5ನೇ ತರಗತಿ ಏಕೆ ಬೇಡ?. ಇದ್ಯಾವ ನಿಯಮ. ನಾವು ದುಡ್ಡಿಗಾಗಿ ಶಿಕ್ಷಣ ಸಂಸ್ಥೆ ತೆರೆದಿಲ್ಲ. ನಮಗೂ ಭವಿಷ್ಯದ ಪ್ರಜೆಗಳನ್ನು ರೂಪಿಸುವ ಹೊಣೆಗಾರಿಕೆಯಿದೆ’ ಎಂದು ಖಾಸಗಿ ಶಾಲಾ ಆಡಳಿತ ಮಂಡಳಿಯ ಮುಖ್ಯಸ್ಥೆ ರುಕ್ಮಿಣಿ ಸಾಹುಕಾರ ಹಾಗೂ ಇತರರು ಆಕ್ರೋಶ ವ್ಯಕ್ತಪಡಿಸಿದರು.ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ, ಕೋವಿಡ್​ನಿಂದಾಗಿ ಎಲ್ಲರೂ ಆರ್ಥಿಕ ಸಂಕಷ್ಟ ಎದುರಿಸಬೇಕಾಗಿದೆ. ಖಾಸಗಿ ಶಾಲೆಗಳ ಬಗ್ಗೆ ಕಾಳಜಿಯಿದೆ. ಆದರೆ, ನಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಕೆಲಸ ಮಾಡಬೇಕಾಗುತ್ತದೆ. ಹಾಗಾಗಿ ಜಿಲ್ಲಾಮಟ್ಟದಲ್ಲಿ ಪರಿಹರಿಸಬಹುದಾದ ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸಲಾಗುವುದು. ನಿಮ್ಮ ಸಮಸ್ಯೆಗಳನ್ನು ಸರ್ಕಾರಕ್ಕೆ ತಲುಪಿಸುವ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts