ನ.24ರಂದು ಗ್ಯಾರಂಟಿ ಯೋಜನೆಗಳ ಕಾರ್ಯಾಗಾರ

ಉಡುಪಿಯ ಜಿಪಂ ಸಭಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಅಶೋಕ ಕೊಡವೂರು ಮಾತನಾಡಿದರು. ಪ್ರಶಾಂತ ಜತ್ತನ್ನ, ರಮೇಶ ಕಾಂಚನ್​, ಡಾ. ಸುನೀತಾ ಶೆಟ್ಟಿ ಇದ್ದರು.
ಉಡುಪಿಯ ಜಿಪಂ ಸಭಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಅಶೋಕ ಕೊಡವೂರು ಮಾತನಾಡಿದರು. ಪ್ರಶಾಂತ ಜತ್ತನ್ನ, ರಮೇಶ ಕಾಂಚನ್​, ಡಾ. ಸುನೀತಾ ಶೆಟ್ಟಿ ಇದ್ದರು.
Published on: 

* ಜಿಲ್ಲಾ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ ಕೊಡವೂರು ಮಾಹಿತಿ

* ಫಲಾನುಭವಿಗಳ ಸಂಭ್ರಮೋತ್ಸವ, ಸಂವಾದ

ಉಡುಪಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳ ಯಶಸ್ವಿ ಅನುಷ್ಠಾನ ಮತ್ತು ಫಲಾನುಭವಿಗಳೊಂದಿಗೆ ನೇರ ಸಂವಾದ ನಡೆಸುವ ನಿಟ್ಟಿನಲ್ಲಿ ಉಡುಪಿಯ ಅಜ್ಜರಕಾಡು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನ.24ರಂದು ಬೆಳಗ್ಗೆ 10 ಗಂಟೆಗೆ ಗ್ಯಾರಂಟಿ ಯೋಜನೆಗಳ ಮಾಹಿತಿ ಕಾರ್ಯಾಗಾರ ಹಾಗೂ ಫಲಾನುಭವಿಗಳ ಸಂಭ್ರಮೋತ್ಸವ ಆಯೋಜಿಸಲಾಗಿದೆ ಎಂದು ಜಿಲ್ಲಾ ಅನುಷ್ಠಾನ ಸಮಿತಿಯ ಅಧ್ಯಕ್ಷ ಅಶೋಕ ಕೊಡವೂರು ತಿಳಿಸಿದರು.

ಉಡುಪಿ ಜಿಪಂ ಕಚೇರಿಯ ಸಭಾಭವನದಲ್ಲಿ ಶನಿವಾರ (ನ.21) ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆ, ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ ಮತ್ತು ಯುವನಿಧಿ ಯೋಜನೆಗಳು ರಾಜ್ಯದ ಲಕ್ಷಾಂತರ ಕುಟುಂಬಗಳಿಗೆ ಆಸರೆಯಾಗಿದೆ. ಈ ಯೋಜನೆಗಳ ಪ್ರಯೋಜನ ಪಡೆದ ಫಲಾನುಭವಿಗಳನ್ನು ಒಂದೆಡೆ ಸೇರಿಸಿ ಯೋಜನೆಗಳ ಕುರಿತು ಮಾಹಿತಿ ನೀಡುವುದು ಮತ್ತು ಪ್ರಯೋಜನ ಪಡೆದವರೊಂದಿಗೆ ಸಂವಾದ ನಡೆಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶ ಎಂದರು.

ಉಸ್ತುವಾರಿ ಸಚಿವರಿಂದ ಉದ್ಘಾಟನೆ

ಆಹಾರ,ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್​ ಅರ್ಷದ್​ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್​.ಎಂ. ರೇವಣ್ಣ, ಉಪಾಧ್ಯಕ್ಷೆ ಡಾ.ಪುಷ್ಪಾ ಅಮರನಾಥ, ಉಡುಪಿ ಜಿಲ್ಲೆಯ ಎಲ್ಲ ಶಾಸಕರು, ಸಂಸದರು ಜನಪ್ರತಿನಿಧಿಗಳು ಜಿಲ್ಲಾ ಮತ್ತು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಗಳ ಅಧ್ಯಕ್ಷರು ಹಾಗೂ ಸದಸ್ಯರು, ಜಿಲ್ಲಾಡಳಿತದ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಖ್ಯಾತ ಚಿಂತಕ ಡಾ.ವಾಸು ಮತ್ತು ವಿಧಾನ ಪರಿಷತ್​ ಉಪಸಭಾಪತಿ ಡಾ. ಉಮಾಶ್ರೀ ಅವರು ಗ್ಯಾರಂಟಿ ಯೋಜನೆಗಳ ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಗಳ ಕುರಿತು ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದರು.

ಮಾಹಿತಿ ಕಾರ್ಯಾಗಾರ

ಜಿಲ್ಲಾ ಅನುಷ್ಠಾನ ಸಮಿತಿಯ ಉಪಾಧ್ಯಕ್ಷ ಪ್ರಶಾಂತ ಜತ್ತನ್ನ ಮಾತನಾಡಿ, ಗ್ಯಾರಂಟಿ ಯೋಜನೆಗಳ ನಿಯಮಾವಳಿ, ಅರ್ಹತಾ ಮಾನದಂಡ, ಹೊಸ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹಾಗೂ ತಾಂತ್ರಿಕ ಅಡಚಣೆಗಳ ನಿವಾರಣೆ ಕುರಿತು ಸಾರ್ವಜನಿಕರಿಗೆ ಮತ್ತು ಗ್ರಾಮಮಟ್ಟದ ಪ್ರತಿನಿಧಿಗಳಿಗೆ ಮಾಹಿತಿ ನೀಡಲು ವಿಶೇಷ ಮಾಹಿತಿ ಕಾರ್ಯಾಗಾರವೂ ನಡೆಯಲಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ವಿವಿಧ ಇಲಾಖೆಗಳ ವತಿಯಿಂದ ಗ್ಯಾರಂಟಿ ಯೋಜನೆಗಳ ಮಾಹಿತಿ ಮತ್ತು ತಾಂತ್ರಿಕ ಸಮಸ್ಯೆಗಳ ಪರಿಹಾರಕ್ಕಾಗಿ ವಿಶೇಷ ಮಾಹಿತಿ ಮಳಿಗೆಗಳನ್ನೂ ತೆರೆಯಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಅನುಷ್ಠಾನ ಸಮಿತಿಯ ಉಪಾಧ್ಯಕ್ಷ ಸತೀಶ ಜತ್ತಿ, ಉಡುಪಿ ತಾಲೂಕು ಅಧ್ಯಕ್ಷ ರಮೇಶ ಕಾಂಚನ್​, ಬ್ರಹ್ಮಾವರ ತಾಲೂಕು ಅಧ್ಯಕ್ಷೆ ಡಾ. ಸುನೀತಾ ಶೆಟ್ಟಿ, ಹೆಬ್ರಿ ತಾಲೂಕು ಅಧ್ಯಕ್ಷ ಶಂಕರ ಶೇರಿಗಾರ ಉಪಸ್ಥಿತರಿದ್ದರು.

ಅನುದಾನ ಖರ್ಚಿನ ಅಂಕಿ-ಅಂಶ

ಉಡುಪಿ ಜಿಲ್ಲೆಯಲ್ಲಿ ಪಂಚ ಗ್ಯಾರೆಂಟಿ ಯೋಜನೆಯಡಿ ಈವರೆಗೆ ಒಟ್ಟು ಸುಮಾರು 3,036.24 ಕೋಟಿ ರೂ. ಅನುದಾನ ಖರ್ಚು ಮಾಡಲಾಗಿದೆ. ಗೃಹಲಕ್ಷ್ಮಿ ಯೋಜನೆಗೆ 2,14,066 ಫಲಾನುಭವಿಗಳಿಗೆ 1579.81 ಕೋಟಿ ರೂ., ಗೃಹಜ್ಯೋತಿಗೆ ಮೂರು 3,31,768 ಫಲಾನುಭವಿಗಳಿಗೆ 809.87 ಕೋಟಿ ರೂ., ಅನ್ನಭಾಗ್ಯ ಯೋಜನೆಯಡಿ 8,24,049 ಫಲಾನುಭವಿಗಳಿಗೆ 427.37 ಕೋಟಿ ರೂ., ಯುವನಿಧಿ ಯೋಜನೆಯಡಿ 5,197 ಫಲಾನುಭವಿಗಳಿಗೆ 14.28 ಕೋಟಿ ರೂ. ಹಾಗೂ ಶಕ್ತಿ ಯೋಜನೆಯಡಿ 5,14,89,196 ಮಹಿಳಾ ಪ್ರಯಾಣಿಕರಿಗೆ 204.91 ಕೋಟಿ ರೂ ವೆಚ್ಚ ಮಾಡಲಾಗಿದೆ ಎಂದರು.