ಮಲೆನಾಡಿನಲ್ಲಿ ಮಳೆ ಕೊರತೆ, ಕಾಫಿ ಇಳುವರಿ ಕುಸಿತ?

ಕಾಫಿ ಹಣ್ಣುಗಳಲ್ಲಿ ರಸವಿಲ್ಲದೆ ಗಾತ್ರದಲ್ಲಿ ಕಡಿಮೆಯಾಗಿರುವುದು.
ಕಾಫಿ ಹಣ್ಣುಗಳಲ್ಲಿ ರಸವಿಲ್ಲದೆ ಗಾತ್ರದಲ್ಲಿ ಕಡಿಮೆಯಾಗಿರುವುದು.
Published on: 

ಆಲ್ದೂರು: ಮಲೆನಾಡಿನಲ್ಲಿ ಈ ಬಾರಿ ಮಳೆ ಕಡಿಮೆಯಾಗಿರುವುದರಿಂದ ಕಾಫಿ ಇಳುವರಿ ಕಡಿಮೆಯಾಗುವ ಜತೆಗೆ ಗುಣಮಟ್ಟದ ಮೇಲೆ ಪರಿಣಾಮ ಬೀರಲಿದೆ.

ಮಲೆನಾಡಿನಲ್ಲಿ ಕಾಫಿ ಬೆಳೆ ಆದಾಯದ ಮೂಲ. ಇದನ್ನು ನಂಬಿ ಲಕ್ಷಾಂತರ ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ಆದರೆ ಹವಮಾನ ವೈಪರೀತ್ಯದಿಂದ ಕಾಫಿ ಉದ್ದಿಮೆ ಸಂಕಷ್ಟಕ್ಕೆ ಸಿಲುಕಿದೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಮಳೆ ಪ್ರಮಾಣ ಶೇ.50ರಷ್ಟು ಕೊರತೆಯಾಗಿದೆ. ಕಳೆದ ವರ್ಷ ಅಕ್ಟೋಬರ್ ಮೊದಲ ವಾರಕ್ಕೆ 82ಇಂಚು ಮಳೆಯಾಗಿತ್ತು. ಈ ಬಾರಿ ಕೇವಲ 42 ಇಂಚು ಮಳೆಯಾಗಿದೆ.

ಮಳೆ ಕಡಿಮೆಯಾಗಿ ಬಿಸಿಲು ಹೆಚ್ಚಾಗಿರುವುದರಿಂದ ಕಾಫಿ ಸಲಿನ ಮೇಲೆ ಪರಿಣಾಮ ಬೀರುತ್ತಿದೆ. ಮಲೆನಾಡಿನಲ್ಲಿ ಮಳೆ ನಿರಂತರವಾಗಿದ್ದಾಗ ಕಾಫಿ ತೋಟಗಳು ತಂಪಾಗಿರುತ್ತವೆ. ಕಾಫಿ ತೋಟಕ್ಕೆ ಈ ವಾತಾವರಣ ಅನುಕೂಲವಾಗಿರುತ್ತದೆ ಆದರೆ ಈ ಬಾರಿ ವಾತಾವರಣ ಕಾಫಿ ತೋಟಗಳಿಗೆ ಪೂರಕವಾಗಿಲ್ಲದ ಕಾರಣ ತೋಟಗಳು ಕೀಟ ಭಾದೆಗೆ ಗುರಿಯಾಗುವ ಆತಂಕವಿದೆ. ಈಗಾಗಲೇ ಬೋರರ್ ರೋಗದ ಹಾವಳಿ ಕಂಡುಬರುತ್ತಿದೆ. ಈ ಹುಳುಗಳು ಚಿಟ್ಟೆಗಳಾಗಿ ಒಂದು ಗಿಡದಿಂದ ಮತ್ತೊಂದು ಗಿಡಕ್ಕೆ ಹಾರುವುದರಿಂದ ಕಾಫಿ ತೋಟಗಳು ಕೀಟಭಾದೆಗೆ ತುತ್ತಾಗಲಿವೆ.

 ಬಿಸಿಲಿನ ಝಳಕ್ಕೆ ಕಾಫಿ ಕಾಯಿಗಳು ಒಣಗುತ್ತಿರುವುದು.
ಬಿಸಿಲಿನ ಝಳಕ್ಕೆ ಕಾಫಿ ಕಾಯಿಗಳು ಒಣಗುತ್ತಿರುವುದು.

ಈಗಾಗಲೇ 32 ಡಿಗ್ರಿ ಉಷ್ಣಾಂಶ ದಾಖಲಾಗಿದ್ದು, ಕಾಫಿ ಗಿಡಗಳಲ್ಲಿ ಕಾಫಿ ಗೊಂಚಲುಗಳು ರಸವತತ್ತೆ ಕಳೆದುಕೊಂಡು ಒಣಗುತ್ತಿವೆ. ಹಣ್ಣಾಗುವ ಬದಲು ಕಾಫಿ ಹಣ್ಣುಗಳು ಬತ್ತಿ ಇಳುವರಿ ಕಡಿಮೆಯಾಗುವ ಚಿಂತೆ ಕಾಡುತ್ತಿದೆ. ಹೀಗೆ ಒಣಹವೆ ಮುಂದುವರಿದರೆ ರೋಬಸ್ಟಾ ಕಾಫಿ ತೋಟಗಳು ನಶಿಸಿ ಹೋಗುತ್ತವೆ. ಮಳೆ ಪ್ರಮಾಣದಲ್ಲಿ ಸ್ವಲ್ಪಮಟ್ಟಿಗೆ ಏರಿಳಿತವಾದರೆ ಅರೇಬಿಕಾ ತೋಟಗಳು ಸಮತೋಲನ ಕಂಡುಕೊಳ್ಳುತ್ತವೆ. ಆದರೆ ರೋಬಸ್ಟಾ ತೋಟಗಳು ಹೆಚ್ಚು ಮಳೆ ಆಶ್ರಯಿಸುವುದರಿಂದ ಮಳೆಕೊರತೆ ರೋಬಸ್ಟಾ ತೋಟಗಳ ಮೇಲೆ ಪರಿಣಾಮ ಬೀರಲಿದೆ. ಜತೆಗೆ ಕಾಫಿ ತೋಟಗಳ ಮಧ್ಯೆ ಹಾಕಿರುವ ಸಣ್ಣ ಗಿಡಗಳು ಸುಟ್ಟು ಹೋಗುವ ಭೀತಿ ಕಾಡುತ್ತಿದೆ.

ಕಾಫಿ ತೋಟದ ಜತೆಗೆ ಉಪ ಬೆಳೆಗಳಾದ ಕಾಳುಮೆಣಸು, ಅಡಿಕೆ ಮೇಲೂ ಪರಿಣಾಮ ಬೀರಲಿದೆ. ಇದರ ನಷ್ಟ ತುಂಬಲು ಬೆಳೆಗಾರರಿಗೆ ಕಷ್ಟಸಾಧ್ಯವಾಗಿದೆ. ಉಪ ಬೆಳೆಗಳಿಂದ ಬೆಳೆಗಾರರು ತೋಟಗಳ ನಿರ್ವಹಣೆ ಮಾಡುತ್ತಿದ್ದು, ಕಾರ್ಮಿಕರ ಸಂಬಳ, ರಸಗೊಬ್ಬರ, ಕೀಟನಾಶಕಗಳ ಬೆಲೆ ವರ್ಷದಿಂದ, ವರ್ಷಕ್ಕೆ ಹೆಚ್ಚಾಗುತ್ತಿರುವುದು ಕಾಫಿ ಬೆಳೆಗಾರರನ್ನು ಸಂಕಷ್ಟಕ್ಕೆ ದೂಡಿದೆ.

ಒಂದು ಕಾಲದಲ್ಲಿ ಶ್ರೀಮಂತಿಕೆಯಿಂದ ಕೂಡಿದ ಕಾಫಿ ಉದ್ದಿಮೆ ಇಂದು ಹವಮಾನ ವೈಪರೀತ್ಯ, ಬೆಲೆ ಏರಿಳಿತ, ಕಾರ್ಮಿಕರ ಕೊರತೆಯಿಂದ ಸೊರಗುತ್ತಿದೆ. ಈ ಬಾರಿ ಮಳೆ ಕೊರತೆಯಿಂದ ಕಾಫಿ ಗಿಡಗಳು ಬೋರಾರ್ ರೋಗಕ್ಕೆ ತುತ್ತಾಗುತ್ತಿವೆ. ರಸವತ್ತಾಗಿರಬೇಕಾದ ಕಾಫಿ ಹಣ್ಣುಗಳು ಬತ್ತುತ್ತಿವೆ. ತೋಟದಲ್ಲಿ ತೇವಾಂಶವಿಲ್ಲದೆ ಕಾಫಿ ಗಿಡಗಳು ಬಾಡುತ್ತಿವೆ. ಇದೇ ವಾತಾವರಣ ಮುಂದುವರಿದರೆ ಮುಂದಿನ ವರ್ಷದ ಕಾಫಿ ಇಳುವರಿ ಮೇಲೂ ಪರಿಣಾಮ ಬೀರಲಿದೆ.ನಮ್ಮ ದೇಶದ ಕಾಫಿ ಗುಣಮಟ್ಟದ ಮೇಲೆ ಪೆಟ್ಟು ಬೀಳಲಿದೆ.

ಮಹೇಶ್ ಕೆರೆಮಕ್ಕಿ, ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ

ಈ ವರ್ಷ ಮಳೆ ಕೊರತೆಯಿಂದ ಕಾಫಿ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ. ಮಳೆ ಕೊರತೆಯಿಂದ ಕಾಫಿ ಕಾಯಿಗಳು ತೂಕ ಕಳೆದುಕೊಂಡಿದ್ದು,ಉತ್ತಮ ಧಾರಣೆ ಸಿಗುವುದು ಅನುಮಾನವಾಗಿದೆ. ಗುಣಮಟ್ಟದ ಕೊರತೆಯಿಂದ ರ್ತು ಮಾಡಲು ತೊಂದರೆಯಾಗುತ್ತದೆ. ತೋಟಕ್ಕೆ ಹಾಕಿದ ಹೊಸ ಗಿಡಗಳು ಬಾಡಿ ಹೋಗುತ್ತಿವೆ

ಅಮರ್ ಡಿಸೋಜಾ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net