More

    ಜಿಲ್ಲಾ ಪಂಚಾಯಿತಿ ಗದ್ದುಗೆ ಗುದ್ದಾಟ ಕುತೂಹಲ !; ಜ.18ಕ್ಕೆ ಅಧ್ಯಕ್ಷೆ ಲತಾ ವಿರುದ್ಧ ಅವಿಶ್ವಾಸ ನಿರ್ಣಯ ಸಭೆ ; ಬಿಜೆಪಿ ಬಾಗಿಲು ತಟ್ಟುತ್ತಿರುವ ಅಧ್ಯಕ್ಷೆ

    ತುಮಕೂರು : ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಪದಚ್ಯುತಿ ಪ್ರಹಸನಕ್ಕೆ ಮತ್ತೊಮ್ಮೆ ದಿನಾಂಕ ನಿಗದಿಯಾಗಿದೆ. ಅಧ್ಯಕ್ಷೆ ಎಂ.ಲತಾ ವಿರುದ್ಧ ಅವಿಶ್ವಾಸ ನಿರ್ಣಯ ಸಭೆ ಜ.18 ರಂದು ನಡೆಯಲಿದೆ.

    ಲತಾ ಅವರನ್ನು ಅಧ್ಯಕ್ಷ ಗಾದಿಯಿಂದ ಇಳಿಸಲು ಎರಡು-ಮೂರು ಬಾರಿ ಪ್ರಯತ್ನಿಸಿ ಕೈಸುಟ್ಟುಕೊಂಡಿರುವ ಮೂರು ಪಕ್ಷದ ಅಸಮಾಧಾನಿತ ಸದಸ್ಯರು ಅಂತಿಮವಾಗಿ ಅಧ್ಯಕ್ಷರ ಪದಚ್ಯುತಿಗೆ ಪಣತೊಟ್ಟಿದ್ದಾರೆ. ಈಗ ಮತ್ತೊಮ್ಮೆ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್‌ನ 38ಕ್ಕೂ ಹೆಚ್ಚು ಸದಸ್ಯರು ಅವಿಶ್ವಾಸ ನಿರ್ಣಯಕ್ಕೆ ಸಹಿ ಹಾಕಿದ್ದು, ಈ ಹಿನ್ನೆಲೆಯಲ್ಲಿ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ನವೀನ್ ಸಿಂಗ್ ಅವರು ಜ.18ರಂದು ಬೆಳಗ್ಗೆ 10ಕ್ಕೆ ಸಭೆ ಕರೆದಿದ್ದಾರೆ. ಇದರೊಂದಿಗೆ ಜಿಪಂ ಗದ್ದುಗೆ ಗುದ್ದಾಟ ಕೂತಹಲಘಟ್ಟ ತಲುಪಿದಂತಾಗಿದೆ.

    ಅ.15ರಂದು ನಿಗದಿಯಾಗಿದ್ದ ಅವಿಶ್ವಾಸ ನಿರ್ಣಯ ಸಭೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ಆದರೆ, ಮತ್ತೊಮ್ಮೆ ಮಂಡಿಸಲು ಸದಸ್ಯರಿಗೆ ಅವಕಾಶ ನೀಡಿತ್ತು. ಇನ್ನು ಜಿಪಂ ಅವಧಿ ಮುಗಿಯಲು 5 ತಿಂಗಳಿದ್ದು ಲತಾ ಕೆಳಗಿಳಿಸಲು ಬಿಜೆಪಿ ಶತಾಯಗತಾಯ ಹೋರಾಟ ನಡೆಸಿದೆ. ಶಿರಾ ಉಪಸಮರ ಸಂದರ್ಭದಲ್ಲಿ ಅಧ್ಯಕ್ಷ ಗಾದಿ ಉಳಿಸಿಕೊಳ್ಳಲು ಲತಾ ಪತಿ ಕಲ್ಕೆರೆ ರವಿಕುಮಾರ್ ಕಾಂಗ್ರೆಸ್‌ಗೆ ಜಿಗಿದಿದ್ದರು. ಇದರಿಂದ ಜೆಡಿಎಸ್ ವರಿಷ್ಠರು ಕೆರಳಿದ್ದು ಪಕ್ಷಕ್ಕೆ ಮೋಸ ಮಾಡಿದವರಿಗೆ ತಕ್ಕಪಾಠ ಕಲಿಸಲು ಸಜ್ಜಾಗಿದ್ದಾರೆ.

    38 ಸದಸ್ಯರ ಸಹಿ: 57 ಸದಸ್ಯ ಬಲದ ಜಿಪಂನಲ್ಲಿ ಉಪಾಧ್ಯಕ್ಷೆ ಶಾರದಾ ಸೇರಿ ಬಿಜೆಪಿಯ 18, ಜೆಡಿಎಸ್ 13, ಕಾಂಗ್ರೆಸ್‌ನ 6 ಹಾಗೂ ಒಬ್ಬ ಪಕ್ಷೇತರ ಸದಸ್ಯ ಅವಿಶ್ವಾಸ ನಿರ್ಣಯಕ್ಕೆ ಸಹಿ ಹಾಕಿದ್ದು ಇನ್ನಷ್ಟು ಮಂದಿ ಅವಿಶ್ವಾಸ ನಿರ್ಣಯ ಪರ ನಿಲ್ಲುವು ಸೂಚನೆಗಳಿವೆ.
    ಕಾಂಗ್ರೆಸ್ ಬೆಂಬಲ ಪಡೆಯುವಲ್ಲಿ ಯಶಸ್ವಿಯಾಗಿದ್ದ ಅಧ್ಯಕ್ಷೆ ಲತಾ ಅವರ ಪತಿ ರವಿಕುಮಾರ್ ಅವರ ಅಧಿಕಾರ ಹಪಾಹಪಿತನದ ವಿರುದ್ಧ ಕೈ ಪಡೆಯ ಸದಸ್ಯರು ಆಕ್ರೋಶಗೊಂಡಿದ್ದಾರೆ. ಹಾಗಾಗಿ, ಈ ಬಾರಿ ಅಧಿಕಾರ ಉಳಿಸಿಕೊಳ್ಳುವ ಲತಾ ‘ತಂತ್ರ’ ಕೈಕೊಡುವ ಸಾಧ್ಯತೆಗಳು ನಿಚ್ಚಳವಾಗಿದೆ.

    ಲತಾ ಯೂಟರ್ನ್ ?: ಜಿಪಂನಲ್ಲಿ ಐದು ವರ್ಷ ಅವಧಿ ಪೂರ್ಣಗೊಳಿಸಲು ಕಾಂಗ್ರೆಸ್‌ಗೆ ಜಿಗಿದು ಕಸರತ್ತು ನಡೆಸಿದ್ದ ಕಲ್ಕೆರೆ ರವಿಕುಮಾರ್ ಕೊನೆಯ ಐದು ತಿಂಗಳು ಅಧ್ಯಕ್ಷ ಸ್ಥಾನದಲ್ಲಿ ಪತ್ನಿ ಲತಾ ಅವರನ್ನು ಮುಂದುವರಿಸಲು ಯೂಟರ್ನ್ ಹೊಡೆಯಲು ಮುಂದಾಗಿದ್ದಾರೆ ಎನ್ನಲಾಗಿದೆ. ಅವಿಶ್ವಾಸ ನಿರ್ಣಯ ಕೈಬಿಡುವಂತೆ ರವಿಕುಮಾರ್ ಜಿಲ್ಲಾ ಬಿಜೆಪಿ ವರಿಷ್ಠರ ಮನೆ ಬಾಗಿಲು ತಟ್ಟುತ್ತಿರುವುದು ಬಿಜೆಪಿ ಸದಸ್ಯರನ್ನು ಇನ್ನಷ್ಟು ಕೆರಳಿಸಿದೆ.

    ಜಿಪಂ ಅಧ್ಯಕ್ಷ ಸ್ಥಾನದಿಂದ ಲತಾ ಅವರನ್ನು ಕೆಳಗಿಳಿಸಿಯೇ ತೀರುತ್ತೇವೆ. ಇದನ್ನು ಸವಾಲಾಗಿ ಸ್ವೀಕರಿಸಿದ್ದೇವೆ. ನಾಲ್ಕೂವರೆ ವರ್ಷ ಅಧಿಕಾರ ಅನುಭವಿಸಿ ಕೈಕೊಟ್ಟಿದ್ದ ಲತಾ ಈಗ ಅಧ್ಯಕ್ಷ ಗಾದಿಯಲ್ಲಿ ಮುಂದುವರಿಯಲು ಬಿಜೆಪಿ ಸೇರ್ಪಡೆಯಾಗಲು ತುದಿಗಾಲ ಮೇಲೆ ನಿಂತಿದ್ದಾರೆ. ಅವರ ರಾಜಕೀಯ ತಂತ್ರಗಳು ನಡೆಯುವುದಿಲ್ಲ.
    ಎಸ್.ಟಿ.ಮಹಾಲಿಂಗಯ್ಯ ಜಿಪಂ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts