ಡಾ. ಜಿ.ಶಂಕರ ಕಾಲೇಜ್​ ಪ್ರಾಂಶುಪಾಲೆಯಾಗಿ ಡಾ. ಶ್ರೀಮತಿ ಅಡಿಗ ನೇಮಕ

ಉಡುಪಿ ಅಜ್ಜರಕಾಡಿನ ಡಾ. ಜಿ.ಶಂಕರ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್​ನ ಪ್ರಾಂಶುಪಾಲೆಯಾಗಿ ಅಧಿಕಾರ ಸ್ವೀಕರಿಸಿದ ಡಾ. ಶ್ರೀಮತಿ ಅಡಿಗ.
ಉಡುಪಿ ಅಜ್ಜರಕಾಡಿನ ಡಾ. ಜಿ.ಶಂಕರ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್​ನ ಪ್ರಾಂಶುಪಾಲೆಯಾಗಿ ಅಧಿಕಾರ ಸ್ವೀಕರಿಸಿದ ಡಾ. ಶ್ರೀಮತಿ ಅಡಿಗ.
Published on: 

* ಕೆಇಎ ಪರೀಕ್ಷೆಯಲ್ಲಿ ರಾಜ್ಯಕ್ಕೆ 23ನೇ ರ್ಯಾಂಕ್​ ಗಳಿಸಿದ್ದ ಶಿಕ್ಷಕಿ

ಉಡುಪಿ: ಕೆಇಎ ಪರೀಕ್ಷೆ ಬರೆದ 813 ಅಭ್ಯರ್ಥಿಗಳ ಪೈಕಿ ರಾಜ್ಯಮಟ್ಟದಲ್ಲಿ 23ನೇ ರ್ಯಾಂಕ್​ ಗಳಿಸಿ ಉಡುಪಿ ಜಿಲ್ಲೆಯಲ್ಲಿ ಪ್ರಥಮ ರ್ಯಾಂಕ್​ ಗಳಿಸಿದ ಡಾ. ಶ್ರೀಮತಿ ಅಡಿಗ ಅವರು ಪ್ರಾಂಶುಪಾಲೆಯಾಗಿ ಮುಂಬಡ್ತಿ ಪಡೆದಿದ್ದಾರೆ.

ಉಡುಪಿ ಜಿಲ್ಲೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ 12 ಕಾಲೇಜ್​ಗಳ ಪೈಕಿ ಅತ್ಯಂತ ಪ್ರತಿಷ್ಠಿತ ಕಾಲೇಜ್​ ಹೆಗ್ಗಳಿಕೆಯ ಅಜ್ಜರಕಾಡಿನ ಡಾ. ಜಿ.ಶಂಕರ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್​ನ ಪ್ರಾಂಶುಪಾಲೆಯಾಗಿ ನೇಮಕಾತಿಗೊಂಡಿದ್ದು, ಸೋಮವಾರ (ನ.23) ಅಧಿಕಾರ ಸ್ವೀಕರಿಸಿದರು. ಪ್ರೊ. ಶ್ರೀಮತಿ ಅವರು ಇದೇ ಕಾಲೇಜ್​ನಲ್ಲಿ ಗಣಿತ ವಿಭಾಗದ ಮುಖ್ಯಸ್ಥೆಯಾಗಿ ಹಾಗೂ ಐಕ್ಯೂಎಸಿ ಸಂಚಾಲಕರಾಗಿಯೂ ಸೇವೆ ಸಲ್ಲಿಸುತ್ತಿದ್ದರು.

ಕೆಇಎ ಮೂಲಕ ಪರೀಕ್ಷೆ

ಕಾಲೇಜ್​ ಶಿಕ್ಷಣ ಇಲಾಖೆಯಲ್ಲಿ ಸುಮಾರು 15 ವರ್ಷದಿಂದ 410 ಕಾಲೇಜ್​ಗಳಲ್ಲಿ ಖಾಲಿ ಇರುವ ಗ್ರೇಡ್​-1 ಪ್ರಾಂಶುಪಾಲರುಗಳ ಹುದ್ದೆಗೆ ಕೆಇಎ ಮೂಲಕ ಪರೀಕ್ಷೆ ನಡೆಸಿ, ಮೆರಿಟ್​ ಆಧಾರದಲ್ಲಿ ಭರ್ತಿ ಮಾಡಲು 2022ರಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಬಳಿಕ 2023ರ ಜುಲೈ ತಿಂಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು.

ಪರೀಕ್ಷೆಯ ಬಳಿಕ ನೇಮಕಾತಿ ಪ್ರಕ್ರಿಯೆಗೆ ಹಲವಾರು ಅಡೆ-ತಡೆ ಉಂಟಾಗಿ ಕುಂಟುತ್ತ ಸಾಗಿತ್ತು. ಕೊನೆಗೂ ಮಂಜೂರಾತಿಯಾದ 310 ಖಾಲಿ ಹುದ್ದೆಗಳಲ್ಲಿ 222 ಹುದ್ದೆಗೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿದೆ. ಕೌನ್ಸೆಲಿಂಗ್​ ಮೂಲಕ ಸ್ಥಳ ಆಯ್ಕೆ ಮಾಡಲು ಅವಕಾಶ ನೀಡಿ ಸರ್ಕಾರದಿಂದ ನೇಮಕಾತಿ ಆದೇಶ ನೀಡಲಾಗಿದೆ.