More

    ಆರೋಪ ಸುಳ್ಳಾದರೆ ನೇಣಿಗೇರಿಸಿ, ಕರೊನಾ ಭ್ರಷ್ಟಾಚಾರ ಪುನರುಚ್ಛರಿಸಿ ಸರ್ಕಾರಕ್ಕೆ ಸವಾಲೆಸೆದ ಡಿಕೆಶಿ

    ಮಂಗಳೂರು: ಕರೊನಾ ಹೆಸರಲ್ಲಿ ರಾಜ್ಯ ಬಿಜೆಪಿ ಸರ್ಕಾರ ನಡೆಸಿದ ಭಾರಿ ಪ್ರಮಾಣದ ಭ್ರಷ್ಟಾಚಾರವನ್ನು ಕಾಂಗ್ರೆಸ್ ದಾಖಲೆ ಸಹಿತ ಜನರ ಮುಂದಿಟ್ಟಿದೆ. ಇದು ಸುಳ್ಳಾಗಿದ್ದರೆ ನನ್ನನ್ನು ನೇಣಿಗೇರಿಸಲಿ. ಮಾನನಷ್ಟ ಮೊಕದ್ದಮೆ ಹೂಡಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸವಾಲು ಹಾಕಿದ್ದಾರೆ.

    ಕರೊನಾಗಿಂತ ಭೀಕರ ಬಿಜೆಪಿಯ ಭ್ರಷ್ಟಾಚಾರವಾಗಿದ್ದು, ಸರ್ಕಾರ ಹೆಣಗಳ ಮೇಲೆ ಹಣ ಮಾಡಲು ಹೊರಟಿದೆ. ರಾಜ್ಯದ ಜನತೆಗೆ ಬಿಜೆಪಿ ಸರ್ಕಾರವೇ ದೊಡ್ಡ ಶಾಪ. ಅದಕ್ಕೆ ಕಣ್ಣು, ಕಿವಿ, ಹೃದಯವೇ ಇಲ್ಲ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ವಾಗ್ದಾಳಿ ನಡೆಸಿದರು.

    4 ಸಾವಿರ ಕೋಟಿ ರೂ ವೆಚ್ಚ ಮಾಡಿ, ಅದರಲ್ಲಿ ಸರ್ಕಾರ ಸುಮಾರು 2 ಸಾವಿರ ಕೋಟಿ ರೂ. ಲೂಟಿ ಮಾಡಲಾಗಿದೆ. ಈ ಬಗ್ಗೆ ಹಾಲಿ ನ್ಯಾಯಾಧೀಶರ ಮೂಲಕ ನ್ಯಾಯಾಂಗ ತನಿಖೆಯಾಗಬೇಕು ಎಂದು ಆಗ್ರಹಿಸಿದರು. ಮುಖ್ಯಮಂತ್ರಿಗಳು ಪಾರದರ್ಶಕ ವ್ಯವಸ್ಥೆಯ ಬಗ್ಗೆ ಮಾತನಾಡಿದ್ದಾರೆ. ಆದರೆ ಎಲ್ಲ ಪಕ್ಷಗಳ ಪ್ರಾತಿನಿಧ್ಯವಿರುವ ಪಬ್ಲಿಕ್ ಅಕೌಂಟ್ಸ್ ಕಮಿಟಿ ಸಭೆ ಯಾಕೆ ನಡೆಸುತ್ತಿಲ್ಲ? ಮಾಹಿತಿ ಹಕ್ಕಿನಡಿ ಪ್ರಶ್ನೆ ಕೇಳಿದರೆ ಯಾಕೆ ಉತ್ತರಿಸುವುದಿಲ್ಲ ಎಂದು ಪ್ರಶ್ನಿಸಿದರು.
    ಸರ್ಕಾರದ ಲೀಗಲ್ ನೋಟಿಸ್‌ಗೆ ಉತ್ತರ ಕೊಡುತ್ತೇವೆ. ಕೇಸ್ ಹಾಕಿದರೂ ಉತ್ತರಿಸುತ್ತೇವೆ. ಅದಕ್ಕಿಂತ ಮೊದಲು ಕರೊನಾ ಹೆಸರಿನಲ್ಲಿ ನಡೆದ ಭ್ರಷ್ಟಾಚಾರ ಸಂಬಂಧಿಸಿ ನಾವು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿ ಎಂದು ಎಂದರು.

    ನಾಡಿನ ಅಭ್ಯುದಯಕ್ಕೆ ಸಹಕಾರ ನೀಡಿದ ಮುಂಬೈ ಸಹಿತ ಹೊರರಾಜ್ಯ, ಹೊರದೇಶಗಳಲ್ಲಿದ್ದ ಜನರು ವಾಪಸ್ಸಾಗಲು ಮುಂದಾದಾಗ ಸರ್ಕಾರ ಅತ್ಯಂತ ಕೀಳಾಗಿ ಅಸ್ಪಶ್ಯರಂತೆ ನಡೆಸಿಕೊಂಡಿದೆ. ಅವರ ಸ್ವಾಭಿಮಾನಕ್ಕೆ ಧಕ್ಕೆ ಉಂಟುಮಾಡುವ ರೀತಿಯಲ್ಲಿ ಬಿಜೆಪಿ ನಾಯಕು ನಡೆದುಕೊಂಡರು ಎಂದು ಡಿಕೆಶಿ ಆರೋಪಿಸಿದರು.
    ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮಾಜಿ ಸಚಿವರಾದ ಬಿ.ರಮಾನಾಥ ರೈ, ಯು.ಟಿ.ಖಾದರ್, ವಿನಯಕುಮಾರ್ ಸೊರಕೆ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೊ ಉಪಸ್ಥಿತರಿದ್ದರು.

    ಪೂಜಾರಿ ನೋಡಿ ಕಲಿಯಿರಿ: ಕೇಂದ್ರ ಸರ್ಕಾರ 20 ಲಕ್ಷ ಕೋಟಿ ರೂ, ರಾಜ್ಯ ಸರ್ಕಾರ 1600 ಕೋಟಿ ರೂ. ಘೋಷಣೆ ಮಾಡಿದ್ದು, ಅದನ್ನು ಯಾರಿಗೆ ನೀಡಿದ್ದೀರಿ ಎನ್ನುವ ಪಟ್ಟಿ ಕೊಡಿ. ಆಟೋ, ಕ್ಯಾಬ್ ಚಾಲಕರಿಗೆ ಇವತ್ತಿಗೂ ಸಹಾಯಧನ ಸಿಕ್ಕಿಲ್ಲ ಎಂದು ಶಿವಕುಮಾರ್ ಆರೋಪಿಸಿದರು. ಕೇಂದ್ರದ ಮಾಜಿ ವಿತ್ತ ಸಚಿವ ಬಿ.ಜನಾರ್ದನ ಪೂಜಾರಿಯವರ ಸಾಲಮೇಳ ನೆನಪಿಸಿಕೊಳ್ಳಿ, ಅವರು ಬಡವರಿಗೆ ನೇರ ಹಣ ತಲುಪಿಸಲು ಕ್ರಮ ಕೈಗೊಂಡಿದ್ದರು. ಕರೊನಾ ಸಂತ್ರಸ್ತರಿಗೆ ಪರಿಹಾರ ವಿಚಾರದಲ್ಲೂ ಇಂತಹ ಕ್ರಮ ಸಾಧ್ಯ. ಸಾಲಮೇಳ ಪರಿಕಲ್ಪನೆಯನ್ನು ಅರ್ಥಮಾಡಿಕೊಂಡು ಸರ್ಕಾರ ಕಾರ್ಯಾಚರಿಸಬೇಕು ಎಂದರು.

    ಗಾಂಧಿ ಕುಟುಂಬ ಅನಿವಾರ್ಯ: ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಮತ್ತೆ ರಾಹುಲ್ ಗಾಂಧಿ ಹೆಸರು ಕೇಳಿಬರುತ್ತಿರುವ ಕುರಿತು ಪ್ರತಿಕ್ರಿಯಿಸಿದ ಡಿಕೆಶಿ, ಗಾಂಧಿ ಕುಟುಂಬ ಇಲ್ಲದ ಕಾಂಗ್ರೆಸ್ಸನ್ನು ಊಹಿಸುವುದೂ ಅಸಾಧ್ಯ. ಗಾಂಧಿ ಕುಟುಂಬವು ಕಾಂಗ್ರೆಸ್ ಜತೆಗೆ ಅಷ್ಟು ನಿಕಟ ಸಂಬಂಧ ಹೊಂದಿದೆ ಎಂದರು.

    ಬಿಡುವಿಲ್ಲದೆ ಸುತ್ತಾಟ: ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿಗೆ ದ.ಕ. ಜಿಲ್ಲೆಗೆ ಆಗಮಿಸಿದ ಡಿ.ಕೆ.ಶಿವಕುಮಾರ್ ಪಕ್ಷದ ಹಿರಿಯರು, ಧಾರ್ಮಿಕ ಮುಖಂಡರನ್ನು ಭೇಟಿಯಾದರು. ಮಂಗಳೂರಿನಲ್ಲಿ ಕೇಂದ್ರದ ಮಾಜಿ ಸಚಿವರಾದ ಆಸ್ಕರ್ ಫರ್ನಾಂಡಿಸ್, ಬಂಟ್ವಾಳದಲ್ಲಿ ಜನಾರ್ದನ ಪೂಜಾರಿಯವರ ಆರೋಗ್ಯ ವಿಚಾರಿಸಿದ್ದು, ಮಂಗಳೂರು ಬಿಷಪ್ ಡಾ.ಪೀಟರ್ ಪೌಲ್ ಸಲ್ದಾನ ಹಾಗೂ ಉಡುಪಿ – ಚಿಕ್ಕಮಗಳೂರು ಜಿಲ್ಲಾ ಖಾಜಿ ಬೇಕಲ ಇಬ್ರಾಹಿಂ ಮುಸ್ಲಿಯಾರ್ ಉಸ್ತಾದ್ ಬೇಕಲ್ ಅವರನ್ನು ಮೋಂಟುಗೋಳಿಯಲ್ಲಿರುವ ಮನೆಯಲ್ಲಿ ಭೇಟಿಯಾದರು. ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನಕ್ಕೂ ಭೇಟಿ ನೀಡಿದರು. ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಂದ ಆಶೀರ್ವಾದ ಪಡೆದರು. ಮಾಜಿ ಸಚಿವರಾದ ರಮಾನಾಥ ರೈ, ವಿನಯಕುಮಾರ್ ಸೊರಕೆ, ಅಭಯಚಂದ್ರ ಜೈನ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಹರೀಶ್ ಕುಮಾರ್, ಮುಖಂಡರಾದ ಮಿಥುನ್ ರೈ, ರಂಜನ್ ಗೌಡ, ಚಂದನ್ ಕಾಮತ್, ಶೈಲೇಶ್ ಕುಮಾರ್, ಪ್ರಭಾಕರ ಧರ್ಮಸ್ಥಳ, ಕೇಶವ ಗೌಡ ಬೆಳಾಲು ಮುಂತಾದವರು ಉಪಸ್ಥಿತರಿದ್ದರು. ಕ್ಷೇತ್ರದ ಪರವಾಗಿ ಮ್ಯಾನೇಜರ್ ರಾಜೇಂದ್ರ ದಾಸ್ ಸ್ವಾಗತಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts