More

  ಸ್ನೇಹಿತನಿಂದಲೇ ದರೋಡೆಗೆ ಸಂಚು, ಆರು ಜನರ ಬಂಧನ, 17.32 ಲಕ್ಷ ರೂ. ವಶಕ್ಕೆ

  ಕೊಪ್ಪಳ: ಕಾರಟಗಿ ತಾಲೂಕಿನ ಸಿದ್ದಾಪುರ ಬಳಿ ಫೆ.25ರಂದು ಸಿನಿಮಿಯ ರೀತಿಯಲ್ಲಿ ಬೈಕ್​ ಅಡ್ಡಗಟ್ಟಿ 20 ಲಕ್ಷ ರೂ. ದೋಚಿಕೊಂಡು ಹೋಗಿದ್ದ ಕಳ್ಳರನ್ನು ಪೊಲೀಸರು ಬಂಧಿಸಿದ್ದು, 17.32 ಲಕ್ಷ ರೂ. ವಶಕ್ಕೆ ಪಡೆವ ಮೂಲಕ ಪ್ರಕರಣ ಸುಖಾಂತ್ಯ ಕಾಣಿಸಿದ್ದಾರೆ.

  ಹಣ ಕಳೆದುಕೊಂಡ ಅಮರಾಪುರದ ಸುರೇಶರೆಡ್ಡಿ ಬ್ಯಾಗ್​ನಲ್ಲಿ 20 ಲಕ್ಷ ರೂ.ನಗದು ಇಟ್ಟುಕೊಂಡು ಸಿಂಧನೂರು ಕಡೆಗೆ ತೆರಳುವಾಗಿ ಕಾರ್​ನಲ್ಲಿ ಬಂದ ನಾಲ್ವರು ಖದೀಮರು ಚಾಕು ತೋರಿಸಿ ಹಣ ಕದ್ದೊಯ್ದಿದ್ದರು. ದರೋಡೆಕೋರರ ಬೆನ್ನು ಹತ್ತಿದ ಪೊಲೀಸರು 24 ಗಂಟೆಯಲ್ಲೇ ಮೂವರು ಆರೋಪಿಗಳನ್ನು ಬಂಧಿಸಿದ್ದು, ಮಂಗಳವಾರ ವೇಳೆಗೆ ಮತ್ತೆ ಮೂವರನ್ನು ಬಲೆಗೆ ಕೆಡವಿ ವಶಕ್ಕೆ ಪಡೆದಿದ್ದಾರೆ. ಗಂಗಾವತಿಯಿಂದ ಹುಬ್ಬಳ್ಳಿಗೆ ತೆರಳುತ್ತಿದ್ದಾಗ ದಾಳಿ ನಡೆಸಿದ್ದು, ಹುಸೇನಬಾಷಾ ಅಲಿಯಾಸ್​ ಸಲೀಂ, ಶಿವಮೂರ್ತಿ, ಉದಯಸಿಂಗ್​, ಹನುಮೇಶ, ಹುಸೇನ್​ ಬಾಷಾ ಅಲಿಯಾಸ್​ ಬಾಷಾ, ಪೃಥ್ವಿರಾಜ್​ ಬಂಧಿತರು ಎಂದು ಮಂಗಳವಾರ ಎಸ್ಪಿ ಯಶೋದಾ ವಂಟಗೋಡಿ ಮಾಹಿತಿ ನೀಡಿದರು.

  ಸುರೇಶ ರೆಡ್ಡಿ ಆರೋಪಿ ಹನುಮೇಶ ಸ್ನೇಹಿತರು. ಸೈಟ್​ ಖರೀದಿಗೆಂದು ಹಣ ಜೋಡಿಸಿಕೊಂಡು ಸುರೇಶರೆಡ್ಡಿ ಗಂಗಾವತಿಗೆ ಬಂದಿದ್ದ. ಸೈಟ್​ ಮಾಲೀಕರು ಬಾರದ ಕಾರಣ ಹಣವನ್ನು ಹನುಮೇಶ ಬಳಿ ಇಟ್ಟುಕೊಳ್ಳಲು ತಿಳಿಸಿದ್ದಾನೆ. ಮರು ದಿನ ಬಂದಾಗಲೂ ಆಸ್ತಿ ನೋಂದಣಿ ಪ್ರಕ್ರಿಯೆ ನಡೆಯದ ಕಾರಣ ಹಣ ತೆಗೆದುಕೊಂಡು ವಾಪಸ್​ ಸಿಂಧನೂರಿಗೆ ತೆರಳುತ್ತಿದ್ದಾಗ ಕಳ್ಳರು ದಾಳಿ ಮಾಡಿದ್ದಾರೆ. ಹನಮೇಶನೇ ಬಾಷಾ ಎಂಬಾತನಿಗೆ ಸುರೇಶರೆಡ್ಡಿ ಹಣ ತೆಗೆದುಕೊಂಡು ಹೋಗುತ್ತಿರುವ ಬಗ್ಗೆ ಮಾಹಿತ ನೀಡಿದ್ದಾನೆ. ಬಾಷಾ ತನ್ನ ಸ್ನೇಹಿತರೊಡಗೂಡಿ ಕೃತ್ಯ ಎಸಗಿದ್ದಾನೆಂದು ವಿವರಿಸಿದರು.

  ಬಂಧಿತರಿಂದ 17.32 ಲಕ್ಷ ರೂ. ನಗದು, ಬಲೆನೊ, ಬ್ರಿಜಾ ಕಾರು, 1 ಬೈಕ್​, ಕೃತ್ಯಕ್ಕೆ ಬಳಸಿದ ಚಾಕು, ಚೂರಿಗಳನ್ನು ವಶಕ್ಕೆ ಪಡೆಯಲಾಗಿದೆ. ಶ್ರೀ ಪ್ರಕರಣ ಪತ್ತೆ ಮಾಡಿದ ತನಿಖಾ ತಂಡಕ್ಕೆ ಬಹುಮಾನ ನೀಡಲಾಗುವುದೆಂದು ತಿಳಿಸಿದರು. ಡಿವೈಎಸ್ಪಿಗಳಾದ ಸಿದ್ದಲಿಂಗಪ್ಪಗೌಡ ಪಾಟೀಲ್​, ಮುತ್ತಣ್ಣ ಸರವಗೋಳ, ಸಿಪಿಐ ಸುರೇಶ ಇತರರಿದ್ದರು.

  ಪತ್ತೆಯಾಗಿದ್ದು ಹೀಗೆ: ಆರೋಪಿಗಳಲ್ಲಿ ಪೃಥ್ವಿ ಕೊಪ್ಪಳ, ಬಳ್ಳಾರಿ ಜಿಲ್ಲೆಗಳ 7 ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಆರು ವರ್ಷ ಸಜೆ ಅನುಭವಿಸಿ ಬಿಡುಗಡೆಯಾಗಿದ್ದಾನೆ. ಬಾಷಾ ಮತ್ತು ಪೃಥ್ವಿ ಕ್ರಿಮಿನಲ್​ ಹಿನ್ನೆಲೆ ಹೊಂದಿದ್ದಾರೆ. ದೂರುದಾರ ವಿವಿರಿಸಿದ ಅಂಶ ಆಧರಿಸಿ ಅನುಮಾನಗೊಂಡ ಪೊಲೀಸರು ಪೃಥ್ವಿ ಮೊಬೈಲ್​ ನಂಬರ್​ ಟ್ರಾಕ್​ ಮಾಡಿದ್ದಾರೆ. ಕಾರ್​ನಲ್ಲಿ ತೆರಳುತ್ತಿರುವ ಸುಳಿವು ಆಧರಿಸಿ ದಾಳಿ ಮಾಡಿದಾಗ ಆರೋಪಿಗಳು ತಪ್ಪಿಸಿಕೊಳ್ಳಲು ಯತ್ನಿಸಿ ಸಿಕ್ಕಿ ಬಿದ್ದಿದ್ದಾರೆ. ಬಳಿಕ 7 ಜನ ಕೃತ್ಯದಲ್ಲಿ ಭಾಗಿಯಾದ ಮಾಹಿತಿ ಸಿಕ್ಕಿದೆ. ಆರು ಜನ ಬಂಧಿತರಾಗಿದ್ದು, ಇನ್ನೋರ್ವ ಆರೋಪಿ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts