ಕೊಪ್ಪಳ: ಬಿಜೆಪಿ ಟಿಕೆಟ್ ಮಿಸ್ ಆದ ಹಿನ್ನೆಲೆಯಲ್ಲಿ ತೀವ್ರ ಅಸಮಾಧಾನಗೊಂಡಿತುವ ಸಂಸದ ಸಂಗಣ್ಣ ಕರಡಿ ತಮ್ಮ ಕಾರ್ಯಕರ್ತರನ್ನು ಒಟ್ಟುಗೂಡಿಸಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.
ಮಾ.21ರಂದು ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಅಭಿಮಾನಿಗಳು, ಕಾರ್ಯಕರ್ತರ ಸಭೆ ಕರೆದಿದ್ದು ಮುಂದಿನ ನಡೆ ತಿಳಿಸುವ ಮೂಲಕ ತಾವು ಸುಮ್ಮನೇ ಕೂಡುವುದಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ.
ಗುರುವಾರ ಶಿವ ಶಾಂತವೀರ ಕಲ್ಯಾಣ ಮಂಟಪದಲ್ಲಿ ಸಭೆ ಕರೆಯುವೆ. ಎಲ್ಲರ ಅಭಿಪ್ರಾಯ ಪಡೆದುಕೊಳ್ಳುವೆ. ಬಳಿಕ ಮುಂದಿನ ಹೆಜ್ಜೆ ಇಡುವೆ. ಬಿಎಸ್ವೈ ರಾಜ್ಯ ನಾಯಕ. ವಿಜಯೇಂದ್ರಗೆ ರಾಜ್ಯ ನಾಯಕ ಪಟ್ಟ ಕಟ್ಟಿದಾಗ ಸ್ವಾಗತಿಸಿದೆ. ಕೆಲವರು ಬಿಎಸ್ವೈಗೆ ಹೊಗಳಿದ್ದಕ್ಕೆ ಪ್ರಶ್ನಿಸಿದರು. ನಾನು ಆಗ ಸಮರ್ಥಿಸಿಕೊಂಡಿದ್ದೆ. ಈಗ ಬಿಎಸ್ವೈ, ವಿಜಯೇಂದ್ರ, ಆರ್.ಅಶೋಕ ಸೇರಿ ನಮ್ಮ ಕ್ಷೇತ್ರದ ನಾಯಕರನ್ನು ಕರೆದು ಮಾತನಾಡಬೇಕಿತ್ತು. ಚರ್ಚಿಸಿ ಟಿಕೆಟ್ ನಿರ್ಣಯಿಸಿ ಮೋದಿ ಗೆಲ್ಲಬೇಕು. ಅದಕ್ಕೆ ಟಿಕೆಟ್ ಬದಲಾವಣೆ ಮಾಡಲಾಗಿದೆ ಎಂದಿದ್ದರೆ ಸ್ವಾಗತಿಸುತ್ತಿದ್ದೆ ಎಂದರು.
ಆದರೆ, ನಮ್ಮ ನಾಯಕರು ನಡೆದುಕೊಂಡ ನಡೆ ಸರಿ ಇಲ್ಲ. ನಮ್ಮ ಮುಖಂಡರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರಲ್ಲಿ ಬೇಸರವಿಲ್ಲ. ಎಲ್ಲರನ್ನು ಒಟ್ಟುಗೂಡಿಸಿ ಗೊಂದಲ ಶಮನ ಮಾಡಬೇಕಿತ್ತು. ಆ ಕೆಲಸ ಮಾಡಲಿಲ್ಲ.
ಬಿಎಸ್ವೈ, ವಿಜಯೇಂದ್ರ ಮಾತನಾಡಿದ್ದಾರೆ. ಸರಿ ಮಾಡುವುದಾಗಿ ತಿಳಿಸಿದರು. ನನಗೆ ಮರ್ಯಾದೆ ಕೊಡದ ಬಗ್ಗೆ ನೋವಿದೆ ಎಂದೆ. ಬಿಎಸ್ವೈ ಅವರು ಸಂಗಣ್ಣ ಯಾವುದು ದುಡುಕಿನ ನಡೆ ಬೇಡ ಅಂದರು. ರಾಜೇಶ ಅವರಿಗೆ ತಿಳಿಸಿರುವೆ. ಗುರುವಾರ ಸಭೆ ಮಾಡುವೆ. ನಮ್ಮ ಕಾರ್ಯಕರ್ತರ ಸಭೆ ಮಾಡುವೆ. ಬಳಿಕ ನಿರ್ಧಾರ ತಿಳಿಸುವುದಾಗಿ ಹೇಳಿರುವೆ.
ಕಾಂಗ್ರೆಸ್ ನ ಸವದಿ, ತಂಗಡಗಿ, ಬಯ್ಯಾಪುರ ಅವರು ಮಾತನಾಡಿದ್ದಾರೆ. ಸವದಿ ಅವರು ಟಿಕೆಟ್ ಕೊಡಿಸುವ ಮಾತು ಹೇಳಿಲ್ಲ. ಕರ್ಟಸಿ ಕಾಲ್ ಮಾಡಿದ್ದಾರೆ. ನನಗೆ ಟಿಕೆಟ್ ಕೊಡುವುದಾಗಿ ಆಫರ್ ಮಾಡಿದಾಗ ಯೋಚನೆ ಮಾಡೋಣ ಎಂದರು