More

    ಘಾಸಿ ಮಾಡದಿರಲಿ ಗಾಸಿಪ್; ಫಾರ್ವರ್ಡ್ ಮಾಡುವ ಮುನ್ನ ಯೋಚಿಸಿ..

    ಹೇಳಿ ಕೇಳಿ ಇದು ಸೋಷಿಯಲ್ ಮೀಡಿಯಾ, ಮೆಸೇಜಿಂಗ್ ಆಪ್​ಗಳ ಜಮಾನ. ಯಾವುದೋ ಮೆಸೇಜ್ ಇಲ್ಲವೇ ಪೋಸ್ಟ್ ಒಂದನ್ನು ಕೆಲವೇ ನಿಮಿಷಗಳಲ್ಲಿ ವೈರಲ್ ಆಗಿಸಿಬಿಡುವಂಥ ತಾಕತ್ತು ಈ ಡಿಜಿಟಲ್ ಪ್ಲ್ಯಾಟ್​ಫಾರ್ಮ್​ಗಳಿಗೆ ಇದೆ. ಇವುಗಳಿಂದ ಪ್ರಕಟವಾಗುವ ಮೆಸೇಜ್/ಪೋಸ್ಟ್ ಒಳ್ಳೆಯದಾಗಿದ್ದರೆ ಒಂದಷ್ಟು ಒಳ್ಳೆಯದಾಗಿಬಿಡುತ್ತದೆ. ಹಾಗೆ ಒಳ್ಳೆಯ ವೈರಲ್ ಪೋಸ್ಟ್​ಗಳಿಂದ ಒಳಿತಾದ ಕೆಲವು ನಿದರ್ಶನಗಳು ಇವೆ. ಒಂದು ವೇಳೆ ಅಂಥ ಮೆಸೇಜ್/ಪೋಸ್ಟ್ ಕೆಟ್ಟದ್ದಾಗಿದ್ದರೆ ಅಥವಾ ಅದೊಂದು ವದಂತಿ ಆಗಿದ್ದರೆ ಆಗಬಾರದ್ದೇನೋ ಆಗಿಬಿಡಬಹುದು. ಅಂಥ ವದಂತಿ ಇಲ್ಲವೇ ಗಾಸಿಪ್​ನಿಂದ ಇತರರ ಬದುಕಲ್ಲಿ ಎಂಥ ಘಾಸಿ ಆಗಬಹುದು ಎಂಬುದಕ್ಕೂ ಉದಾಹರಣೆ ಎನ್ನುವಂಥ ಹಲವು ಘಟನೆಗಳು ನಡೆದಿವೆ. ಆ ಥರದ ವದಂತಿಗಳ ಜಗತ್ತಿನ ಬಗ್ಗೆ, ಜಗತ್ತಿನಲ್ಲಿ ಅವುಗಳಿಂದಾಗುವ ಅವಾಂತರಗಳ ಬಗ್ಗೆ ಮತ್ತು ಅಂಥ ಗಾಸಿಪ್​ಗಳನ್ನು ಹೇಗೆ ಎದುರಿಸಬೇಕು ಎಂಬಿತ್ಯಾದಿ ಕುರಿತಾಗಿ ಇದೊಂದು ಅವಲೋಕನಾತ್ಮಕ ಬರಹ.

    ಘಾಸಿ ಮಾಡದಿರಲಿ ಗಾಸಿಪ್; ಫಾರ್ವರ್ಡ್ ಮಾಡುವ ಮುನ್ನ ಯೋಚಿಸಿ..| ಅನೀಶ್ ಬಿ., ಕೊಪ್ಪ
    ಪೃಥ್ವಿ ನಿರಂತರವಾಗಿ ಎರಡು ವಾರಗಳಿಂದ ಕಾಲೇಜಿಗೆ ಬರುತ್ತಿರಲಿಲ್ಲ. ಯಾರೊಬ್ಬ ಸ್ನೇಹಿತರ ಸಂಪರ್ಕಕ್ಕೂ ಸಿಗುತ್ತಿರಲಿಲ್ಲ. ಇದ್ದಕ್ಕಿದ್ದಂತೆಯೇ ಒಂದು ದಿನ ಅವನ ಕ್ಲಾಸ್​ವೆುೕಟ್ ಸ್ವರೂಪ್ ಬಂದು ಅವನಿಗೆ ಐಫೋನ್ ಕೊಡಿಸೋ ವಿಚಾರಕ್ಕೆ ಮನೆಯಲ್ಲೇನೋ ಗಲಾಟೆಯಾಗಿ, ಮನೆ ಬಿಟ್ಟು ಹೋಗಿದ್ದಾನಂತೆ, ಮನೆ ಬೀಗ ಹಾಕಿತ್ತು. ಅಪ್ಪ-ಅಮ್ಮ ಕೂಡ ಇಲ್ಲಿದ್ರೆ ಮರ್ಯಾದೆ ಹೋಗುತ್ತೆ ಅಂತ ಹಳ್ಳಿಯ ಮನೆಯಲ್ಲಿದ್ದಾರಂತೆ ಎಂಬ ಗಾಸಿಪ್ ಕಾಲೇಜು ತುಂಬೆಲ್ಲಾ ಹರಿಯಬಿಟ್ಟ. ಆ ಗಾಸಿಪ್ ಕಿವಿಯಿಂದ ಕಿವಿಗೆ, ಬಾಯಿಂದ ಬಾಯಿಂದ ದಾಟುತ್ತಾ ಪೃಥ್ವಿ ಅಮ್ಮ ಅಪ್ಪನ ಮಾತಿಗೆ ಬೆಲೆ ಕೊಡದವ ಎಂದು ವಿಲನ್ ಆಗಿಯೇ ಬಿಟ್ಟ. ಇರೋ ಒಬ್ಬ ಮಗನಿಗೆ ಐಫೋನ್ ಕೊಡಿಸಬಹುದಿತ್ತು ಎಂದು ಅಪ್ಪ ಅಮ್ಮನೇ ಕೆಲವರ ದೃಷ್ಟಿಯಲ್ಲಿ ವಿಲನ್ ಆಗಿ ಬಿಟ್ಟರು. ತಿಂಗಳು ಕಳೆದು ಪೃಥ್ವಿ ಕಾಲೇಜಿಗೆ ವಾಪಸ್ ಬಂದಾಗ ನಡೆದ ಸತ್ಯ ಘಟನೆಯೇ ಬೇರೆ ಎಂದು ತಿಳಿದಿತ್ತು. ರಾತ್ರೋರಾತ್ರಿ ಅವನ ತಂದೆಗೆ ತೀವ್ರತರ ಅನಾರೋಗ್ಯ ಉಂಟಾಗಿ ದೂರದ ಪಟ್ಟಣದ ಆಸ್ಪತ್ರೆಯಲ್ಲಿ ತಂದೆಗೆ ಚಿಕಿತ್ಸೆ ಕೊಡಿಸಿ, ಆರೈಕೆ ಮಾಡಿಕೊಂಡು ತರಗತಿಗೆ ವಾಪಸಾಗಿದ್ದ!

    ಏನಿದು ಗಾಸಿಪ್?

    ವಾಸ್ತವ ತಿಳಿಯದೆಯೇ ವದಂತಿ ಹರಡುವುದರಿಂದ ಎಲ್ಲ ವಯೋಮಾನದವರಲ್ಲಿ, ವಿಶೇಷವಾಗಿ ಯುವಜನತೆಯಲ್ಲಿ ಗಾಸಿಪ್​ಗಳು ಭಾವನಾತ್ಮಕ ಬಂಧಕ್ಕೆ ಬ್ರೇಕ್ ಹಾಕುತ್ತಿವೆ. ಕಾಲೇಜು, ಆಫೀಸಿನ ಸಮಯದಲ್ಲಿ ಕೆಲವೊಮ್ಮೆ ತಮಾಷೆಗೆಂದೇ ಹರಡುವ, ಹರಡಿಸುವ ಗಾಸಿಪ್​ಗಳಂತೂ ಮೃದು ಸ್ವಭಾವದವರಿಗೆ ಬೇಸರಗೊಳಿಸುವುದಕ್ಕೆ, ಅವರ ಕೋಪಕ್ಕೆ ದಾರಿಯಾಗುತ್ತದೆ. ಕೆಲವೊಮ್ಮೆಯಂತೂ ಸ್ನೇಹಿತರ ತಂಡದಲ್ಲಿನ ಒಂದು ಸಣ್ಣ ಗಾಸಿಪ್, ಪ್ರಬಲವಾದ ಸಾಂಸ್ಥಿಕ ಸಂಸ್ಕೃತಿಯನ್ನು ಸಹ ನಾಶಪಡಿಸುತ್ತದೆ. ವಾಸ್ತವವಾಗಿ, ವಿಷಕಾರಿ ಸಂಸ್ಕೃತಿಗೆ ಪ್ರಮುಖ ಕೊಡುಗೆ ನೀಡುವಲ್ಲಿ ಗಾಸಿಪ್​ನದ್ದೇ ದರ್ಬಾರು ಹೆಚ್ಚಾಗುತ್ತದೆ.. ಇದು ಗೆಳೆಯರ ನಡುವಿನ ನಂಬಿಕೆಯನ್ನು ನಾಶಪಡಿಸುವುದಲ್ಲದೆ, ಮಾನಸಿಕವಾಗಿ ಕುಗ್ಗಿಸುತ್ತದೆ ಮತ್ತು ವೈಯಕ್ತಿಕ ಕಾರ್ಯಕ್ಷಮತೆಯನ್ನು ಕಡಿಮೆ ಮಾಡುತ್ತದೆ. ಕೆಲವರು ತನಗೆ, ಸ್ನೇಹಿತರಿಗೆ ಏನಾದರೂ ಸರಿ, ನಾನಂತೂ ಸದಾ ಗಾಸಿಪ್ ಮಾಡುತ್ತ, ಟ್ರೋಲ್ ಮಾಡುತ್ತ ಸುದ್ದಿಯಲ್ಲಿರಬೇಕು ಎಂಬ ಶೋಕಿ ಹೊಂದಿದವರಾಗಿದ್ದಾರೆ.

    ಇನ್​ಸ್ಟಂಟ್ ಫಾರ್ವರ್ಡ್

    ನಮ್ಮದಂತೂ ಇನ್​ಸ್ಟಾಗ್ರಾಂ-ಫೇಸ್​ಬುಕ್​ನಂತಹ ಸಾಮಾಜಿಕ ಜಾಲತಾಣ, ವಾಟ್ಸ್ ಆಪ್​ನಂತಹ ಮೆಸೇಜಿಂಗ್ ಆಪ್​ಗಳಲ್ಲೇ ಹೆಚ್ಚು ತಲ್ಲೀನರಾಗಿರುವ ಜಾಯಮಾನ. ಇವುಗಳಲ್ಲಿ ಸತ್ಯದ ಮಾಹಿತಿಗಳಿಗಿಂತ ಗಾಸಿಪ್​ಗಳೇ ಸದಾ ಇನ್​ಸ್ಟಂಟ್ ಆಗಿ ಶೇರ್-ಫಾರ್ವರ್ಡ್​ಗಳಾಗುತ್ತಿರುತ್ತವೆ. ಈ ರೀತಿಯ ಗಾಸಿಪ್ ವಿಚಾರಗಳು ನಟ-ನಟಿಯರ ಸಿನಿಮಾಗಳ ಬಗ್ಗೆ, ರಾಜಕಾರಣಿಗಳ ವೈಯಕ್ತಿಕ-ರಾಜಕೀಯ ಜೀವನ, ಕ್ರೀಡಾಪಟುಗಳ ಕ್ರೀಡಾ ಬದುಕಿನ ಬಗ್ಗೆ ಸದಾ ಜಾಲತಾಣಗಳಲ್ಲಿ ಗಾಸಿಪ್​ಗಳನ್ನೇ ಜಾಲಾಡುವವರು ನಮ್ಮಲ್ಲೇ ಇದ್ದಾರೆ. ಅದೆಷ್ಟೋ ಬಾರಿ ಎಲ್ಲರಿಗಿಂತ ಮೊದಲೇ ತಾನು ಸುದ್ದಿಯನ್ನು ಹರಿಯಬಿಡಬೇಕು ಎಂಬ ಧಾವಂತದಲ್ಲಿ ವ್ಯಕ್ತಿ ಸತ್ತಿರದೆಯೇ, ಸಾವಿನ ದಡದಲ್ಲಿದ್ದರೂ ಓಂ ಶಾಂತಿ ಎಂದು ಹಾಕಿಕೊಂಡು ಸಾವಿನಲ್ಲೂ ಗಾಸಿಪ್ ಹರಡುವಂತಹ ಗಾಸಿಪಿಯನ್ಸ್ ಇದ್ದಾರೆ. ಅಲ್ಲದೆಯೇ ಯಾರಾದರೂ ವ್ಯಕ್ತಿ ಆತ್ಮಹತ್ಯೆ, ಅಪಘಾತಹಂತಹ ಆಕಸ್ಮಿಕ ಸಾವಿಗೆ ಪ್ರಾಣ ತೆತ್ತಾಗ ಗಾಸಿಪ್​ಗಳದ್ದೇ ದರ್ಬಾರು. ಅಪಘಾತ ನೋಡದೆಯೇ ಇದ್ದರೂ ಸರಿ ತಪ್ಪುಗಳ ವಿಶ್ಲೇಷಣೆ ಮಾಡುವ ಮೂಲಕ ವಿಶ್ಲೇಷಕನಂತೆ ವರ್ತಿಸಲು ಕೂಡ ಗಾಸಿಪ್ ಹುಟ್ಟಿಸುವವರಿದ್ದಾರೆ!

    ಇದರ ಹುಟ್ಟು ಎಲ್ಲಿಂದ?

    ಈ ಪದವು ಇಂಗ್ಲಿಷ್​ನ ಹಳೆಯ ಗಾಡ್​ಸಿಬ್​ನಿಂದ ಬಂದಿದೆ. ಸುಮಾರು 16ನೇ ಶತಮಾನದಲ್ಲಿ ಈ ಪದವು ಒಬ್ಬ ವ್ಯಕ್ತಿಯು ಹೆಚ್ಚಾಗಿ ನಿಷ್ಪಲವಾದ ಮಾತುಗಳಲ್ಲಿ ಸಂತೋಷಪಡುವವನು, ಸುದ್ದಿ ವ್ಯಾಪಾರಿ, ಸುಳ್ಳು ಸುದ್ದಿ ಹರಡುವವನು ಎಂಬ ಅರ್ಥವನ್ನು ಪಡೆದುಕೊಂಡಿತು. 19ನೇ ಶತಮಾನದ ಆರಂಭದಲ್ಲಿ, ಈ ಪದವನ್ನು ಮಾತನಾಡುವವರಿಂದ ಅಂತಹ ವ್ಯಕ್ತಿಗಳ ಸಂಭಾಷಣೆಗೆ ವಿಸ್ತರಿಸಲಾಯಿತು. ರಾಬಿನ್ ಡನ್​ಬಾರ್ ಅವರ ವಿಕಾಸವಾದದ ಸಿದ್ಧಾಂತಗಳ ಪ್ರಕಾರ, ನಿರಂತರವಾಗಿ ಗಾತ್ರದಲ್ಲಿ ಬೆಳೆಯುತ್ತಿರುವ ಗುಂಪುಗಳನ್ನು ಬಂಧಿಸಲು ಸಹಾಯ ಮಾಡಲೆಂದೇ ಈ ಗಾಸಿಪ್​ಗಳು ಹುಟ್ಟಿಕೊಂಡವು. ಗಾಸಿಪ್ ಇತರ ವ್ಯಕ್ತಿಗಳೊಂದಿಗೆ ವೈಯಕ್ತಿಕವಾಗಿ ಮಾತನಾಡದೆ ಅವರ ಬಗ್ಗೆ ಮಾಹಿತಿಯನ್ನು ಪಡೆಯಲು ಗುಂಪು ಸಹಾಯ ಮಾಡುವ ಸಾಮಾಜಿಕ ಸಂವಹನವಾಯಿತು. ಇದು ಜನರು ತಮ್ಮ ಸಾಮಾಜಿಕ ನೆಟ್​ವರ್ಕ್​ನಲ್ಲಿ ಏನು ನಡೆಯುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ಅನುವು ಮಾಡಿಕೊಟ್ಟಿತು. ಇದು ಹೇಳುವವರು ಮತ್ತು ಕೇಳುವವರ ನಡುವೆ ಬಂಧವನ್ನು ಸೃಷ್ಟಿಸುತ್ತದೆ, ಏಕೆಂದರೆ ಅವರು ಪರಸ್ಪರ ಆಸಕ್ತಿಯ ಮಾಹಿತಿ ಹಂಚಿಕೊಳ್ಳುತ್ತಾರೆ ಮತ್ತು ಒಟ್ಟಿಗೆ ಸಮಯ ಕಳೆಯುತ್ತಾರೆ. ಇದು ಕೇಳುವವರಿಗೆ ಇನ್ನೊಬ್ಬ ವ್ಯಕ್ತಿಯ ನಡವಳಿಕೆಯ ಬಗ್ಗೆ ತಿಳಿದುಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಅವರ ಸಂಬಂಧಕ್ಕೆ ಹೆಚ್ಚು ಪರಿಣಾಮಕಾರಿ ವಿಧಾನವನ್ನು ಹೊಂದಲು ಸಹಾಯ ಮಾಡುತ್ತದೆ. 2004ರ ವರದಿಯೊಂದರ ಪ್ರಕಾರ ಶೇ.65 ರಷ್ಟು ಮಾನವ ಸಂಭಾಷಣೆಗಳು ಸಾಮಾಜಿಕ ವಿಷಯಗಳನ್ನು ಒಳಗೊಂಡಿವೆ ಎಂಬುದು ಸಾಬೀತಾಗಿದೆ.

    ಶೈಕ್ಷಣಿಕ ಜೀವನವೇ ಬಲಿ

    ಸಾಮಾನ್ಯವಾಗಿ ಕೂಟ ವಯಸ್ಸು ಎಂದೇ ಕರೆಯಲ್ಪಡುವ ಹದಿಹರೆಯ ಹಾಗೂ ಯೌವನದ ಪೂರ್ವಾರ್ಧದಲ್ಲಿ ಗಂಡು-ಹೆಣ್ಣು ಕಾಲೇಜು ಹಂತದಲ್ಲಿ ಒಟ್ಟಾಗಿ ಹರಟೆ ಹೊಡೆಯುವುದು, ಓಡಾಡುವುದು, ರ್ಚಚಿಸುವುದು ಸಾಮಾನ್ಯವಾಗಿರುತ್ತದೆ. ಗಂಡು ಹೆಣ್ಣಿನ ನಡುವಿನ ಸಾಮಾನ್ಯ ಸ್ನೇಹಕ್ಕೂ ಪ್ರೀತಿ ಪ್ರೇಮದ ಬಣ್ಣ ಬಳಿದು ಗಾಸಿಪ್ ಹಬ್ಬಿಸುವ ಜನರಿಗೇನೂ ಕೊರತೆ ಇಲ್ಲ. ಈ ಗಾಸಿಪ್​ಗಳು ಪೋಷಕರನ್ನು ತಲುಪಿದಾಗ ತಮ್ಮ ಮಕ್ಕಳ ಬಗ್ಗೆ ಕಸಿವಿಸಿಕೊಂಡು, ಕಾಲೇಜು ಶಿಕ್ಷಣಕ್ಕೆ ಬ್ರೇಕ್ ಹಾಕುವ ಘಟನೆಗಳು ಇಂದಿಗೂ ಅಲ್ಲಲ್ಲಿ ನಡೆಯುತ್ತಿವೆ. ಉನ್ನತ ಶಿಕ್ಷಣದ ಹಂತದಲ್ಲಿ ಪ್ರೀತಿ ಪ್ರೇಮದ ಬಲೆಗೆ ಬಿದ್ದು, ಮಕ್ಕಳು ಕೈತಪ್ಪುವರು ಎಂಬ ಕಲ್ಪನೆಗಳೇ ಗಾಸಿಪ್​ಗಳಾಗಿ ವಿಶೇಷವಾಗಿ ಹೆಣ್ಣುಮಕ್ಕಳ ಉನ್ನತ ಶಿಕ್ಷಣದ ಕನಸು ಕಮರಿ ಹೋಗುವಂತೆ ಮಾಡುವುದೂ ಕೆಲವೆಡೆ ಇದೆ.

    ಪ್ರಯಾಣ – ಪ್ರವಾಸಕ್ಕೂ ಪ್ರಯಾಸ !

    ಗೂಗಲ್ ಎಂಬ ಆಪ್ತಮಿತ್ರ ಬಹಳಷ್ಟು ಮಾಹಿತಿಯನ್ನು ಒದಗಿಸಿದ ನಂತರವೂ ನಾವು ಒಂದಿಷ್ಟು ಮಾಹಿತಿಯನ್ನು ನಮ್ಮ ಸಹವರ್ತಿಗಳ ಮೂಲಕ ಪಡೆಯಲು ಪ್ರಯತ್ನಿಸುತ್ತೇವೆ. ಸಾಮಾನ್ಯವಾಗಿ ವೀಕೆಂಡ್​ಗಳಲ್ಲೋ ಅಥವಾ ರಜಾ ಸಮಯದಲ್ಲಿಯೋ ಸ್ಮೇಹಿತರೊಂದಿಗೆ ಕುಟುಂಬದೊಂದಿಗೆ ದೂರದ ಊರುಗಳಿಗೆ ಪ್ರವಾಸ- ಪ್ರಯಾಣ ಹೊರಟಾಗ ಒಮ್ಮೊಮ್ಮೆ ಕೆಲವರು ಆ ಸ್ಥಳದ ಬಗ್ಗೆ, ಅಲ್ಲಿನ ಊಟ-ವಸತಿ, ಹೋಗುವ ಮಾರ್ಗದ ಅವ್ಯವಸ್ಥೆ ಇಂತಹ ವಿಚಾರದ ಬಗ್ಗೆ ಪ್ರಖರ ಪಂಡಿತರಂತೆ ಒಂದಷ್ಟು ಅಸಂಬದ್ಧ ಮಾಹಿತಿಗಳನ್ನು ಗಾಳಿಸುದ್ದಿ ಆಧಾರಿತವಾಗಿ ನೀಡುತ್ತಾರೆ. ಇದರಲ್ಲಿ ನಕಾರಾತ್ಮಕ ಅಂಶಗಳಿದ್ದಾಗ ನಾವು ಆ ಪ್ರವಾಸ ರದ್ದು ಮಾಡಬೇಕಾದ ಪರಿಸ್ಥಿತಿ ಕೂಡ ಬರಬಹುದು! ಆದರೆ ಬೇರೆಯವರ ಅನವಶ್ಯಕ ಊಹಾಪೋಹದ ಸುದ್ದಿಗಳಿಗೆ ನಾವು ಕಿವಿಗೊಡದೆ ಪ್ರವಾಸ ಕೈಗೊಂಡಾಗ ಅಲ್ಲಿ ವಾಸ್ತವವಾಗಿ ಧನಾತ್ಮಕ ಅನುಭವ ಪಡೆಯುವ ಸಂದರ್ಭವೂ ಇರುತ್ತದೆ.

    ಭಾರಿ ಪ್ಯಾಕೇಜ್ ಎಂಬ ಸುಳ್ ಸುದ್ದಿ

    ನಗರ ಪ್ರದೇಶಗಳಲ್ಲಿ ಪ್ರತಿಷ್ಠಿತ ಕಾಲೇಜುಗಳಲ್ಲಿ ಓದಿದವರಿಗೆಲ್ಲರಿಗೂ ಮಲ್ಟಿನ್ಯಾಷನಲ್ ಕಂಪನಿಗಳಲ್ಲಿ ಪ್ಲೇಸ್​ವೆುಂಟ್ ಸಿಗುತ್ತದೆ ಎಂಬ ಸುದ್ದಿ ಒಂದೆಡೆಯಾದರೆ, ಮಲ್ಟಿನ್ಯಾಷನಲ್ ಕಂಪನಿಯಲ್ಲಿ ಕೆಲಸ, ಕೈ ತುಂಬಾ ಸಂಬಳ ಸಿಗುವ ಪ್ಯಾಕೇಜ್ ಸಿಕ್ಕಿರುತ್ತದೆ ಎಂಬುದು ಅನೇಕರ ಮನಸ್ಥಿತಿಯಾಗಿದೆ. ಈ ಮನಸ್ಥಿತಿಯನ್ನೇ ಸುದ್ದಿಯಾಗಿಸಿಕೊಂಡು, ಉಚಿತವಾಗಿ ಊರೆಲ್ಲಾ ಸುದ್ದಿ ಹಬ್ಬಿಸಿ, ಬೇರೆಯವ ಆರ್ಥಿಕ ಮಟ್ಟವನ್ನು ಅಳೆದು ತೂಗುವವರೇ ಹೆಚ್ಚು. ವಾಸ್ತವವಾಗಿ ಅಲ್ಲಿನ ಸಂಬಳ, ಕೆಲಸದ ಒತ್ತಡ, ಜವಾಬ್ದಾರಿ ಇವೆಲ್ಲದರ ಪರಿವೇ ಇಲ್ಲದಂತೆ, ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬಂತೆ ಪ್ಯಾಕೇಜುಗಳ ಗಾಳಿಗೋಪುರ ಏರಿಸುವವರೂ ಇದ್ದಾರೆ.

    ಕಾನೂನಿನಲ್ಲಿಯೂ ಇದೆ ಕಠಿಣ ಶಿಕ್ಷೆ

    ಐಪಿಸಿ ಸೆಕ್ಷನ್ 505 ವದಂತಿ ಹರಡುವಿಕೆಗೆ ಸಂಬಂಧಿಸಿದ ಕಾನೂನುಗಳನ್ನು ಸ್ಪಷ್ಟವಾಗಿ ನೀಡುತ್ತದೆ.ಈ ವಿಭಾಗದ ಉಪ ವಿಭಾಗ 1 ರ ಪ್ರಕಾರ ವರ್ಗಗಳ ನಡುವೆ ದ್ವೇಷ ಅಥವಾ ಕೆಟ್ಟ ಇಚ್ಛೆಯನ್ನು ಸೃಷ್ಟಿಸುವ ಅಥವಾ ಉತ್ತೇಜಿಸುವ ಹೇಳಿಕೆಗಳು, ವದಂತಿ ಅಥವಾ ಆತಂಕಕಾರಿ ಸುದ್ದಿಗಳನ್ನು ಹೊಂದಿರುವ ಯಾವುದೇ ಹೇಳಿಕೆ, ವರದಿಯನ್ನು ರಚಿಸುವ ಅಥವಾ ಪ್ರಚಾರ ಮಾಡುವ ಉದ್ದೇಶದಿಂದ ಸೃಷ್ಟಿಸುವ ಅಥವಾ ಉತ್ತೇಜಿಸುವ ಸಾಧ್ಯತೆಯಿರುವ ವರದಿಯನ್ನು ಪ್ರಕಟಿಸುವ ಅಥವಾ ಪ್ರಸಾರ ಮಾಡುವವರು ಧರ್ಮ, ಜನಾಂಗ, ಹುಟ್ಟಿದ ಸ್ಥಳ, ವಾಸಸ್ಥಳ, ಭಾಷೆ, ಜಾತಿ ಅಥವಾ ಸಮುದಾಯ ಅಥವಾ ಇನ್ನಾವುದೇ ನೆಲೆಯಲ್ಲಿ, ವಿವಿಧ ಧಾರ್ವಿುಕ, ಜನಾಂಗೀಯ, ಭಾಷೆ ಅಥವಾ ಪ್ರಾದೇಶಿಕ ಗುಂಪುಗಳು ಅಥವಾ ಜಾತಿಗಳ ನಡುವಿನ ಭಾವನಾತ್ಮಕ ಸಂಬಂಧವನ್ನು ದೂರಮಾಡಿ,ದ್ವೇಷ ಸಾಧಿಸಲು ಪ್ರೇರೇಪಿಸುವವರಿಗೆ ಮೂರು ವರ್ಷಗಳ ಜೈಲು ಶಿಕ್ಷೆ ಇಲ್ಲವೇ ದಂಡವನ್ನೋ ಅಥವಾ ಕೆಲವೊಮ್ಮೆ ಜೈಲು ಶಿಕ್ಷೆ ಮತ್ತು ದಂಡ ಎರಡನ್ನೂ ವಿಧಿಸಲಾಗುತ್ತದೆ.

    ದೃಢತೆ-ವಿವೇಚನೆ ನಮ್ಮದಾಗಿರಲಿ

    ವಿಶಾಲವಾದ ಈ ಜಗತ್ತಿನಲ್ಲಿ ವಿಭಿನ್ನ ಮನಸ್ಥಿತಿಯ ಜನರು ಸಹಜವಾಗಿಯೇ ಇರುತ್ತಾರೆ. ಅವರಲ್ಲಿ ಗಾಸಿಪ್ ಹರಡುವವರರೂ ಜೀವನದ ಭಾಗವೇ ಆಗಿರುತ್ತಾರೆ. ಆದರೆ ನಾವು ಗಾಸಿಪ್ ಹರಡಬಾರದು. ಯಾವುದೇ ವಿಚಾರವನ್ನು ಪರರ ಮುಂದೆ ಹೇಳುವಾಗ ವಿಷಯದ ಪರಾಮಶಿಸಿ ಮಾತನಾಡಬೇಕಿದೆ. ಯುವಜನತೆಯಲ್ಲಿಯೇ ಹೆಚ್ಚುತ್ತಿರುವ ಗಾಸಿಪ್​ಗೆ ಒಳಗಾಗುತ್ತೇನೆ ಎಂದು ಸೋಷಿಯಲ್ ಆಗಿ ಇರುವುದನ್ನು ಬಿಟ್ಟು ಬಿಡುವ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬಾರದು. ಸಣ್ಣ ಪುಟ್ಟ ಸಹಾಯಗಳು, ಪರಸ್ಪರ ಮಾತುಕತೆ ಉದ್ಯೋಗ ಸ್ಥಳದಲ್ಲಿ, ಕಾಲೇಜು ಜೀವನದಲ್ಲಿ, ಸಾಮಾಜಿಕ ಜೀವನದಲ್ಲಿ ಅಗತ್ಯ. ನಮ್ಮ ಸಂವಹನ ಒಂಟಿತನ ಕಾಡದೇ ಇರಲು ಪೂರಕ, ನಮ್ಮ ಮಾತು ಕರ್ತವ್ಯದಲ್ಲಿ ದಕ್ಷತೆ ಕಡಿಮೆ ಆಗದಿರಲು ಸಹಾಯಕವಾಗಿರಬೇಕು. ಎಲ್ಲರೊಂದಿಗೂ ನಗುತ್ತಾ, ಎಲ್ಲರ ಜೊತೆಯಲ್ಲೂ ಚೆನ್ನಾಗಿರಬೇಕು. ಆದರೆ ಗಾಳಿ ಸುದ್ದಿಯ ಪರಿಧಿಯಿಂದ ದೂರ ಇರುವ ದೃಢತೆ, ವಿವೇಚನೆ ನಮ್ಮದಾಗಿರಲಿ.

    ರಿಯಲ್​ ಸ್ಟಾರ್ ಉಪೇಂದ್ರ ಹೇಳಿದ್ದರಲ್ಲಿ ‘ಸತ್ಯ’ ಇದ್ಯಾ?: ‘ಯು-ಐ’ ಮೂಡಿಸಿದ ಪ್ರಶ್ನೆ!

    Photo Gallery | ನಿಲುಕಿದ ನಕ್ಷತ್ರ: ರಾಜಧಾನಿಯಲ್ಲಿ ರಜಿನಿಕಾಂತ್ ಮುಕ್ತ ಸಂಚಾರ, ಅಭಿಮಾನಿಗಳಲ್ಲಿ ಸಂಚಲನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts