ಐತಿಹಾಸಿಕ ತಿಪ್ಪಯ್ಯನ ಕೆರೆ ಸಂರಕ್ಷಿಸಲು ಪಟ್ಟು: ಸಾರ್ವಜನಿಕರ ಪ್ರತಿಭಟನೆ ಕಿಡಿ

ಸರ್ದಾರ್ ವಲ್ಲಭಭಾಯಿ ಪಟೇಲ್ ನಗರ ನಿವಾಸಿಗಳ ಪ್ರತಿಭಟನೆ ಬಡಾವಣೆಗೆ ಮೂಲ ಸೌಕರ್ಯ ಕಲ್ಪಿಸಲು ಒತ್ತಾಯ
ಐತಿಹಾಸಿಕ ತಿಪ್ಪಯ್ಯನ ಕೆರೆ ಸಂರಕ್ಷಿಸಲು ಪಟ್ಟು: ಸಾರ್ವಜನಿಕರ ಪ್ರತಿಭಟನೆ ಕಿಡಿ
ಮೂಲ ಸೌಲಭ್ಯಕ್ಕೆ ಆಗ್ರಹಿಸಿ ಪೊಲೀಸ್ ಬಡಾವಣೆಯ ನಿವಾಸಿಗಳು ಸೋಮವಾರ ಪ್ರತಿಭಟನೆ ನಡೆಸಿದರು. ಥಾಮಸ್, ಶಿವಸ್ವಾಮಿ, ಅಶೋಕ್, ಮನುಕುಮಾರ್, ಮೋಹನ್ ರಾವ್, ಲೋಹಿತ್, ಮಹೇಶ್, ಸ್ವಾಮಿ, ಶಿವರಾಮ್, ಗಗನ್, ಲೀಲಾ ಶಿವಕುಮಾರ್ ಇತರರಿದ್ದರು. Public protest sparks demand to preserve historic Tippayyana Lake
Published on: 

ಮೈಸೂರು: ಚಾಮುಂಡಿಬೆಟ್ಟದ ತಪ್ಪಲಲ್ಲಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ನಗರ (ಪೊಲೀಸ್ ಬಡಾವಣೆ) ನಾಗರಿಕರಿಗೆ ಮೂಲ ಸೌಕರ್ಯ ಕಲ್ಪಿಸಬೇಕು. ಕಲುಷಿತ ಒಳಚರಂಡಿ ನೀರು ಸೇರುವುದನ್ನು ತಡೆದು ಐತಿಹಾಸಿಕ ತಿಪ್ಪಯ್ಯನ ಕೆರೆಯನ್ನು ಸಂರಕ್ಷಿಸಬೇಕು ಎಂದು ಸ್ಥಳೀಯ ನಿವಾಸಿಗಳು ಸೋಮವಾರ ಪ್ರತಿಭಟಿಸಿದರು.

ಬಡಾವಣೆಯ ಮುಖ್ಯ ದ್ವಾರದ ಬಳಿ ಜಮಾವಣೆಗೊಂಡ ನೂರಾರು ನಿವಾಸಿಗಳು ವಾಹನ ಸಂಚಾರ ಬಂದ್ ಮಾಡಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಕೆಲ ನಿಮಿಷಗಳ ಕಾಲ ಆ ಮಾರ್ಗದ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು.

ಕರ್ನಾಟಕ ಪೊಲೀಸ್ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಮೂಲಕ ನಿರ್ಮಾಣಗೊಂಡಿರುವ ಈ ಬಡಾವಣೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದನೆಗೊಂಡಿದ್ದು, 1,954 ನಿವೇಶನಗಳಿದ್ದು, ಸುಮಾರು 1,400 ನಿವೇಶನಗಳಲ್ಲಿ ಮನೆ ನಿರ್ಮಿಸಿಕೊಂಡು ನಾಗರಿಕರು ವಾಸಿಸುತ್ತಿದ್ದಾರೆ. ಬಡಾವಣೆ ರಮ್ಮನಹಳ್ಳಿ ಪಟ್ಟಣ ಪಂಚಾಯಿತಿ ಹಾಗೂ ಅಲನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿದ್ದು, ನಾಗರಿಕರು ನಿಯಮಾನುಸಾರ ತೆರಿಗೆ ಸೇರಿದಂತೆ ವಿವಿಧ ಶುಲ್ಕ ಪಾವತಿಸುತ್ತಿದ್ದರೂ, ಈವರೆಗೆ ಮೂಲಸೌಕರ್ಯ ಎಂಬುದು ಮರೀಚಿಕೆಯಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಬಡಾವಣೆಯಲ್ಲಿ ಪ್ರಮುಖವಾಗಿ ಕುಡಿಯುವ ನೀರಿನ ಸಮಸ್ಯೆ, ಹದಗೆಟ್ಟ ರಸ್ತೆಗಳು, ತಿಪ್ಪಯ್ಯನ ಕೆರೆಯ ಮಾಲಿನ್ಯ ತೀವ್ರ ಸಮಸ್ಯೆಗಳಾಗಿವೆ. ಕೊಳವೆಬಾವಿ ಮೂಲಕ ಸರಬರಾಜಾಗುತ್ತಿರುವ ನೀರು ಕುಡಿಯಲು ಯೋಗ್ಯವಾಗಿಲ್ಲ. ಹೀಗಾಗಿ ನಿವಾಸಿಗಳು ಸಮೀಪದ ಐಪಿಎಸ್ ಬಡಾವಣೆ (3ನೇ ಹಂತ) ಮತ್ತು ಜೆಎಸ್‌ಎಸ್ (2ನೇ ಹಂತ) ಬಡಾವಣೆಗಳಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಅವಲಂಬಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಳಲು ತೋಡಿಕೊಂಡರು.

ಬಡಾವಣೆ ನಿರ್ಮಾಣದ ವೇಳೆ ನಿರ್ಮಿಸಲಾದ ಎಲ್ಲ ರಸ್ತೆಗಳು ಪ್ರಸ್ತುತ ಸಂಪೂರ್ಣ ಹದಗೆಟ್ಟಿದ್ದು, ಗುಂಡಿಗಳಿಂದಾಗಿ ವಾಹನ, ಪಾದಚಾರಿಗಳ ಸಂಚಾರಕ್ಕೆ ತೊಂದರೆಯಾಗಿದೆ. ಹಿರಿಯ ನಾಗರಿಕರು, ಮಕ್ಕಳು ರಸ್ತೆಗಳಲ್ಲಿ ಬಿದ್ದು ಗಾಯಗೊಂಡಿರುವ ಘಟನೆಗಳೂ ಸಾಕಷ್ಟು ನಡೆದಿವೆ. ಶಾಸಕರಿಂದ ನಿರ್ಮಿಸಲಾದ ಮುಖ್ಯ ರಸ್ತೆಯನ್ನು ಹೊರತುಪಡಿಸಿ, ಸಂಪರ್ಕ ರಸ್ತೆಗಳ ದುರಸ್ತಿ ಕಾರ್ಯ ನಡೆದಿಲ್ಲ ಎಂದು ದೂರಿದರು.

ಶುದ್ಧ ಕುಡಿಯುವ ನೀರಿನ ಶಾಶ್ವತ ವ್ಯವಸ್ಥೆ, ಸಂಪರ್ಕ ರಸ್ತೆಗಳ ತುರ್ತು ದುರಸ್ತಿ, ತಿಪ್ಪಯ್ಯನ ಕೆರೆಗೆ ಕಲುಷಿತ ನೀರು ಸೇರುವುದನ್ನು ತಡೆದು ಕೆರೆಯ ಪುನಶ್ಚೇತನ ಮತ್ತು ಸಂರಕ್ಷಣಾ ಕಾರ್ಯ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ವೇದಿಕೆ ಅಧ್ಯಕ್ಷ ಥಾಮಸ್, ಸ್ಥಳೀಯರಾದ ಶಿವಸ್ವಾಮಿ, ಅಶೋಕ್, ಮನುಕುಮಾರ್, ಮೋಹನ್ ರಾವ್, ಲೋಹಿತ್, ಮಹೇಶ್, ಸ್ವಾಮಿ, ಶಿವರಾಮ್, ಗಗನ್, ಲೀಲಾ ಶಿವಕುಮಾರ್, ಶೋಭಾ ಧನಂಜಯ, ಮೋಹನ್ ಕುಮಾರ್, ಸಿದ್ದರಾಜೇಗೌಡ, ವೀಣಾ ಕಾಮತ್, ವೆಂಕಟೇಶ್, ಶಿವಣ್ಣ, ಎನ್.ಎಂ. ಮಾನೆ, ದೇವಪ್ಪ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net