

ಎನ್.ಆರ್.ಪುರ: ಮಂಗನ ಕಾಯಿಲೆ ನಿಯಂತ್ರಣಕ್ಕೆ ಎಲ್ಲ ಇಲಾಖೆ ಅಧಿಕಾರಿಗಳು ಸಮನ್ವಯತೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ತಹಸೀಲ್ದಾರ್ ಡಾ.ನೂರುಲ್ಹುದಾ ಹೇಳಿದರು.
ತಾಲೂಕು ಕಚೇರಿ ಸಭಾಂಗಣದಲ್ಲಿ ಮಂಗನ ಕಾಯಿಲೆ ನಿಯಂತ್ರಣ ಅಂತರ ಇಲಾಖೆ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿ, ಮಳೆಗಾಲ ಮುಗಿದು ಬೇಸಿಗೆ ಪ್ರಾರಂಭವಾಗುವ ಸಮಯದಲ್ಲಿ ಮಲೆನಾಡು ಭಾಗದಲ್ಲಿ ಕಂಡುಬರುವ ಮಂಗನ ಕಾಯಿಲೆ ಮಾರಣಾಂತಿಕ ಕಾಯಿಲೆಯಾಗಿದೆ. ಕಳೆದ ವರ್ಷ ತಾಲೂಕಿನಲ್ಲಿ 54 ಪ್ರಕರಣಗಳು ಕಂಡುಬಂದಿದೆ. ಈ ಬಾರಿ ಮುನ್ನೆಚ್ಚರಿಕೆ ಕ್ರಮವಾಗಿ ಪ್ರಾರಂಭದಲ್ಲಿಯೇ ಎಲ್ಲ ಇಲಾಖೆಯವರು ಸೂಕ್ತ ಮುಂಜಾಗ್ರತಾ ಕ್ರಮ ಕೈಕೊಳ್ಳಬೇಕು ಎಂದರು.
ಸಾರ್ವಜನಿಕರಿಗೆ ಮತ್ತು ಶಾಲಾ ವಿದ್ಯಾರ್ಥಿಗಳಿಗೆ ಮಂಗನ ಕಾಯಿಲೆ ಕುರಿತು ಶಿಕ್ಷಣ ನೀಡಬೇಕು. ಆರೋಗ್ಯ ಇಲಾಖೆ ಸಿಬ್ಬಂದಿ ಜ್ವರ ಸಮೀಕ್ಷೆ ನಡೆಸಿ ಶಂಕಿತ ರೋಗಿಗಳ ರಕ್ತ ಸಂಗ್ರಹಿಸಿ ಪ್ರಯೋಗ ಶಾಲೆಗೆ ಕಳಿಸಬೇಕು ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು ಇದಕ್ಕೆ ಸಹಕಾರ ನೀಡಬೇಕು. ಮಂಗಗಳು ಸತ್ತಲ್ಲಿ ಪಶು ಸಂಗೋಪನ ಇಲಾಖೆ ಅಧಿಕಾರಿಗಳು ಶವ ಪರೀಕ್ಷೆ ನಡೆಸಬೇಕು. ಮಂಗ ಸತ್ತಲ್ಲಿ ಅರಣ್ಯಇಲಾಖೆ ಅಧಿಕಾರಿಗಳು ಮಾಹಿತಿ ನೀಡಿ ಶವದ ವಿಲೇವಾರಿ ಮಾಡಬೇಕು.ಈಗಾಗಲೇ ಒನ್ ಹೆಲ್ತ್ ಸಮುದಾಯ ಕಣ್ಗಾವಲು ವ್ಯವಸ್ಥೆ ಅಸ್ತಿತ್ವಕ್ಕೆ ಬಂದಿದೆ. ಎಲ್ಲ ಇಲಾಖೆಯವರು ಪರಸ್ಪರ ಸಹಕಾರ ಸಲಹೆ ಸೂಚನೆ ಹಂಚಿಕೊಂಡು ಕರ್ತವ್ಯ ನಿರ್ವಹಿಸಬೇಕು ಎಂದು ತಿಳಿಸಿದರು.
ಡಾ.ಎ.ಪಿ.ಆಕರ್ಷ ಮಾಹಿತಿ ನೀಡಿ, ಮಂಗನ ಕಾಯಿಲೆ ಒಂದು ವೈರಸ್ ನಿಂದ ಬರುವ ಕಾಯಿಲೆಯಾಗಿದ್ದು, ಸೋಂಕಿತ ಉಣ್ಣೆಗಳು ಮನುಷ್ಯರಲ್ಲಿ ಕಾಯಿಲೆ ಉಂಟುಮಾಡುತ್ತದೆ. ಮಂಗಗಳ ಅಸಹಜ ಸಾವು ಈ ಕಾಯಿಲೆ ಮುನ್ಸೂಚನೆ. ಕಾಡಿಗೆ ಹೋಗುವವರು ಕಡ್ಡಾಯವಾಗಿ ಆರೋಗ್ಯ ಇಲಾಖೆಯಿಂದ ನೀಡುವ ಡೆಪಾ ಆಯಿಲ್ನ್ನು ಹಚ್ಚಿಕೊಂಡು ಹೋಗಬೇಕು. ಕಾಡಿನಿಂದ ಬಂದ ನಂತರ ಬಿಸಿ ನೀರಿನಲ್ಲಿ ತೊಳೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಮುಖಕ್ಕೆ ತೈಲ ಲೇಪಿಸಬಾರದು ಎಂದರು.
