More

    ಕೆಂಪಣ್ಣ ಬಂಧನಕ್ಕೆ ಜಿಲ್ಲಾ ಕಾಂಗ್ರೆಸ್ ಆಕ್ರೋಶ

    ದಾವಣಗೆರೆ : ಹಿರಿಯ ಗುತ್ತಿಗೆದಾರ ಕೆಂಪಣ್ಣ ಅವರ ಬಂಧನವನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
    ಮಹಾನಗರ ಪಾಲಿಕೆ ಆವರಣದಲ್ಲಿ ಧರಣಿ ನಡೆಸಿದ ಪಕ್ಷದ ಕಾರ್ಯಕರ್ತರು, ಮುಖಂಡರು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.
    ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ ಮಾತನಾಡಿ, ರಾಜ್ಯದಲ್ಲಿ ಭಂಡ ಸರ್ಕಾರವಿದೆ. 40 ಪರ್ಸೆಂಟ್ ಭ್ರಷ್ಟಾಚಾರದ ಕುರಿತು ಜನಸಾಮಾನ್ಯರು ಮಾತನಾಡಿಕೊಳ್ಳುವಂತಾಗಿದೆ ಎಂದು ಹೇಳಿದರು.
    ಭ್ರಷ್ಟಾಚಾರದ ಕುರಿತು ಕೆಂಪಣ್ಣ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು. ಈ ಕಾರಣಕ್ಕಾಗಿ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಯಿತು, ಆಡಳಿತ ಪಕ್ಷದವರು ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
    ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧವೇ ಭ್ರಷ್ಟಾಚಾರದ ಆರೋಪವಿದೆ. ಬಿಜೆಪಿ ಆಡಳಿತದ ಬಗ್ಗೆ ಜನರು ಬೇಸತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸುತ್ತಾರೆ ಎಂದು ತಿಳಿಸಿದರು.
    ಕೆಪಿಸಿಸಿ ವಕ್ತಾರ ಡಿ. ಬಸವರಾಜ ಮಾತನಾಡಿ, ಕೆಂಪಣ್ಣ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿರುವ ಸಚಿವ ಮುನಿರತ್ನ ಅವರೂ ಮುಂಚೆ ಬಿಬಿಎಂಪಿ ಗುತ್ತಿಗೆದಾರರಾಗಿದ್ದರು. ಈಗ ಉಂಡ ಮನೆಗೇ ದ್ರೋಹ ಬಗೆದಿದ್ದಾರೆ ಎಂದು ಆರೋಪಿಸಿದರು.
    ಕೆಂಪಣ್ಣ ಅವರನ್ನು ದ್ವೇಷದಿಂದ ಬಂಧಿಸಲಾಗಿದೆ. ಗುತ್ತಿಗೆದಾರರೆಲ್ಲ ಅವರ ಪರವಾಗಿದ್ದೇವೆ ಎಂದರು. ಕರ್ನಾಟಕ ಭ್ರಷ್ಟಾಚಾರದ ರಾಜಧಾನಿಯಾಗಿದೆ. ರಾಜ್ಯದಲ್ಲಿ 40 ಪರ್ಸೆಂಟ್ ಭ್ರಷ್ಟಾಚಾರ ನಡೆಯುತ್ತಿದೆ. ಈ ಬಗ್ಗೆ ನ್ಯಾಯಾಂಗ ತನಿಖೆ ನಡೆಸಲಿ ಎಂದು ಆಗ್ರಹಿಸಿದರು.
    ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ ಕೆ. ಶೆಟ್ಟಿ ಮಾತನಾಡಿ, ಸಂಸದ ಜಿ.ಎಂ. ಸಿದ್ದೇಶ್ವರ 40 ಪರ್ಸೆಂಟ್ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಆದ್ದರಿಂದಲೇ ಎಲ್ಲೆಡೆ ಕಳಪೆ ಕಾಮಗಾರಿಗಳಾಗಿವೆ. ಶಾಸಕ ಡಾ. ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮಾಡಿಸಿದ ಕೆಲಸಗಳು ಗುಣಮಟ್ಟದಿಂದ ಕೂಡಿವೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts