More

    ಜ್ವರ ಬಂದವರಿಗೆ ಕೆಎಫ್‌ಡಿ ಪರೀಕ್ಷೆ ಮಾಡಿಸಿ

    ಚಿಕ್ಕಮಗಳೂರು: ಮಂಗನ ಕಾಯಿಲೆ ಕಂಡು ಬರುತ್ತಿರುವ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಯಾರಿಗಾದರೂ ಜ್ವರ ಕಂಡು ಬಂದರೆ ಅವರನ್ನು ಕೆಎಫ್‌ಡಿ ಪರೀಕ್ಷೆಗೆ ಒಳಪಡಿಸಿ, ಆಗ ಮಂಗನಕಾಯಿಲೆಯನ್ನು ಆರಂಭದಲ್ಲೇ ಪತ್ತೆ ಮಾಡಿ ಚಿಕಿತ್ಸೆ ನೀಡುವ ಮೂಲಕ ಜನರ ಜೀವ ಉಳಿಸಬಹುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗನ ಕಾಯಿಲೆ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಕುರಿತು ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿದ ಅವರು, ಕೆಎಫ್‌ಡಿ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಹಾಗೂ ಸೋಂಕು ಹೆಚ್ಚದಂತೆ ಕ್ರಮಕೈಗೊಳ್ಳಬೇಕು. ಆಗ ರೋಗದ ಭೀಕರತೆ ಹೆಚ್ಚದಂತೆ ತಡೆಯಲು ಸಾಧ್ಯ ಎಂದರು.
    ಕೆಎಫ್‌ಡಿ ಪಾಸಿಟಿವ್ ಪ್ರಕರಣ ಪತ್ತೆಯಾದ ತಕ್ಷಣ ಆವರನ್ನು ಆಸ್ಪತ್ರೆಗೆ ದಾಖಲಿಸಬೇಕು. ರೋಗ ಪ್ರಸರಣ ಸಾಮಾನ್ಯವಾಗಿ ಬೇಸಿಗೆಯಲ್ಲಿ ಇದ್ದು, ಆಸ್ಪತ್ರೆಗಳಲ್ಲಿ ಹಾಸಿಗೆಗಳನ್ನು ಮೀಸಲಿರಿಸಬೇಕು. ಔಷಧ ಲಭ್ಯತೆಯಿರುವಂತೆ ನೋಡಿಕೊಳ್ಳಬೇಕು. ಸೋಂಕಿತರಿಗೆ ಎಬಿಎಆರ್‌ಕೆ ಅಡಿ ರೆಫರ್ ಮಾಡಿ ಉಚಿತ ಚಿಕಿತ್ಸೆ ಕೊಡಿಸಬೇಕು. ಜನರಲ್ಲಿ ಕಾಯಿಲೆ ಕುರಿತು ಅರಿವು ಮೂಡಿಸಲು ಮಾಹಿತಿ, ಶಿಕ್ಷಣ, ಸಂವಹನ ಚಟುವಟಿಕೆ ಕೈಗೊಳ್ಳುವಂತೆ ಸೂಚನೆ ನೀಡಿದರು.
    ಕಾಡಂಚಿನ ಜನರಿಗೆ ಡಿಇಪಿಎ ತೈಲವನ್ನು ವಿತರಿಸಬೇಕು. ಕಾಡಿಗೆ ತೆರಳುವ ಸಂದರ್ಭದಲ್ಲಿ ತೈಲವನ್ನು ಕೈಕಾಲುಗಳಿಗೆ ಲೇಪಿಸಿಕೊಂಡು ಹೋಗುವಂತೆ ಜನರಲ್ಲಿ ಅರಿವುಮೂಡಿಸುವಂತೆ ಸಲಹೆ ನೀಡಿದರು.
    ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಭರತ್ ಸಭೆಗೆ ಮಾಹಿತಿ ನೀಡಿ, ಜಿಲ್ಲೆಯಲ್ಲಿ ಜನವರಿ ೨೦೨೪ರಿಂದ ಇಲ್ಲಿಯವರೆಗೆ ಒಟ್ಟು ೩೮೭ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಶಿವಮೊಗ್ಗ ಜಿಲ್ಲೆಯ ವಿಡಿಎಲ್ ಪ್ರಯೋಗ ಶಾಲೆಗೆ ಕಳುಹಿಸಲಾಗಿದೆ. ಅವುಗಳಲ್ಲಿ ೫೧ ಕೆಎಫ್‌ಡಿ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಇಬ್ಬರು ಮೃತಪಟ್ಟಿದ್ದಾರೆ. ಕೊಪ್ಪ ತಾಲೂಕಿನಲ್ಲಿ ೩೨೨ ರಕ್ತ ಮಾದರಿಗಳ ಪೈಕಿ ೩೮ ಪ್ರಕರಣಗಳು ಪಾಸಿಟಿವ್ ಎಂದು ವರದಿಯಾಗಿದೆ. ಎನ್.ಆರ್. ಪುರ ತಾಲೂಕಿನಲ್ಲಿ ೩೪ ರಕ್ತದ ಮಾದರಿಗಳಲ್ಲಿ ೧೦ ಪಾಸಿಟಿವ್ ಪ್ರಕರಣಗಳು, ಶೃಂಗೇರಿ ತಾಲೂಕಿನಲ್ಲಿ ೨೨ ರಕ್ತದ ಮಾದರಿಗಳಲ್ಲಿ ೧ ಪಾಸಿಟಿವ್ ಹಾಗೂ ಚಿಕ್ಕಮಗಳೂರು ತಾಲೂಕಿನ ೯ ರಕ್ತದ ಮಾದರಿಗಳಲ್ಲಿ ೨ ಪಾಸಿಟಿವ್ ಪ್ರಕರಣಗಳು ಕಂಡು ಬಂದಿವೆ ಎಂದು ವಿವರಿಸಿದರು.
    ಜಿಲ್ಲೆಯ ಒಟ್ಟು ೭೪ ಟಿಕ್‌ಪೂಲ್(ಉಣ್ಣೆ)ಗಳನ್ನು ಸಂಗ್ರಹಿಸಿ ವಿಡಿಎಲ್ ಪ್ರಯೋಗಾಲಯಕ್ಕೆ ಕಳುಹಿಸಿದ್ದು ಯಾವುದೇ ಪಾಸಿಟಿವ್ ಎಂದು ವರದಿಯಾಗಿಲ್ಲ. ಕೊಪ್ಪದಲ್ಲಿ ೫, ಎನ್.ಆರ್. ಪುರ ೩ ಹಾಗೂ ಶೃಂಗೇರಿಯಲ್ಲಿ ೧ ಮಂಗಗಳು ಮರಣ ಹೊಂದಿದ್ದು, ಜಿಲ್ಲೆಯಲ್ಲಿ ಒಟ್ಟು ೯ ಮಂಗಗಳು ಮರಣ ಹೊಂದಿವೆ. ಇವುಗಳ ಪೈಕಿ ಯಾವುದೇ ಕೆಎಫ್‌ಡಿ ಪಾಸಿಟಿವ್ ಪ್ರಕರಣಗಳು ವರದಿಯಾಗಿಲ್ಲ ಎಂದು ಮಾಹಿತಿ ನೀಡಿದರು.
    ಜಿಲ್ಲೆಯಲ್ಲಿ ವರದಿಯಾದ ಒಟ್ಟು ೫೧ ಕೆಎಫ್‌ಡಿ ಪ್ರಕರಣಗಳಲ್ಲಿ ೩೬ ಪ್ರಕರಣಗಳು ಈಗಾಗಲೇ ಡಿಸ್ಚಾರ್ಜ್ ಆಗಿದ್ದು, ಉಳಿದ ೧೩ ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಕೊಪ್ಪ, ಎನ್.ಆರ್.ಪುರ, ಮೂಡಿಗೆರೆ, ಶೃಂಗೇರಿ ಹಾಗೂ ಚಿಕ್ಕಮಗಳೂರು ತಾಲೂಕುಗಳಲ್ಲಿ ಟಿಕ್‌ಗಳ(ಉಣ್ಣೆ) ಸಂಗ್ರಹಣೆ, ಜ್ವರ ಸಮೀಕ್ಷೆ ಹಾಗೂ ಮಂಗಗಳ ಸಾವಿನ ಸಮೀಕ್ಷೆಗಳನ್ನು ಸಕ್ರಿಯವಾಗಿ ಕೈಗೊಳ್ಳಲಾಗಿದೆ ಎಂದರು.
    ಅರಣ್ಯ ಹಾಗೂ ಎಸ್ಟೇಟ್‌ಗಳಲ್ಲಿನ ಸಾರ್ವಜನಿಕರಿಗೆ ಡಿಇಪಿಎ ತೈಲ ವಿತರಣೆ ಮಾಡಲಾಗುತ್ತಿದೆ. ಕಾಡಿನಲ್ಲಿ ವಾಸಿಸುವ ಹಾಗೂ ಕಾಡಿಗೆ ಹೋಗಿ ಬರುವ ಸಾರ್ವಜನಿಕರಿಗೆ ಅವರು ಧರಿಸುವ ಬಟ್ಟೆಯ ಬಗ್ಗೆ, ಕಾಡಿಗೆ ಹೋಗುವ ಮೊದಲು ಡಿಇಪಿಎ ತೈಲವನ್ನು ಹಚ್ಚಿಕೊಳ್ಳುವಂತೆ, ಕಾಡಿನಿಂದ ಬಂದ ನಂತರ ಧರಿಸಿದ ಬಟ್ಟೆಯನ್ನು ಬಿಸಿ ನೀರಿನಲ್ಲಿ ಅದ್ದಿ ಶುಚಿಗೊಳಿಸುವಂತೆ ಹಾಗೂ ಕಾಡಿನಿಂದ ಬಂದ ತಕ್ಷಣ ಬಿಸಿ ನೀರಿನ ಸ್ನಾನ ಮಾಡಿ ಮನೆಯೊಳಗೆ ಹೋಗುವಂತೆ ಅರಿವು ಮೂಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
    ಸಭೆಯಲ್ಲಿ ಶಾಸಕರಾದ ಎಚ್.ಡಿ. ತಮ್ಮಯ್ಯ, ನಯನಾ ಮೋಟಮ್ಮ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ, ಸಚಿವರ ಆಪ್ತ ಕಾರ್ಯದರ್ಶಿ ಸತೀಶ್ ಕುಮಾರ್, ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿಪಂ ಸಿಇಒ ಡಾ. ಗೋಪಾಲಕೃಷ್ಣ, ಡಿಎಚ್‌ಓ ಡಾ. ಅಶ್ವಥ್ ಬಾಬು, ಡಾ. ಮಂಜುನಾಥ್ ಮತ್ತಿತರರ ಅಧಿಕಾರಿಗಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts