ಸಾಲಿಗ್ರಾಮ: ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿಗಳು ರಾಜ್ಯದ ಬಡಜನರ ಬದುಕು ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಫಲಾನುಭವಿಗಳು ಪಕ್ಷಾತೀತವಾಗಿ ಇದರ ಪ್ರಯೋಜನ ಪಡೆಯುತ್ತಿದ್ದಾರೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಉದಯ ಶಂಕರ್ ತಿಳಿಸಿದರು.
ತಾಲೂಕಿನ ಕುಪ್ಪೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಪಂಚ ಗ್ಯಾರಂಟಿ ಯೋಜನೆಗಳ ಅರಿವು ಹಾಗೂ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪಂಚ ಗ್ಯಾರಂಟಿಗಳಿಂದ ವಂಚಿತವಾದ ಫಲಾನುಭವಿಗಳಿಗೆ ನೆರವಾಗಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಅಧಿಕಾರಿಗಳನ್ನು ಕರೆತಂದಿದ್ದು, ಫಲಾನುಭವಿಗಳಿಗೆ ಯೋಜನೆಯಡಿ ಸೌಲಭ್ಯ ಪಡೆಯುವ ಸಂಬಂಧ ಯಾವುದೇ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಂಡುಕೊಳ್ಳಬಹುದು ಎಂದರು.
ಪಂಚ ಗ್ಯಾರಂಟಿ ಯೋಜನೆಗಳು ಎಲ್ಲ ವರ್ಗದ ಫಲಾನುಭವಿಗಳಗೆ ಜೀವನ ಸುಧಾರಣೆಗೆ ದಾರಿ ಮಾಡಿಕೊಟ್ಟಿವೆ. ವಿಶೇಷವಾಗಿ ಗೃಹಲಕ್ಷ್ಮಿ ಹಲವು ಕುಟುಂಬಗಳಿಗೆ ವರದಾನವಾಗಿದ್ದು, ಸಣ್ಣಪುಟ್ಟ ಚೀಟಿ ವ್ಯವಹಾರಗಳಿಂದ ಮಹಿಳೆಯರು ದೂರ ಉಳಿದು ನೆಮ್ಮದಿಯ ಬದುಕು ನಡೆಸುವಂತಾಗಿದೆ ಎಂದು ಉದಯ್ ಶಂಕರ್ ಹೇಳಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರವಿಕುಮಾರ್ ಮಾತನಾಡಿ, ಪಂಚ ಗ್ಯಾರಂಟಿ ಸರ್ಕಾರದ ಯೋಜನೆಗಳಾಗಿದ್ದು, ಫಲಾನುಭವಿಗಳಿಗೆ ಯೋಜನೆ ಸೌಲಭ್ಯ ಸಮರ್ಪಕವಾಗಿ ತಲುಪಿದೆಯಾ ಎಂದು ಪರಿಶೀಲಿಸುವುದು ಅಧಿಕಾರಿಗಳ ಜವಾಬ್ದಾರಿ. ಈ ಹಿನ್ನೆಲೆಯಲ್ಲಿ ಪ್ರತಿ ಗ್ರಾಪಂನಲ್ಲೂ ಪಂಚ ಗ್ಯಾರಂಟಿ ಅನುಷ್ಠಾನ ಸಂಬಂಧ ಯೋಜನೆಗಳ ಅರಿವು ಮೂಡಿಸಲು ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.
ಪಂಚ ಗ್ಯಾರಂಟಿ ಯೋಜನೆಗಳಿಂದ ಯಾರಾದರೂ ವಂಚಿತರಾಗಿದ್ದರೆ ಸ್ಥಳೀಯ ಗ್ರಾಪಂ ಅಥವಾ ಗ್ಯಾರಂಟಿ ಸಮಿತಿ ಸದಸ್ಯರಿಗೆ ಮಾಹಿತಿ ನೀಡಿದರೆ ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ತಪ್ಪಾಗಿದ್ದರೆ ಅದನ್ನು ಸರಿಪಡಿಸುತ್ತೇವೆ. ಅಲ್ಲದೆ ಫಲಾನುಭವಿಗಳಿಗೂ ಈ ಸಂಬಂಧ ಅಗತ್ಯ ಮಾಹಿತಿ ಒದಗಿಸಿ ನೆರವು ಒದಗಿಸಲಾಗುವುದು ಎಂದರು.
ಕಾರ್ಯಕ್ರಮಕ್ಕೂ ಮುನ್ನ ಗಣ್ಯರು ಸಸಿ ನೆಟ್ಟು ನೀರುಣಿಸಿದರು. ಕಾರ್ಯಕ್ರಮದಲ್ಲಿ ಕುಪ್ಪೆ ಗ್ರಾಪಂ ಮಾಜಿ ಅಧ್ಯಕ್ಷೆ ಚುಂಚನಕಟ್ಟೆ ಗೌರಮ್ಮ, ಗ್ಯಾರಂಟಿ ಸಮಿತಿ ಸದಸ್ಯರಾದ ಚಿಕ್ಕ ಹನಸೋಗೆ ಮೂರ್ತಿ, ಹೊಸೂರು ಮಹಾಲಿಂಗಪ್ಪ, ಅಂಕನಹಳ್ಳಿ ಕೊಪ್ಪಲು ಮಹದೇವ್, ದೊಡ್ಡ ಕೊಪ್ಪಲು ಕಾಂತರಾಜ್. ವಿಎಸ್‌ಎಸ್ ಮಾಜಿ ಅಧ್ಯಕ್ಷ ಸಂತೋಷ್, ಪಾರ್ಥಗೌಡ, ಗ್ರಾಪಂ ಮಾಜಿ ಉಪಾಧ್ಯಕ್ಷೆ ಗೀತಾ ಮಹೇಂದ್ರ, ತಮ್ಮೇಗೌಡ, ಕ್ಷೇತ್ರಪಾಲ, ರಾಮಕೃಷ್ಣ ಗೌಡ, ವಿರೂಪಾಕ್ಷ, ನಟರಾಜ್. ಸೋಮಪ್ಪ, ಎಡಿಪಿಒ ಅಕ್ಕಮಹಾದೇವಿ, ಗ್ರಾಮಲೆಕ್ಕಿಗ ಸೈಯದ್, ಪಿಡಿಒ ಮಂಜುನಾಥ್, ರಾಮೇಗೌಡ ಇತರರು ಇದ್ದರು.