ಬಟ್ಟೆಗಳನ್ನು ಬಿಸಿಲಿನಲ್ಲಿ ಒಣಗಿಸಿ ಉಪಯೋಗಿಸಬೇಕು. ಅನವಶ್ಯಕವಾಗಿ ಕಾಡಿಗೆ ಹೋಗಬಾರದು. ಯಾವುದಾದರೂ ಮಂಗ ಸತ್ತಲ್ಲಿ ಇಲಾಖೆ ಗಮನಕ್ಕೆ ತರಬೇಕು. ಜಾನುವಾರುಗಳನ್ನು ಕಾಡಿಗೆ ಬಿಡುವಾಗ ಉಣ್ಣೆ ನಿರೋಧಕ ಔಷಧಿಯನ್ನು ಲೇಪಿಸಿ ಬಿಡಬೇಕು ಎಂದು ಸಲಹೆ ನೀಡಿದರು.
ಮಂಗನ ಕಾಯಿಲೆ ಕುರಿತು ಕರಪತ್ರ ಅನಾವರಣಗೊಳಿಸಲಾಯಿತು. ವಾಲ್ಮೀಕಿ ನಾಯಕ ಸಂಘದ ಕ್ಷೇತ್ರಾಧ್ಯಕ್ಷ ಎ.ಸಿ.ಶ್ರೀನಿವಾಸ್, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಡಿ.ರಾಮು, ಕೊಪ್ಪ ಎಪಿಎಂಸಿ ನಿರ್ದೇಶಕ ಎಚ್.ಎಂ.ಶಿವಣ್ಣ, ಪಿಕಪ್ಚಂದ್ರು, ಚಿತ್ರಪ್ಪ ಯರಬಾಳ್, ಎ.ಕೆ.ಪಾಟೀಲ್, ಎನ್.ಎಲ್.ಮನೀಶ್, ಪಿ.ಪಿ.ಬೇಬಿ ಇದ್ದರು.
ಮಂಗನ ಕಾಯಿಲೆ ಕಾಣಿಸಿಕೊಂಡಲ್ಲಿ ವಿಪರೀತ ಜ್ವರ, ತಲೆನೋವು, ಮೈಕೈ ನೋವು, ಕಣ್ಣು ಕೆಂಪಾಗುವುದು ತಲೆನೋವು ವಾಕರಿಕೆ ಬರುವುದು ಮುಂತಾದ ಲಕ್ಷಣಗಳು ಪ್ರಾರಂಭದಲ್ಲಿ ಕಾಣಿಸಿಕೊಳ್ಳುತ್ತದೆ ಎಂದು ಡಾ.ಎ.ಪಿ.ಆಕರ್ಷ ಮಾಹಿತಿ ನೀಡಿದರು. ರೋಗ ಕಾಣಿಸಿಕೊಂಡ ತಕ್ಷಣ ಚಿಕಿತ್ಸೆ ಪಡೆಯದಿದ್ದರೆ ಗಂಭೀರ ಸ್ವರೂಪ ಹೊಂದಿ ಸಾವು ಸಂಭವಿಸುತ್ತದೆ. ಮೇಲಿನ ಲಕ್ಷಣಗಳು ಕಂಡು ಬಂದ ತಕ್ಷಣ ಸರ್ಕಾರಿ ಆಸ್ಪತ್ರೆಗೆ ಹೋಗಿ ರಕ್ತ ಪರೀಕ್ಷಿಸಿ ಚಿಕಿತ್ಸೆ ಪಡೆಯಬೇಕು. ಮಂಗನ ಕಾಯಿಲೆ ದೃಢಪಟ್ಟಲ್ಲಿ ಸರ್ಕಾರದಿಂದ ಉಚಿತ ಚಿಕಿತ್ಸೆ ನೀಡಲಾಗುವುದು ಎಂದು ತಿಳಿಸಿದರು.
ಮಂಗಗಳು ಸತ್ತಲ್ಲಿ ತಕ್ಷಣ ಆರೋಗ್ಯ ಇಲಾಖೆ ಗಮನಕ್ಕೆ ತರಬೇಕು. ಮಂಗ ಸತ್ತ ಸ್ಥಳಕ್ಕೆ ಸಾರ್ವಜನಿಕರು ಹೋಗದೆ ಅಂತರ ಕಾಪಾಡಬೇಕು. ಮಂಗಗಳು ಸತ್ತ ತಕ್ಷಣ ಮಂಗದ ಮೇಲಿರುವ ಉಣ್ಣೆಗಳು ಸುತ್ತಮುತ್ತ ಹರಡುವುದರಿಂದ ಕಾಯಿಲೆಯೂ ಬೇಗ ಸಾರ್ವಜನಿಕರಿಗೆ ಬರುವ ಸಂಭವ ಇರುತ್ತದೆ.
ಡಾ.ವಿನಯ್ಕುಮಾರ್ ಮುಖ್ಯ ಪಶುವೈದ್ಯಾಧಿಕಾರಿ