ಆರ್ಥಿಕ ದಿವಾಳಿಯಾದ ಕಾಂಗ್ರೆಸ್​ ಸರ್ಕಾರ

ಉಡುಪಿಯ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ವಿ.ಸುನೀಲಕುಮಾರ ಮಾತನಾಡಿದರು. ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ, ಕಾಪು ಶಾಸಕ ಗುರ್ಮೆ ಸುರೇಶ ಶೆಟ್ಟಿ, ಕುಂದಾಪುರ ಶಾಸಕ ಕಿರಣಕುಮಾರ ಕೊಡ್ಗಿ ಇದ್ದರು.
ಉಡುಪಿಯ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ವಿ.ಸುನೀಲಕುಮಾರ ಮಾತನಾಡಿದರು. ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ, ಕಾಪು ಶಾಸಕ ಗುರ್ಮೆ ಸುರೇಶ ಶೆಟ್ಟಿ, ಕುಂದಾಪುರ ಶಾಸಕ ಕಿರಣಕುಮಾರ ಕೊಡ್ಗಿ ಇದ್ದರು.
Published on: 

* ಬಿಜೆಪಿ ಮಾಜಿ ಸಚಿವ ವಿ.ಸುನೀಲಕುಮಾರ ಟೀಕೆ

* ಗ್ಯಾರಂಟಿ ಸಮಾವೇಶಕ್ಕೆ ಗ್ರಾಪಂ ಅನುದಾನ ಬಳಕೆಗೆ ವಿರೋಧ

ಉಡುಪಿ: ಜಿಲ್ಲಾ ಕ್ರೀಡಾಂಗಣದಲ್ಲಿ ನ.24ರಂದು ರಾಜ್ಯ ಸರ್ಕಾರ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಲಾನುಭವಿಗಳ ಸಮಾವೇಶ ಹಮ್ಮಿಕೊಂಡಿದ್ದು, ಇದಕ್ಕೆ ಜಿಲ್ಲೆಯ ಯಾವುದೇ ಶಾಸಕರ ವಿರೋಧವಿಲ್ಲ. ಆದರೆ, ಈ ಸಮಾವೇಶ ನಡೆಸಲು ಜಿಲ್ಲೆಯ ಎಲ್ಲ ಗ್ರಾಪಂಗಳು ತಮ್ಮ ಸ್ಥಳಿಯ ನಿಧಿಯಿಂದ ತಲಾ 25 ಸಾವಿರ ರೂ. ಅನುದಾನ ಒದಗಿಸಬೇಕು ಎಂದು ಆದೇಶಿಸಿದ ಜಿಪಂ ಸಿಇಒ ಕ್ರಮಕ್ಕೆ ನಮ್ಮೆಲ್ಲರ ಖಂಡನೆಯಿದೆ. ಯಾವುದೇ ಅಭಿವೃದ್ಧಿ ಕೈಗೊಳ್ಳದೆ ಕೇವಲ ಗ್ಯಾರಂಟಿ ಯೋಜನೆಗಳಿಗೆ ಜೋತು ಬಿದ್ದಿರುವ ರಾಜ್ಯ ಸರ್ಕಾರಕ್ಕೆ ಜಿಲ್ಲಾ ಮಟ್ಟದ ಸಣ್ಣ ಸಮಾರಂಭ ನಡೆಸಲೂ ಆಗದ ಸ್ಥಿತಿ ಬಂದಿದೆ. ಕೈ ಸರ್ಕಾರ ಆರ್ಥಿಕವಾಗಿ ಸಂಪೂರ್ಣ ದಿವಾಳಿಯಾಗಿದೆ ಎಂದು ಮಾಜಿ ಸಚಿವ ವಿ.ಸುನೀಲಕುಮಾರ ಟೀಕಿಸಿದ್ದಾರೆ.

ಉಡುಪಿಯ ಪತ್ರಿಕಾ ಭವನದಲ್ಲಿ ಶನಿವಾರ (ನ.21) ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗ್ರಾಮೀಣ ಭಾಗದ ಜನತೆಯ ತೆರಿಗೆ ಹಣದ ದುರುಪಯೋಗವಿದು. ಗ್ರಾಮೀಣ ಭಾಗದ ಅಭಿವೃದ್ಧಿಗೆ ಮೀಸಲಿರುವ ಹಣವನ್ನು ಇವರ ಗ್ಯಾರಂಟಿ ಸಮಾವೇಶಕ್ಕೆ ಬಳಸಿಕೊಳ್ಳುವುದು ಎಷ್ಟು ಸೂಕ್ತ? ಜಿಲ್ಲಾ ಉಸ್ತುವಾರಿ ಸಚಿವರು ಜಿಪಂ ಸಿಇಒ ನೀಡಿರುವ ಆದೇಶವನ್ನು ಮರುಪರಿಶೀಲಿಸಬೇಕೆಂದು ಆಗ್ರಹಿಸುತ್ತೇನೆ ಎಂದರು.

ಬಿಲ್​ ಭರಿಸಲು ಪರದಾಟ

ಜಿಲ್ಲೆಯಲ್ಲಿ ಮೊದಲೇ ಬರಗಾಲವಿದೆ. ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಬಹುದಾಗಿದೆ. ಎಲ್ಲ ಗ್ರಾಪಂಗಳೂ ಆರ್ಥಿಕವಾಗಿ ನಷ್ಟದಲ್ಲಿದೆ. ಕುಡಿಯುವ ನೀರಿನ ಬಿಲ್​ ಹಾಗೂ ವಿದ್ಯುತ್​ ಬಿಲ್​ ಬಾಕಿ ಇದೆ. ಸೆಪ್ಟೆಂಬರ್​ ಅಂತ್ಯಕ್ಕೆ ಮೆಸ್ಕಾಂ ನೀಡಿರುವ ಮಾಹಿತಿಯಂತೆ ನೀರು ಸರಬರಾಜು ಬಾಕಿ ಬಿಲ್​ 2,25,79,998.36 ಹಾಗೂ ವಿದ್ಯುತ್​ ಬಿಲ್​ 3,86,4772 ರೂ. ಬಾಕಿ ಇದೆ. ಗ್ರಾಪಂ ಸಿಬ್ಬಂದಿಗೂ ಸರಿಯಾಗಿ ವೇತನ ಪಾವತಿ ಆಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಗ್ರಾಪಂ ಅನುದಾನವನ್ನು ಇವರ ಗ್ಯಾರಂಟಿ ಸಭೆಗೆ ಬಳಕೆ ಮಾಡುವುದು ಅಕ್ರಮ ಹಾಗೂ ಸಂವಿಧಾನದ ವಿರೋಧಿಯಾಗಿದೆ ಎಂದರು.

ಗ್ರಾಪಂ ಕಾಯ್ದೆ ಉಲ್ಲಂಘನೆ

ಗ್ರಾಪಂ ಸದಸ್ಯರ ಸಭೆಯಲ್ಲಿ ರ್ನಿಣಯಕೈಗೊಳ್ಳದೆ ಅನುದಾನ ಬಳಸಲು ಗ್ರಾಪಂ ಕಾಯ್ದೆ 58ರ ಪ್ರಕಾರ ಸಾಧ್ಯವೇ ಇಲ್ಲ. ಇದೀಗ ಗ್ರಾಪಂ ಜನಪ್ರತಿನಿಧಿಗಳ ಅವಧಿಯೂ ಮುಗಿದಿದ್ದು ಯಾರೂ ಇಲ್ಲ. ಹೀಗಾಗಿ ಗ್ರಾಪಂ ಆಡಳಿತಾಧಿಕಾರಿ ಯಾವುದೇ ಕಾರಣಕ್ಕೂ ಅನುದಾನ ನೀಡಬಾರದು. ಇವರ ಗ್ಯಾರಂಟಿ ಸಮಾವೇಶಕ್ಕೆ ಸರ್ಕಾರ ಪ್ರತ್ಯೇಕ ಅನುದಾನ ಮೀಸಲಿಡಬೇಕೆಂದು ಆಗ್ರಹಿಸುತ್ತೇನೆ ಎಂದರು.

ಸುದ್ದಿಗೋಷ್ಠಿಯಲ್ಲಿ ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ, ಕಾಪು ಶಾಸಕ ಗುರ್ಮೆ ಸುರೇಶ ಶೆಟ್ಟಿ, ಕುಂದಾಪುರ ಶಾಸಕ ಕಿರಣಕುಮಾರ ಕೊಡ್ಗಿ ಇದ್ದರು.

ಸುತ್ತೋಲೆಯನ್ನೇ ಬದಲಿಸಿದ ಕೈ ಸರ್ಕಾರ!

ಗ್ರಾಪಂಗಳ ಅನುದಾನವನ್ನು ವಿದ್ಯುತ್​ ಬಿಲ್​, ಸ್ವಚ್ಛತೆ, ಆರೋಗ್ಯ ನೈರ್ಮಲ್ಯ, ಶಾಶ್ವತ ಕಟ್ಟಡ ನಿರ್ಮಾಣದಂತಹ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತದೆ. ಪ್ರಸ್ತುತ ಗ್ರಾಪಂಗಳ ವ್ಯಾಪ್ತಿಯ ರಸ್ತೆ ಪಕ್ಕಗಳ ಹುಲ್ಲು ಕತ್ತರಿಸಿಲ್ಲ. ಕಳೆದ 3 ವರ್ಷದಿಂದ ಯಾವುದೇ ರಸ್ತೆಯ ಅಭಿವೃದ್ಧಿ ಆಗಿಲ್ಲ. ಜಿಲ್ಲೆಗೆ ಒಂದೇಒಂದು ಮನೆ ಮಂಜೂರಿಯಾಗಿಲ್ಲ. ಇಷ್ಟರ ನಡುವೆಯೂ ಸರ್ಕಾರ ಆ.8ರಂದು ಆರಂಭಿಸಿರುವ ಪ್ರಜಾಸೇವೆಯ ಸಭೆಯನ್ನು ನಾವೆಲ್ಲರೂ ಸ್ವಾಗತಿಸಿದ್ದೇವೆ. ತಾಲೂಕು, ಹೋಬಳಿ ಮಟ್ಟದಲ್ಲಿ ನಡೆಯವ ಈ ಸಭೆಗೆ ತಗಲುವ ವೆಚ್ಚವನ್ನು ಸರ್ಕಾರವೇ ಭರಿಸುವುದಾಗಿ ಸುತ್ತೋಲೆ ಮೂಲಕ ತಿಳಿಸಿತ್ತು. ಆದರೆ, 3 ತಿಂಗಳ ಬಳಿಕ ನ.19ರಂದು ಮತ್ತೆ ಪ್ರಜಾಸೇವೆಯ ಸಭೆಯ ಕುರಿತಂತೆ ಪರಿವರ್ತಿತ ಸುತ್ತೋಲೆ ಹೊರಡಿಸಿದೆ. ಅದರಲ್ಲಿ ಎಲ್ಲ ಪ್ರಜಾಸೇವೆಗಳಿಗೆ ತಗಲುವ ವೆಚ್ಚವನ್ನು ಜಿಲ್ಲಾಡಳಿತ, ಜಿಪಂ. ನಗರಾಡಳಿತ, ಗ್ರಾಪಂನವರೇ ಕ್ರೋಡಿಕರಿಸಬೇಕೆಂದು ಆದೇಶಿಸಿದೆ. ಇವರ ಗ್ಯಾರಂಟಿ ಯೋಜನೆಗಳ ಸಭೆಗೆ ಗ್ರಾಪಂನವರು ಹಣ ಹೊಂದಿಸುವುದು ಅಭಿವೃದ್ಧಿಯೇ? ಇಂತಹ ಕೆಟ್ಟ ಆಡಳಿತ ಹಾಗೂ ಸರ್ಕಾರವನ್ನೂ ಬಹುಶ: ಎಂದಿಗೂ ಯಾರೂ ಕಂಡಿರಲಿಕ್ಕಿಲ್ಲ ಎಂದು ಸುನೀಲಕುಮಾರ ಆಕ್ರೋಶ ವ್ಯಕ್ತಪಡಿಸಿದರು.