ಪುತ್ತೂರು: ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವ ಫಲಾನುಭವಿಗಳು ಅ.೨೦ರೊಳಗೆ ಇ-ಕೆವೈಸಿ ಪೂರ್ಣಗೊಳಿಸುವುದು ಕಡ್ಡಾಯವಾಗಿದೆ. ಆದರೆ, ನ್ಯಾಯಬೆಲೆ ಅಂಗಡಿಗಳಿಗೆ ತೆರಳಲು ಸಾಧ್ಯವಾಗದ ಹಿರಿಯ ನಾಗರಿಕರು ಹಾಗೂ ಅಂಗವಿಕಲರ ಅನುಕೂಲಕ್ಕಾಗಿ ಸರ್ಕಾರ ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ವಿಶೇಷ ಕ್ರಮಕ್ಕೆ ಮುಂದಾಗಿದೆ.
ಕೆಲವೆಡೆ ಇ-ಕೆವೈಸಿ ಮಾಹಿತಿಯ ಕೊರತೆ ಹಾಗೂ ಅಧಿಕಾರಿಗಳ ಸ್ಪಂದನೆಯ ವಿಳಂಬದಿಂದಾಗಿ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದರೂ, ಗ್ಯಾರಂಟಿ ಸಮಿತಿಗಳ ತುರ್ತು ಮಧ್ಯಪ್ರವೇಶದಿಂದಾಗಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುತ್ತಿದೆ.
ವೃದ್ಧೆ ಮನೆಗೆ ಅಧಿಕಾರಿಗಳು: ಪುಣಚ ಭಾಗದ ೮೦ ವರ್ಷ ಮೇಲ್ಪಟ್ಟ ವೃದ್ಧೆಯೊಬ್ಬರ ಬೆರಳಚ್ಚು ಸರಿಯಾಗಿ ಬೀಳದ ಕಾರಣ ಅವರಿಗೆ ಸರ್ಕಾರದ ಉಚಿತ ಅಕ್ಕಿ ಹಾಗೂ ಇತರ ಸೌಲಭ್ಯಗಳು ಸಿಗದೆ ತೊಂದರೆಯಾಗಿತ್ತು. ಈ ಕುರಿತು ಸೆಪ್ಟೆಂಬರ್ ೮ರಂದೇ ತಹಸೀಲ್ದಾರ್ ಕಚೇರಿಗೆ ಇಮೇಲ್ ಮೂಲಕ ಮನವಿ ಸಲ್ಲಿಸಲಾಗಿದ್ದರೂ ಅ.೧೨ರ ವರೆಗೂ ಯಾವುದೇ ಸ್ಪಂದನೆ ಸಿಕ್ಕಿರಲಿಲ್ಲ. ಇದರಿಂದ ಪಡಿತರ ಅಕ್ಕಿ ಸ್ಥಗಿತಗೊಳ್ಳುವ ಭೀತಿ ಎದುರಾಗಿತ್ತು.
ಈ ವಿಷಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಗಮನಕ್ಕೆ ಬರುತ್ತಿದ್ದಂತೆ, ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ವೃದ್ಧೆಯ ಮನೆಗೆ ತೆರಳಿ ಸ್ಥಳದ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದಾರೆ. ಒಂಟಿಯಾಗಿ ವಾಸಿಸುವ ವೃದ್ಧರು, ನಡೆದಾಡಲು ಸಾಧ್ಯವಾಗದವರು ಹಾಗೂ ಅಂಗವಿಕಲರಿಗೆ ಅವರ ಮನೆಗೇ ತೆರಳಿ ಇ-ಕೆವೈಸಿ ಮಾಡುವಂತೆ ಸಂಬಂಧಪಟ್ಟ ಇಲಾಖೆಗೆ ಸೂಚಿಸಲಾಗಿದೆ.
ನಾಗರಿಕರು ಇಮೇಲ್ ಮೂಲಕ ನೀಡುವ ದೂರು/ಅರ್ಜಿಗಳನ್ನು ಪ್ರತಿದಿನ ಕಡ್ಡಾಯವಾಗಿ ಪರಿಶೀಲಿಸಬೇಕೆಂದು ಸರ್ಕಾರದ ಸ್ಪಷ್ಟ ಸುತ್ತೋಲೆ ಇದ್ದು, ಅಧಿಕಾರಿಗಳು ಇದಕ್ಕೆ ಸೂಕ್ತವಾಗಿ ಸ್ಪಂದಿಸಬೇಕಿದೆ.
ಪಡಿತರ ಚೀಟಿದಾರರಿಗೆ ಕಚೇರಿಗೆ ಅಲೆದಾಡುವುದನ್ನು ತಪ್ಪಿಸಲು ಇ-ಕೆವೈಸಿಗೆ ಸರ್ಕಾರ ‘ಅನ್ನ ಸೇವೆ’ ಮೊಬೈಲ್ ಆಪ್ ಬಿಡುಗಡೆಗೊಳಿಸಿದೆ. ಆದರೆ ಆಪ್ನಲ್ಲಿ ಎದುರಾಗುತ್ತಿರುವ ಸಾಫ್ಟ್ ವೇರ್ ತಾಂತ್ರಿಕ ದೋಷಗಳನ್ನು ಶೀಘ್ರ ಸರಿಪಡಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.