

ಎನ್.ಆರ್.ಪುರ: ಶಿವಮೊಗ್ಗ ಸರ್ಕಾರಿ ಬಸ್ ಡಿಪೋ ಅಧಿಕಾರಿಗಳು ಸಭೆಗೆ ಬರುವುದೇ ಇಲ್ಲ. ಬಸ್ ಸಮಸ್ಯೆ ಬಗ್ಗೆ ಯಾರ ಬಳಿ ಹೇಳಬೇಕು? ಚಿಕ್ಕಮಗಳೂರು ಡಿಪೋ ಅಧಿಕಾರಿಗಳನ್ನು ಕೇಳಿದರೆ ಶಿವಮೊಗ್ಗದ ಅಧಿಕಾರಿಗಳನ್ನು ಕೇಳಬೇಕು ಎನ್ನುತ್ತಾರೆ. ಮುಂದಿನ ಸಭೆಗೆ ಅವರು ಹಾಜರಾಗಬೇಕು. ಇಲ್ಲವಾದಲ್ಲಿ ಸಭೆಯನ್ನೇ ಬಹಿಷ್ಕರಿಸುತ್ತೇನೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯ ಇಂದಿರಾನಗರ ರಘು ಹೇಳಿದರು.
ತಾಪಂನಲ್ಲಿ ಚಂದ್ರಮ್ಮ ಅಧ್ಯಕ್ಷತೆಯಲ್ಲಿ ನಡೆದ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯಲ್ಲಿ ಮಾತನಾಡಿ, ಪ್ರತಿ ಸಭೆಗೆ ಆಗಮಿಸುವಂತೆ ತಾಪಂನಿಂದ ನೋಟಿಸ್ ನೀಡಲಾಗುತ್ತಿದೆ. ಕಳೆದ ಸಭೆಯಲ್ಲಿ ಮುಂದಿನ ಸಭೆಗೆ ಬರುವಂತೆ ಸಭಾ ನಡವಳಿಯನ್ನೂ ಕಳಿಸಿದ್ದಾರೆ. ಆದರೂ ಬಂದಿಲ್ಲ ಎಂದು ಹರಿಹಾಯ್ದರು.
ಕೇವಲ ಒಂದು ಬಸ್ ಸಂಚರಿಸುವ ಚಿಕ್ಕಮಗಳೂರು ಡಿಪೋ ಅಧಿಕಾರಿಗಳು ಪ್ರತಿ ಸಭೆಗೂ ಬಂದು ಮಾಹಿತಿ ನೀಡುತ್ತಾರೆ. ಶಿವಮೊಗ್ಗ ಡಿಪೋ ಅಧಿಕಾರಿಗಳು ಉಡಾೆಯಾಗಿ ವರ್ತಿಸುತ್ತಾರೆ. ಸಭೆಗೆ ಬರುವುದಿಲ್ಲ ಎಂದು ಬರೆದುಕೊಡಲಿ. ಇಲ್ಲವಾದಲ್ಲಿ ಶಿವಮೊಗ್ಗ ಡಿಪೋದಿಂದ ಬರುವ ನಾಲ್ಕೂ ಬಸ್‌ಗಳನ್ನು ನಾವೇ ನಿಲ್ಲಸಬೇಕಾ? ಎಂದು ಪ್ರಶ್ನಿಸಿದರು.
ಆಧಾರ್ ಕಾರ್ಡ್ ಮೊಬೈಲ್‌ನಲ್ಲಿ ತೋರಿಸಿದರೆ ಸಾಕು ಎನ್ನುತ್ತಾರೆ ಅಧಿಕಾರಿಗಳು. ಆದರೆ ಬಸ್ ನಿರ್ವಾಹಕರು ಮೊಬೈಲ್‌ನಲ್ಲಿರುವ ಆಧಾರ್ ಕಾರ್ಡನ್ನು ಪರಿಗಣಿಸದಿರುವುದರಿಂದ ಮಹಿಳೆಯರು, ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಈ ಸಮಸ್ಯೆ ಯಾರಿಗೆ ಹೇಳಬೇಕು? ಇನ್ನು ಪ್ರಯಾಣಿಕರ ತಂಗುದಾಣ ಇರುವಲ್ಲಿ ಬಸ್ ನಿಲ್ಲಿಸುವುದಿಲ್ಲ ಎಂದು ದೂರಿದರು.
ಸದಸ್ಯೆ ಅಪೂರ್ವಾ ಮಾತನಾಡಿ, ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಸದಸ್ಯರು ಶಂಕರಪುರ, ಮುತ್ತಿನಕೊಪ್ಪ ಭಾಗದ ನಿಲ್ದಾಣಗಳಲ್ಲಿ ನಿಂತು ವೀಕ್ಷಿಸಿದ್ದೇವೆ. ಶಾಲಾ ಮಕ್ಕಳು ಕೈಅಡ್ಡ ಹಾಕಿದರೂ ಬಸ್ ನಿಲ್ಲಿಸಲಿಲ್ಲ. ನಾವು ಅಡ್ಡ ಹಾಕಲು ಹೋದರೆ ಬಸ್ಸನ್ನು ವೇಗವಾಗಿ ಚಲಾಯಿಸಿಕೊಂಡು ಹೋದರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಧ್ಯಕ್ಷೆ ಚಂದ್ರಮ್ಮ ತಕ್ಷಣ ಶಿವಮೊಗ್ಗ ಡಿಪೋ ಅಧಿಕಾರಿಗೆ ಕರೆ ಮಾಡಿ, ಸಮಸ್ಯೆಗಳು ಬಗೆಹರಿಯಬೇಕಾದರೆ ನೀವು ಸಭೆಗೆ ಬರಬೇಕು, ಇಲ್ಲವಾದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸದಸ್ಯ ನಿತ್ಯಾನಂದ ಮಾತನಾಡಿ, ಮೊಬೈಲ್‌ನಲ್ಲಿ ಆಧಾರ್ ಕಾರ್ಡ್ ಇದ್ದರೂ ಹಲವಾರು ಮಹಿಳೆಯರು, ಮಕ್ಕಳಿಗೆ ಟಿಕೇಟ್ ನೀಡುವುದಿಲ್ಲ ಎಂದು ದೂರಿದರು. ಸದಸ್ಯ ಬೇಸಿಲ್ ಮಾತನಾಡಿ, ಶಿವಮೊಗ್ಗ ಡಿಪೋ ಅಧಿಕಾರಿಗಳ ಜತೆ ಮಾತನಾಡಿ ಯಾವುದೇ ಪ್ರಯೋಜನವಿಲ್ಲ. ನಮ್ಮ ಭಾಗಕ್ಕೆ ನಮ್ಮ ಜಿಲ್ಲೆಯ ಡಿಪೋ ಬಸ್‌ಗಳನ್ನೇ ಬಿಡುವಂತೆ ಅಧಿಕಾರಿಗಳ ಗಮನಕ್ಕೆ ತರಬೇಕು. ನಮಗೆ ಶಿವಮೊಗ್ಗ ಡಿಪೋ ಬಸ್‌ಗಳೇ ಬೇಡ ಎಂದು ಹೇಳಿದರು.
ಸೆಪ್ಟೆಂಬರ್‌ನಲ್ಲಿ ಎರಡು ತಿಂಗಳಿನ ಅನ್ನಭಾಗ್ಯ ಯೋಜನೆಯ ಅಕ್ಕಿ ಬಿಡುಗಡೆಯಾಗಿದೆ. ಮೂರು ಜನಕ್ಕಿಂತ ಹೆಚ್ಚಿನ ಜನರಿರುವ ಅಂತ್ಯೋದಯ ಕಾರ್ಡ್‌ದಾರರಿಗೆ ಮಾತ್ರ ಹಾಗೂ ಬಿಪಿಎಲ್ ಕಾರ್ಡ್‌ದಾರರಿಗೆ ವಿತರಿಸಲಾಗುತ್ತದೆ. ಇ-ಕೆವೈಸಿ ಮಾಡಿಸಲು ಅ.20ವರೆಗೆ ಅವಧಿ ವಿಸ್ತರಿಸಲಾಗಿದೆ ಎಂದು ಆಹಾರ ಇಲಾಖೆ ಅಧಿಕಾರಿ ಗಣಪತಿ ಸಭೆಗೆ ಮಾಹಿತಿ ನೀಡಿದರು. ಸದಸ್ಯ ಟಿ.ಟಿ.ಇಸ್ಮಾಯಿಲ್ ಮಾತನಾಡಿ, ಕಡ್ಲೇಮಕ್ಕಿ ಸೊಸೈಟಿಯಲ್ಲಿ ಅಧಿಕ ಪಡಿತರದಾರರು ಇರುವುದರಿಂದ, ಪಡಿತರ ವಿತರಣೆಗೆ ಸಮಸ್ಯೆ ಆಗುತ್ತಿದೆ. ಕಾರ್ಡುಗಳನ್ನು ವಿಭಜನೆ ಮಾಡಿ, ಎರಡು ಸೊಸೈಟಿಗಳನ್ನು ಸ್ಥಾಪಿಸಬೇಕು ಎಂದು ತಿಳಿಸಿದರು. ಗಣಪತಿ ಮಾತನಾಡಿ, ಇದು ಹೊಸ ಗೋಡೌನ್‌ಗೆ ಸರ್ಕಾರದಿಂದಲೇ ಅನುಮೋದನೆ ಆಗಬೇಕು, ಗೆಜೆಟ್ ನೋಟಿಫಿಕೇಶನ್ ಆಗಬೇಕ ಎಂದು ತಿಳಿಸಿದರು.
ಸದಸ್ಯರಾದ ಅಪೂರ್ವಾ, ನಾಗರಾಜ್, ದೇವರಾಜ್, ಜಯರಾಮ್, ಹೂವಮ್ಮ, ಬೇಸಿಲ್, ತಾಪಂ ಸಿಬ್ಬಂದಿ ಶ್ರೀದೇವಿ ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಇಲಾಖಾಧಿಕಾರಿಗಳು ಇದ್ದರು.