

ಪ್ರವೀಣ್ ರಾಜ್ ಕೊಯಿಲ
ರಾಮಕುಂಜ ಗ್ರಾಮದ ರಾಮಕುಂಜ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡದ ಮೇಲ್ಛಾವಣಿ ಶಿಥಿಲಗೊಂಡಿದ್ದು, ಕುಸಿಯುಲ ಭೀತಿ ಎದುರಾಗಿದೆ. ಮಕ್ಕಳಿಗೆ ವಿದ್ಯಾಭ್ಯಾಸದ ಬೆಳಕು ನೀಡಬೇಕಾದ ಶಾಲೆಯೇ ಆತಂಕದ ನೆರಳಿನಲ್ಲಿದ್ದು, ಮೂಲಸೌಕರ್ಯಗಳ ಕೊರತೆ, ಕೊಠಡಿಗಳ ಅಭಾವ ಹಾಗೂ ದುರಸ್ತಿಯಾಗದ ಕಟ್ಟಡಗಳಲ್ಲೇ ನಡುವೆ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.
1951ರಲ್ಲಿ ಆರಂಭಗೊಂಡ ಶಾಲೆಯಲ್ಲಿ ಪ್ರಸುತ್ತ 1ರಿಂದ 7ನೇ ತರಗತಿವರೆಗೆ 116 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಶಾಲೆಯ ಒಟ್ಟು ಏಳು ಕೊಠಡಿಗಳ ಪೈಕಿ ಮೂರು ಕೊಠಡಿಗಳು ಸಂಪೂರ್ಣ ಶಿಥಿಲಗೊಂಡಿದ್ದು, ಉಳಿದ ಕೊಠಡಿಗಳಲ್ಲಿ ತರಗತಿ ನಡೆಸಲಾಗುತ್ತಿದೆ. ಮೇಲ್ಛಾವಣಿಯ ಪಕ್ಕಾಸುಗಳು ಗೆದ್ದಲು ಹಿಡಿದು ತುಂಡಾಗುತ್ತಿದ್ದು, ಹೆಂಚುಗಳು ಪುಡಿಯಾಗಿವೆ. ಮಳೆ ಬಂದರೆ ತರಗತಿಯೊಳಗೆ ನೀರು ಸೋರುತ್ತದೆ.
ಈ ಹಿಂದೆ ಅಪಾಯಕಾರಿ ಸ್ಥಿತಿಯಲ್ಲಿದ್ದ ಶಾಲೆಯ ಒಂದು ಕಟ್ಟಡವನ್ನು ನೆಲಸಮಗೊಳಿಸಲಾಗಿತ್ತು. ಆ ವೇಳೆ ಹೊಸ ಕಟ್ಟಡ ನಿರ್ಮಿಸಿಕೊಡುವ ಭರವಸೆ ನೀಡಲಾಗಿತ್ತು. ಆದರೆ ಭರವಸೆ ನೀಡಿ ಮೂರು ವರ್ಷ ಕಳೆದರೂ ಹೊಸ ಕಟ್ಟಡದ ಕಾಮಗಾರಿ ಆರಂಭವಾಗಿಲ್ಲ. ಇದೀಗ ಉಳಿದ ಕಟ್ಟಡದ ಮೇಲ್ಛಾವಣಿಯೂ ಶಿಥಿಲಗೊಂಡಿದ್ದು, ಒಂದು ಕೊಠಡಿಯನ್ನು ಮುಚ್ಚಲಾಗಿದೆ. ಕೊಠಡಿಗಳ ಕೊರತೆಯಿಂದ ಅಪಾಯಕಾರಿ ಕಟ್ಟಡದ ಇನ್ನೊಂದು ಬದಿಯಲ್ಲಿ ಮಕ್ಕಳಿಗೆ ಪಾಠ ಮಾಡಲಾಗುತ್ತಿದೆ. ಮೇಲ್ಛಾವಣಿ ಕುಸಿದರೆ ವಿದ್ಯಾರ್ಥಿಗಳ ಜೀವಕ್ಕೆ ಅಪಾಯ ಎದುರಾಗುವ ಸಾಧ್ಯತೆ ಇದೆ.
ಶಾಲಾ ಮೇಲ್ಛಾವಣಿಯನ್ನು ಸಂಪೂರ್ಣ ದುರಸ್ತಿ ಮಾಡಿಸಿಕೊಡುವಂತೆ ಮುಖ್ಯಶಿಕ್ಷಕರು ಹಾಗೂ ಎಸ್‌ಡಿಎಂಸಿ ಸಮಿತಿ ಸದಸ್ಯರು ಶಿಕ್ಷಣ ಇಲಾಖೆ, ಶಾಸಕಿ ಭಾಗೀರಥಿ ಮುರುಳ್ಯ, ಉಸ್ತುವಾರಿ ಸಚಿವ ಯು.ಟಿ.ಖಾದರ್ ಹಾಗೂ ಸ್ಥಳೀಯಾಡಳಿತ ಸೇರಿದಂತೆ ಸಂಬಂಧಪಟ್ಟ ಎಲ್ಲರಿಗೂ ಮನವಿ ಸಲ್ಲಿಸಿದ್ದಾರೆ. ಆದರೆ, ಸಮಸ್ಯೆಗೆ ಶಾಶ್ವತ ಪರಿಹಾರ ಇನ್ನೂ ದೊರೆತಿಲ್ಲ. ಪ್ರತಿ ವರ್ಷ ಮಳೆಗಾಲದಲ್ಲಿ ಪುಡಿಯಾದ ಹೆಂಚುಗಳನ್ನು ಬದಲಾಯಿಸುವುದು, ತುಂಡಾದ ಪಕ್ಕಾಸುಗಳಿಗೆ ತಾತ್ಕಾಲಿಕ ತೇಪೆ ಹಾಕುವುದಷ್ಟೇ ನಡೆಯುತ್ತಿದೆ.