ಕುಡಿಯುವ ನೀರು, ಹಕ್ಕುಪತ್ರಕ್ಕಾಗಿ ಮಹಿಳೆಯರು, ಗ್ರಾಮಸ್ಥರಿಂದ ಖಾಲಿಕೊಡ ಪ್ರದರ್ಶನ

ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ಸಖರಾಯಪಟ್ಟಣ ಮುಖ್ಯ ರಸ್ತೆಯಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ವೆಂಕಟೇಶನಾಯ್ಕ, ಪ್ರಸಾದನಾಯ್ಕ, ಸತೀಶನಾಯ್ಕ, ಲೋಹಿತ್, ಮೂರ್ತಿನಾಯ್ಕ ಇದ್ದರು.
ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ಸಖರಾಯಪಟ್ಟಣ ಮುಖ್ಯ ರಸ್ತೆಯಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ವೆಂಕಟೇಶನಾಯ್ಕ, ಪ್ರಸಾದನಾಯ್ಕ, ಸತೀಶನಾಯ್ಕ, ಲೋಹಿತ್, ಮೂರ್ತಿನಾಯ್ಕ ಇದ್ದರು.
Published on: 

ಕಡೂರು: ಕುಡಿಯುವ ನೀರಿನ ಸಮಸ್ಯೆ ಹಾಗೂ ಹಲವು ವರ್ಷಗಳಿಂದ ಮನೆಗಳಿಗೆ ಹಕ್ಕುಪತ್ರವಿಲ್ಲದೆ ಮೂಲ ಸೌಲಭ್ಯಗಳಿಂದ ವಂಚಿತರಾಗಿರುವುದನ್ನು ಖಂಡಿಸಿ ಕಾರ್ಖಾನೆ ಮೂಲೆ, ಹೊಸೂರು, ಹೊನ್ನಾವರಿಕೆ, ಹಸ್ತಿನಾಪುರ ಹಾಗೂ ಜಾನ್‌ಸಾಲೆ ಎಸ್ಟೇಟ್ ಪ್ರದೇಶಗಳ ನೂರಾರು ಮಹಿಳೆಯರು, ಗ್ರಾಮಸ್ಥರು ಖಾಲಿ ಕೊಡ ಹಿಡಿದು ಸಖರಾಯಪಟ್ಟಣದ ಮುಖ್ಯರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು.

ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಹಳೇಹಟ್ಟಿ ಆನಂದನಾಯ್ಕ ಮಾತನಾಡಿ, ಅಯ್ಯನಕೆರೆ ಸಮೀಪದಲ್ಲೇ ಇರುವ ಗ್ರಾಮಗಳು ಮೂರು ತಿಂಗಳಿಂದ ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಯ್ಯನಕೆರೆ ಪಕ್ಕದಲ್ಲಿರುವ ಜಾಕ್‌ವೆಲ್‌ನಿಂದ ಕಾರ್ಖಾನೆ ಮೂಲೆ ಮಾರ್ಗವಾಗಿ ಗ್ರಾಮಗಳಿಗೆ ಪ್ರತ್ಯೇಕ ಪೈಪ್‌ಲೈನ್ ಅಳವಡಿಸಿ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಹಸ್ತಿನಾಪುರ ಗ್ರಾಮಕ್ಕೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೂ ಮುನ್ನ ಐದು ಕೊಳವೆಬಾವಿಗಳ ಮೂಲಕ ನೀರು ಪೂರೈಕೆಯಾಗುತ್ತಿತ್ತು. ಹೆದ್ದಾರಿ ಕಾಮಗಾರಿ ವೇಳೆ ಅವು ಹಾಳಾಗಿದ್ದು, ಪರ್ಯಾಯ ವ್ಯವಸ್ಥೆ ಕಲ್ಪಿಸದಿರುವುದರಿಂದ ಗ್ರಾಮಸ್ಥರು ಸಂಕಷ್ಟ ಅನುಭವಿಸುವಂತಾಗಿದೆ. ಈ ಭಾಗದ ಬಹುತೇಕರು ಕೂಲಿ ಕಾರ್ಮಿಕರಾಗಿದ್ದು, ಹಕ್ಕುಪತ್ರ ಇಲ್ಲದೆ ಮನೆ ನಿರ್ಮಾಣಕ್ಕೆ ಬ್ಯಾಂಕ್ ಸಾಲ, ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ. ಶಾಸಕ ಹಾಗೂ ತಹಸೀಲ್ದಾರ್ ನೀಡಿದ ಹಕ್ಕುಪತ್ರದ ಭರವಸೆ ಕಾರ್ಯರೂಪಕ್ಕೆ ಬಂದಿಲ್ಲ. ಸಮರ್ಪಕ ಆಸ್ಪತ್ರೆ ಹಾಗೂ ಕಸ ವಿಲೇವಾರಿ ಘಟಕದ ಕೊರತೆಯೂ ಗ್ರಾಮಸ್ಥರನ್ನು ಕಾಡುತ್ತಿದ್ದು, ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದರು.

ಸ್ಥಳಕ್ಕೆ ಆಗಮಿಸಿದ ತಾಪಂ ಇಒ ಪ್ರವೀಣ್ ಹಾಗೂ ತಹಸೀಲ್ದಾರ್ ಕಚೇರಿ ಅಧಿಕಾರಿಗಳು ಪ್ರತಿಭಟನಾಕಾರರ ಅಹವಾಲು ಆಲಿಸಿದರು. ಅಯ್ಯನಕೆರೆಯಿಂದ ಸಖರಾಯಪಟ್ಟಣಕ್ಕೆ ಬರುವ ಹಾಲಿ ಪೈಪ್‌ಲೈನ್ ಮೂಲಕ ಈ ಗ್ರಾಮಗಳಿಗೆ ನೀರು ಪೂರೈಸಲು 5 ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು, ಶೀಘ್ರ ಕಾಮಗಾರಿ ಆರಂಭಿಸಲಾಗುವುದು ಎಂದು ಇಒ ಪ್ರವೀಣ್ ತಿಳಿಸಿದರು.

ನಮಗೆ ಅಯ್ಯನಕೆರೆಯಿಂದಲೇ ಪ್ರತ್ಯೇಕ ಪೈಪ್‌ಲೈನ್ ಅಳವಡಿಸಬೇಕು ಎಂದು ಗ್ರಾಮಸ್ಥರು ಪಟ್ಟುಹಿಡಿದರು.ಇದಕ್ಕೆ ಪ್ರತಿಕ್ರಿಯಿಸಿದ ಇಒ, ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲು ಡಿಪಿಆರ್ ಅಗತ್ಯವಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಮಸ್ಥರು 15 ದಿನಗಳೊಳಗೆ ಕುಡಿಯುವ ನೀರು ಹಾಗೂ ಹಕ್ಕುಪತ್ರದ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿ ಮನವಿ ಸಲ್ಲಿಸಿದರು.

ಹಕ್ಕುಪತ್ರ ವಿತರಣೆಗೆ ಸಂಬಂಧಿಸಿದಂತೆ ಅಗತ್ಯ ಜಾತಿ ಪ್ರಮಾಣಪತ್ರ ಸೇರಿದಂತೆ ಸರ್ಕಾರದ ನಿಯಮಾನುಸಾರ ದಾಖಲೆಗಳನ್ನು ಕಚೇರಿಗೆ ಸಲ್ಲಿಸಿದರೆ ಎರಡು ದಿನಗಳೊಳಗೆ ಹಕ್ಕುಪತ್ರ ವಿತರಿಸಲು ಕ್ರಮಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದರು.

ಮುಖಂಡರಾದ ವೆಂಕಟೇಶನಾಯ್ಕ, ಪ್ರಸಾದನಾಯ್ಕ, ಸತೀಶನಾಯ್ಕ, ಲೋಹಿತ್, ಮೂರ್ತಿನಾಯ್ಕ, ಅಜಯ್, ರವಿನಾಯ್ಕ, ಗೋವಿಂದನಾಯ್ಕ, ದೀಪಕ್‌ನಾಯ್ಕ, ಶಕುಂತಲಾ ಪ್ರಕಾಶ್ ಸೇರಿದಂತೆ ನೂರಾರು ಮಹಿಳೆಯರು ಹಾಗೂ ಗ್ರಾಮಸ್ಥರು ಇದ್ದರು.