ಮಲ್ಟಿಸ್ಪೆಷಾಲಿಟಿ ಮೆಡಿಕಲ್ ಹಬ್ PUTTUR

- ಭವಿಷ್ಯದ ಕಲ್ಪನೆಯೊಂದಿಗೆ ಹೋರಾಟ | ಒಂದು ಲಕ್ಷ ಸಹಿ ಸಂಗ್ರಹ ಗುರಿ - ಪುತ್ತೂರಿನಲ್ಲಿ ನಿಮ್ಹಾನ್ಸ್, ಜಯದೇವ, ಕಿದ್ವಾಯಿ ಘಟಕ ಸ್ಥಾಪನೆಗೆ ಬೇಡಿಕೆ
puttur medical collage
ಮಲ್ಟಿಸ್ಪೆಷಾಲಿಟಿ ಮೆಡಿಕಲ್ ಹಬ್ ಕಲ್ಪನೆ
Published on: 

ಪುತ್ತೂರು: ‘ಪುತ್ತೂರು ಮುನ್ನಡೆಯಲಿ- ಭಾರತಕ್ಕೆ ಮಾದರಿಯಾಗಲಿ’ ಎಂಬ ಧ್ಯೇಯೋದ್ದೇಶದೊಂದಿಗೆ, ಸಮಗ್ರ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನೊಳಗೊಂಡ ಮೆಡಿಕಲ್ ಕಾಲೇಜು ಸ್ಥಾಪನೆಗಾಗಿ ಪುತ್ತೂರು ಸರ್ಕಾರಿ ಮೆಡಿಕಲ್ ಕಾಲೇಜು ಹೋರಾಟ ಸಮಿತಿ ಮತ್ತು ಪುತ್ತೂರು ಬಳಕೆದಾರರ ಹಿತರಕ್ಷಣಾ ವೇದಿಕೆ ಜಂಟಿಯಾಗಿ ಬೃಹತ್ ಸಾಮಾಜಿಕ ಹೋರಾಟಕ್ಕೆ ಮುನ್ನುಡಿ ಬರೆದಿವೆ.

ಒಂದೇ ಆವರಣದಲ್ಲಿ ಮೆಡಿಕಲ್ ಕಾಲೇಜು ಮಾತ್ರವಲ್ಲದೆ ನಿಮ್ಹಾನ್ಸ್, ಜಯದೇವ, ಕಿದ್ವಾಯಿಯ ಪ್ರಮುಖ ಸೂಪರ್‌ಸ್ಪೆಷಾಲಿಟಿ ಘಟಕಗಳನ್ನು ಒಳಗೊಂಡ ‘ಮಲ್ಟಿ ಸ್ಪೆಷಾಲಿಟಿ’ ಆರೋಗ್ಯ ಸಂಕೀರ್ಣ ನಿರ್ಮಾಣ ಮಾಡುವುದು ಈ ಹೋರಾಟದ ಮುಖ್ಯ ಕನಸಾಗಿದೆ. ಇದರಿಂದ ನರ, ಹೃದಯ, ಕ್ಯಾನ್ಸರ್ ಸಂಬಂಽ ಚಿಕಿತ್ಸೆ ಒಂದೇ ಸೂರಿನಡಿ ಸಿಗುವುದರಿಂದ ಬಡಜನರಿಗೆ ಅನುಕೂಲವಾಗಲಿದೆ.

೧ ಲಕ್ಷ ಸಹಿ ಸಂಗ್ರಹ ಗುರಿ: ಈ ಹೋರಾಟಕ್ಕೆ ಸಾರ್ವಜನಿಕರಿಂದ ಉತ್ತಮ ಬೆಂಬಲ ವ್ಯಕ್ತವಾಗುತ್ತಿದ್ದು, ಈಗಾಗಲೇ ೨೦,೦೦೦ಕ್ಕೂ ಹೆಚ್ಚು ಸಹಿಗಳನ್ನು ಸಂಗ್ರಹಿಸಲಾಗಿದೆ. ಶೀಘ್ರದ ೧ ಲಕ್ಷ ಸಹಿ ಸಂಗ್ರಹಿಸುವ ಗುರಿ ಹೊಂದಲಾಗಿದೆ.

ಒಂದೇ ಸೂರಿನಡಿ ಸೂಪರ್ ಸ್ಪೆಷಾಲಿಟಿ ಘಟಕಗಳು: ಮೆಡಿಕಲ್ ಕಾಲೇಜಿನೊಂದಿಗೆ ನಿಮ್ಹಾನ್ಸ್, ಜಯದೇವ ಹಾಗೂ ಕಿದ್ವಾಯಿ ಸಂಸ್ಥೆಗಳ ಉಪಘಟಕಗಳು, -ರೆನ್ಸಿಕ್ (ಎ-ಎಸ್‌ಎಲ್) ಮತ್ತು ಜೆರಿಯಾಟ್ರಿಕ್ಸ್ (ಹಿರಿಯ ನಾಗರಿಕರ ಆರೈಕೆ) ವಿಭಾಗಗಳು ಒಂದೇ ಆವರಣದಲ್ಲಿ ಬರಬೇಕು ಎಂಬುದು ಸಮಿತಿಯ ಪ್ರಮುಖ ಬೇಡಿಕೆಯಾಗಿದೆ.

ಮುಂದಿನ ಜವಾಬ್ದಾರಿ: ಹೋರಾಟ ಸಮಿತಿಯ ಹೋರಾಟದ ಫಲವಾಗಿ ಸರ್ಕಾರಿ ವೈದ್ಯಕೀಯ ಕಾಲೇಜು ೨೦೨೭-೨೮ರ ಶೈಕ್ಷಣಿಕ ಸಾಲಿನಲ್ಲಿ ಪ್ರಾರಂಭವಾಗುವ ಸೂಚನೆ ಸಿಕ್ಕಿದೆ. ಆದರೂ ಭವಿಷ್ಯದಲ್ಲಿ ಸಂಪೂರ್ಣ ಸರ್ಕಾರಿ ಸ್ವಾಮ್ಯ ಮತ್ತು ಸರ್ಕಾರದ ಅನುದಾನದಲ್ಲೇ ಮುನ್ನಡೆಯುವುದನ್ನು ಖಚಿತಪಡಿಸುವುದು, ಶಿಕ್ಷಣ ಮತ್ತು ರೋಗಿಗಳ ಆರೈಕೆಗೆ ಅಗತ್ಯವಾಗಿರುವ ಎಲ್ಲ ಸೌಲಭ್ಯ ಪಡೆದುಕೊಳ್ಳುವುದು, ಬೋಧಕ, ವೈದ್ಯಕೀಯ ಮತ್ತು ಪೂರಕ ಸಿಬ್ಬಂದಿ ನೇಮಕದಲ್ಲಿ ಭ್ರಷ್ಟಾಚಾರ ನಡೆಯದಂತೆ ಕಣ್ಗಾವಲಿಡುವುದು ಮತ್ತಿತರ ಜವಾಬ್ದಾರಿಗಳನ್ನು ಸಮಿತಿ ನೋಡಿಕೊಳ್ಳಲಿದೆ.

ವೈದ್ಯಕೀಯ ಮತ್ತು ಸಂಶೋಧನಾ ಆವರಣ: ವೈದ್ಯಕೀಯ ಕಾಲೇಜು ಸ್ಥಾಪನೆಗೆ ಪ್ರಕ್ರಿಯೆ ನಡೆಯುತ್ತಿದೆ. ಬಳಿಕ ವಿವಿಧ ಘಟಕಗಳನ್ನೊಳಗೊಂಡ ಉನ್ನತ ತಜ್ಞ ಘಟಕಗಳು ಪುತ್ತೂರಿಗೆ ಆಗಮಿಸಬೇಕು. ಐಸಿಎಂಆರ್‌ನಂತಹ ಸಂಸ್ಥೆಗಳು ಇಲ್ಲಿಗೆ ಬಂದು ಸಂಶೋಧನಾ ಸಾಮರ್ಥ್ಯ ಹೆಚ್ಚಾಗಬೇಕು. 

ತುರ್ತು ಸಂದರ್ಭದಲ್ಲಿ ಅನುಕೂಲ

ಕ್ಯಾನ್ಸರ್, ಹೃದಯ, ಪಾರ್ಶ್ವವಾಯುವಿನಂತಹ ಸಮಸ್ಯೆ ಕಾಣಿಸಿಕೊಂಡ ಸಂದರ್ಭದಲ್ಲಿ ಮೂರು ಘಟಕಗಳೂ ಒಂದಕ್ಕೊಂದು ಪೂರಕವಾಗಿ ಕೆಲಸ ಮಾಡಲಿವೆ. ಕಡಿಮೆ ಅವಧಿಯಲ್ಲಿ ಉತ್ತಮ ಚಿಕಿತ್ಸೆಯನ್ನು ಪಡೆದುಕೊಳ್ಳಲು ಇದು ಸಹಕಾರಿಯಾಗಲಿದೆ. ಜನರಿಗೆ ಓಡಾಟ ಕಡಿಮೆಯಾಗಿ ಗೋಲ್ಡನ್ ಹವರ್‌ನಲ್ಲೇ ಚಿಕಿತ್ಸೆ ಲಭಿಸಿ ಪ್ರಾಣಾಪಾಯದಿಂದ ಪಾರಾಗಬಹುದಾಗಿದೆ. ಇದೆಲ್ಲದಕ್ಕೂ ಪೂರಕವಾಗಿ ಭೌಗೋಳಿಕವಾಗಿ ಪುತ್ತೂರು ಅನುಕೂಲಕರವಾಗಿದೆ.

ಜಾಗ ಗುರುತಿಸುವ ಪ್ರಕ್ರಿಯೆ

ಸರ್ಕಾರದ ಹೆಸರಲ್ಲಿ ೫೦ ಎಕರೆಗಿಂತ ಹೆಚ್ಚಿನ ಜಾಗ ಇರುವುದನ್ನು ಗುರುತಿಸಿ ಘಟಕಗಳಿಗೆ ಕಾಯ್ದಿರಿಸುವ ಪ್ರಕ್ರಿಯೆ ನಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ಸೇಡಿಯಾಪು ಮೆಡಿಕಲ್ ಕಾಲೇಜು ಸ್ಥಾಪನೆಯಾಗುವ ಜಾಗದ ಪಕ್ಕದಲ್ಲೇ ಸುಮಾರು ೧೨೦ ಎಕರೆ ಜಾಗ ಗುರುತಿಸಲಾಗಿದೆ. ನಗರಕ್ಕೆ ಹೆಚ್ಚು ಸಮೀಪವಿರುವ ದೃಷ್ಟಿಯಿಂದ ಆರ್ಯಾಪು ಭಾಗದಲ್ಲಿ ಸುಮಾರು ೮೮ ಎಕರೆ ಜಾಗ ಗುರುತಿಸಲಾಗಿದೆ. ಇದರ ಜತೆಗೆ ಬೇರೆ ಎರಡು, ಮೂರು ಕಡೆಗಳಲ್ಲಿಯೂ ಜಾಗ ಗುರುತಿಸುವ ಪ್ರಕ್ರಿಯೆ ನಡೆಯುತ್ತಿದೆ.

ಮೆಡಿಕಲ್ ಕಾಲೇಜು ಪಕ್ಕದಲ್ಲಿ ಮೂರು ಘಟಕಗಳ ಸ್ಥಾಪನೆಯಿಂದ ತಂತ್ರಜ್ಞಾನ ಹಾಗೂ ಉಪಕರಣಗಳನ್ನು ಪರಸ್ಪರ ಬಳಸಿಕೊಳ್ಳಲು ಸುಲಭ ಸಾಧ್ಯವಾಗಲಿದೆ. ಯಾವ ಸರ್ಕಾರ ಬಂದರೂ ಹೋರಾಟ ನಿರಂತರವಾಗಿ ನಡೆಯುತ್ತಿದ್ದು, ಇದರಲ್ಲಿ ರಾಜಕೀಯ ಸರಿಯಲ್ಲ. ಜಾತ್ಯತೀತ ರಾಜಕೀಯರಹಿತ ಹೋರಾಟ ಎಲ್ಲರ ಜವಾಬ್ದಾರಿಯಾಗಿದೆ. ಪುತ್ತೂರು ಮೆಡಿಕಲ್ ಕಾಲೇಜಿನಲ್ಲಿ ಅಳಿವಿನ ಅಂಚಿನಲ್ಲಿರುವ ಕೊರಗ ಸಮುದಾಯಕ್ಕೆ ಒಂದು ಸೀಟ್ ಮೀಸಲು ಇಡಬೇಕು. ಶಾಸಕಾಂಗ ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯವಾಗುತ್ತದೆ.
ಸಂದೀಪ್ ನಾಯಕ್ ಸಾಮೆತ್ತಡ್ಕ, ಅಮೆರಿಕದ ತಜ್ಞ ವೈದ್ಯ
ಮಂಗಳೂರು ಕೇಂದ್ರೀಕೃತವಾಗಿ ಸಾಕಷ್ಟು ವ್ಯವಸ್ಥೆಗಳು ಈಗಾಗಲೇ ಇರುವುದರಿಂದ ಭವಿಷ್ಯದ ದೃಷ್ಟಿಯಿಂದ ಪುತ್ತೂರು ಅಭಿವೃದ್ಧಿಯಾಗಬೇಕು. ಪುತ್ತೂರಿನಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವಾಗುವುದರಿಂದ ಸುಳ್ಯ, ವಿಟ್ಲ, ಬಂಟ್ವಾಳ, ಬೆಳ್ತಂಗಡಿ, ಕಡಬ ಸೇರಿ ಸುತ್ತಮುತ್ತಲಿನ ಪ್ರದೇಶಗಳಿಗೆ ಹೆಚ್ಚಿನ ಅನುಕೂಲವಾಗಲಿದೆ.
ದಿನೇಶ್ ಭಟ್ ಕೆ., ಮೆಡಿಕಲ್ ಕಾಲೇಜು ಹಿರಿಯ ಹೋರಾಟಗಾರ
Also Read
ಪವರ್ ಪಾಯಿಂಟ್ ಪ್ರೆಸಂಟೇಶನ್ MEDICAL COLLEGE
puttur medical collage
Also Read
ಚಿಗರೊಡೆದ ನಿಮ್ಹಾನ್ಸ್ ಕನಸು! PUTTUR
puttur medical collage
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net