ಕೊಪ್ಪಳ: ಟಿಕೆಟ್ ಕೈ ತಪ್ಪಿದ್ದು, ನಮ್ಮ ಬೇಡಿಕೆ ಈಡೇರಿಸುವಂತೆ ವರಿಷ್ಠರ ಮುಂದೆ ಬೇಡಿಕೆ ಇಟ್ಟಿದ್ದೇವೆ. ಅದನ್ನು ಈಡೇರಿಸುವುದು ಬಿಡುವುದು ಅವರಿಗೆ ಬಿಟ್ಟದ್ದು. ನಮ್ಮ ನಾಯಕರ ಮೇಲೆ ವಿಶ್ವಾಸವಿದೆ. ನಾನು ಕಾಂಗ್ರೆಸ್ ಸೇರುವ ಪ್ರಶ್ನೆಯೇ ಇಲ್ಲ. ಬಿಜೆಪಿಯಲ್ಲೇ ಮುಂದುವರೆಯಲಿದ್ದು, ನಮ್ಮ ಅಭ್ಯರ್ಥಿ ಪರ ಪ್ರಚಾರ ನಡೆಸುವೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ನಗರದ ತಮ್ಮ ನಿವಾಸದಲ್ಲಿ ಸೋಮವಾರ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ಕೈ ಬಲಪಡಿಸಲು ನಾವೆಲ್ಲ ಶ್ರಮಿಸಬೇಕಿದೆ. ಟಿಕೆಟ್ ಸಿಗದ ಕಾರಣ ಹಲವು ಸಂಧಾನ ಸಭೆಗಳು ನಡೆದಿವೆ. ರಾಜಕೀಯದಲ್ಲಿ ಮಾತುಕತೆ ನಡೆಯುವುದು, ಮುರಿದು ಬೀಳುವುದು ಎಲ್ಲ ಇರುತ್ತದೆ. ಆದರೆ ನಾವು ಒಂದು ಕಡೆ ನಿಲ್ಲಬೇಕಾಗುತ್ತದೆ. ಟಿಕೆಟ್ ಮರು ಹಂಚಿಕೆಯಾಗಬೇಕೆಂಬ ಬೇಡಿಕೆ ಇತ್ತು. ಇಲ್ಲದಿದ್ದಲ್ಲಿ ವಿಪ ಸದಸ್ಯ ಅಥವಾ ರಾಜ್ಯ ಸಭೆ ಸದಸ್ಯ ಸ್ಥಾನ ನೀಡುವಂತೆ ನಮ್ಮ ಬೆಂಬಲಿಗರು ಬೇಡಿಕೆ ಇಟ್ಟಿದ್ದಾರೆ. ಆದರೆ, ಈ ಹಂತದಲ್ಲಿ ಬದಲಾವಣೆ ಮಾಡಿದರೆ ಬೇರೆಡೆ ಸಮಸ್ಯೆ ಆಗುತ್ತದೆ ಎಂದು ಹೇಳುತ್ತಿದ್ದಾರೆ ಎಂದರು.
ಏ.2ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಆಗಮಿಸಲಿದ್ದಾರೆ. ಅವರ ಮುಂದೆ ಪ್ರಸ್ತಾಪ ಮಾಡುವುದಾಗಿ ರಾಜ್ಯಾಧ್ಯಕ್ಷ ವಿಜಯೇಂದ್ರ ಭರವಸೆ ನೀಡಿದ್ದಾರೆ. ನಾನು ವೈಯಕ್ತಿಕವಾಗಿ ಭೇಟಿ ಮಾಡುವುದಿಲ್ಲ. ನಮ್ಮ ನಾಯಕರ ಮೇಲೆ ವಿಶ್ವಾಸವಿದೆ. ಹಿಂದಿನದೆಲ್ಲ ಈಗ ಮುಗಿದ ಕಥೆ. ಪಕ್ಷ ಬೆಂಬಲಿಸುವಂತೆ ನನ್ನ ಬೆಂಬಲಿಗರಿಗೆ ಮನವಿ ಮಾಡುವೆ. ನರೇಂದ್ರ ಮೋದಿ ಅವರನ್ನು ನೋಡಿ ಬಿಜೆಪಿ ಅಭ್ಯರ್ಥಿ ಬೆಂಬಲಿಸುವಂತೆ ತಿಳಿಸುವೆ. ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಯಾವುದೇ ಅಸಮಧಾನವಿಲ್ಲ. ಜನ ಇಷ್ಟು ದಿನ ನನಗೆ ಆಶೀರ್ವಾದ ಮಾಡಿ ಅಧಿಕಾರ ನೀಡಿದ್ದಾರೆ. ಅವರಿಗೆಲ್ಲ ನಾನು ಋಣಿಯಾಗಿರುವೆ. ಮತ್ತೊನ್ನೆ ಅಧಿಕಾರ ಸಿಗಬೇಕೆಂಬ ಆಸೆ ಎಲ್ಲರಿಗೂ ಇರುತ್ತದೆ. ಆಸೆಪಟ್ಟಿದ್ದೆಲ್ಲ ಆಗಬೇಕೆಂದಿಲ್ಲ ಎಂದರು.